ಬಣ್ಣ ನನ್ನ ಒಲವಿನ ಬಣ್ಣ...
ಮುಂಬೈನ ಜೋಗೆಶ್ವರಿಯ ಗಲ್ಲಿಯೊಂದರಲ್ಲಿ ಹತ್ತಿದ ಹೋಳಿಯ ಹುಚ್ಚು ಬಿಟ್ಟಿದ್ದು ಹತ್ತನೇ ಕ್ಲಾಸಿನಲ್ಲಿ. ಸೈನ್ಸ್ ತೆಗೆದುಕೊಂಡು ಗೆಳೆಯರ ಬಳಗದಿಂದ ಹೊರಬಿದ್ದಾಗ! ಆದರೆ ನೆನಪುಗಳು ಮಸುಕು ಮಸುಕಾದರೂ, ನೆನಪಿವೆ.
ಹೋಳಿಯ ನೆನಪುಗಳನ್ನು ಕೆದಕುವಾಗ ಮನಸ್ಸು ಬೆದರುವುದು ೧೯೯೩ರಲ್ಲಿ ಅದ ಬಾಂಬ್ ಸಿಡಿತದ ಕರಾಳ ದಿನಗಳ ದೃಶ್ಯ ನೆನಪಾದಾಗ. ಬಾಬ್ರಿ ಮಸೀದಿಯನ್ನು ಕೆಡವಿದ ಧೂಳು ಮುಂಬೈಗೆ ಹಬ್ಬಿ ಹಿಂದೂ ಮುಸ್ಲಿಂ ಗಲಾಟೆಯ ನಡುವೆ ನನ್ನ ಹೋಳಿ ನಲುಗಿದ್ದು ಅಸ್ಪಷ್ಟವಾಗಿ ನೆನಪಿದೆ. ಮುಸ್ಲಿಂ ಬಾಂಧವರೇ ಹೆಚ್ಚು ಇದ್ದ ನಮ್ಮ ಬೀದಿಯಲ್ಲಿ ಅಂತು ಬದುಕು ನರಕಮಯವಾಗಿತ್ತು. ಕರ್ಫ್ಯೂ ಜಾರಿಯಲ್ಲಿದ್ದಾಗ ಮನೆಗೆ ಮನೆಗೆ ಅಕ್ಕಿ, ಬೇಳೆಗಳನ್ನು ತಂದೊಪ್ಪಿಸುವ ಮಿಲಿಟರಿ! ಬಹುಶಃ ಹೋಳಿಯ ಆಚೆ ಈಚೆಗೆ ಇರಬೇಕು. ಸರಿ ನೆನಪಿಲ್ಲ. ಆದರೆ ಸಣ್ಣ ಮನೆಯಾಗಿದ್ದ ನಮ್ಮ ಮನೆಯ ಮೇಲೆ ಮಿಸೈಲಿನಂತೆ ಬೀಳುತ್ತಿದ್ದ ಗಾಜಿನ ಬಾಟಲಿಗಳು ನೆನಪಿವೆ. ಅ ಹೊತ್ತಿಗೆ ಅಪ್ಪನ ಒಬ್ಬ ಮುಸ್ಲಿಂ ಗೆಳೆಯ ಸ್ವಲ್ಪ ಸಮಯ ಆಶ್ರಯ ಕೊಟ್ಟಿದ್ದ, ಅದರ ನಂತರ ಇನ್ನೊಂದು ಗಲ್ಲಿಯಲ್ಲಿ ಇನ್ನೊಂದು ಯಾರದೋ ಮನೆಯಲ್ಲಿ ರಕ್ಷಣೆ ಪಡೆದಿದ್ದೆವು. ಅದರ ಮೇಲೆ ಹೋಳಿಯ ದಿನ ಅಕ್ಕ ತಪ್ಪಿಸಿಕೊಂಡದ್ದು ಕೆಂಪು ಬಣ್ಣದ ನಡುವೆ ಮುಖದ 'ಭಯದ ಕೆಂಪು'! ಒಟ್ಟಾರೆ ಹೋಳಿ ಮರೆಯಲಾರದ ಹಬ್ಬವಾಗಿದ್ದು ಹಾಗೆ, ದೀಪಾವಳಿಯಂತೆ! ದೀಪಾವಳಿಯ ಕಥೆ ಇನ್ನೊಮ್ಮೆ ಹೇಳುತ್ತೇನೆ.
ಪುರಾಣದಲ್ಲಿ ಬರುವ ಹೋಳಿಕ ಮತ್ತು ಪ್ರಹ್ಲಾದರ ಕಥೆಯೋ, ಕಾಮದೇವನ ಕಥೆಯೋ, ಧುನ್ಧಿಯ ಕಥೆಯೋ ಅಥವಾ ರಾಧಾ ಕೃಷ್ಣರ ಕಥೆಯೋ ಯಾರ ನೆನಪಿಗೆ ಬೇಕಾದರೂ ಹಬ್ಬ ಆಚರಣೆಯಲ್ಲಿ ಬರಲಿ, ಹಿಂದೂ ಸಂಸ್ಕೃತಿಯಲ್ಲಿ ಇರುವ ಎಷ್ಟೋ ಸುಂದರ ಆಚರಣೆಗಳಲ್ಲಿ ಇದು ಒಂದು, ದೀಪಾವಳಿ, ದಸರಾದ ನಂತರ ನಾನು ಇಷ್ಟ ಪಟ್ಟ ಹಬ್ಬ ಪ್ರಕಾರಗಳಲ್ಲಿ ಒಂದು ಇದು.
ಈ ಬಾರಿ ಇಲ್ಲಿನ ಕೆಲವೇ ಕೆಲವು ಗೆಳೆಯರೊಂದಿಗೆ ಹೋಳಿ ಆಚರಿಸಬೇಕೆಂಬ ಅಸೆ ಈವರೆಗೆ ಇದೆ, ಎಂದಿಗೂ ನಮ್ಮ ಪ್ಲಾನುಗಳು ಕೊನೆಯ ಕ್ಷಣಕ್ಕೆ ಬದಲಾಗುವುದರಿಂದ ಏನಾಗುತ್ತದೆ ಎಂದು ಗೊತ್ತಿಲ್ಲ. ಆದರೆ ಸ್ವಾದಿಷ್ಟವಾದ ಪುಣೆಯ ಹೋಳಿಗೆ (puran poli)ಯನ್ನು ಮಾತ್ರ ಖಂಡಿತ ತಿನ್ನುತ್ತೇನೆ, ತಿನ್ನಲು ಎದುರು ನೋಡುತ್ತಿದ್ದೇನೆ!
Comments
ಉ: ಬಣ್ಣ ನನ್ನ ಒಲವಿನ ಬಣ್ಣ...
In reply to ಉ: ಬಣ್ಣ ನನ್ನ ಒಲವಿನ ಬಣ್ಣ... by umeshhubliwala
ಉ: ಬಣ್ಣ ನನ್ನ ಒಲವಿನ ಬಣ್ಣ...