ನನ್ನ ಸಾಧನೆಗೆ ಹಾಸ್ಟೆಲ್ ತಿಗಣೆಗಳೇ ಕಾರಣ!

ನನ್ನ ಸಾಧನೆಗೆ ಹಾಸ್ಟೆಲ್ ತಿಗಣೆಗಳೇ ಕಾರಣ!

ಬರಹ

ಚಿನ್ನದ ಪದಕ ಪಡೆದ  ವಿದ್ಯಾರ್ಥಿಗೆ ತಿಗಣೆಯೇ ಗುರು

ಬೆಳಗಾವಿ: ೨೦೦೯-೨೦೧೦ರ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಘಟಿಕೋತ್ಸವದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ತಂತ್ರೇಶ್ ಗೌಡ ತನ್ನ ಸಾಧನೆಗೆ ತನ್ನ ಹಾಸಿಗೆಯಲ್ಲಿ ವಾಸವಾಗಿರುವ ತಿಗಣೆಗಳೇ ಕಾರಣ ಎಂದು ತಿಳಿಸಿದ್ದಾರೆ.

ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿದ ರಾಜ್ಯಪಾಲ ಭಾರದಧ್ವಜರಿಂದ ಚಿನ್ನದ ಪದಕವನ್ನು ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ತಂತ್ರೇಶ್ ತಮ್ಮ ಯಶಸ್ಸಿನ ಗುಟ್ಟನ್ನು ಹಂಚಿಕೊಂಡಿದ್ದು ಹೀಗೆ.

``ನಾನು ಅಂತಹ ಪ್ರತಿಭಾವಂತ ವಿದ್ಯಾರ್ಥಿಯಲ್ಲ. ಪಿಯುಸಿಯವರೆಗೆ ನಾನು ಅತಿ ಸಾಧಾರಣ ಮಟ್ಟದ ಫಲಿತಾಂಶವನ್ನೇ ಪಡೆಯುತ್ತಿದ್ದೆ. ನಾನು ವಿಪರೀತ ಸೋಮಾರಿ ಎಂದು ಎಲ್ಲರೂ ಹೇಳುತ್ತಿದ್ದರು. ಕುಂಭ ಕರ್ಣನ ಹಾಗೆ ನಿದ್ದೆ ಮಾಡುತ್ತಿದ್ದೆ. ಸಂಜೆ ಏಳಕ್ಕೆ ಊಟ ಮಾಡಿ ಮಲಗಿದರೆ ಬೆಳಿಗ್ಗೆ ಒಂಭತ್ತು ಗಂಟೆಗೆ ಕಡಿಮೆ ಏಳುತ್ತಲೇ ಇರಲಿಲ್ಲ. ಅಷ್ಟು ಸಾಲದೆಂಬಂತೆ ತರಗತಿಯಲ್ಲಿ ಪ್ರತಿ ಲೆಕ್ಚರ್ ಬಂದಾಗಲೂ ನಿದ್ದೆ ಮಾಡುತ್ತಿದ್ದೆ ಹೀಗಾಗಿ ನನಗೆ ಓದಲು ಸಮಯವೇ ಸಿಕ್ಕುತ್ತಿರಲಿಲ್ಲ. ಪರೀಕ್ಷೆ ಬರೆಯುವಾಗಲೂ ವೇಗವಾಗಿ ಒಂದೇ ತಾಸಿನಲ್ಲಿ ಗೊತ್ತಿರುವುದನ್ನೆಲ್ಲ ಬರೆದು ಉಳಿದ ಎರಡು ತಾಸು ಹಾಯಾಗಿ ನಿದ್ದೆ ಮಾಡುತ್ತಿದ್ದೆ. ರಸಾಯನ ಶಾಸ್ತ್ರದ ಪ್ರಯೋಗಾಲಯದಲ್ಲಿ ಬುನ್ಸೆನ್ ಬರ್ನರಿನಲ್ಲಿ ಆಸಿಡ್ ಮಿಶ್ರಣವನ್ನು ಕಾಯಲು ಇಟ್ಟು ನಿದ್ದೆ ಮಾಡಿದ್ದೆನಂತೆ. ಎದ್ದು ನೋಡುವಷ್ಟರಲ್ಲಿ ನನ್ನ ಉತ್ತರ ಪತ್ರಿಕೆಯು ಆವಿಯಾಗಿ ಹೋಗಿತ್ತು.

ಹಾಸ್ಟೆಲಿನಲ್ಲಿದ್ದ ಕಾದಂಬರಿಗಳೆಲ್ಲಾ ಖಾಲಿಯಾಗಿ ಹೊಸದು ಕೊಳ್ಳುವುದಕ್ಕೆ ಕಾಸಿಲ್ಲದಾದಾಗ ಅನಿವಾರ್ಯವಾಗಿ ಪಠ್ಯ ಪುಸ್ತಕಗಳನ್ನು ಓದಲು ಶುರು ಮಾಡಿದೆ.

``ಹೀಗಿದ್ದ ನಾನು ಇಂಜಿನಿಯರಿಂಗ್ ಸೇರಿದೊಡನೆ ತುಂಬಾ ಬದಲಾಗಿ ಹೋದೆ. ಬಳ್ಳಾರಿಯಲ್ಲಿ ನಾವು ವಾಸವಾಗಿರುವುದು. ಅಲ್ಲಿನ ಕಾಲೇಜು ಸಿಕ್ಕಲಿಲ್ಲ ಎಂದು ಹಾಸನದ ಕಾಲೇಜು ಸೇರಿದೆ. ಅಲ್ಲಿನ ಹಾಸ್ಟೆಲಿನಲ್ಲಿ ವಾಸ ಶುರು ಮಾಡಿದಾಗಿನಿಂದ ನನ್ನ ಜೀವನ ಶೈಲಿಯೇ ಬದಲಾಗಿ ಹೋಯ್ತು.

``ಹಾಸಿಗೆಯ ತುಂಬ ಚೆಲ್ಲಿದ ಮಲ್ಲಿಗೆಯ ಹಾಗೆ ತುಂಬಿಕೊಂಡ ತಿಗಣೆಗಳು ನನಗೆ ಗುರುಗಳಾದವು. ಎಂತೆಂಥ ಗುರುಗಳೂ ಕಲಿಸಲಾಗದ ಶಿಸ್ತನ್ನು ರೂಢಿಸಿದವು. ಒಂದು ಕಾಲದಲ್ಲಿ ಎಲ್ಲರಿಂದ ಕುಂಭಕರ್ಣ ಎಂದು ಬಿರುದನ್ನು ಪಡೆದಿದ್ದ ನಾನು ರಾತ್ರಿ ಎರಡು ಮೂರಕ್ಕಿಂತ ಹೆಚ್ಚು ತಾಸು ಮಲಗಿರಲು ಸಾಧ್ಯವೇ ಆಗಲಿಲ್ಲ. ಅತ್ಯಾಚಾರಿಯ ಆತ್ಮಸಾಕ್ಷಿಯು ಕ್ಷಣಕ್ಷಣವೂ ಆತನನ್ನು ಕುಟುಕುವ ಹಾಗೆ ರಾತ್ರಿ ಮಲಗಿ ನಿದ್ದೆ ಹತ್ತುತ್ತಿರುವಂತೆಯೇ ತಿಗಣೆಗಳ ತಂಡವು ಮೈಯೆಲ್ಲಾ  ಆವರಿಸಿ ಕಂಡಕಂಡಲ್ಲೆಲ್ಲ ಕಡಿಯುತ್ತಿದ್ದವು. ಕತ್ತಿನ ಹಿಂಭಾಗ, ತೋಳು ತೊಡೆ ಎನ್ನದೆ ಎಲ್ಲಿ ಬೇಕೆಂದರಲ್ಲಿ ಕಡಿಯುತ್ತ ನಿದ್ದೆಯಿಂದ ಎಚ್ಛೆತ್ತುಕೊಳ್ಳುವಂತೆ ಮಾಡುತ್ತಿದ್ದವು. ಒಮ್ಮೆ ನಿದ್ದೆಯಿಂದೆದ್ದು ಲೈಟ್ ಹಾಕಿ ಹುಡುಕಿದರೆ ಒಬ್ಬರೂ ಇಲ್ಲ! ಅದೃಶ್ಯ ದೇವತೆಗಳಂತೆ ಅವು ನನ್ನನ್ನು ಸದಾ ಪ್ರಜ್ಞೆಯಿಂದಿರುವಂತೆ ಕಾಯುತ್ತಿದ್ದವು. ಅವರು ದಾಳಿ ಮಾಡಿದ ಜಾಗಗಳಲ್ಲಿ ಎದ್ದ ಗುಳ್ಳೆಗಳು ಮತ್ತೆ ತೂಕಡಿಸದಂತೆ ನೋಡಿಕೊಳ್ಳುತ್ತಿದ್ದವು.

``ನಾನು ಹಗಲು ರಾತ್ರಿಯೆನ್ನದೆ ಓದಲು ಶುರುಮಾಡಿದ್ದು ಆಗಲೇ. ರೂಮಿನಲ್ಲಿ ದೀಪ ಹಾಕಿದರೆ ಗೆಳೆಯರು ಓಡಿಸಿಕೊಂಡು ಬರುತ್ತಾರೆಂದು ಹೆದರಿ ಬೀದಿ ದೀಪದಡಿಯಲ್ಲಿ ಓದಲು ಶುರು ಮಾಡಿದೆ. ಮೊದ ಮೊದಲಿಗೆ ಸಿಕ್ಕ ಕತೆ ಕಾದಂಬರಿಗಳನ್ನು ಓದಲು ಪ್ರಾರಂಭಿಸಿದೆ. ಇಡೀ ಹಾಸ್ಟೆಲಿನಲ್ಲಿದ್ದ ಕಾದಂಬರಿಗಳೆಲ್ಲಾ ಖಾಲಿಯಾಗಿ ಹೊಸದು ಕೊಳ್ಳುವುದಕ್ಕೆ ಕಾಸಿಲ್ಲದಾದಾಗ ಅನಿವಾರ್ಯವಾಗಿ ಪಠ್ಯ ಪುಸ್ತಕಗಳನ್ನು ಓದಲು ಶುರು ಮಾಡಿದೆ. ಈಗ ನಾನು ಈ ಹಂತವನ್ನು ತಲುಪಿದ್ದೇನೆ ಎಂದರೆ ಅದಕ್ಕೆ ನಮ್ಮ ಹಾಸ್ಟೆಲಿನ ತಿಗಣೆಗಳೇ ಕಾರಣ.''

ಹಾಸ್ಟೆಲಿನ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಈ ರೀತಿ ನೆರವಾಗುವ ತಿಗಣೆಗಳನ್ನು ವಿದ್ಯಾರ್ಥಿ ಮಿತ್ರ  ಎಂದು ಕರೆಯಬೇಕು ಎಂದ ತಂತ್ರೇಶ್ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತಿಗಣೆಗಳ ಬಗ್ಗೆ ತೋರುತ್ತಿರುವ ವೈಷಮ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

``ನನ್ನ ಜೂನಿಯರ್ ಗಳು ವಿದೇಶಿ ತಂತ್ರಜ್ಞಾನದ ಕೊಡುಗೆಯಾದ ತಿಗಣೆ ನಿರೋಧಕ ಹಾಸಿಗೆಗಳನ್ನು  ಬಳಸುತ್ತಿದ್ದಾರೆ. ರಾಸಾಯನಿಕ ಕ್ರಿಮಿನಾಶಕಗಳನ್ನು ಬಳಸಿ ನಿಸರ್ಗದತ್ತವಾದ `ವಿದ್ಯಾರ್ಥಿ ಮಿತ್ರ'ರನ್ನು ಕೊಲ್ಲುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ.''

ತಂತ್ರೇಶರ ಅಭಿಪ್ರಾಯವನ್ನು ಕಟುವಾಗಿ ವಿರೋಧಿಸಿದ ಅವರ ಜೂನಿಯರ್ ಹಾಗೂ ರೂಮ್ ಮೇಟ್ ಯಂತ್ರೇಶ್ ಜಾದವ್, ``ಹಾಸ್ಟೆಲಿನ ಊಟ ತಿಂಡಿಯಿಂದಾಗಿ ನಮ್ಮ ದೇಹಗಳು ಮೆಡಿಕಲ್ ಕಾಲೇಜಿನಲ್ಲಿ ನೇತು ಹಾಕುವ ಅಸ್ಥಿಪಂಜರಗಳಾಗಿರುತ್ತವೆ. ಹೀಗಿರುವಾಗ ಪಠ್ಯೇತರ ಚಟುವಟಿಕೆಯಿಂದ ಸಂಪಾದಿಸಿಕೊಂಡ ಅಲ್ಪ ಸ್ವಲ್ಪ ರಕ್ತವನ್ನೂ ಈ ತಿಗಣೆಗಳು ಹೀರಿದರೆ ನಾವು ಬದುಕುವುದು ಹೇಗೆ? ಹಾಸ್ಟೆಲಿನಲ್ಲಿ ಒಂದೋ ನಾವಿರಬೇಕು ಇಲ್ಲವೇ ತಿಗಣೆಗಳಿರಬೇಕು.'' ಎಂದು ನಮ್ಮ ವರದಿಗಾರನಲ್ಲಿ ತಮ್ಮ ಆಕ್ರೋಶ ತೋಡಿಕೊಂಡರು.

ಈ ಕುರಿತು ಅಭಿಪ್ರಾಯ ತಿಳಿಯಲು ತಿಗಣೆಗಳ ಪ್ರತಿನಿಧಿಯನ್ನು ಆಹ್ವಾನಿಸಲಾಗಿತ್ತಾದರೂ ಸಂಜೆಯಾದರೂ ಯಾರ ಪತ್ತೆಯೂ ಇಲ್ಲ. ತಿಗಣೆ ಪ್ರತಿನಿಧಿಯು ರಾಜ್ಯಪಾಲರ ಕತ್ತಿನ ಹಿಂದೆ ರಕ್ತಹೀರುವುದರಲ್ಲಿ ಮಗ್ನವಾಗಿದ್ದರೆಂದು   ಅನಂತರ ತಿಳಿದುಬಂದಿತು.