"ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್."....!

"ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್."....!

ಬರಹ

'ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್'.....

ಈ ಹಾಡನ್ನು ರಾಗವಾಗಿ ಹೇಳುತ್ತ, ಭಾವುಕತೆಯ ಉತ್ತುಂಗದಲ್ಲಿ ತೇಲುತ್ತಾ ಅವನ ಲೋಕದಲ್ಲೇ ಕಳೆದುಹೋಗುತ್ತಾನೋ ಎನ್ನಿಸುವಷ್ಟು ಮಗ್ನನಾದ ಒಬ್ಬ ವ್ಯಕ್ತಿ(ತಿರುಕ) ನನ್ನಮೇಲೆ ಗಾಢವಾದ ಪರಿಣಾಮ ಬೀರಿದ್ದಾನೆ ! ಎಲ್ಲರು ಗಮನಿಸುವಂತೆ, ಇತರ ನೇತ್ರಹೀನ ಬಿಕ್ಷುಕರು ತಮ್ಮ ದುಷ್ಕರ್ಮವನ್ನು ಹಳಿದುಕೊಳ್ಳುತ್ತಾ 'ಪಾಪಿ ಪೇಟ್ ಕೆ ಲಿಯ ಕುಚ್ ದೇದೋ ಮಾ; ಜನಮ್ ಸೆ ಅಂಧ ಹೈ, ದಯಾ ಕರೋ' ಎಂದೋ ಮೇರಾ ಕೋಯಿ ನಹಿ ಹೈ; ಇಸ್ ದುನಿಯ ಮೆ' ಇತ್ಯಾದಿ ಗಳು ಅವನ ಹತ್ತಿರವೂ ಸುಳಿಯುವುದಿಲ್ಲ ! ಅವನೊಬ್ಬ 'ಸ್ಥಿತಪ್ರಜ್ಞ'ನಂತೆ ತೋರುತ್ತಾನೆ !

ಬಸವಣ್ಣನವರ ಮಾತಿನಂತೆ, ಕಾಯಕಮಾಡುವುದಷ್ಟೆ ಅವನ ಕೆಲಸ. ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ ,ಹೇಳಿರುವಂತೆ, ನಿನ್ನ ಕೆಲಸ ಮಾಡು; ಉಳಿದದ್ದನ್ನು ನನಗೆ ಬಿಡು. ಫಲಾಪೇಕ್ಷೆ ನಿನಗೆ ಬೇಡ' ಸರ್ವಜ್ಞನು ತಿಳಿಸಿದಂತೆ 'ಕೋಟಿವಿದ್ಯಗಳಿಗಿಂತ ಮೇಟಿವಿದ್ಯೆಯೆ ಲೇಸು.' ಮೇಟಿವಿದ್ಯೆಯನ್ನು (ಬೇಸಾಯ) ಇವನು ಧಾರಾಳವಾಗಿ ಮಾಡಬಾಹುದಿತ್ತು. ಆದರೆ ನೇತ್ರಹೀನತೆ, ಅವನನ್ನು ಹಿಡಿದು ಕಟ್ಟಿದೆ ! ಬೇಕಾದಷ್ಟು ಜನ ಮಾಡುತ್ತಲೂ ಇದ್ದಾರೆ. ಭಿಕ್ಷೆಯನ್ನು ಮಾಡುವುದೊಂದೇ ಅವನಿಗೆ ಒದಗಿಬಂದಿರುವ ಕೆಲಸ.'ಭವತಿ ಭಿಕ್ಷಾಂದೇಹಿ' ಎಂಬ ಪಂಚಾಕ್ಷರಿ ಮಂತ್ರವನ್ನು ಹೇಳಿ, ಮನೆ ಮನೆಗೆ ಹೋಗಿ ಕೈಒಡ್ಡಲು ಅವನಿಗಾಗುತ್ತಿಲ್ಲ. ಅಂಧನಲ್ಲವೆ ! ಆದರೆ ಇದರ ಅವಷ್ಯಕತೆ ಅವನಿಗೆ ಬೀಳಲಿಲ್ಲ, ಎಂದು ಕಾಣಿಸುತ್ತದೆ. ಬಹುಶಃ ತಂದೆ ತಾಯಿಗಳು ಭಿಕ್ಷುಕರಾಗಿದ್ದರೇನೋ. ಮಧ್ಯದಲ್ಲಿ ತೀರಿಕೊಂಡಿರಬಹುದು. ಹುಟ್ಟು ಕುರುಡರಿಗೆ ದಿಕ್ಕಾಗುವರು ಯಾರು ಈ ಲೋಕದಲ್ಲಿ ? ದೇವರನ್ನು ಬಿಟ್ಟು ! ಇದು ಅವನ ಮನಸ್ಸಿಗೆ ಚೆನ್ನಾಗಿ ನಾಟಿರಬಹುದು ! ದೇವರು ಕರುಣಿಸಿದ ಅವಕಾಶಗಳನ್ನು ಸಮಯೋಚಿತವಾಗಿ ಉಪಯೋಗಿಸಿಕೊಂಡು ಇನ್ನೊಬ್ಬರಿಗೂ ನೆರವಾಗಿದ್ದಾನೆ. ತನ್ನ ಕೆಲಸದಲ್ಲಿ ತೃಪ್ತಿಯನ್ನು ಕಾಣುತ್ತಿದ್ದಾನೆ. ಅವನು ಕುಳಿತ ಜಾಗ, ತೀರ ಅಸಹ್ಯಕರವಾದದದ್ದು. ಅಂದೂ ಅಲ್ಲೇ ಕುಳಿತು ಭಕ್ತಿಭಾವದಿಂದ ಹಾಡುತ್ತಿದ್ದ. ಇಂದೂ ಅಷ್ಟೆ. ಅವನನ್ನು ಭಿಕ್ಷುಕನೆಂದು ಕರೆಯಲು ನನಗೆ ಮುಜುಗರ ವಾಗುತ್ತದೆ. ಆ ಜಾಗದಲ್ಲಿ ಎಲಡಿಕೆ ಉಗುಳುವವರೆ ಜಾಸ್ತಿ. ಕೊಳಕು ಜಾಗ; ಶುಚಿಮಾಡುವವರ್ಯಾರು ? ಇಂದೂ ಅಷ್ಟೆ. ಮಂಕಿ ಬ್ರಿಡ್ಜ್'- ಅವನ ಕಾರ್ಯಕ್ಷೇತ್ರವಾಗಿಬಿಟ್ಟಿದೆ!

ಅದು ನಮ್ಮ ಮುಂಬೈ ನಲ್ಲಿನ ಮಾಟುಂಗ ದಲ್ಲಿನ ಒಂದು 'ಕಾಲು ಸೇತುವೆ,' ಎನ್ನಲು ಅಡ್ಡಿಯಿಲ್ಲ. ಇದನ್ನು ಜನ, 'ಮಂಕಿ ಬ್ರಿಡ್ಜ್' ಎನ್ನುತ್ತಾರೆ. ಮಂಕಿಗೂ ಈ ಸೇತುವೆಗೂ, ಏನು ಸಂಬಂಧ ತಿಳಿಸುವುದು ಕಷ್ಟ. ಬಹುಶಃ ಹನುಮಂತನ ಬಾಲದಂತೆ ಉದ್ದವಾಗಿರುವ ಕಾಲುದಾರಿಯಾಗಿರುವುದೇ ಇದಕ್ಕೆ ಕಾರಣವಿರಬಹುದು. ಎಡಭಾಗದಲ್ಲಿ ೧೦೦ ವರ್ಷಗಳ ಇತಿಹಾಸದ 'ಮಾಟುಂಗಾ ರೈಲ್ವಯ್ ವರ್ಕ್ ಶಾಪ್', ಬಲಗಡೆ ಸರಳವಾಗಿ ಝಿಂಕ್ ಷೀಟ್, ಆಸ್ಬೆಸ್ಟೊಸ್ ಶೀಟ್ ನಿಂದ ತಯಾರಿಸಿ ಮುಚ್ಚಲಾದ ಗೋಡೆ. ಸುಮಾರು ಒಂದೂವರೆ ಫರ್ಲಾಂಗ್ ಉದ್ದವಿರಬಹುದೇನೋ ! ಈ ಬ್ರಿಡ್ಜ್ ಮೊದಲು ರೈಲ್ವೆಯ ೪ ಪ್ಲಾಟ್ಫಾರ್ಮ್ ಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸ್ವಲ್ಪ ಮೇಲೆ ಟಿಕೆಟ್ ಮಾರುವ 'ಟಿಕೆಟ್ ಕೌಂಟರ್,' ಇದೆ. ಜೊತೆಗೆ ಮುಂದೆ ಮಾಟುಂಗಾ ಪಶ್ಚಿಮಕ್ಕೆ ಹೋಗಲು 'ಮಂಕಿ ಬ್ರಿಡ್ಜ್'-ಇದೊಂದೇ ಸುಲಭವಾದ ಸರಳಮಾರ್ಗ. ಅಲ್ಲಿ ಆಗೊಮ್ಮೆ ಈಗೊಮ್ಮೆ ಸೈಕಲ್ ಸವಾರರು ಪೇಪರ್,ಮುಂತಾದ ಸಾಮನುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುತ್ತಾರೆ. ಮುಂಬೈ ದಕ್ಷಿಣದಿಂದ ಉತ್ತರಕ್ಕೆ ಹಬ್ಬಿರುವುದರಿಂದ ಮಧ್ಯ ರೈಲ್ವೆ ಲೈನ್ ಸರಿಯಾಗಿ ನಗರವನ್ನು ಎರಡುಭಾಗವಾಗಿ ಮಾಡುತ್ತದೆ. ಮುಂಬೈ ಪೂರ್ವ. ಮುಂಬೈ ಪಶ್ಚಿಮ. ಎನ್ನುವಮಾತನ್ನು ನಾವು ಹೇಳದಿದ್ದರೆ ಸ್ಥಳಗಳನ್ನು ಪತ್ತೆ ಹಚ್ಚುವುದು ಕಷ್ಟ. ಈ ಸೇತುವೆ ಎಷ್ಟು ಮುಖ್ಯವೆಂದರೆ, ಒಂದುವೇಳೆ ಇದನ್ನು ದುರಸ್ತಿಗೇನಾದರೂ ಮುಚ್ಚಿದರೆ, ನಾವು ಮಾಟುಂಗ ಪಶ್ಚಿಮಕ್ಕೆ ಹೋಗಲು, ದಾದರ್ ಗೆ ಹೋಗಿ ಅಲ್ಲಿಂದ ಸುಮಾರು ಎರಡು ಮೈಲಿ ವಿರುದ್ಧ ದಿಕ್ಕಿನಲ್ಲಿ ಹೋಗಬೇಕಾಗುತ್ತದೆ. ಈಗ ನಿಮಗೆ ಈ ಕಾಲು ಸೇತುವೆಯ ಮಹತ್ವ ಅರ್ಥವಾಗಿರಬಹುದು. ಇದೊಂದೇ ಅತಿಮುಖ್ಯ ಸಂಪರ್ಕ ಸೇತುವೆ. ಇದುವರೆಗೂ ಇದರ ದುರಸ್ತಿ ಹಲವು ಬಾರಿ ಮಾಡಿದ್ದಾರೆ. ಆಗಲೂ ಮಧ್ಯ ರಾತ್ರಿಯಲ್ಲೇ ಅದರ ಕೆಲಸ ನಿರ್ವಹಿಸುವುದರಿಂದ ಹೆಚ್ಚಿಗೆ ಕಷ್ಟವಾಗಿಲ್ಲ. ಪಶ್ಚಿಮದಕಡೆ ಇಲ್ಲಿಂದ ಇಳಿದು ನೇರವಾಗಿ ಹೋದರೆ,ಮಾಟುಂಗಾ ರೋಡ್ ಪಶ್ಚಿಮ ರೈಲ್ವೆ ಸ್ಟೇಶನ್ನಿಗೂ ಹೋಗಬಹುದು. ಮುಂದೆ, ಮನಮಾಲಾ ಟ್ಯಾಂಕ್ ರೋಡಿನಲ್ಲಿರುವ ನಮ್ಮ ಆಫೀಸ್ ಕ್ವಾರ್ಟರ್ಸ್ ಗೆ ಹೋಗಬಹುದು. ಮತ್ತೆ ಮುಂದಕ್ಕೆ ಹೋದರೆ, ಕಟಾರಿಯ, ಮಾರ್ಗದಲ್ಲಿರುವ ನಮ್ಮ 'ಕರ್ಣಾಟಕಸಂಘ'ಕ್ಕೆ ಹೋಗಬಹುದು. ಅಲ್ಲಿಂದ ದಾದರ್ ಬೀಚಿಗೋ, ಶಿವಾಜಿ ಪಾರ್ಕಿಗೋ ಹೋಗಬಹುದು. ಮಾಹೀಮ್ ಚರ್ಚು ಅಲ್ಲಿಗೆ ಬಹಳ ಸಮೀಪ.

ಮಾಟುಂಗದ ಪೂರ್ವಭಾಗಕ್ಕೆ ಹೋದರೆ ರಾಮಾನಾಯಕರ ಹೋಟೆಲ್, ಶಾರದಾಭವನ, ರುಯಾ, ಪೊದ್ದಾರ ಕಾಲೇಜ್ ಗಳು, ಮಹೇಶ್ವರೀ ಉದ್ಯಾನ, ಮೈಸೂರ್ ಅಸೋಸಿಯೇಶನ್, ಶಂಕರಮಠ, ಆಸ್ತಿಕಸಮಾಜ, ಶನ್ಮುಖಾನಂದಾಹಾಲ್, ಡಾನ್ ಬಾಸ್ಕೊ, ಖಲ್ಸಾ ಕಾಲೇಜ್, ವೀ.ಜೆ.ಟೀ.ಐ, ಪಾಂಚ್ ಬಗೀಚ ಇತ್ಯಾದಿಗಳು ಸಿಕ್ಕುತ್ತವೆ.

ಹಾ ! ನಮ್ಮ ವ್ಯಕ್ತಿ, ರಘುಪತಿಯನ್ನು ನಾನು ಬಹುಶಃ ೩೬ ವರ್ಷಗಳಿಂದ ಬಲ್ಲೆ. ನಾನು ಮತ್ತು ನಮ್ಮ ಗೆಳೆಯರು ಕ್ವಾರ್ಟರ್ಸ್ ನಲ್ಲಿದ್ದಷ್ಟು ದಿನ, ಅಂದರೆ ಸುಮಾರು ೧೦ ವರ್ಷ, ಈ ಸೇತುವೆಯಮೇಲೆ ದಿನಕ್ಕೆ ಎರಡುಬಾರಿ ಸತತವಾಗಿ ನಡೆದಿದ್ದೇವೆ. ಪ್ರತಿದಿನವೂ ಅವನ ರಘುಪತಿ...ಹಾಡನ್ನು ಹೋಗುವಾಗ ಮತ್ತು ಬರುವಾಗ ಕೇಳಿದ್ದೇವೆ. ಮೊದಮೊದಲು ಇದೇನು ಇಷ್ಟು ಕರ್ಕಶವಾದ ಧ್ವನಿ; ಯಾರು ಈತ ? ಹೀಗೆ ಹಾಡುತ್ತಾನಲ್ಲ, ಎನ್ನಿಸಿತು. ನನಗಂತೂ 'ಪತೀತ ಪಾವನ' ಎಂದು ತಪ್ಪು ತಪ್ಪಾಗಿ ಹಾಡುವವರನ್ನು ಕಂಡರೆ ಅತಿ ಬೇಸರ. ಅನೇಕರಿಗೆ ಇದು ತಪ್ಪೆಂದು ತಿಳಿದಿದೆ. ಆದರೂ ಅವರು ಹಾಗೇ ಹೇಳುತ್ತಾರೆ. ಸರಿಪಡಿಸಲು ಪ್ರಯತ್ನವನ್ನೂ ಮಾಡುವುದಿಲ್ಲ. ನಾನು ಹತ್ತಿರ ಹೊಗಿ ಆತನ ಮುಖ ನೋಡಿದಾಗ ನನ್ನ ಮನಸ್ಸು ಪರಿವರ್ತನೆಯಾಗಲು ಹೆಚ್ಚು ಸಮಯ ಹಿಡಿಯಲಿಲ್ಲ ! ಅವನೊಬ್ಬ ಹುಟ್ಟುಕುರುಡ. ಹೇಗೊ ತಡವರಿಸಿಕೊಂಡು, ತಡವರಿಸಿಕೊಂಡು ಸ್ವಲ್ಪ ದೂರ ಹೋಗಬಲ್ಲ. ಆದರೂ, ಬೇರೆಯವರ ಸಹಾಯ ಬೇಕೇಬೇಕು. ಬಿಸಿಲಿನವೇಳೆಯಲ್ಲಿ ಅಲ್ಪ ಸ್ವಲ್ಪ ಕಾಣಿಸಬಹುದು. ಬಿಸಿಲಿನ ತಾಪದಲ್ಲಿ ಹೇಗೆ ಕುಳಿತುಕೊಳ್ಳಲು ಸಾಧ್ಯ ! ಇನ್ನು ದೇವರ ಧ್ಯಾನ. ರಘುಪತಿರಾಘವನ ಹೊಗಳುವುದು, ಕೊಂಡಾಡಿ ಹಾಡುವುದು ದೇವರ ವಿಗ್ರಹದ ಮುಂದೆ. ಒಳ್ಳೆ ಪ್ರಸಾದ, ತೀರ್ಥ ಸೇವನೆಯ ಪ್ರಬಂಧವಿದ್ದು ಭರ್ಜರಿ ಭೋಜನಸಿಗುವುದೆಂಬ ಭರವಸೆ ಇದ್ದಾಗ ಮಾತ್ರ ! ಇಲ್ಲೇ, ಅವನು ನಮ್ಮೆಲ್ಲರನ್ನೂ ಮೀರಿಸಿ ಮೇಲೆದ್ದು ನಿಲ್ಲುವುದು ! ಬಿಸಿಲಿನ ಬೇಗೆ ಅದರಲ್ಲೂ 'ಬೊಂಬಾಯಿನ ಹವೆ' ಎಂತಹವರಿಗೂ ಮುಜುಗುರ ತರುವಂತಹದು. ಮೈಯೆಲ್ಲಾ ಜಿಗಿಜಿಗಿ ಅನ್ನುವ ವಾತಾವರಣ. ಅದನ್ನು ಬೊಂಬಾಯಿನ ಜನ ಹೇಳುವುದ್ದು 'ಚಿಕ್ಕಟ್ ಹವ ' ಎಂದು. ಇದೇ ಸರಿಯಾದ ಪದ !

೧೨-೧೪ ಅಡಿ ಅಗಲದ ರಸ್ತೆಯಲ್ಲಿ ಒಮ್ಮೆ ಹೋಗಲು ಬೇಸರ ಬರುತ್ತೆ. ಇವನು ಸುಮಾರು ನನಗೆ ತಿಳಿದಂತೆ ೧೯೭೬ ರಿಂದ (೩೬ ವರ್ಷ) ಅಲ್ಲಿಯೇ ಕುಳಿತು ಅತ್ಯಂತ ತೃಪ್ತಿ, ಆನಂದದಿಂದ ಭಿಕ್ಷೆ ಬೇಡುತ್ತಿರುವುದನ್ನು ನೋಡಿ ನಾವು ಕಲಿಯುವುದು ಬಹಳಷ್ಟು ಇದೆ. ಭಿಕ್ಷೆ ಬೇಡುವುದು ಅಂದರೆ, ಅದೂ ಒಂದು ಕಾಯಕ; 'ಕರ್ಮ'ಮಾಡುವುದು ಎಂದರ್ಥ. ಇದಕ್ಕೆ ಮೊದಲು ಅವನನ್ನು ನಾನು ಅಷ್ಟು ಗಮನಿಸಿರಲಿಲ್ಲ. ಮಳೆ, ಗಾಳಿ, ಬಿಸಿಲು ಏನನ್ನೂ ಲೆಕ್ಕಿಸದೆ ತನ್ನ ಕರ್ತವ್ಯದಲ್ಲಿ ತೊಡಗಿರುವ, ಭಿಕ್ಷೆ ಹಾಕಲಿ ಎಂದು ಜೋರಾಗಿ ಕೂಗುವುದಿಲ್ಲ. ಜನ ಬಂದರು ಸರಿಯೆ, ಇಲ್ಲದಿದ್ದರು ಸರಿಯೆ. ಇದನ್ನು 'ಸ್ಥಿತಪ್ರಜ್ಞತ್ವ' ಎಂದು ನಾನು ಕರೆಯಲು ಇಚ್ಛಿಸುತ್ತೇನೆ !

ಅವನನ್ನು ನೋಡಿದರೆ ಮುಖ- ಕ್ಷೌರ ಮಾಡಿಕೊಂಡಿರುವುದು ಕಾಣುತ್ತದೆ. ಸ್ನಾನ, ಯಾವಾಗ್ಮಾಡ್ತಾನೆ ? ಊಟ ಏನು, ಎಲ್ಲಿ, ಯಾವಾಗ ? ಇದುವರೆವಿಗೂ ಅವನಿಗೆ ಆರೋಗ್ಯ ಕೆಟ್ಟಿಲ್ಲವೆ ? ಇವು ನನ್ನನ್ನು ಕಾಡಿದ ಪ್ರಶ್ನೆಗಳು. ನನಗೆ ಯಾರೋ ತಿಳಿಸಿದ್ದರು. ಆಂಧ ಭಿಕ್ಷುಕರಿಂದಲೇ ವರಮಾನಗಳಿಸಿ ಜೀವನಮಾಡುತ್ತಿರುವ ಜನರೂ ಇದ್ದಾರೆ ಎಂದು. ಅವರು ಊಟ ಇತ್ಯಾದಿ ಒದಗಿಸುತ್ತಾರೆ. ರಾತ್ರಿ ಕ್ಷೌರ ಮುಖಕ್ಷೌರ ಮಾಡಿಸಬಹುದು. ಸ್ನಾನಮಾಡಿಸಬಹುದು. ತಿಂಗಳಲ್ಲಿ ಸುಮಾರು ೧,೦೦೦- ೨,೦೦೦ ರೂ ಭಿಕ್ಷದ ಹಣಸಿಕ್ಕುವುದು ಖಾತ್ರಿ. ಅದೆಲ್ಲಾ ಅವರಿಗೇ ದಕ್ಕುತ್ತದೆ.

ಎಲ್ಲಾ ಅನುಕೂಲಗಳಿದ್ದಾಗ್ಯೂ ಆತ್ಮಹತ್ಯೆ ಮಾಡಿಕೊಳ್ಳುವವರು ವಿದ್ಯಾವಂತರು ಮತ್ತು ಹಣವಂತರು. ಇವರು ಮನುಷ್ಯಜನ್ಮದ, ಜೀವನದ, ಮೌಲ್ಯಗಳನ್ನು ಓದಿ ಅರಿತವರು.ಗುರುಹಿರಿಯರು ತಂದೆತಾಯಿಗಳು ವರ್ಷಗಟ್ಟಲೆ ಇದರ ಪಾಠ ಮಾಡುತ್ತಲೇ ಇರುತ್ತಾರೆ ! ಆದರೆ ಅಸೂಯೆ, ಹಣದ ಮದ, ಸ್ವಾರ್ಥ, ಸ್ಪರ್ಧೆ ಇವುಗಳನ್ನು ಮೆಟ್ಟಿ ನಿಲ್ಲಲು ಆಗದ ಅಸಮರ್ಥರು, ಅವರೆಲ್ಲ !

"ಮನುಷ್ಯ ಜನ್ಮ ಶ್ರೇಷ್ಟ, ಅದನ್ನು ಹಾಳುಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರ," ಎಂಬ ದಾಸರ ಮಾತು, ನಮ್ಮ ದೃಷ್ಟಿ- ಹೀನ ಬಂದುವಿಗೆ ಹೇಗೋ ತಿಳಿದಿರಬೇಕು ! ಕೇಳೋಣವೆಂದರೆ, ಆತನನ್ನು ಮಾತಾಡಿಸುವ ತಾಳ್ಮೆ, ಸಮಯ ಯಾರಿಗಿದೆ !

ಮೊದಲಿನಿಂದಲೂ, ಭಿಕ್ಷೆಯನ್ನು ವೃತ್ತಿಯಾಗಿಟ್ಟು ಕೊಂಡವರಿಗೇನು ಕಮ್ಮಿಯಿಲ್ಲ. ಸಹಸ್ರಾರು ಜನ ತಿರುಪತಿ, ಕಾಶಿ, ಮಂತ್ರಾಲಯ, ಗೋಕರ್ಣ, ಧರ್ಮಸ್ಥಳ, ಮತ್ತು ಇತರ ಕ್ಷೇತ್ರಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಮಾಟುಂಗಾ ನಲ್ಲಿನ 'ಆಸ್ತಿಕ ಸಮಾಜ'ದ ಹೊರಗಡೆ ಫುಟ್ಪಾತ್ ಮೇಲೆ ಒಬ್ಬ 'ಮೌಶಿ' ಕುಳಿತಿದ್ದಾರೆ. ಈಕೆ ನನ್ನನ್ನು ನೋಡುತ್ತಲೆ "ಸಾಹೆಬ್ ಯಾ ಯಾ" ಎಂದು ಸ್ವಾಗತಿಸುತ್ತಾರೆ. ಈಕೆಯ ಬಳಿ ನಾನು 'ಶು' ಬಿಟ್ಟು ದೇವಸ್ಥಾನದ ಒಳಗೆ ದರ್ಶನಮಾಡಲು ಹೋಗುತ್ತೇನೆ. ಅಲ್ಲಿ ದೇವಸ್ಥಾನದ ಪಾದರಕ್ಷೆ ನೋಡಿಕೊಳ್ಳುವ ಜಾಗ ಇದ್ದರೂ ಅದರಲ್ಲಿ ಯಾರೂ ಇಡುವುದಿಲ್ಲ. ಮೌಶಿಯ 'ಚತುರತೆ'ಯೇ ಅದಕ್ಕೆ ಕಾರಣ ಎನ್ನುವುದನ್ನು ಹೇಳಬೇಕಾಗಿಲ್ಲ. ಅದರಿಂದ ಅವಳಿಗು ೪ ಕಾಸು ಬೇರೆಯವರಿಗೂ. ನಾನು ಯಾವಾಗಲೋ ನೋಡಿದಾಗ ಅವಳ ಮಗಳು ಜೊತೆಗೆ ಇದ್ದಳು. ನನ್ನ ನಿವೃತ್ತಿಯ ನಂತರ ೪ ವರ್ಷಗಳ ನಂತರ ಈ ಬಾರಿ ನೋಡಿದಾಗ ಪಕ್ಕದಲ್ಲೇ ಇನ್ನೊಬ್ಬ ವ್ಯಕ್ತಿ ಇದ್ದರು. ಮೌಶಿ ನನಗೆ ಅವರ ಪರಿಚಯ ಮಾಡಿಕೊಟ್ಟರು. ಆತ ಅಳಿಯನಂತೆ ! ಆತನ ಬಳಿಯೂ ಪಾದರಕ್ಷೆಗಳ, ಚಪ್ಪಲಿಗಳ ಕಂತೆ ಇತ್ತು ! ಅತ್ತೆ ಮಗಳು ಅಳಿಯ ಒಟ್ಟಿಗೆ Contract ಹಿಡಿದಂತಿತ್ತು ! ಅಬ್ಬ ಅಷ್ಟು ಸುಲಭವಾಗಿ ಮಗಳ ಮದುವೆ ಆಗಿದೆ. ಈಗ ಮೌಶಿಯನ್ನು ಭಿಕ್ಷುಕಳೆಂದು ಹೇಳಲು ಸಾಧ್ಯವೇ ? ಈಗ ಮಗಳು ಅಳಿಯ ತನಗೆ ಸಹಾಯ ಮಾಡುತ್ತಾರೆ ಎಂಬ ಹೆಮ್ಮೆ ಅವಳಿಗಾದರೆ, ಮುಂದೆ ತನಗೆ ಮೊಮ್ಮಕ್ಕಳಾದರೆ ಅವರು ದೇವಸ್ಥಾನದ ಬಳಿಯ 'ಧಂಧೆ' ಸಂಭಾಳಿಸುವರಾರು ? ಒಟ್ಟಿಗೆ ಇಬ್ಬರ ಜಾಗ ಕಾಯುವುದು ಹೇಗೆ ? ಆ ಸಮಯದಲ್ಲಿ ಅಳಿಯನನ್ನು ಬುಟ್ಟಿಗೆ ಯಾರಾದರೂ ಹಾಕಿಕೊಂಡರೆ ? ಇದನ್ನು ಹೇಳುವಾಗ ಮೌಶಿಯ ಹಣೆಯಮೇಲೆ ಗೆರೆಗಳು ಮೂಡಿದವು. ಅದೂ ಸರಿ ತಾನೆ; ಮುಂದೆ ಅಜ್ಜಿ ಆಗುವ ಅವಳ ಆತುರ, ಸಂತಸ ತವಕದ ಸವಿ ಭಾವನೆಗಳನ್ನು ನಾವು ಅರಿಯಬಹುದಲ್ಲವೆ ?

ಆದರೆ ನಮ್ಮ 'ರಘುಪತಿ'ಯ ಬಳಿ ಇದ್ಯಾವುದರ ಸ್ವಾರ್ಥ, ಮುಂದಿನ ಜೀವನದ ಯೊಚನೆಗಳು/ಯೋಜನೆಗಳು, ಇರುವಂತೆ ತೋರುವುದಿಲ್ಲ. ವಯಸ್ಸೂ ಆಗುತ್ತಿದೆ. ಸದಾ ಬಿಸಿಲು -ಗಾಳಿ ಗಳ ಮಧ್ಯೆ ಅಲ್ಲಿ ಕುಳಿತು ಹಾಡುವ ಸಾಮರ್ಥ್ಯ ಕಡಿಮೆಯಾದಂತೆ ತೋರುತ್ತಿದೆ. ಮೊದಲಿನಂತೆ ಈಗ ಇಲ್ಲ.

ಮಾಟುಂಗ ಕಡೆಯಿಂದ ನೀವು 'ಮಂಕಿ, ಕಾಲು ಸೇತುವೆ'ಯನ್ನು ಏರಿ ನಿಧಾನವಾಗಿ ನಡೆದರೆ, ಹಾಲಿವುಡ್ ಮೂವಿಯಲ್ಲಿ ಒಂದು ಮಾರ್ಕೆಟ್, ಅಥವ ಯಾವುದಾದರೂ ದೃಷ್ಯದ ಸನ್ನಿವೇಶ ವನ್ನು ಸಂಯೋಜಿಸಿ ತೊರಿಸುವಾಗ ನಿಧಾನವಾಗಿ ಎಲ್ಲಾ ವಿವರಗಳನ್ನೂ ಮತ್ತು ಅದಕ್ಕೆ ತಕ್ಕಂತೆ ಅಲ್ಲಿನ ಕಥಾ ಸಂಭಾಷಣೆ, ಸಂಯೋಜನೆಗಳು ಕೇಳಿಸುತ್ತಾ ಬರುತ್ತವೆ. ಹಾಗೆಯೇ, ನಾವು ಬ್ರಿಡ್ಜ್ ನ ಮೆಟ್ಟಿಲು ಏರಿ ನಡೆದಾಗ ಜನರ ಶಬ್ದ, ರೈಲುಗಳ ಶಬ್ದ, ರೈಲ್ವೆ ವರ್ಕ್ ಶಾಪ್ ನ ಯಂತ್ರಗಳ ಶಬ್ದಗಳನ್ನು ಆಲಿಸಿ ಸ್ವಲ್ಪ ಮುಂದೆ ಬಂದು ತಿರುಗಿದರೆ, "ರಘುಪತಿರಾಘವ ಹಾಡಿನ ಲೈನ್ ಕೇಳಿಸುತ್ತದೆ. (ರಘುಪತಿರಾಘವ ರಾಜಾರಾಮ್, ಪತೀತಪಾವನ ಸೀತಾರಾಮ್) ಸಂಗೀತ -ರಸಗ್ರಾಹಿಗಳಿಗೆ ಮಾತ್ರ ಇದರ ನಿಜವಾದ ಆನಂದ ದೊರೆಯುವುದು ! ನಾನು ಇದುವರೆಗೂ ಕೊಟ್ಟ, ಅಲ್ಪ -ಸ್ವಲ್ಪ ಹಿನ್ನೆಲೆಯೂ ಇದಕ್ಕೆ ಪೂರಕವಾದೀತು !

ಈಗಲೂ, ನೀವೇನಾದರೂ ಮುಂಬೈ ನ ಮಾಟುಂಗಾದ 'ಮಂಕಿ ಬ್ರಿಡ್ಜ್' ಮೇಲೆ ನಡೆದು ಹೋದರೆ 'ರಘುಪತಿ'ಯನ್ನು 'ನೋಡಲು''ಕೇಳಲು' ಮರೆಯದಿರಿ !