ಅಮ್ಮ ಮತ್ತು ಮೀಸಲಾತಿ....

ಅಮ್ಮ ಮತ್ತು ಮೀಸಲಾತಿ....

ನಾವು ಚಿಕ್ಕವರಿದ್ದಾಗ, ಅಮ್ಮನ ಮೇಲೆ ಪ್ರೀತಿ ಹೆಚ್ಚಾದಾಗ, ಅಮ್ಮ ನೀನು ಚುನಾವಣೆಗೆ ನಿಂತ್ಕೋ, ನಿಂಗೆ ಓಟು ಹಾಕಿ ನಾವು ಗೆಲ್ಲಿಸ್ತೀವಿ ಅಂತ ನಾನು, ನನ್ನ ತಮ್ಮ ಹೇಳಿದ ಮಾತುಗಳು ಮೊನ್ನೆ ಇದ್ದಕ್ಕಿದ್ದಂತೆ ಹೊಳೆಯಿತು. ಅದಾದ ಎರಡೇ ದಿನಕ್ಕೆ ಮಹಿಳಾ ಮೀಸಲಾತಿ ವಿಧೇಯಕದ ಕುರಿತು, ದೇಶವ್ಯಾಪಿ ಚರ್ಚೆಗೆ ಮೊದಲಾಯಿತು.  ನಿಜ ಹೇಳ್ಬೇಕಂದ್ರೆ ಈ ವಿಷಯದಲ್ಲಿ ನನ್ನನ್ನ ಒಂದು ರೀತಿಯ ದ್ವಂದ್ವ ಕಾಡ್ತಾಯಿದೆ. ಮಹಿಳೆಯರು ಸಮಾನರು, ಸಮರ್ಥರು, ನಮಗಾಗಿ ಯಾವುದೇ ಮೀಸಲಾತಿ ಅನಗತ್ಯ ಎಂದು ಕೆಲವು ಮಹಿಳೆಯರು ಹೇಳಿದ್ದು ಇನ್ನೂ ಕಿವಿಯಲ್ಲಿ ರಿಂಗಣಿಸುತ್ತಿದೆ. ಆದರೆ ಇನ್ನೂ ಕೆಲವರು, ನಮಗಾಗಿ ಅಂತ ಮೀಸಲಾತಿನಾದ್ರೂ ಬೇಡ್ವೇ ಅಂತ ಕೇಳೋರು ಇದ್ದಾರೆ. 

 ಇಂದು ಪ್ರಪಂಚದಾದ್ಯಂತ ಮಹಿಳೆಯರು ಸಬಲರೆಂದು ಸಾಬೀತುಪಡಿಸಿದ್ದಾರೆ, ಹಳೆಯ ಅರ್ಥವಿಲ್ಲದ ಸಂಪ್ರದಾಯಗಳನ್ನೆಲ್ಲ ಒದ್ದು ಬಂದಿದ್ದಾರೆ, ತಾವುಗಳು ಯಾರಿಗೂ ಕಡಿಮೆ ಇಲ್ಲವೆನ್ನುವಂತೆ, ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿದ್ದಾರೆ. ಈ ದೃಷ್ಟಿಯಿಂದ ನೋಡಿದಾಗ, ಮಹಿಳೆಯರು ಸಮರ್ಥರಾಗಿದ್ದಾಗ, ತಾವೇ ತಮ್ಮ ಪಕ್ಷಗಳಲ್ಲಿ ಚುನಾವಣೆಗೆ ಮುಂಚೆ, ತಮ್ಮ ಪರವಾಗಿ ಪಕ್ಷದ ವರಿಷ್ಠರನ್ನು ಒಪ್ಪಿಸಿ ಮಹಿಳೆಯರು ಚುನಾವಣೆಗೆ ನಿಲ್ಲುವಂತೆ ಮಾಡಲು ಒಪ್ಪಿಸುವಲ್ಲೂ ಸಮರ್ಥರಿರುತ್ತಾರೆ. ಆದರೆ ಅದು ಆ ರಾಜಕೀಯ ಪಕ್ಷದ ಇಚ್ಚಾ ಶಕ್ತಿಗೆ ಮತ್ತು ಅದರ ನಿಲುವಿಗೆ ಬಿಟ್ಟ ವಿಷಯವಾಗುತ್ತದೆ. ಆದರೆ ಅಲ್ಲಿಯೇ ಇನ್ನೊಂದು ಪ್ರಶ್ನೆ ಎದುರಾಗುತ್ತದೆ. ಮಹಿಳೆಯರೂ ಕೂಡ ಪುರುಷ ರಾಜಕಾರಣಿಗಳಂತೆ, ಲಂಚಗುಳಿತನ, ಅನ್ಯಾಯ, ಅಕ್ರಮಗಳನ್ನು ಪೋಷಿಸಿದರೆ, ಒಂದು ಘೋರ ಇತಿಹಾಸ ಕೂಡ ನಮಗಾಗಿ ಕಾದಿದೆ.

 

ಈ ವಿಷಯವನ್ನೇ ಇನ್ನೊಂದು ರೀತಿಯಲ್ಲಿ ನೋಡಿದಾಗ, ತಾಯಿಯ ಮಮತೆಯನ್ನು ಇಡಿಯ ಭಾರತ ದೇಶದ ಮಕ್ಕಳಿಗೆ ಉಣಿಸುವ ಒಂದು ಸ್ತ್ರೀ ಶಕ್ತಿಯ ಅಗತ್ಯತೆ ಇದೆ ಎಂದು ತೋರುತ್ತದೆ. ಈ ನಿಟ್ಟಿನಲ್ಲಿ ಮೊನ್ನೆ ದಿನ ಪತ್ರಿಕೆ ಒಂದರಲ್ಲಿ ಓದಿದಂತೆ IIM - B ನಲ್ಲಿ ಓದಿದ ಹೆಣ್ಣು ಮಗಳೊಬ್ಬಳು, ತನ್ನ ಹಳ್ಳಿಯ ಪಂಚಾಯತಿಗೆ ಮುಖ್ಯಸ್ಥಳಾದ ವಿಷಯ ನಿಜಕ್ಕೂ ಒಂದು ಆದರ್ಶ ಮಗಳ ಜವಾಬ್ದಾರಿಯ ನಿರ್ವಹಣೆ ಎಂದು ಎನಿಸಿ ಹೆಮ್ಮೆಯಾಯಿತು.

ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಮಹಿಳೆಯರ ಮೀಸಲಾತಿ ಈ ಮುಂಚೆ, ಕೇವಲ ೧೧% ಇತ್ತು. ಅಲ್ಲದೆ ಈ ರೀತಿಯ ಕಲಿತ ಹೆಣ್ಣು ಮಗಳೊಬ್ಬಳು ಈ ದೇಶವನ್ನು, ಕಡೆಯ ಪಕ್ಷ ತಾನು ಹುಟ್ಟಿ ಬೆಳೆದ ಹಳ್ಳಿಯನ್ನು ಉದ್ಧರಿಸುವ ಈ ಕಾರ್ಯ ನಿಜಕ್ಕೂ ಇಂದು ಅತ್ಯವಶ್ಯ.

 

ಒಬ್ಬ ಅನಕ್ಷರಸ್ಥ ಹಳ್ಳಿಯ ಹೆಣ್ಣು ಮಗಳಿಗೆ, ಅಥವಾ ಮಗನಿಗೆ ಆ ಹಳ್ಳಿಯ ಉದ್ಧಾರದ ಜವಾಬ್ದಾರಿ ಎಷ್ಟರ ಮಟ್ಟಿಗೆ ಇರುತ್ತದೋ ನಂಗೆ ತಿಳಿಯದು. ಆದರೆ ಕಲಿತ ಹೆಣ್ಣು ಮಗಳೊಬ್ಬಳು ಖಂಡಿತವಾಗಿಯೂ ತನ್ನ ಹಳ್ಳಿಯನ್ನು ಸ್ವಲ್ಪ ಮಟ್ಟಿಗಾದರೂ ಸುಧಾರಿಸುವ ಪ್ರಯತ್ನ ಮಾಡಬಲ್ಲಳು ಎಂದು ಅನಿಸುತ್ತದೆ. ಪ್ರತಿ ವಿಷಯದಲ್ಲೂ ಯಾವುದಾದರೂ ಒಂದು exception ಇರುವಂತೆ, ರಾಜಸ್ಥಾನದ ಅನಕ್ಷರಸ್ಥ ಹೆಣ್ಣು ಮಕ್ಕಳೇ ನಡೆಸುತ್ತಿರುವ ಒಂದು ಸ್ವ- ಸಹಾಯ ಸಂಘದ ಬಗೆಗೆ ಅಂದಿನ ಅಮೆರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದುದನ್ನು ನೆನೆಯ ಬಯಸುತ್ತೇನೆ. ಇನ್ನು ಈ ಸಂಘಗಳಿಗೆ ಈ ಮೀಸಲಾತಿಯು ಒಂದು ಆಧಾರ ಸ್ಥಂಭವಾಗಿ ನಿಲ್ಲುತ್ತದೆ.

 

ಈ ಎಲ್ಲ ವಿಷಯಗಳು ನನ್ನ ದ್ವಂದ್ವವನ್ನು ಇಮ್ಮಡಿಯಾಗಿಸಿದೆ. ಆದರೆ, ಎಲ್ಲೋ ಒಂದು ಆಶಾಕಿರಣ ಕೂಡ ಕಾಣುತ್ತಿದೆ. ಈಗ ಮತ್ತೊಮ್ಮೆ ಅಮ್ಮನನ್ನು ಚುನಾವಣೆಗೆ ನಿಲ್ಲುವಂತೆ ಕೇಳುವ ಆಸೆಯಾಗಿದೆ........

 
Rating
No votes yet

Comments