ಬ್ರಮ್ಹಗಿರಿಯ ಚಾರಣ - 4 (ಮುಕ್ತಾಯ)
ಇಲ್ಲಿಂದ......
http://sampada.net/blog/chikku123/05/03/2010/24292
http://sampada.net/blog/chikku123/25/02/2010/24170
http://sampada.net/blog/chikku123/23/02/2010/24142
ರಾತ್ರಿ ೭ ಗಂಟೆ ಆಗಿತ್ತು ಗೆಸ್ಟ್ ಹೌಸ್ ತಲುಪುವ ಹೊತ್ತಿಗೆ. ಸೌದೆ ಎಸೆದು ಕ್ಯಾಮೆರಾ ಇಟ್ಟು ೧೦ ನಿಮಿಷ ರೆಸ್ಟ್ ತಗೊಂಡಾದ್ಮೇಲೆ ಗೆಸ್ಟ್ ಹೌಸ್ನಲ್ಲಿದ್ದ ಕೊಡ ತಗೊಂಡು ನೀರು ತರೋದಕ್ಕೆ ಪಕ್ಯ ನಾನು ಹೊರಟ್ವಿ.
ನನ್ನ ಮೊಬೈಲ್ ಲೈಟಲ್ಲೇ ಹೊಳೆ ಹುಡುಕ್ತಾ ನಾನು ಪಕ್ಯ ಹೆಜ್ಜೆ ಹಾಕಿದ್ವಿ. ಅಷ್ಟೊತ್ತಿಗಾಗ್ಲೆ ಉಳಿದ ಟೀಮಿನವರು ನೀರು ತರ್ತಿದ್ರು. ಅಂತೂ ಒಂದು ಕೊಡ ನೀರನ್ನ ಕಷ್ಟಪಟ್ಟು ತುಂಬಿಸಿ ಪಕ್ಯ ಹೊತ್ಕೊಂಡು ಬಂದ ನಾನು ಬೆಳಕಾಗಿದ್ದೆ ಅವನಿಗೆ.
ಡುಮ್ಮ,,ಕುಳ್ಡ ತರಕಾರಿ ಹೆಚ್ತಿದ್ರು. ಪಕ್ಯನ್ನ ನೋಡಿದ್ದೇ ತಡ ಕುಳ್ಡ ಇದ್ದವನು 'ಲೇ, ಪಲಾವ್ ಮಾಡ್ತೀನಿ ಅಂತ ಹೀರೆಕಾಯಿ ತಂದಿದೀಯಲ್ಲೋ ಮಂಗ ನನ್ಮಗನೇ, ಅದ್ರ ಜೊತೆಗೆ ಬೀನ್ಸ್ ಬಲಿತು ಹೋಗಿದೆ, ಕ್ಯಾರೆಟ್ ಬೇರೆ ಇಲ್ಲ. ಅದೇನೋ ಪಲಾವ್ ಮಾಡಿ ಕಿಸಿದು ದಬಹಾಕ್ತೀನಿ ಅಂದ್ಯಲ್ಲ...ಇದೇನಾ. ಸರಿ ಮಾಡು ಅದ್ಹೇನು ಮಾಡ್ತೀಯಾ ನೋಡೋಣ'.
ನಾನು ಆಗಿದ್ರೆ ಕುಳ್ಡನ ತಲೆ ಮೇಲೆ ಕೊಡದಲ್ಲಿದ್ದ ಎಲ್ಲ ನೀರು ಸುರೀತಿದ್ನೇನೋ ಆದ್ರೆ ಪಕ್ಯ ಸುಮ್ನೆ ಕೇಳ್ತಿದ್ದ.
'ನಾನು ನನ್ನ ಫ್ರೆಂಡ್ಗೆ ಹೇಳ್ದೆ ಅವ್ನು ಇಷ್ಟನ್ನ ತಂದ' ಪಕ್ಯ ಅಂದ.
ಬೈತಾನೆ ವೆಂಕ ನಾನೇ ಮಾಡ್ತೀನಿ ಅಂತ ಪಲಾವ್ ಮಾಡಿದ. ಆದ್ರೆ ರುಚಿನೇ ಇರ್ಲಿಲ್ಲ, ಇನ್ನೇನು ಮಾಡೋದು ಅಂತ ಅದನ್ನೇ ನಾನು ವೆಂಕ ತಿಂದ್ವಿ. ಪಕ್ಯ ಡುಮ್ಮ ಕುಡಿದಾದ್ಮೇಲೆ ಊಟ ಮಾಡ್ತೀವಿ ಅಂದ್ರು. ಇನ್ನೊಂದು ಟೀಮಿನವರು ಅಂತ್ಯಾಕ್ಷರಿ ಹಾಡ್ತಿದ್ರು ನಾವೂ ಆಗಾಗ ಒಂದೊಂದು ಫಿಲಂ ಹೆಸರು ಹೇಳ್ತಿದ್ವಿ.
ಪಕ್ಯ ಡುಮ್ಮ ಕುಡಿದಾದ್ಮೇಲೆ ಊಟ ಮಾಡೋದಕ್ಕೆ ಕೂತ್ರು, ಯಾಕೋ ರುಚಿ ಹತ್ಲಿಲ್ಲ ಅನ್ಸತ್ತೆ, ಗೈಡ್ಗಳು ಸಾರು ಮಾಡಿದ್ರು ಅದನ್ನೇ ಪಲಾವ್ ಮೇಲೆ ಸುರ್ಕೊಂಡು ತಿಂದ್ರು.
ಪಲಾವ್ ಮೇಲೆ ಸಾಂಬಾರ್!!!!
ಊಟ ಆದ್ಮೇಲೆ ಮಲಗೋಕೆ ರೆಡಿಯಾದ್ವಿ. ಪಕ್ಕದ ರೂಮಲ್ಲಿದ್ದ ಒಂದು ಬೆಡ್ ತಂದು ನಮ್ಮ ರೂಮಿಗೆ ಹಾಕೊಂಡು ಎಲ್ರೂ ಮಲಗಿದೆವು. ಕುಳ್ಡ, ಡುಮ್ಮ ಕಿತ್ಕೊಂಡು ಗೊರಕೆ ಹೊಡೆಯೋದಕ್ಕೆ ಶುರು ಮಾಡಿದ್ರು. ಒಂದು ಗಂಟೆ ನಿದ್ರೆ ಬರ್ಲಿಲ್ಲ ಆಮೇಲೆ ಆಯಾಸ ಆಗಿದ್ದ ಪರಿಣಾಮ ನಿದ್ರೆ ಹತ್ತಿತು.
ಬೆಳಗ್ಗೆ ೭ ಗಂಟೆಗೆ ಎದ್ದು ಎಲ್ಲ ಕೆಲಸ ಮುಗಿಸಿ ಮ್ಯಾಗಿ ತಿಂದ್ಕೊಂಡು ನರಿಮಲೆ ಬೆಟ್ಟಕ್ಕೆ ಹೊರಟ್ವಿ.
೧೦ ಗಂಟೆಗೆ ಬೆಟ್ಟ ತಲುಪಿದ್ವಿ. ನಾವು ನರಿಮಲೆ ಅಂದ್ರೆ ತುಂಬಾ ನರಿ ಇರ್ತವೇನೋ ಅಂದ್ಕೊಂಡು ಗೈಡ್ ಕೇಳಿದ್ವಿ ಯಾಕೆ ನರಿಮಲೆ ಅಂತಾರೆ ಅಂತ.
'ಕೊಡಗು ಭಾಷೇಲಿ ನರಿ ಅಂದ್ರೆ ಹುಲಿ ಅಂತ ಆಗೆಲ್ಲ ಇಲ್ಲಿ ಹುಲಿ ತುಂಬಾ ಇದ್ವು ಅದ್ಕೆ ಹಾಗಂತಿದ್ರು'.
೩೦ ನಿಮಿಷ ಕೂತು ಮತ್ತೆ ಕೆಳಗಿಳಿಯೋದಕ್ಕೆ ಶುರು ಮಾಡಿದ್ವಿ. ೧೨.೩೦ ರ ಹೊತ್ತಿಗೆ ಇರ್ಪು ಫಾಲ್ಸ್ ಹತ್ರ ಬಂದ್ವಿ.
ಭಾನುವಾರ ಆದ್ದರಿಂದ ಸ್ವಲ್ಪ ಜಾಸ್ತಿ ಜನಾನೇ ಇದ್ರು. ಅಲ್ಲೇ ಬಂದೆ ಮೇಲೆ ಚಿಟ್ಟೆಗಳು ಇದ್ವು. ಕ್ಯಾಮೆರಾ ತೆಗೆದು ೩-೪ ಫೋಟೋ ತೆಗೆದೆ(ಪಿಕಾಸ ಲಿಂಕ್ ನೋಡಿ)
ನಾನು ಕುಳ್ಡ ನೀರಿಗೆ ಇಳಿಯೋದಕ್ಕೆ ರೆಡಿ ಆದ್ವಿ, ಪಕ್ಯನ್ನ ಕರೆದ್ವಿ ಬರಲ್ಲ ಅಂದ. ನೀರು ಬೀಳೋತನಕ ಕಬ್ಬಿಣದ ಜಾಲರಿ ಹಾಕಿದ್ರು. ಸೆಕೆಯಲ್ಲಿ ಬೆವೆತಿದ್ದ ದೇಹಕ್ಕೆ ತಣ್ಣೀರು ಸಿಕ್ಕ ಪರಿಗೆ ದೇಹ ಗಡಗಡ ನಡುಗ್ಲಿಕ್ಕೆ ಶುರುವಾಯ್ತು. ಕುಲ್ಡನಿಗೆ ಕಬ್ಬಿಣ ಎಲ್ಲಿ ತನಕ ಇತ್ತು ಅನ್ನೋದು ಕಾಣಿಸಲಿಲ್ಲ ಅನ್ಸತ್ತೆ. ಜಾರಿ ಕಾಲು ತರಚಿಕೊಂಡು ಇಂಗು ತಿಂದ ಮಂಗನ ಹಾಗೆ ಬಂಡೆ ಮೇಲೆ ಹೋಗಿ ಕುಳಿತಿದ್ದ. ನಾನು ಹೋಗಿ ಯಾಕೋ ಏನಾಯ್ತೋ ಅಂತ ಕೇಳಿದ್ರೆ ಕಾಲು ತೋರ್ಸಿದ.
೨ ಗಂಟೆಯ ತನಕ ನೀರಲ್ಲಿ ಆಟ ಆಡಿ ನಾನು ವೆಂಕ ಇರ್ಪು ಕಡೆ ಹೊರಟ್ವಿ. ಪಕ್ಯ ಡುಮ್ಮ ಅಲ್ಲೇ ಇದ್ದ ಹೋಟೆಲ್ ಹತ್ರ ರೆಸ್ಟ್ ತಗೋತಿದ್ರು.
ಹೊಟ್ಟೆ ಬೇರೆ ಚುರುಗುಡ್ತಿತ್ತು, ೨ ದಿನದಿಂದ ಬ್ರೆಡ್ ಬನ್ ತಿಂದಿದ್ದ ನಮಗೆ ಮತ್ತೆ ಅದೇ ತಿನ್ನಬೇಕಲ್ಲ ಅನ್ನನಾದ್ರು (ಪಲಾವ್ ಪಲಾವ್ ಆಗಿರ್ಲಿಲ್ವಲ್ಲ) ಸಿಕ್ಕಿದ್ರೆ ಅಂತ ಯೋಚನೆ ಮಾಡ್ತಿದ್ವಿ, ಅಷ್ಟೊತ್ತಿಗೆ ಇನ್ನೊಂದು ಟೀಮಿನವರು ದೇವಸ್ಥಾನದಲ್ಲಿ ಊಟ ಕೊಡ್ತಿದ್ದಾರೆ ಹೋಗಿ ಅಂದ್ರು.
ಅಷ್ಟು ಹೇಳಿದ್ದೆ ತಡ ಎಲ್ರೂ ಶೂ ಬಿಚ್ಚಿ ದೇವಸ್ಥಾನದ ಕಡೆ ಓಡಿದ್ದೇ!!!
ಬಹುಷ ಅನ್ನ ನಮಗೇ ಕಾಯ್ತಿತ್ತೇನೋ. ೪ ಜನಕ್ಕೆ ಸರಿಯಾಗಿತ್ತು. ಆಮೇಲೆ ಬಂದೋರಿಗೆ ಖಾಲಿ ಖಾಲಿ.
ಊಟ ಮಾಡ್ಕೊಂಡು ಬಸ್ ಸ್ಟಾಪ್ ಹತ್ರ ಹೋಗಿ ಕೂತ್ಕೊಂಡು ಆ ಟೀಮಿನ ಜೊತೆ ಹರಟೆ ಹೊಡೀತಿದ್ವಿ ಅಷ್ಟೊತ್ತಿಗೆ ೩.೪೫ಕ್ಕೆ ಇರ್ಬೇಕು ಗೋಣಿಕೊಪ್ಪಲಿಗೆ ಹೋಗೋ ಬಸ್ ಬಂತು. ಹತ್ತಿ ಕುಳಿತು ಕೆಲವರು ಗಡದ್ದಾಗಿ ನಿದ್ದೆ ಮಾಡಿದ್ರು. ಬಸ್ ಗೋಣಿಕೊಪ್ಪಲು ತಲ್ಪೋ ಹೊತ್ತಿಗೆ ೫.೩೦ ಆಗಿತ್ತು. ಬಸ್ ಇದ್ದಿದ್ದು ೧೧.೪೫ಕ್ಕೆ. ಪೇಟೆ ಸ್ವಲ್ಪ ಸುತ್ತಾಡಿ, ಪಕ್ಯ ಡುಮ್ಮ ಕುಡೀಬೇಕು ಅಂದ್ಮೇಲೆ ೭ ಗಂಟೆಗೆ ಒಂದು ಬಾರಿಗೆ ಹೋಗಿ
ಕುಳಿತವರು ಅಲ್ಲೇ ಊಟ ಮಾಡಿ ಏಳೋವಾಗ ೧೧ ಗಂಟೆ.
ಅಲ್ಲಿಗೆ ಮೊದಲು ಹೋದವರು ನಾವೇ ಕೊನೆಗೆ ಬಂದವರು ನಾವೇ!!!!
ಗೋಣಿಕೊಪ್ಪಲಿಗೆ ಬಂದ ಮೊದಲ ದಿನ ಬೆಳಗ್ಗೆ ಕುಳಿತ ಜಾಗದಲ್ಲೇ ಹೋಗಿ ಮತ್ತೆ ಕುಳಿತೆವು.
೧೧.೪೫ಕ್ಕೆ ಬಂದ ವೋಲ್ವೋ ಬಸ್ ಹತ್ತಿ ಕುಳಿತ ನಾವು ಮೆಜೆಸ್ಟಿಕ್ ತಲುಪೋ ಹೊತ್ತಿಗೆ ಬೆಳಗ್ಗೆ ೫.೧೫. ಅಲ್ಲಿಂದ ಡುಮ್ಮ ಪಕ್ಯ ಅವ್ರ ರೂಮಿಗೆ ಹೊರಟರು ನಾನು ವೆಂಕ ನವರಂಗ್ ಬಸ್ ಹತ್ತಿದ್ವಿ. ಇಳಿದಾದ ಮೇಲೆ ವೆಂಕ ಅವ್ನ ಮನೆಗೆ ಹೋದ. ನಾನು ಮನೆ ತಲುಪಿ ಬ್ಯಾಗ್ ಎಸೆದು ಹಾಸಿಗೆ ಮೇಲೆಬಿದ್ದೆ.