ಪಾಕ್ ಶಾಂತಿಪ್ರಿಯ ದೇಶ ಎನ್ನುವುದಕ್ಕೆ ಪುರಾವೆ ಏನಿದೆ: ಪಾಕ್ ವಿದೇಶಾಂಗ ಕಾರ್ಯದರ್ಶಿ

ಪಾಕ್ ಶಾಂತಿಪ್ರಿಯ ದೇಶ ಎನ್ನುವುದಕ್ಕೆ ಪುರಾವೆ ಏನಿದೆ: ಪಾಕ್ ವಿದೇಶಾಂಗ ಕಾರ್ಯದರ್ಶಿ

ಬರಹ

ಅಭ್ಯಾಸ ಬಲದಿಂದ ಅಪಸವ್ಯದ ಹೇಳಿಕೆ

ನವದೆಹಲಿ: ಮುಂಬೈ ದಾಳಿಯ ನಂತರ ಹದಗೆಟ್ಟಿದ್ದ ಭಾರತ ಪಾಕಿಸ್ತಾನ ನಡುವಿನ ಶಾಂತಿ  ಮಾತುಕತೆಯ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಪೈಲ್ವಾನ್ ಬಶೀರ್ ವಿವಾದಾತ್ಮಕವಾದ ಹೇಳಿಕೆ ನೀಡಿ ತನ್ನ ದೇಶಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ.

ನಲವತ್ತೈದು ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ ಉಭಯ ದೇಶಗಳ ಕಾರ್ಯದರ್ಶಿಗಳು ಪರಸ್ಪರ ದೋಷಾರೋಪಣೆಯಲ್ಲಿಯೇ ಸಮಯ ಕಳೆದರು. ಭಾರತದ ನಿದೇಶಾಂಗ ಕಾರ್ಯದರ್ಶಿ ನೆಲಸಮ ರಾವ್ ಪಾಕಿಸ್ತಾನದ ಮೇಲೆ ನಂಬಿಕೆ ಬರುವಂತೆ ಅದು ನಡೆದುಕೊಳ್ಳಬೇಕು. ತನ್ನ ನೆಲದಿಂದ ಭಯೋತ್ಪಾದಕ ಕೃತ್ಯ ಗಳು ನಡೆಯದಂತೆ  ಕ್ರಮ ಕೈಗೊಳ್ಳಬೇಕು ಎಂದರು. ಪಾಕಿಸ್ತಾನದಿಂದಾಗಿ ಭಾರತ ಎದುರಿಸುತ್ತಿರುವ ಸಮಸ್ಯೆ ಒಂದೆರಡಲ್ಲ. ಪಾಕಿಸ್ತಾನದ ಕ್ರಿಕೆಟ್ ಆಟಗಾರರ ಪರವಾಗಿ ಮಾತನಾಡಿಯೇ ಶಾರುಖ್ ಖಾನ್ ಏನೆಲ್ಲ ಪಡಿಪಾಟಲು ಪಡಬೇಕಾಯಿತು. ಹೀಗಿರುವಾಗ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ನಮ್ಮ ಸರಕಾರ ಮುಂದಾಗಿರುವುದೇ ನಮ್ಮ ಔದಾರ್ಯವನ್ನು ತೋರುತ್ತದೆ ಎಂದರು.

ಇದರಿಂದ ಕೆರಳಿದ ಪೈಲ್ವಾನ್ ಬಶೀರ್ ನಾವೇನು ಮೇಲೆ ಬಿದ್ದು ಮಾತುಕತೆಗೆ ಬಂದಿಲ್ಲ. ನಮಗೆ ಮಾತುಕತೆಯಲ್ಲಿ ಎಂದಿಗೂ ನಂಬಿಕೆಯಿಲ್ಲ. ದೇಶದ ಪ್ರಧಾನಿಯನ್ನು ಕೆಳಗಿಳಿಸುವಾಗೂ ಸಹ ನಾವು ಮಾತುಕತೆಯಾಡುವುದಿಲ್ಲ. ನಮ್ಮದೇನಿದ್ದರೂ ನೇರವಾದ ಕೆಲಸ. ಭಾರತ ಅಂತರಾಷ್ಟ್ರೀಯ ವೇದಿಕೆಯಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕಾಗಿ ಗೋಳುಗರೆಯುತ್ತದೆ. ಪಾಕಿಸ್ತಾನದತ್ತ ಬೆರಳು ಮಾಡುತ್ತದೆ. ಇದು ಎಷ್ಟೋ ಕಾಲದಿಂದ ನಡೆದುಬಂದಿರುವ  ವಿದ್ಯಮಾನ. ಪಾಕಿಸ್ತಾನ ಹೇಗಿರಬೇಕು ಏನು ಮಾಡಬೇಕು ಎನ್ನುವ ಪ್ರವಚನ ಕೊಡುವುದನ್ನು ನವದೆಹಲಿ ನಿಲ್ಲಿಸಬೇಕು. ನಾವೂ ಭಯೋತ್ಪಾದನೆಯ ಬಿಸಿ ಎದುರಿಸುತ್ತಿದ್ದೇವೆ.  ಭಯೋತ್ಪಾದಕರಿಗೆ ಪಾಕಿಸ್ತಾನ ನೆರವು ನೀಡುತ್ತಿದೆ ಎನ್ನುವುದಕ್ಕೆ ಭಾರತ ಯಾವ ಪುರಾವೆಯನ್ನೂ ಒದಗಿಸಿಲ್ಲ. ಅದು ಕಂತೆಗಟ್ಟಲೆ ಕಳಿಸಿರುವ `ಸಾಹಿತ್ಯ' ವನ್ನು ಪುರಾವೆ ಎನ್ನಲಾಗುವುದಿಲ್ಲ.

ತಮ್ಮನ್ನು ಜಂಟಲ್ ಮ್ಯಾನ್ ಎಂದದ್ದಕ್ಕೂ ಅಭ್ಯಾಸ ಬಲದಿಂದ ಪುರಾವೆ ನೀಡಿ ಎಂದು ಹೇಳಿ ತೀವ್ರ ಮುಜುಗರಕ್ಕೆ ಈಡಾಗಿದ್ದಾರೆ.

ನೆಲಸಮ ರಾವ್ ಖಾರವಾಗಿ ಉತ್ತರಿಸುತ್ತ, ``ಭಾರತ ಕಳಿಸಿಕೊಟ್ಟಿರುವ ಪುರಾವೆಗಳನ್ನು ಓದುವುದಕ್ಕೆ ಪಾಕಿಸ್ತಾನದಲ್ಲಿ ಓದು ಬಲ್ಲ ಜನರಿದ್ದಾರೆಯೇ ಎಂದು ಮೊದಲು ಪರೀಕ್ಷಿಸಿ. ಇವನ್ನು ಪುರಾವೆಯಲ್ಲ ಕಟ್ಟು ಕತೆ ಎನ್ನುವ ಮೊದಲು ಒಮ್ಮೆ ಓದಿ ನೋಡಿ. ಪಾಕಿಸ್ತಾನ ತನ್ನದೇ ಸೃಷ್ಟಿಯ ಬಲಿಪಶುವಾಗಿರಬಹುದು, ಆದರೆ ಭಾರತ ಪಾಕಿಸ್ತಾನದ ಸೃಷ್ಟಿಯ ಭಯೋತ್ಪಾದನೆಗೆ ಬಲಿಪಶುವಾಗಿದೆ. ನಾನು ಪ್ರಜಾಪ್ರಭುತ್ವವಿರುವ ಸರಕಾರಕ್ಕೆ ಉತ್ತರದಾಯಿ ನಿಮ್ಮಂತೆ ಮಿಲಿಟರಿ ನಾಯಕನ ಆಜ್ಞಾಧಾರಿಯಲ್ಲ.'' ಎಂದಾಗ ಬಶೀರ್ ಭಾರತ ಒದಗಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವುದಾಗಿ ತಿಳಿಸಿದರು. ತಮ್ಮ ಹೇಳಿಕೆಗಾಗಿ ಕ್ಷಮೆಯಾಚಿಸಿದರು.

ಶಾಂತಿ ಮಾತುಕತೆ ಒಂದು ಹಂತಕ್ಕೆ ಬಂದಾಗ ನೆಲಸಮ ರಾವ್ ಸ್ನೇಹಪೂರ್ವಕವಾಗಿ ಬಶೀರರ ಕೈ ಕುಲುಕಿ, ``ಪಾಕಿಸ್ತಾನವೂ ಸಹ ಶಾಂತಿ ಪ್ರಿಯ ರಾಷ್ಟ್ರ. ಅದು ಭಯೋತ್ಪಾದಕರು ಬೆಳೆಯುವುದಕ್ಕೆ ನೆರವು ನೀಡುವುದಿಲ್ಲ. ನೀವು ಒಳ್ಳೆಯ ಜಂಟಲ್ ಮೆನ್...'' ಎಂದರು.

ರಾವ್ ರವರ ಮಾತನ್ನು ಅರ್ಧಕ್ಕೇ ತುಂಡರಿಸಿದ ಪೈಲ್ವಾನ್ ಬಶೀರ್, ``ಸುಳ್ಳು, ಕಟ್ಟುಕತೆ. ನೀವು ಮಾಡಿದ ಆರೋಪಗಳಿಗೆ ಪುರಾವೆ ಏನು?'' ಎಂದು ಅಬ್ಬರಿಸಿದರು.

ಕೂಡಲೇ ಬಶೀರರ ಆಪ್ತಕಾರ್ಯದರ್ಶಿ ಸಂದರ್ಭವನ್ನು ಕಿವಿಯಲ್ಲಿ  ಪಿಸುಗುಟ್ಟಿದ ಮೇಲೆ ಹರಳೆಣ್ಣೆ ಕುಡಿದ ಮುಖ ಮಾಡಿಕೊಂಡು ನಕ್ಕರು ಎಂದು ವರದಿಯಾಗಿದೆ.