ಶಾಲೆಯಿಂದ ವಿದ್ಯಾರ್ಥಿ ಮೇಲೆ ಗೂಡಚರ್ಯೆ!

ಶಾಲೆಯಿಂದ ವಿದ್ಯಾರ್ಥಿ ಮೇಲೆ ಗೂಡಚರ್ಯೆ!

ಬರಹ

ಶಾಲೆಯಿಂದ ವಿದ್ಯಾರ್ಥಿ ಮೇಲೆ ಗೂಡಚರ್ಯೆ!
ಅಮೆರಿಕಾದ ಪಿಲ್ಲಿಯ ಹಾರಿಂಟನ್ ಶಾಲೆ ತನ್ನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪನ್ನು ನೀಡುತ್ತದೆ.ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ತಂತ್ರಾಂಶಗಳನ್ನು ಮತ್ತು ಇತರ ಸಂಪನ್ಮೂಲಗಳನ್ನೂ ಶಾಲೆಯ ಲ್ಯಾಪ್‌ಟಾಪ್ ಬಳಸಿ ಬಳಸಲು ಅನುಕೂಲ ಕಲ್ಪಿಸಿದೆ.ಲ್ಯಾಪ್‌ಟಾಪಿನಲ್ಲಿ ಒಂದು ವೆಬ್‌ಕ್ಯಾಮ್ ಕೂಡಾ ಲಭ್ಯವಿದೆ.ಅದನ್ನು ಶಾಲೆಯಿಂದಲೇ ಚಾಲೂ ಮಾಡಿ ನೋಡುವ ಸೌಲಭ್ಯವಿದೆ.ಈ ಸೌಲಭ್ಯವನ್ನು ಲ್ಯಾಪ್‌ಟಾಪ್ ಕಳವಾದಾಗ ಬಳಸಲು ಶಾಲೆ ಇಚ್ಛಿಸಿತ್ತು.ಕಳವು ಮಾಡಿದಾತ,ಲ್ಯಾಪ್‌ಟಾಪ್ ಅಂತರ್ಜಾಲಕ್ಕೆ ಸಂಪರ್ಕಿಸಿದಾಗ,ಆತನನ್ನು ಪತ್ತೆ ಹಚ್ಚಲು ವೆಬ್‌ಕ್ಯಾಮ್ ಬಳಸಬಹುದಲ್ಲ ಎನ್ನುವುದು ಹೀಗೆ ಮಾಡಲು ಕಾರಣ.ಇತ್ತೀಚೆಗೆ ಶಾಲೆಯು ಓರ್ವ ವಿದ್ಯಾರ್ಥಿಯ ನಡವಳಿಕೆ ಬಗ್ಗೆ,ಆತನ ತಂದೆಯಲ್ಲಿ ದೂರು ನೀಡಿತ್ತು.ಅದರ ಪ್ರಕಾರ,ವಿದ್ಯಾರ್ಥಿಯ ನಡವಳಿಕೆ ಸರಿಯಿಲ್ಲ,ಮನೆಯಲ್ಲಾತ ವಿದ್ಯಾರ್ಥಿಗಳಿಗೆ ಹೇಳಿಸಿದಲ್ಲದ ನಡವಳಿಕೆ ಹೊಂದಿದ್ದಾನೆ.ಅದಕ್ಕೆ ಲ್ಯಾಪ್‌ಟಾಪಿನ ವೆಬ್‌ಕ್ಯಾಮ್‌ನಿಂದ ತೆಗೆದ ವಿಡಿಯೋಗಳ ಸಾಕ್ಷಿ ಇದೆ ಎಂದಿತ್ತು.ಇದೀಗ ವಿವಾದ ಎಬ್ಬಿಸಿದೆ.ಈ ರೀತಿ ಗೂಡಚರ್ಯೆ ನಡೆಸಲು ವೆಬ್‌ಕ್ಯಾಮ್ ಬಳಸಬಹುದೆಂಬ ಮುನ್ನೆಚ್ಚರಿಕೆಯನ್ನು ಶಾಲೆ ನೀಡದೆ,ವಿದ್ಯಾರ್ಥಿಯ ಖಾಸಗಿತನದ ಉಲ್ಲಂಘನೆ ಮಾಡಿದ್ದಾದರೂ ಯಾಕೆ ಎನ್ನುವ ಪ್ರಶ್ನೆಯೇ ಮಹತ್ವ ಪಡೆದಿದೆ.ವಿದ್ಯಾರ್ಥಿ ಕೆಟ್ಟ ರೀತಿಯ ನಡವಳಿಕೆ ಹೊಂದಿದ್ದು ಹೌದೇ ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಇಲ್ಲ.
------------------------------------------
ದ್ರುಪಾಲನ್ನು ಕನ್ನಡಕ್ಕೆ ತರೋಣ
ದ್ರುಪಾಲ್ ಎನ್ನುವುದು ಅಂತರ್ಜಾಲತಾಣಗಳು,ಚರ್ಚಾವೇದಿಕೆಗಳು,ಸಾಮಾಜಿಕ ತಾಣಗಳಂತವನ್ನು ನಿರ್ವಹಿಸಲು ಲಭ್ಯವಿರುವ ಉಚಿತ ತಂತ್ರಾಂಶ.ಇದರಲ್ಲಿ ಬಳಕೆದಾರರಿಗೆ ಸಹಾಯ ಮತ್ತು ಸೂಚನೆಗಳು ಸ್ಥಳೀಯ ಭಾಷೆಗಳಲ್ಲೂ ಲಭ್ಯವಾಗಬೇಕು ಎನ್ನುವ ಆಶಯದ,ಅನುವಾದ ಯೋಜನೆಗಳು ಪ್ರಗತಿಯಲ್ಲಿವೆ.ದ್ರುಪಾಲನ್ನು ಕನ್ನಡಕ್ಕೆ ತರುವ ಯೋಜನೆಯೂ ಇದೆ.ಇದಕ್ಕೆ ನೆರವಾಗಲು ಬಯಸುವವರು,ತಮ್ಮ ಹೆಸರನ್ನು  http://localize.drupal.org ನೋಂದಾಯಿಸಿಕೊಂಡು,ಸುಮಾರು200000ದಷ್ಟಿರುವ ವಾಕ್ಯಗಳನ್ನು ಭಾಷಾಂತರಿಸಲು ನೆರವಾಗಬಹುದು.ನೋಂದಾಯಿಸಿಕೊಂಡವರು,ಅಂತರ್ಜಾಲದ ಸಂಪರ್ಕವಿದ್ದಾಗ,ಅನುವಾದಿಸಬೇಕಾದ ಶಬ್ದಗಳು ಅಥವ ಪದಗುಚ್ಛಗಳನ್ನು ಅನುವಾದಿಸಲು ಸಾಧ್ಯವಾಗುತ್ತದೆ.ಅನುವಾದಗಳನ್ನು ಮೊದಲಾಗಿ,ಸೂಚನೆಗಳೆಂದು ಪರಿಗಣಿಸಿ,ಉಳಿಸಿಕೊಳ್ಳಲಾಗುವುದು.ಯೋಜನೆಯ ನಿರ್ವಾಹಕರು ತದನಂತರ,ಸೂಚನೆಗಳನ್ನು ಉಳಿಸಿಕೊಳ್ಳಬಹುದೇ ಎಂದು ತೀರ್ಮಾನಿಸುತ್ತಾರೆ.ಫೇಸ್‌ಬುಕ್‌ ಅನ್ನು ಕನ್ನಡಕ್ಕೆ ತರುವ ಯೋಜನೆಯೂ ಸಕ್ರಿಯವಾಗಿದೆ.ಅರ್ಕುಟ್ ಈಗಾಗಲೇ ಕನ್ನಡದಲ್ಲಿ ಲಭ್ಯವಿದೆ.ಅಂತರ್ಜಾಲತಾಣಗಳನ್ನು ಸ್ಥಳೀಯ ಭಾಷೆಗಳಲ್ಲಿ ಒದಗಿಸುವುದೀಗ ಹೊಸ ಫ್ಯಾಶನ್.
-------------------------------------------------------
ಇ-ವಿದ್ಯಾ


ತಂತ್ರಜ್ಞಾನದಿಂದ ಮೌಲ್ಯವರ್ಧಿತ ಕಲಿಕೆಗಾಗಿನ ರಾಷ್ಟ್ರೀಯ ಕಾರ್ಯಕ್ರಮ(nptel) ಸಹಿತ ವಿವಿಧ ಮೂಲಗಳಿಂದ ಅತ್ಯುಚ್ಛ ಮಟ್ಟದ ಬಹುಮಾಧ್ಯಮ ಶೈಕ್ಷಣಿಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಬೆಳಗಾವಿಯ  ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ ಯೋಜನೆ ಹಮ್ಮಿಕೊಂಡಿದೆ.ಇ-ವಿದ್ಯಾ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ಕಾಲೇಜುಗಳಲ್ಲಿ ಸರ್ವರ್ ಅನ್ನು ಸ್ಥಾಪಿಸಿ,ಅದರ ಮೂಲಕ,ನೋಂದಾಯಿಸಿಕೊಂಡ ವಿದ್ಯಾರ್ಥಿಗಳು,ಶಿಕ್ಷಕರಿಗೆ ಈ ಕಲಿಕಾವಸ್ತುಗಳನ್ನು ತಲುಪಿಸಲು ಯೋಜಿಸಿದೆ.ಇಂತಹ ಒಂದು ಸರ್ವರನ್ನು ನಿಟ್ಟೆಯ ಎನ್ ಎಮ್ ಎ ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲೂ ಸ್ಥಾಪಿಸಲಾಗಿದ್ದು.ಇದೀಗ ಬಳಕೆಗೆ ಲಭ್ಯವಿದೆ.ಮುನ್ನೂರು ಜಿಬಿಗಳಷ್ಟು ವಿಡಿಯೋ-ಆಡಿಯೋ ಇತ್ಯಾದಿ ಪರಿಕರಗಳನ್ನು ಕಾಲೇಜಿನ ಕಂಪ್ಯೂಟರ್ ಜಾಲದ ಮೂಲಕ ಪಡೆಯುವ ಸೌಲಭ್ಯವಿದ್ದು,ಕಾಲೇಜಿನಲ್ಲೇ ಸರ್ವರ್ ಇರುವ ಕಾರಣ,ಅಂತರ್ಜಾಲಕ್ಕೆ ಸಂಪರ್ಕಿಸದೇ ಪರಿಕರಗಳನ್ನು ಬಳಸಿಕೊಳ್ಳಬಹುದು.
--------------------------------------------------------------------------
ಗೂಗಲ್‌ನಿಂದ ವಿದ್ಯುಚ್ಛಕ್ತಿ ಮಾರಾಟಕ್ಕೂ ಪದಾರ್ಪಣೆ
ಗೂಗಲ್ ಎನರ್ಜಿ ಎನ್ನುವ ಹೊಸ ವಿದ್ಯುಚ್ಛಕ್ತಿ ಕಂಪೆನಿಯನ್ನು ಸ್ಥಾಪಿಸಿರುವ ಗೂಗಲ್ ಕಂಪೆನಿಯು,ವಿದ್ಯುಚ್ಛಕ್ತಿಯನ್ನು ಖರೀದಿಸಲು ಮತ್ತು ಮಾರಾಟಕ್ಕೆ ಅನುಮತಿಯನ್ನು ಪಡೆದುಕೊಂಡಿದೆ.ಈ ಅನುಮತಿ ಅಮೆರಿಕಾದಲ್ಲಿ ಅನ್ವಯವಾಗುತ್ತದೆ ಎನ್ನುವುದನ್ನು ಬೇರೆ ಹೇಳಬೇಕಿಲ್ಲವಷ್ಟೇ?ವಿದ್ಯುಚ್ಛಕ್ತಿಯನ್ನು ಖರೀದಿಸಿ,ಅಗತ್ಯವಿರುವವರಿಗೆ ಸಗಟಾಗಿ ಮಾರಾಟ ಮಾಡಲು ಕಂಪೆನಿಗೆ ಪರವಾನಗಿ ಲಭಿಸಿದೆ.ಸೌರಶಕ್ತಿಯಂತಹ ಮೂಲಗಳಿಂದ ವಿದ್ಯುತ್ ಉತ್ಪಾದಿಸಿ,ಅದನ್ನು ಮಾರಾಟ ಮಾಡುವುದು ಗೂಗಲ್‌ನ ಬಹುಕಾಲದ ಕನಸು.
---------------------------------------------------------
ಫೊಟೋಶಾಪ್ ತಂತ್ರಾಂಶಕ್ಕೆ ಇದೀಗ ಇಪ್ಪತ್ತು ವರ್ಷ


ಫೊಟೋಶಾಪ್ ತಂತ್ರಾಂಶವು ಚಿತ್ರಗಳನ್ನು ಮಾರ್ಪಡಿಸಲು ಬಳಕೆಯಾಗುವ ಅತ್ಯಂತ ಜನಪ್ರಿಯ ತಂತ್ರಾಂಶ.ಇದು ಈಗ ಎರಡು ದಶಕಗಳನ್ನು ಪೂರೈಸಿ,ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.ಲಿನಕ್ಸ್ನಲ್ಲಿ ಇಂಕ್‌ಸ್ಕೇಪ್,ಜಿಂಪ್ ಮುಂತಾದ ಮುಕ್ತ ತಂತ್ರಾಂಶಗಳು ಇದೇ ರೀತಿಯ ಸವಲತ್ತುಗಳನ್ನು ನೀಡಿ,ಫೊಟೋಶಾಪ್‌ಗೆ ಸ್ಪರ್ಧೆ ನೀಡಿದರೂ,ಅಡೋಬ್ ಕಂಪೆನಿಯ ಈ ತಂತ್ರಾಂಶ ಇನ್ನೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ.
--------------------------------------------
ಸುಲಭ ಲ್ಯಾಪ್‌ಟಾಪ್


ಅಲೆಕ್ಸ್ ಎನ್ನುವ ಹೊಸ ಲ್ಯಾಪ್‌ಟಾಪನ್ನು ಕಂಪ್ಯೂಟರಿನ ಬಳಕೆಯಲ್ಲಿ ಪರಿಣತರಲ್ಲದವರಿಗಾಗಿಯೇ ಬಿಡುಗಡೆ ಮಾಡಲಾಗಿದೆ.ಅಲೆಕ್ಸ್‌ನಲ್ಲಿ ಅಂತರ್ಜಾಲ ಜಾಲಾಟ,ಮಿಂಚಂಚೆ,ಪದಸಂಸ್ಕರಣ ಇತ್ಯಾದಿ ಜನಪ್ರಿಯ ಚಟುವಟಿಕೆಗಳನ್ನು ಸುಲಭವಾಗಿ ಮಾಡಲು ತಂತ್ರಾಂಶಗಳನ್ನು ನೀಡಲಾಗಿದೆ. ಈ ತಂತ್ರಾಂಶವು ಲಿನಕ್ಸಿನಂತಹದ್ದೇ ಕಾರ್ಯನಿರ್ವಹಣಾ ತಂತ್ರಾಂಶದ ಬಲದಲ್ಲಿ ಕೆಲಸ ಮಾಡುತ್ತವೆ.ಅಂತರ್ಜಾಲ ಸಂಪರ್ಕ,ದೂರವಾಣಿ ಮೂಲಕ ಸಹಾಯವಾಣಿಗಳಿಗಾಗಿ ಮಾಸಿಕ ನಲುವತ್ತು ಡಾಲರುಗಳಷ್ಟು ಶುಲ್ಕವನ್ನು ಬಳಕೆದಾರರು ನೀಡಬೇಕಾಗುತ್ತದೆ.

UDAYAVANI