ನಿದ್ದೆ ಮಾಡುವಾಗ ಮೆದುಳಿನ ಗ್ರಹಣ ಶಕ್ತಿ ಹೆಚ್ಚು: ವರದಿ

ನಿದ್ದೆ ಮಾಡುವಾಗ ಮೆದುಳಿನ ಗ್ರಹಣ ಶಕ್ತಿ ಹೆಚ್ಚು: ವರದಿ

ಬರಹ

ಮಂಡ್ಯದ ವಿಜ್ಞಾನಿಗಳ  ಅಧ್ಯಯನ ಬಯಲು ಮಾಡಿದ ಸತ್ಯ

ಬೆಂಗಳೂರು, ಫೆ 25: ತಾವು ತರಗತಿಯಲ್ಲಿ ಪಾಠ ಮಾಡುವಾಗ ತೂಕಡಿಸುವ ವಿದ್ಯಾರ್ಥಿಗಳ ಬಗ್ಗೆ ಇನ್ನು ಮುಂದೆ ಅಧ್ಯಾಪಕರು ಸಿಟ್ಟಾಗಬೇಕಿಲ್ಲ. ಮೈಯೆಲ್ಲ ಎಚ್ಚರವಾಗಿದ್ದು ಪಾಠ ಕೇಳುವ ವಿದ್ಯಾರ್ಥಿಗಳಿಗಿಂತ ಬೆಲ್ಲ ತೂಗುತ್ತ ನಿದ್ದೆ ಮಾಡುವ ವಿದ್ಯಾರ್ಥಿಗಳ ಮೆದುಳು ಹೆಚ್ಚು ಗ್ರಹಿಸುತ್ತಿರುತ್ತದೆ.  ಮಂಡ್ಯದ ಸಂಶೋಧಕರು ನಡೆಸಿರುವ ಅಧ್ಯಯನ  ತೋರಿಸಿಕೊಟ್ಟ ಸಂಗತಿಯಿದು.

ಬೆಂಗಳೂರಿನ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ ನಿಮ್ಹಾನ್ಸ್ ನ ಕ್ಯಾಂಟೀನಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸಂಶೋಧಕರು ತಮ್ಮ ಅಧ್ಯಯನದ ವರದಿಯನ್ನು ಹಂಚಿಕೊಂಡರು. ತೂಕಡಿಸುತ್ತಿದ್ದ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತ ಮಂಡ್ಯದ ವಿಜ್ಞಾನಿ ಗೊರಕೆರಾಮ್ ನುಸ್ಲುವಾಡಿಯಾ ``ಮನುಷ್ಯನಿಗೆ ನಿದ್ದೆ ಏಕೆ ಬೇಕು? ನಿದ್ದೆಯ ಸಮಯದಲ್ಲಿ ಮನುಷ್ಯನ ದೇಹ ಹಾಗೂ ಮೆದುಳಿನಲ್ಲಾಗುವ ಕ್ರಿಯೆಗಳು ಎಂಥವು ಎಂಬ ಬಗ್ಗೆ ವೈಜ್ಞಾನಿಕ ಜಗತ್ತಿಗೆ ಹೆಚ್ಚಿನ ಜ್ಞಾನವಿಲ್ಲ. ಮನುಷ್ಯನಿಗೆ ಸರಾಸರಿಯಾಗಿ ಎಷ್ಟು ತಾಸುಗಳ ನಿದ್ರೆಯ ಆವಶ್ಯಕತೆ ಇದೆ ಎಂಬ ಬಗ್ಗೆ ಒಮ್ಮತಕ್ಕೆ ಬರಲಾಗಿಲ್ಲ. ನಿದ್ದೆಯ ಸಮಯದಲ್ಲಿ ಬೀಳುವ ಕನಸುಗಳ ಕುರಿತು ಹೆಚ್ಚು ಸಂಶೋಧನೆ ನಡೆಯಬೇಕಿದೆ. ಜಗತ್ತಿನಾದ್ಯಂತ ವಿಜ್ಞಾನಿಗಳು ನಾಲ್ಕು ಮಂದಿ ಕುರುಡರು ಆನೆಯನ್ನು  ಮುಟ್ಟಿ ತಿಳಿದಂತೆ ನಿದ್ದೆಯ ನಾನಾ ಮಜಲುಗಳನ್ನು ತಡಕಾಡುತ್ತಿದ್ದಾರೆ.'' ಎಂದರು.

ತರಗತಿಯಲ್ಲಿ ನಿದ್ದೆ ಮಾಡುವ ವಿದ್ಯಾರ್ಥಿಗಳ ಗ್ರಹಣ ಶಕ್ತಿ ಹಾಗೂ ಏಕಾಗ್ರತೆ ಹೆಚ್ಚು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

``ಈ ಜಾಗತಿಕ ಸಂಶೋಧನೆಯಲ್ಲಿ ಕರ್ನಾಟಕದ ವಿಜ್ಞಾನಿಗಳು ಹಿಂದೆ ಬಿದ್ದಿಲ್ಲ. ಮನುಷ್ಯನು ನಿದ್ದೆ ಮಾಡುವಾಗ ಮೆದುಳಿನಲ್ಲಿ ಚಟುವಟಿಕೆ ಕ್ಷೀಣಗೊಳ್ಳುವುದನ್ನು ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ. ಧ್ಯಾನದ ಉಚ್ಛ್ರಾಯ ಸ್ಥಿತಿಯಲ್ಲಿರುವ ಯೋಗಿಯ ಮೆದುಳಿನ ಅಲೆಗಳಿಗೂ ತರಗತಿಯಲ್ಲಿ ನಿದ್ದೆಯಲ್ಲಿ ತಲ್ಲೀನನಾದ ವಿದ್ಯಾರ್ಥಿಯ ಮೆದುಳಿನ ಅಲೆಗಳಿಗೂ ಅನೇಕ ಸಾಮ್ಯತೆಗಳು ನಮ್ಮ ಅಧ್ಯಯನದಲ್ಲಿ ಕಂಡು ಬಂದವು. ಶಾಸ್ತ್ರೀಯ ಸಂಗೀತವನ್ನು ಆಸ್ವಾದಿಸುವಾಗ, ರೋಚಕ ಕಾದಂಬರಿಯಲ್ಲಿ ಮೈಮರೆತಿರುವಾಗ, ಪಾರ್ಕಿನಲ್ಲಿ ಪ್ರಿಯತಮೆಯ ಅಂಗೈ ಹಿಡಿದು ಕೂತಿರುವಾಗ, ಶೌಚಾಲಯದಲ್ಲಿ ಸಲೀಸಾಗಿ ಮಲ ವಿಸರ್ಜನೆಯಾಗುವಾಗ ಮನುಷ್ಯನ ಮೆದುಳಿನಲ್ಲಾಗುವ ಬದಲಾವಣೆಗಳನ್ನು ನಾವು ಕೂಲಂಕುಶವಾಗಿ ಪರಿಶೀಲಿಸಿದೆವು. ಆಶ್ಚರ್ಯಕರವಾದ ಸಂಗತಿಯೆಂದರೆ  ಆಲೋಚನೆಗಳು, ಸಪ್ಪಳಗಳು ಕ್ಷೀಣವಾಗಿರುವ ಈ ಎಲ್ಲಾ ಕ್ರಿಯೆಗಳಲ್ಲಿ ಮೆದುಳು ತೋರುವ ಪ್ರತಿಕ್ರಿಯೆಗೂ ತರಗತಿಯಲ್ಲಿ ವಿದ್ಯಾರ್ಥಿಯು ತೂಕಡಿಸುವಾಗ ಆತನ ಮೆದುಳು ತೋರುವ ಪ್ರತಿಕ್ರಿಯೆಗೂ ಯಾವ ವ್ಯತ್ಯಾಸವೂ ಇಲ್ಲ. ಒಟ್ಟಿನಲ್ಲಿ ನಮ್ಮ ಸಂಶೋಧನೆಯ ಫಲಿತಾಂಶವೆಂದರೆ: ನಿದ್ದೆ ಮಾಡುವಾಗ ಮನುಷ್ಯನ ಮೆದುಳಿನ ಏಕಾಗ್ರತೆ ಹಾಗೂ ಗ್ರಹಣ ಶಕ್ತಿ ಹೆಚ್ಚು'' ಎಂದು ಗೊರಕೆರಾಮ್ ಹೇಳಿದುದಾಗಿ ನಮ್ಮ ತೂಕಡಿಸುತ್ತಿದ್ದ ವರದಿಗಾರನ ಟೇಪ್ ರೆಕಾರ್ಡ್ ವರದಿ ಮಾಡಿದೆ.

ಈ ಸಂಶೋಧನೆಯು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲಿದೆ ಎಂದು ಭವಿಷ್ಯ ನುಡಿದ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ತೂಗುತಲೆ ವೆಂಕಟೇಶ್ ``ತರಗತಿಯಲ್ಲಿ ತಮ್ಮ ಪಾಡಿಗೆ ತಾವು ತೂಕಡಿಸುತ್ತ ಕೂರುವ ವಿದ್ಯಾರ್ಥಿಗಳನ್ನು ಹಿಂಸಿಸುವ, ಅಪಮಾನಿಸುವ ಅಧ್ಯಾಪಕರುಗಳಿಗೆ ಈ ಸಂಶೋಧನೆಯ ಫಲಿತಾಂಶ ಚಾಟಿ ಏಟು ನೀಡುವಂತಿದೆ. ಅತಿ ಬುದ್ಧಿವಂತರು, ದೇಶಕ್ಕಾಗಿ ಅವಿರತ ದುಡಿಯುವವರು, ದೇಶದ ಕಾನೂನು ಸುವ್ಯವಸ್ಥೆ ಕಾಪಾಡುವವರು ಎಲ್ಲರೂ ನಿದ್ದೆಯ ಮಹತ್ವ ವಿವರಿಸುವ ಜೀವಂತ ಸಾಕ್ಷಿಗಳಾಗಿದ್ದಾರೆ.  ಇನ್ನು ಮುಂದಾದರೂ ತಮ್ಮ ಪಾಠಗಳನ್ನು ಯಾರು ಹೆಚ್ಚು ಏಕಾಗ್ರತೆಯಿಂದ ಕೇಳುತ್ತಿದ್ದಾರೆ ಎಂದು ಅವರಿಗೆ ತಿಳಿದೀತೆಂದು ಆಶಿಸಬಹುದು.'' ಎಂದರು.

ವೈಜ್ಞಾನಿಕವಾದ ಈ ಅಧ್ಯಯನದಿಂದ ತಮ್ಮ ಪಾಠ ಪ್ರವಚನದ ವಿಧಾನದಲ್ಲಿ ಏನೂ ಬದಲಾವಣೆಯಾಗದು ಎಂದಿರುವ   ಅಧ್ಯಾಪಕ ಕೊರೆತದೇವ್  ತಮಗೆ ಈ ವೈಜ್ಞಾನಿಕ ಸತ್ಯವು ಅನುಭವಜನ್ಯವಾಗಿ ತಿಳಿದುಬಂದಿತ್ತು ಎಂದರು. ``ನಮ್ಮ ಪಾಠದ ವಿಧಾನ, ಧ್ವನಿಯ ಏರಿಳಿತ ಹಾಗೂ  ಅನಾಕರ್ಷಕ ಪಠ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದ ಯಾರಿಗಾದರೂ ವಿದ್ಯಾರ್ಥಿಗಳು ಏಕೆ  ಅಪಾಯಕಾರಿ ಹಾಗೂ ಕಷ್ಟಕರವಾದ ಭಂಗಿಗಳಲ್ಲೂ ನಿದ್ದೆ ಮಾಡಲು ಸಾಧ್ಯ ಎಂಬುದು ತಿಳಿಯುತ್ತದೆ. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಗಲಭೆಯಿಬ್ಬಿಸದೆ ಏಕಾಗ್ರವಾಗಿ ಪಾಠ ಕೇಳಲೆಂದೇ ನಾವು ಈ ಶೈಲಿಯನ್ನು ಅನುಸರಿಸುವುದು.''

ನಿದ್ದೆಯ ಬಗ್ಗೆ ಖ್ಯಾತ ಪ್ರವಚನಕಾರರು ತಮ್ಮ ಅಭಿಪ್ರಾಯ ತಿಳಿಸುವಾಗ ನಮ್ಮ ವರದಿಗಾರನೂ, ಆತನ ರೆಕಾರ್ಡರೂ ನಿದ್ದೆ ಮಾಡುತ್ತಿದ್ದುವಾದ್ದರಿಂದ ವರದಿ ಮಾಡಲು ಸಾಧ್ಯವಾಗಿಲ್ಲ. ಈ ಕುರಿತು ತೂಕಡಿಸುತ್ತಿರುವ ನಮ್ಮ ಓದುಗರಲ್ಲಿ ನಾವು ವಿಷಾದಿಸುತ್ತೇವೆ.