ಹೋಳಿ ಹಬ್ಬ

ಹೋಳಿ ಹಬ್ಬ

ಬರಹ

ಉತ್ತರ ಭಾರತೀಯರು ಮಾತ್ರ ಆಚರಿಸುತ್ತಿದ್ದ ಹೋಳಿ ನಮಗೆಲ್ಲ ಟಿವಿಯಲ್ಲಿ, ಚಲನಚಿತ್ರಗಳಲ್ಲಿ ನೋಡಿ ಗೊತ್ತಿದ್ದ ಹಬ್ಬ. ಆದರೆ ಕಾಲ ಬದಲಾದಂತೆ ಹೋಳಿ ಹಬ್ಬ ರಂಗು ರಂಗಿನಾಟವಾಗಿ ಮಾರ್ಪಟ್ಟು ದಕ್ಷಿಣ ಭಾರತೀಯರನ್ನೂ ಸೆಳೆಯತೊಡಗಿದೆ. ಓಕುಳಿಯಾಡುವ ಮೋಜು, ಫಾಲ್ಗುಣ ಶುಕ್ಲ ಹುಣ್ಣಿಮೆಯ ಈ ದಿನ ವಯೋಬೇಧವಿಲ್ಲದೆ ತೆಂಕಣದಲ್ಲೂ ತನ್ನ ಪ್ರಭಾವ ಬೀರತೊಡಗಿದೆ. ಎದಿರು ಸಿಕ್ಕವರ ಮುಖಕ್ಕೆ ಬಣ್ಣ ಬಳಿಯುವುದು, ಓಕುಳಿಯನ್ನೆರಚುವುದು ಈ ಹಬ್ಬದ ಮೋಜಿನ ಕ್ಷಣಗಳು. ಮೋಜು ಮನರಂಜನೆ ಹೊಸಕಾಲದ, ಹದಿಹರೆಯದವರ ಬಯಕೆಯೂ ಆಗಿರುವುದರಿಂದ ಹೋಳಿ ಈಗ ನಾವೆಲ್ಲರೂ ಒಪ್ಪಿಕೊಂಡ ಅಪ್ಪಿಕೊಂಡ ಹಬ್ಬವಾಗಿಯೂ ಬದಲಾಗಿದೆ. ಒಂದು ರೀತಿಯಲ್ಲಿ ಸಂಸ್ಕೃತಿಪ್ರಸರಣದ ರೀತಿಯಾಗಿಯೂ ನಾವಿದನ್ನು ನೋಡಬೇಕಾಗಿದೆ. ಜೊತೆಗೆ ಮನರಂಜನೆಯ ಸಹಜ ಮಾಧ್ಯಮಗಳಾದ ದೂರದರ್ಶನ ಮತ್ತು ಚಲನಚಿತ್ರಗಳಂತೂ ಹೋಳಿಯನ್ನು ಸಂಭ್ರಮದ ಮೋಜಾಗಿ, ಜನಮಾನಸದ ಆಸೆಯ ಕವಲಿಗೆ ಮತ್ತೊಂದು ಮಜಲನ್ನೂ ಸೇರಿಸಿವೆ.

ಎಲ್ಲ ಹಬ್ಬಗಳ ಹಿಂದೆಯೂ ಸಂಸ್ಕೃತಿ ಮತ್ತು ಐತಿಹಾಸಿಕ ಕಾರಣಗಳಿದ್ದೇ ಇರುತ್ತವೆ. ಅಂತೆಯೇ ಹೋಳಿ ಕೂಡ ಪೌರಾಣಿಕ ಕಾರಣ ಹೊಂದಿದೆ. ಕಾಮದಹನ ಎಂದೇ ಖ್ಯಾತವಾಗಿರುವ ಸಂಗತಿ ಇದು. ತಾರಕಾಸುರನೆಂಬ ರಾಕ್ಷಸನ ಉಪಟಳ ಹೆಚ್ಚಾಗಿ ದೇವಾನುದೇವತೆಗಳು ತತ್ತರಿಸುತ್ತಿದ್ದರು. ಬ್ರಹ್ಮನ ವರ ತನಗಿದೆಯೆಂದು ಆ ರಾಕ್ಷಸನೋ ಇಲ್ಲಸಲ್ಲದ ರೀತಿಯಲ್ಲಿ ದೇವತೆಗಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದ. ಶಿವನಿಗೆ ಜನಿಸುವ ಏಳನೇ ಮಗನಿಂದ ಅವನ ಸಾವು ಎಂಬ ಉತ್ತರ ಗೊತ್ತಿದ್ದ ದೇವತೆಗಳು ಕಾಮನ ಮೊರೆಹೋಗುತ್ತಾರೆ. ಭೋಗ ಸಮಾಧಿಯಿಂದ ಶಿವನನ್ನೆಬ್ಬಿಸಲು ತನ್ನ ಶರಚಾಪದಿಂದ ಶಿವನ ತಪೋಭಂಗ ಮಾಡುವ ಕಾಮ ಶಿವನ ಕೋಪಕ್ಕೆ ಬಲಿಯಾಗಿ ಅವನ ಮೂರನೇ ಕಣ್ಣಿನ ಕ್ರೋಧಾಗ್ನಿಗೆ ಸಿಕ್ಕು ಭಸ್ಮವಾಗುತ್ತಾನೆ. ರತಿ ಶಿವನನ್ನು ಅನುನಯಿಸಿ ಅವಳೊಬ್ಬಳಿಗೆ ಮಾತ್ರ ಕಾಮ ಶರೀರಿಯಾಗಿ ಕಾಣುವ ವರ ಪಡೆಯುತ್ತಾಳೆ.

ಇನ್ನೊಂದು ಕಥೆ ನಾರದ ಪುರಾಣದಲ್ಲಿದೆ. ಅಸುರ ಅರಸು ಹಿರಣ್ಯಕಶಿಪು ಶ್ರೀಹರಿಯನ್ನು ದ್ವೇಷಿಸುವ ಶಿವಭಕ್ತನಾಗಿದ್ದ. ಅವನ ಮಗ ಪ್ರಹ್ಲಾದ ಶ್ರೀಹರಿಯ ಭಕ್ತ. ಎಲ್ಲೆಲ್ಲೂ ಹರಿಯಿದ್ದಾನೆಂದು ವಾದಿಸುವ ಪ್ರಹ್ಲಾದನನ್ನು ಸಾಮದಾನಬೇಧಗಳಿಂದ ಶಿಕ್ಷಿಸಿದರೂ ಬದಲಾಗದ ಅವನನ್ನು ಕೊಂದು ಬಿಡಲು ಸ್ವಂತ ತಂದೆಯೇ ನಿಶ್ಚಯಿಸುತ್ತಾನೆ. ಅವನೆಲ್ಲ ಪ್ರಯತ್ನಗಳೂ ವಿಫಲವಾದ ಕಾರಣ ತನ್ನ ತಂಗಿ ಹೋಲಿಕಾಳ ಸಹಾಯ ಪಡೆಯುತ್ತಾನೆ. ಬೆಂಕಿಯೂ ಸುಡದ ವಸ್ತ್ರಹೊಂದಿದ್ದ ಅವಳು ಪ್ರಹ್ಲಾದನನ್ನು ಎತ್ತಿಕೊಂಡೇ ಅಗ್ನುಕುಂಡ ಪ್ರವೇಶಿಸುತ್ತಾಳೆ. ಶ್ರೀಹರಿಯ ದಯೆ ಹಾಗೂ ಪ್ರಹ್ಲಾದನ ಭಕ್ತಿ ಅವಳ ಅಗ್ನಿ ನಿರೋಧಕ ವಸ್ತ್ರವನ್ನು ಗಾಳಿಗೆ ಹಾರಿಸಿ ಹೋಳಿಕೆಯನ್ನೇ ಅಗ್ನಿಗೆ ಸಮರ್ಪಿಸಿಬಿಡುತ್ತದೆ. ವಿಷ್ಣುಭಕ್ತ ಪ್ರಹ್ಲಾದ ಬದುಕುಳಿಯುತ್ತಾನೆ.

ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದು ಎಂದು ತುಂಟ ಕೃಷ್ಣನನ್ನು ಗೋಪಿಯರು ಬೇಡಿ ಕಾಡಿದರೂ ನವನೀತ ಚೋರ ಕೃಷ್ಣ ಗೋಪಿಯರಿಗೆ ಪಿಚಕಾರಿ ಹಾರಿಸುತ್ತ ಬಣ್ಣದೋಕುಳಿ ಎರಚುತ್ತ, ದಹಿಸಿ ಹೋದ ಹೋಲಿಕಾಳನ್ನು ಪ್ರಹ್ಲಾದನ ಭಕ್ತಾಗ್ರೇಸರತೆಯನ್ನೂ ಒಟ್ಟೊಟ್ಟಿಗೆ ನೆನಪಿಗೆ ತರುತ್ತಿದ್ದ. ಹಾಗೆಂದೇ ಶ್ರೀಕೃಷ್ಣನ ಮಥುರೆ ಬೃಂದಾವನಗಳಲ್ಲಿ ನಡೆಯುವ ಹೋಳಿ ಜಗತ್ಪ್ರಸಿದ್ಧವಾಗಿದೆ.

ಕಾಮದಹನದ ನೆನಪಿಗೆ ಕಾಮರತಿಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ಪೂಜಿಸಿ ಹುಣ್ಣಿಮೆಯ ದಿನ ದಹಿಸುವುದು ಸಂಪ್ರದಾಯದ ವೈವಿಧ್ಯವಾಗಿದೆ. ಕಾಮದಹನದ ನಂತರ ಓಕುಳಿಯಾಡಿ ಎಣ್ಣೆಮಜ್ಜನದ ನಂತರ ಹೋಳಿಗೆ ಮೆಲ್ಲುವುದೂ ಸಂಪ್ರದಾಯವೇ ಆಗಿದೆ.

ಈ ಆಚರಣೆಯ ಹಿಂದಿರುವ ಸಂದೇಶವನ್ನು ಅರಿತರೆ ಹೋಳಿ ಹುಣ್ಣಿಮೆಯ ಮಹತ್ವ ಗೊತ್ತಾಗುತ್ತದೆ. ನಿತ್ಯದ ಬದುಕಿನಲ್ಲಿ ನಾವೀಗ ಹಲವು ಹಿರಣ್ಯಕಶಿಪುಗಳನ್ನು ಎದುರಿಸುತ್ತಿದ್ದೇವೆ. ತಮಗಿರುವ ಅಧಿಕಾರವೆಂಬ ಹೋಲಿಕೆಯನ್ನು ಬಳಸಿಕೊಂಡು ಅವರೆಲ್ಲರೂ ನಮ್ಮನ್ನು ಶೋಶಿಸುತ್ತಲೇ ಇದ್ದಾರೆ. ಏಕತೆ, ಸದ್ಭಾವನೆ, ಪರಸ್ಪರ ವಿಶ್ವಾಸಗಳನ್ನು ಕ್ರೋಧಾಗ್ನಿಯಲ್ಲಿ ದಹಿಸುತ್ತ ಲೋಕಕಂಟಕರಾಗಿದ್ದಾರೆ. ಇವರಿಗಿರುವ ಅಧಿಕಾರವೆಂಬ ಹೋಲಿಕೆಯ ರಕ್ಷಣೆಯನ್ನು ಬೇರ್ಪಡಿಸಿ,ಋಣಾತ್ಮಕ ಅಂಶಗಳನ್ನು ಕೈಬಿಟ್ಟು  ಮನುಷ್ಯಸಹಜ ಪ್ರೀತಿಯನ್ನುಬಿತ್ತಿ ಬೆಳೆಯಲು ಈ ಹಬ್ಬ ಕರೆನೀಡುತ್ತಿದೆ. ಅಂತೆಯೇ ದೈವಭಕ್ತರನ್ನೆಂದೂ ಕೈಬಿಡದ ಶ್ರೀವಿಷ್ಣುವು ಪ್ರಹ್ಲಾದನನ್ನು ರಕ್ಷಿಸಿದ ಹಾಗೆಯೇ ಎಲ್ಲರನ್ನೂ ಕಾಪಾಡುತ್ತಾನೆಂದೂ ಸಾರಿ ಹೇಳುತ್ತಿದೆ.      
   
ಈ ಎರಡೂ ಪುರಾಣಕತೆಗಳು ಸಾರುವ ಸಂದೇಶ ಒಂದೇ. ಅದೆಂದರೆ ಕೆಟ್ಟದ್ದನ್ನು ಸುಡು ಎಂದು. ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಸುಟ್ಟು, ಅಸುರೀ ಶಕ್ತಿಗಳನ್ನು ನಿರ್ನಾಮ ಮಾಡಬೇಕೆಂಬ ಹಟ ಹುಟ್ಟಿದ ಹೊರತೂ ಪ್ರೀತಿ ಮೊಳೆಯುವುದಿಲ್ಲ, ಬದುಕಿಗೆ ರಂಗು ಬರುವುದಿಲ್ಲ. ಕಾಮವೆಂದರೆ ಬಯಕೆ. ಅದನ್ನು ಸುಡದ ಹೊರತು ಮುಕ್ತಿಯ ಮಾತು ಬರಿಯ ಕನಸಾಗುತ್ತದೆ. ಕಾಮದಹನ ಈ ಪವಿತ್ರ ದಿನದಂದು ನಮ್ಮೊಳಗಿನ ಕೆಡುಕು ದಹಿಸಿ, ಒಳ್ಳೆಯ ಮನಸ್ಸಿನಲ್ಲಿ ಅನ್ಯರ ಭಾವನೆಗಳನ್ನೂ ಗೌರವಿಸಿ ಪರಸ್ಪರ ಹಿತವೆನ್ನಿಸುವ ಬಣ್ಣಗಳನ್ನು ಎರಚೋಣ. ಹೋಳಿಗೆ ತುಪ್ಪ ಮೆಲ್ಲೋಣ.