ಹಿಮಾಲಯ

ಹಿಮಾಲಯ

ಬರಹ

ಭಾರತ ದೇಶದ ಉತ್ತರ ದಿಕ್ಕಿನಲ್ಲಿ ಹಿಮಾಲಯವೆಂಬ ಪರ್ವತ ಚಕ್ರವರ್ತಿಯು ಪ್ರಪಂಚದಲ್ಲಿ ಅತ್ಯಂತ ಎತ್ತರವಾಗಿಯೂ, ಪೂರ್ವ ಪಶ್ಚಿಮ ಸಮುದ್ರಗಳನ್ನು ಆವರಿಸಿ ಭೂಮಿಯ ಅಳತೆಗೋಲಿನಂತೆ ಶೋಭಿಸುತ್ತಲಿದೆ. ಮಹಾಕವಿ ಕಾಳಿದಾಸರು ಇದನ್ನು ದೇವತಾತ್ಮ ಎಂದು ವರ್ಣಿಸಿದ್ದಾರೆ. ಈ ಪರ್ವತವು ತನ್ನ ಒಡಲಲ್ಲಿ ಅನೇಕ ಅನರ್ಘ್ಯ ರತ್ನಗಳನ್ನು ಮತ್ತು ಅಮೂಲ್ಯ ಔಷದೀಯ ವಸ್ತುಗಳನ್ನು ತುಂಬಿಕೊಂಡು ರತ್ನಾಕರ ಎಂಬ ಹೆಸರನ್ನು ಸಾಧಕಪಡಿಸಿಕೊಂಡಿದೆ.

ಹಿಮಾಲಯದಲ್ಲಿ ವಿಶೇಷವಾಗಿ ಚಮರಿ ಮೃಗ ಎಂಬ ಪ್ರಾಣಿಸಂಕುಲವು ವಾಸವಾಗಿದ್ದು ಅವುಗಳು ಚಂದ್ರಕಿರಣದಂತಿರುವ ತನ್ನ ಬಾಲದಿಂದ ಪರ್ವತರಾಜನಾದ ಹಿಮಾಲಯಕ್ಕೆ ಚಾಮರಸೇವೆಯನ್ನು ನಡೆಸುತ್ತವೆ. ಹಿಮಾಲಯದಲ್ಲಿ ಮಾನಸ ಮೊದಲಾದ ಸರೋವರದಲ್ಲಿ ಅರಳುವ ಕಮಲವು ಸೂರ್ಯೋದಯಕ್ಕಿಂತ ಮೊದಲೇ ಸಪ್ತರ್ಷಿಗಳಿಂದ ಕೂಡಿದೆ.

ಈ ಪರ್ವತದಲ್ಲಿ ಧವಳಗಿರಿ, ಕಾಂಚನಗಂಗಾ, ನಂದಾತ್ಮೆ, ಗೌರೀಶಂಕರ ಮೊದಲಾದ ಉನ್ನತ ಶಿಖರಗಳಿವೆ. ಇದರಲ್ಲಿ ಗೌರೀಶಂಕರವು ಉನ್ನತೊನ್ನತವಾಗಿದೆ.ಹಿಮಾಲಯವು ಭಾರತವನ್ನು ಸದಾಕಾಲ ರಕ್ಷಿಸುತ್ತದೆ ಹಾಗು ಇದರಲ್ಲಿ ಪರಮೇಶ್ವರರು ವಾಸವಾಗಿರುವರೆಂಬ ನಂಬಿಕೆ ಇದೆ. ಆದ್ದರಿಂದ ಜನರು ಇದನ್ನು ಪೂಜಿಸುತ್ತಾರೆ.

ಹಿಮಾಲಯವು ಅನೇಕ ನದಿಗಳಿಂದ ಕೂಡಿದೆ, ಅವು ಗಂಗಾ, ಯಮುನಾ, ಬ್ರಮ್ಹಪುತ್ರ, ಇರಾವತೆ, ಚಂದ್ರಭಾಗ ಇವು ಮುಖ್ಯವಾದವು. ಹೇಮಂತ ಋತುವಿನಲ್ಲಿ ಹಿಮಾಲಯದಲ್ಲಿ ಹಿಮಪಾತ ಉಂಟಾಗುತ್ತದೆ. ಹಿಮಾಲಯವು ಭೌಗೋಳಿಕವಾಗಿ ಮಹತ್ವವನ್ನೂ ಹೊಂದಿದೆ. ಈ ನಗಧಿರಾಜನು ಭಾರತದ ಗೌರವವನ್ನು ಹೆಚ್ಚಿಸುತ್ತಿದ್ದಾನೆ.

 

                                                               ಓಂ ತತ್ಸತ್