ನಿರೀಕ್ಷಿಸಿ,ಸ್ವಾಮಿ ನಿತ್ಯಕಾಮಾನಂದ ವಿಶೇಷ ಸಂದರ್ಶನ!
ಮುಖ್ಯವಾಹಿನಿಗಳು ಅಲಕ್ಷಿಸುವ, ಮುಖ್ಯವಾಹಿನಿಗಳನ್ನು ಅಲಕ್ಷಿಸುವ ವ್ಯಕ್ತಿಗಳ ಅಭಿವ್ಯಕ್ತಿಯ ಮಾಧ್ಯಮವಾಗಿ ಅಂತರ್ಜಾಲವು ಬೆಳೆಯುತ್ತಿದೆ. ಈ ಬೆಳವಣಿಗೆಗೆ ನಗೆ ನಗಾರಿ ಡಾಟ್ ಕಾಮ್ ತನ್ನ ಅಳಿಲು ಸೇವೆಯನ್ನು ಸಲ್ಲಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಮುಖ್ಯವಾಹಿನಿಯ ಪತ್ರಕರ್ತರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಂಡ ಸುದ್ದಿಗಳನ್ನೂ, ಸುದ್ದಿ ಮಾಡುವವರನ್ನೂ ಹೆಕ್ಕಿ ತಂದು ವರದಿ ಮಾಡುವುದು ನಮ್ಮ ಹೆಚ್ಚುಗಾರಿಕೆ. ಇಪ್ಪತ್ನಾಲ್ಕೂ ಗಂಟೆ ಬ್ರೇಕಿಂಗ್ ನ್ಯೂಸ್ ತಂದುಕೊಡುವ ಧಾವಂತದಲ್ಲಿ ನಮ್ಮ ಟಿವಿ ಚಾನಲುಗಳ ಸುದ್ದಿಗಾರರು ಮುರಿದ ಸುದ್ದಿಗಳ ಚೂರುಗಳನ್ನು ಆರಿಸಿಕೊಂಡು ಬಂದು ವರದಿ ಮಾಡಲಿಕ್ಕೆ ನಗಾರಿ ಸುದ್ದಿಚೋರರು ಸದಾ ಸಿದ್ಧರು.
ಈ ಸಂಚಿಕೆಯ ವಿಶೇಷ ಸಂದರ್ಶನಕ್ಕಾಗಿ ಸಾಮ್ರಾಟರು ತಮ್ಮ alter egoವನ್ನು ಅಲೆಸದ ಜಾಗವಿಲ್ಲ. ಮಾಡಿಸದ ಕೆಲಸವಿಲ್ಲ. ಹತ್ತಾರು ತಾಸುಗಳ ಉಪನ್ಯಾಸದ ವಿಡಿಯೋಗಳಿಂದ ಸಾಧಿಸಲಾಗದ ಜನಪ್ರಿಯತೆಯನ್ನು, ಮಾಧ್ಯಮಗಳ ಒಲುಮೆಯನ್ನು ಹತ್ತೇ ನಿಮಿಷದ ವಿಡಿಯೋ ಕ್ಲಿಪ್ಪಿಂಗಿನಿಂದ ಸಾಧಿಸಿದ ಸ್ವಾಮಿ ನಿತ್ಯಕಾಮಾನಂದರ ಸಂದರ್ಶನ ಪಡೆದೇ ಹಿಂದಿರುಗಬೇಕೆಂದು ಅಪ್ಪಣೆ ಮಾಡಿದ್ದರು. ಸ್ವಾಮಿಯವರು ಸರ್ವಶಕ್ತಿಶಾಲಿಗಳೂ, ಅನೇಕ ದೇಹಗಳನ್ನು ಧರಿಸಬಲ್ಲವರಾದ್ದರಿಂದ ಅವರನ್ನು ಬೆನ್ನಟ್ಟಿ ಹಿಡಿಸು ಸಂದರ್ಶನ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಬಿಡದಿಯಲ್ಲಿನ ದೊಡ್ಡ ದೊಡ್ದ ಪೋಸ್ಟರುಗಳ ಹಿಂದಿನ ಜಾಗದಿಂದ ಹಿಡಿದು ಹಿಮಾಲಯದ ಗುಹೆಗಳವರೆಗೆ ಎಲ್ಲಾ ಜಾಗಗಳನ್ನು ಜಾಲಾಡಿದ್ದಾಯಿತು. ಈ ಸಂದರ್ಭದಲ್ಲಿ ಕೈಯಲ್ಲೊಂದು ಹ್ಯಾಂಡಿಕ್ಯಾಮ್ ಇದ್ದಿದ್ದರೆ ‘ಎಲೆ ಮರೆಯ ಕಾಯಿಯಂತಿರುವ’ ದೇಶದ ಇನ್ನೆಷ್ಟೋ ದೇವಮಾನವರ ಚರಿತ್ರೆ ಬೆಳಕು ಕಾಣುತ್ತಿತ್ತು ಎಂದು ಹಲುಬುತ್ತ ಸಾಮ್ರಾಟರ alter ego ಕ್ಯಾಮರಾಗಾಗಿ ಅರ್ಜಿ ಹಾಕಿತು.
ಸುತ್ತಾಡಿ ಸುಸ್ತಾಗಿ ದಣಿವಾರಿಸಿಕೊಳ್ಳಲು ಸಾಮ್ರಾಟರ alter ego ಕುಂಭ ಮೇಳದ ಸ್ನಾನ ಮಾಡಿ ಹೊಟೇಲೊಂದರಲ್ಲಿ ಲಸ್ಸಿ ಹೀರುತ್ತಿರುವಾಗ ಅಯಾಚಿತವಾಗಿ ಸಿಕ್ಕವರು ಸ್ವಾಮಿ ನಿತ್ಯಕಾಮಾನಂದ. ಸುತ್ತ ಎಲ್ಲೂ ಕ್ಯಾಮರಾ ಇಲ್ಲದ್ದನ್ನು ಖಾತರಿ ಪಡಿಸಿಕೊಂಡು ಒಂದುವರೆ ತಾಸುಗಳ ‘ದೇಹವನ್ನು ಮೀರಿದ ಅನುಭವ’ ಕೊಡುವ ಧ್ಯಾನ ಮಾಡಿಸಿದ ನಂತರ ಸ್ವಾಮಿಗಳು ಸಂದರ್ಶನಕ್ಕೆ ಸಿದ್ಧರಾದರು.
ಸ್ವಾಮಿಗಳ (ಅಧ್ಯಾತ್ಮ) ರಸಭರಿತ ಸಂದರ್ಶನ ನಗೆ ನಗಾರಿಯಲ್ಲಿ ಶೀಘ್ರವೇ ಪ್ರಕಟವಾಗಲಿದೆ!