ಸತ್ಯಕಾಮರ ಕಿಡಿನುಡಿಗಳು -೨

ಸತ್ಯಕಾಮರ ಕಿಡಿನುಡಿಗಳು -೨

ಬರಹ

 ಸತ್ಯಕಾಮರು ಗಾಂಧಿಜಿಯ ಅನುಯಾಯಿಗಳು. ಗಾಂಧಿಜಿ ಹೇಳಿದ ಹಾಗೆಯೇ ಬದುಕಿ ತೋರಿದವರು. ಸ್ವಾತಂತ್ರ ಹೋರಾಟದಲ್ಲಿ ಪಾಲುಗೊಂಡು ಜೈಲನ್ನು ಕಂಡವರು. ಬಿಡುಗಡೆಯ ಹೋರಾಟವೇ ಕಾಯಕವಾಗಿದ್ದ ಸತ್ಯಕಾಮರಿಗೆ ಚಳುವಳಿ ಮುಗಿದ ಮೇಲೆ ಕೆಲಸವಿಲ್ಲದಂತಾಯಿತು. ಬಿಜಾಪುರಕ್ಕೆ ನಡೆದು ಬಂದರು. ಬಿಜಾಪುರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮೈದಣಿಯೆ ಕೂಲಿಕೆಲಸವನ್ನು ಮಾಡಿ ಹೊಟ್ಟೆಹೊರೆಯುತ್ತಿದ್ದರು. ಕೊಟ್ಟಿಗೆಯ ಸಗಣಿ ಬಳಿಯುವುದು. ಹೊಲಗಳಿಗೆ ನೀರು ಬಿಡುವುದು, ಕಳೆ ಕೀಳುವುದು, ಎಂಜಲೆಲೆ ಆಯುವುದು, ಕಸ ಮುಸುರೆ ಕೆಲಸ ಇತ್ಯಾದಿಗಳು ಅವರ ನಿತ್ಯಕಾಯಕವಾಗಿದ್ದವು.


   ಸತ್ಯಕಾಮರಿಗೆ ತನ್ನದು ಬೇರೆಯವರದು ಎಂಬ ಬೇಧವೇ ಇರಲಿಲ್ಲ. ದಾರಿಯಲ್ಲಿ ಹೋಗುವಾಗ ಯಾರದಾದರೂ ಹೊಲದಲ್ಲಿ ನೀರು ಪೋಲಾಗುತ್ತಿರುವುದು ಕಂಡರೆ ತಾವೇ ಸ್ವತಃ ನೀರಿಗೆ ಒಡ್ಡು ಕಟ್ಟಿ ಗಿಡಗಳೆಡೆಗೆ ಹರಿಸುತ್ತಿದ್ದರು. ಕೂಲಿ ಕೊಟ್ಟರೆ ತೆಗೆದುಕೊಳ್ಳುವುದು ಇಲ್ಲವಾದರೆ ಇಲ್ಲ! ಕಾಯಕದಲ್ಲೇ ಸಂತೃಪ್ತಿ ಕಂಡ ಜೀವ ಅವರದು. ಇದೇ ಸಮಯದಲ್ಲಿ ಮತ್ತೆ ತಪಗೈದು ಸಿದ್ಧಿಗಳನ್ನು ಪಡೆದರು. ಇವರ ಸಿದ್ಧಿಗಳ ಬಗ್ಗೆ ತಿಳಿದ ಜನರು ಅವರ ಬಳಿ ಆಶೀರ್ವಾದಕ್ಕೆಂದು ಬರತೊಡಗಿದರು. ಆಧ್ಯಾತ್ಮಿಕ ಚಿಂತನೆಯಲ್ಲಿ ಸತ್ಯಕಾಮರದು ಎಷ್ಟು ಉನ್ನತಿಯೋ ಹೊರಜಗದ ನಿಯಮಗಳಲ್ಲಿ ಅಷ್ಟೇ ಮುಗ್ಧತೆ! ಜನಹಿತಕ್ಕಾಗಿಯೇ ಇರುವುದೇ ತಮ್ಮ ಸಿದ್ಧಿ ಎಂದುಕೊಂಡಿದ್ದರು. ಜನರಿಂದ ಇವರ ಈ ಸಿದ್ಧಿಗಳ ದುರುಪಯೋಗ ನಡೆಯತೊಡಗಿತು. ಬೇಸರಗೊಂಡ ಸತ್ಯಕಾಮರು ತಮ್ಮ ಸಿದ್ಧಿಯನ್ನು ಎರಡನೆಯ ಬಾರಿಗೆ ವಿಸರ್ಜಿಸಿದರು.


 


 ಇದು ಸ್ವತಂತ್ರ ಪುಸ್ತಕದ "ಮಾತಿನ ಕತ್ತಲೆ" ಅಧ್ಯಾಯದ ಒಂದು ತುಣುಕು.


 


 ಮಾತಿಗಿಂತ ಮೌನ ಕಡುಕಷ್ಟದ್ದು.


ಅಹಂಕಾರ ಇದ್ದರೆ ಸಾಕು ಮಾತಿಗೆ ನಿಲುಗಡೆಯೇ ಇಲ್ಲ. ಮೌನ ಬೇಕಾದರೆ ಅಹಂನಿಂದ ಬಿಡುಗಡೆ ಹೊಂದಬೇಕು. ಬೇಕು ಅಹಂ ಪದಾರ್ಥದ ಮೊದಲ ಸಂಕಲ್ಪ.


 ಮಾತು ಒಂದು ಬಗೆಯ ಆತ್ಮದ ಹಿಂಸೆ. ಮೌನವೇ ಅಹಿಂಸೆ.


 ಮಾತು ಆಕ್ರಮಣಶೀಲವಾಗಿದೆ. ಮೌನವು ಸಾರ್ವಭೌಮವಾಗಿದೆ.


 ಜೀವನದ ಪ್ರವೃತ್ತಿ ಭಯ ಪಡುವುದಾಗಿದೆ ಮಾತು ಬೀತಿಯ ಸ್ಪಷ್ಟವಾದ ಪ್ರಕಟರೂಪ. ಇಷ್ಟೆಲ್ಲ ಮಾತಿನ ಗಲಾಟೆಯಾದ ಬಳಿಕ ಮೌನ ಸಾಧಿಸಬೇಕು ಹೇಗೆ?


 ಮಾತು ಎಂದರೆ ಕೇಳುಗನನ್ನು ತನ್ನ ಕಡೆಗೆ ಸೆಳೆದುಕೊಳ್ಳುವ ಒಂದು ಅಹಂ ಪ್ರತಿಕ್ರಿಯೆ.


ಸೃಷ್ಟಿಗಿಂತ ಸೃಷ್ಟಿಯ ಸಂಕಲ್ಪ ರಮ್ಯ. ಇದು ಒಂದು ಕ್ರೀಡೆ. ಸೃಷ್ಟಿ ಈ ಕ್ರೀಡೆಯ ಪಲಿತಾಂಶ. ಮರವನ್ನು ಬೀಜದ ಒಳಗೇ ಕಾಣುವುದು ಎಂತಹ ಸುಕೃತ! ಇಲ್ಲಿ ಅದಕ್ಕೆ ದ್ವಂದ್ವದ, ರೋಷದ, ದ್ವೇಷದ, ಬೇಧದ ಸೂತಕವಿಲ್ಲ.ಎಂತಹ ಐಕ್ಯ ಏನು ಆಯಾಚಿತ ಪ್ರೇಮ! ಮೌನದ ಆನಂದ ಅದ್ಭುತವಾದದ್ದು. ಮಾತು ಹೇಗೆ ದೈವತ್ವವನ್ನು ಕಳೆದುಕೊಂಡು ದುಃಖ, ದ್ವೇಷ, ಬೇಧ, ಸಂಕೋಚಗಳನ್ನು ತರುತ್ತಿದೆ ಎಂಬುದನ್ನು ಇಲ್ಲಿ ನೋಡಬಹುದು.


 ಈ ಮೌನದ ಮಹಾಗರ್ಭದಲ್ಲಿ ಮಾತಿನ ಅಮೂರ್ತಭ್ರೂಣಕ್ಕೆ ಯಾತನೆ ಇಲ್ಲ. ಮಾತು ಜೀವದ ಯಾತನೆಯಿಂದ ಹುಟ್ಟಲಿಲ್ಲ. ಪರಮಾನಂದದ ಸಂತೃಪ್ತಿಯಿಂದ ಮೈದಾಳಿತು. ಯಾವ ಮಾತೂ ಕತ್ತಲೆಯಿಂದ, ಅಂಧಕಾರದಲ್ಲಿ ಜನ್ಮ ತಾಳಲಿಲ್ಲ. ಅದು ಅದ್ಭುತವಾದ ಸ್ವಯಂ ಪ್ರಕಾಶದಲ್ಲಿಯೇ ಜನ್ಮತಾಳಿತು. ಜೀವಕ್ಕೆ ಅಲ್ಪತೆ, ಅಹಂಕಾರಗಳು ಅಂಟಿಕೊಳ್ಳುತ್ತವೆ. ಅದ ತನ್ನ ಐಶ್ವರ್ಯವನ್ನು ಕಳೆದುಕೊಳ್ಳುತ್ತದೆ.


 ಮೌನವು ದಿವ್ಯತೆಗಾಗಿ ನಿರ್ಮಿತವಾದ ಗರ್ಭಗುಡಿ!