ಸ್ನೇಹಕ್ಕೆ ಸಂಬಂಧಗಳ ಅಡ್ಡ ಹೆಸರುಗಳೇಕೆ ಬೇಕು?

ಸ್ನೇಹಕ್ಕೆ ಸಂಬಂಧಗಳ ಅಡ್ಡ ಹೆಸರುಗಳೇಕೆ ಬೇಕು?

"ಪ್ರಪಂಚದಲ್ಲಿ ಮಿಕ್ಕೆಲ್ಲಾ ಸಂಬಂಧಗಳಿಗಿಂತ

ಸ್ನೇಹ ಸಂಬಂಧಕ್ಕೇ ಸಿಗುವುದು ಗೆಲುವು

 

ಪ್ರೌಢರಾದ ಮೇಲೆ ಒಡಹುಟ್ಟಿದವರನ್ನೂ

ಸ್ನೇಹಿತರಂತೆ ನೋಡಿದರಷ್ಟೇ ಚೆಲುವು

 

ಸ್ನೇಹಿತರಂತೆಯೆ ಇರುವ ದಂಪತಿಗಳೂ

ಬೆಳೆಸಿಕೊಳ್ಳಬಲ್ಲರು ತಮ್ಮ ನಡುವೆ ಒಲವು

 

ಅಪ್ಪ ಮಕ್ಕಳೂ ಸ್ನೇಹಿತರಾಗಿ ಇರಬೇಕು

ಎನ್ನುವ ಮಾತಿಗೇ ಈಗ ಎಲ್ಲರ ಒಲವು"

 

ಇಂತಹ ಮಾತುಗಳು ನಮ್ಮ ಕಿವಿಗಳಿಗೆ

ಬೀಳುತ್ತಲೇ ಇರುತ್ತವೆ ದಿನ ಪ್ರತಿ ದಿನವೂ

 

ಸ್ನೇಹ ತಳವೂರಿದ ಮೇಲೆ ಸ್ನೇಹಿತರ ನಡುವೆ

 ಸಂಬಂಧಗಳ ಕಲ್ಪಿಸಿಕೊಳ್ಳುವುದೇಕೆ ನಾವು?

 

ನಮ್ಮ ಸ್ನೇಹಿತೆಯರನ್ನು ಬರಿಯ ಸ್ನೇಹಿತೆಯರಲ್ಲ

ಸಹೋದರಿಯರಂತೆ ಅಂತನ್ನುವುದೇಕೆ ನಾವು?

 

ಸ್ನೇಹಿತರನ್ನು ಸ್ನೇಹಿತರಿಗಿಂತಲೂ ಹೆಚ್ಚಾಗಿ

ಸಹೋದರರಂತೆ ಅಂತನ್ನುವುದೇಕೆ ನಾವು?

 

ಸ್ನೇಹಕ್ಕೆ ಸಂಬಂಧಗಳ ಅಡ್ಡ ಹೆಸರನ್ನು ನೀಡಿ

ವೈರುಧ್ಯದ ಪ್ರದರ್ಶನ ಮಾಡುವುದೇಕೆ ನಾವು?

 

ಸ್ನೇಹವನು ಬರಿಯ ಸ್ನೇಹವಾಗಿಯೇ ಉಳಿಸಿ

ಬೆಳೆಸಿಕೊಂಡು ಹೋಗಲಾರೆವೇನು ನಾವು?


**************************

 

- ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments