ದೇವರು ಇದ್ದರೂ ಇಲ್ಲದಿದ್ದರೂ...

ದೇವರು ಇದ್ದರೂ ಇಲ್ಲದಿದ್ದರೂ...

ಬರಹ

  ದೇವರು ಇದ್ದಾನೆ, ಅಥವಾ, ಇಲ್ಲ. ಎರಡರಲ್ಲೊಂದಂತೂ ಸತ್ಯವಾಗಿರಲೇಬೇಕಷ್ಟೆ. ದೇವರು ಇದ್ದಾನೆಂದಾದರೆ, ಸೃಷ್ಟಿಕರ್ತನೂ ಸರ್ವಶಕ್ತನೂ ಆದ ಅವನು ತನ್ನ ಸೃಷ್ಟಿಯೇ ಆದ ಈ ಜಗದ ಜೀವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಾನೆ. ’ನಮಗೆ ಅನ್ಯಾಯವಾಯಿತು’ ಎಂದು ಮಾನವರಾದ ನಾವು ದುಃಖಿಸಬೇಕಾಗಿಲ್ಲ. ಸ್ವಬುದ್ಧಿಯಿರುವ ನಾವು ಅಪರಾಧವೆಸಗದಿದ್ದರಾಯಿತು, ನಮಗಾವ ಅನ್ಯಾಯವೂ ಆಗದು.
  ದೇವರು ಇಲ್ಲವೆಂದಾದರೆ? ಅರ್ಥಾತ್ ಸೃಷ್ಟಿ-ಸ್ಥಿತಿ-ಲಯ ಇವುಗಳನ್ನು ನಿಯಂತ್ರಿಸುವ ಶಕ್ತಿಯೆಂಬುದು ಅಸ್ತಿತ್ವದಲ್ಲಿಲ್ಲವೆಂದಾದರೆ?
  ಆಗ, ’ನ್ಯಾಯ, ಅನ್ಯಾಯ’ ಎಂಬ ಪದಗಳಿಗೆ ಅರ್ಥವೇ ಇರುವುದಿಲ್ಲ. ಮನುಷ್ಯನೂ ಸೇರಿದಂತೆ ಜಗದ ಜೀವಿಗಳ ಜೀವನಕ್ಕೇ ಅರ್ಥವಿರುವುದಿಲ್ಲ. ಸುಮ್ಮನೆ ನಾವಿಲ್ಲಿಗೆ ಬಂದೆವು, ಹೋಗುತ್ತೇವೆ, ಅಷ್ಟೆ. ಅಂದಮೇಲೆ, ’ನಮಗೆ ಅನ್ಯಾಯವಾಯಿತು’ ಎಂದು ನಾವು ದುಃಖಿಸುವುದರಲ್ಲೂ ಅರ್ಥವಿಲ್ಲ. ಅರ್ಥವಿಲ್ಲದ ಜೀವನಕ್ಕಾಗಿ ಅನ್ಯಾಯವೆಸಗುವುದರಲ್ಲೂ ಅರ್ಥವಿಲ್ಲ. ಏಕೆಂದರೆ, ಸುಖ-ಭೋಗಗಳೂ ಇಲ್ಲಿ ಅರ್ಥಶೂನ್ಯ.
  ದೇವರು ಎಂಬ ನಿಯಂತ್ರಕ ಶಕ್ತಿಯ ಇರುವಿಕೆ ಅಥವಾ ಇಲ್ಲದಿರುವಿಕೆಯನುಸಾರ ಈ ವಿಶ್ವವು ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶರಹಿತವಾಗಿ ಸೃಷ್ಟಿಗೊಂಡಿದೆ. ಉದ್ದೇಶಪೂರ್ವಕವಾಗಿ ಸೃಷ್ಟಿಗೊಂಡಿದ್ದಲ್ಲಿ, ದೇವರಮೇಲೆ ಭರವಸೆ ಹೊಂದಿ, ದುಃಖರಹಿತವೂ ನ್ಯಾಯಯುತವೂ ಆದ ಬಾಳ್ವೆ ನಡೆಸುವುದು ಜಾಣತನ. ಈ ವಿಶ್ವವು ಉದ್ದೇಶರಹಿತವಾಗಿ ಸೃಷ್ಟಿಗೊಂಡಿದ್ದಲ್ಲಿ, ಅದರ ಭಾಗವಾದ ನಾವು ವೃಥಾ ಸುಖ-ಭೋಗಗಳ ಉದ್ದೇಶಗಳಿಗೆ ಬಲಿಯಾಗದೆ, ತತ್ಫಲವಾದ ನ್ಯಾಯಯುತ ಬಾಳ್ವೆ ನಡೆಸುವುದು ಜಾಣತನ.
  ಹೀಗಿರುವಾಗ, ಈ ಬಾಳಿನಲ್ಲಿ ನಾವು ದುಃಖಿಸುವುದಾಗಲೀ ಅನ್ಯಾಯಕಾರ್ಯಗಳಲ್ಲಿ ತೊಡಗುವುದಾಗಲೀ ಏತಕ್ಕೆ?