ಬೇಕಿರದ ವಸ್ತುಗಳು

ಬೇಕಿರದ ವಸ್ತುಗಳು

ಮನ್ನಿಸುವ ಗುಣವಿರಲು ಕವಚವೇಕೆ?
ಮುಂಗೋಪಕಿಂತಲು ಹಿರಿಯ ಹಗೆಯುಂಟೆ?
ಸುಡುಬೆಂಕಿಯೇಕೆ ಪುಂಡುದಾಯಾದಿಗಳಿರಲು?
ಮನವನವರಿವ ಗೆಳೆಯಗೆ ಮಿಗಿಲು ಮದ್ದಿರುವುದೇ?
ಕೇಡಿಗರು ಬಳಿಯಲಿರೆ ಹಾವಿಗೆ ಅಂಜುವರೆ?
ನೆಮ್ಮದಿಯ ತಿಳಿವಿರಲು ಹಣದ ಹಂಗೇಕೆ?
ನಾಚುವ ಮೊಗಕೆ ಬೇರೆ ಸಿಂಗರ ಬೇಕೆ?
ನಲ್ಗಬ್ಬಗಳನೋದಿ ನಲಿಯುವನು ಆಳಬಯಸುವನೆ?

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ):

ಕ್ಷಾಂತಿಶ್ಚೇದ್ಕವಚೇನ ಕಿಂ ಕಿಮರಿಭಿಃ ಕ್ರೋಧೋಸ್ತಿ ಚೇದ್ದೇಹಿನಾಂ
ಜ್ಞಾತಿಶ್ಚೇದನಲೇನ ಕಿಂ ಯದಿ ಸುಹೃದ್ದಿವ್ಯೌಷಧೈಃ ಕಿಂ ಫಲಂ |
ಕಿಂ ಸರ್ಪೈರ್ಯದಿ ದುರ್ಜನಾಃ ಕಿಮು ಧನೈರ್ವಿದ್ಯಾSನವದ್ಯಾ ಯದಿ
ವ್ರೀಡಾ ಚೇತ್ಕಿಮು ಭೂಷಣೈಃ ಸುಕವಿತಾ ಯದ್ಯಸ್ತಿ ರಾಜ್ಯೇನ ಕಿಂ ||

क्षान्तिश्चेद्कवचेन किं किमरिभि: क्रोधोऽस्ति चेद्देहिनां
ज्ञातिश्चेदनलेन किं यदि सुहृद्दिव्यौषधै: किं फलम्।
किं सर्पैर्यदि दुर्जना: किमु धनैर्विद्याऽनवद्या यदि
व्रीडा चेत्किमु भूषणै: सुकविता यद्यस्ति राज्येन किम्।।

-ಹಂಸಾನಂದಿ

ಕೊಸರು: ಪದಶಃ ಕನ್ನಡಿಸುವುದರ ಬದಲು, ಭಾವವನ್ನಷ್ಟೇ ತೋರಿಸಲು ಪ್ರಯತ್ನಿಸಿರುವೆ.

Rating
No votes yet