ದೀಪದಡಿಯ ಕತ್ತಲಿನಲ್ಲಿ...
ಬರಹ
2004ರಲ್ಲಿ ಮೊದಲ ಸಲ ’ನಾಗರಹೊಳೆ’ಗೆ ಹೋಗಿಬಂದ ನಂತರ ಎಲ್ಲರೂ ಕೇಳುತ್ತಿದ್ದದ್ದು ಯಾವ ಪ್ರಾಣಿ, ಪಕ್ಷಿ, ಮರ, ಕೀಟ ನೋಡಿ ಗುರುತಿಸಿದಿರಿ ಎಂದು. ನಾನು ಒಂದೊಂದಾಗಿ ಪಟ್ಟಿಮಾಡತೊಡಗಿದೆ. ಆನೆ, ಸೀಳುನಾಯಿ, ಕಾಮಳ್ಳಿ.........ಮತ್ತು ಲೆಕ್ಕವಿಲ್ಲದಷ್ಟು ನಕ್ಷತ್ರಗಳು. ಅರೆ! ಅದರಲ್ಲೇನಿದೆ? ನಕ್ಷತ್ರಗಳನ್ನು ಇಲ್ಲಿಯೂ ನೋಡಬಹುದು ಎಂದು ಕೇಳಿದವರು ನಗುತ್ತಿದ್ದರು. ನಾಗರಹೊಳೆಯ ದಟ್ಟಕಾಡಿನಲ್ಲಿ ಒಂದು ರಾತ್ರಿ ಅರಣ್ಯ ಇಲಾಖೆಯ ವಸತಿಗೃಹದಲ್ಲಿ ಉಳಿದುಕೊಂಡಿದ್ದಾಗ ಸಿಕ್ಕ ಒಂದು ಅಪೂರ್ವ ಅವಕಾಶ. ಆ ರಾತ್ರಿ ತಲೆ ಎತ್ತಿ ನೋಡಿದಾಗ ದಂಗಾಗಿ ಹೋದೆ. ಅಬ್ಬಾ ಅದೆಷ್ಟು ನಕ್ಷತ್ರಗಳು! ಆಕಾಶದ ಇಂಚಿಂಚಿ ಬಿಡದ ಹಾಗೆ ನಕ್ಷತ್ರಗಳೇ ನಕ್ಷತ್ರಗಳು. ನನ್ನ ಜೀವಮಾನದಲ್ಲೇ ಮೊದಲಸಲ ಅಷ್ಟು ನಕ್ಷತ್ರಗಳನ್ನು ನೋಡುತ್ತಿದ್ದೆ.
ನೀವೆಂದಾದರೂ ಅಷ್ಟು ನಕ್ಷತ್ರಗಳನ್ನು ನೋಡಿದ್ದೀರಾ?
ನೀವು ನಗರದಿಂದ ದೂರ ಇರುವ ಊರಿನಲ್ಲಿ ಇರುವಿರಾದರೆ ನಿಮಗೆ ಆಕಾಶದ ತುಂಬಾ ನಕ್ಷತ್ರಗಳನ್ನು ನೋಡುವುದು ಸಾಮಾನ್ಯವಾಗಿರಬಹುದು. ನಗರಗಳಲ್ಲಿ ಏನಾಗುತ್ತಿದೆ ನೋಡಿ. ಬೆಂಗಳೂರಿನಲ್ಲಿ ಅಮಾವಾಸ್ಯೆಯ ರಾತ್ರಿಯಲ್ಲಿ ವಿದ್ಯುತ್ ಇಲ್ಲದಾಗಲೂ ನಿಮ್ಮ ತಾರಸಿ ಮೇಲಿನಿಂದ ನೋಡುವ ಆಕಾಶ ಕಪ್ಪಾಗಿ ಕಾಣದೆ, ಮಬ್ಬು ಮಬ್ಬಾಗಿ ಬೆಳಕು ಕಾಣುತ್ತದೆ. ಕಷ್ಟಪಟ್ಟರೆ ಇಡೀ ಆಕಾಶದಲ್ಲಿನ ನಕ್ಷತ್ರಗಳನ್ನು ಎಣಿಸಿಬಿಡಬಹುದು. ನಾವಿರುವ ಗಲಾಕ್ಸಿ ’ಆಕಾಶ ಗಂಗೆ’ಯ ಸಮೀಪದ ಗೆಲಾಕ್ಸಿ ’ಆಂಡ್ರೋಮಿಡಾ’ ಬರಿಗಣ್ಣಿನಲ್ಲಿ ನೋಡಬಹುದು. ಅದು ಒಂದು ಚುಕ್ಕೆಯ ಹಾಗೆ ಕಾಣುತ್ತದೆ. ಆದರೆ ಬೆಂಗಳೂರಿನಲ್ಲಿ ’ಆಂಡ್ರೋಮಿಡಾ’ ಹಾಗಿರಲಿ, ’ಧ್ರುವ’ ನಕ್ಷತ್ರ ಕಾಣುವುದು ಕಷ್ಟವಾಗುತ್ತದೆ. ಇದಕ್ಕೆಲ್ಲಾ ಕಾರಣ ಅತಿಯಾದ ಬೆಳಕಿನ ಮಾಲಿನ್ಯ.
ರಸ್ತೆಯುದ್ದಕ್ಕೂ ಪ್ರಕಾಶಮಾನವಾದ ದೀಪಗಳ ಬೆಳಕು, ಜಾಹೀರಾತುಗಳಿಗೆ ಮೇಲ್ಮುಖವಾಗಿ ನಿಲ್ಲಿಸಿದ ದೀಪಗಳ ಬೆಳಕು, ಷಾಪಿಂಗ್ ಮಾಲ್ ಗಳ ಬಳಿ ಒಂದಿಷ್ಟು ಜಾಗಬಿಡದೆ ಝಗಮಗಿಸುವ ದೀಪಗಳ ಬೆಳಕು, ವಾಹನಗಳ ದೀಪಗಳ ಬೆಳಕು... ಹೀಗೆ ಎಷ್ಟೆಲ್ಲಾ ಬೆಳಕು! ಇವೆಲ್ಲಾ ಸಾಲದೆಂಬಂತೆ ಮನೆಗೆ ಹೋದರೆ ಟೀವಿ, ಕಂಪ್ಯೂಟರುಗಳ ಬೆಳಕು. ವಿಪರ್ಯಾಸವೆಂದರೆ ನಮಗೆ ಅಷ್ಟೆಲ್ಲಾ ಬೆಳಕು ಬೇಕಾಗಿದ್ದರೂ, ನೈಸರ್ಗಿಕ ಬೆಳಕು ಸ್ವಲ್ಪವೂ ಬರದಂತೆ ಮಾಡಿ ಕಟ್ಟಿದ ದೊಡ್ಡ ಕಟ್ಟಡಗಳಲ್ಲಿ ಇಡೀ ದಿನ ಉರಿಯುವ ದೀಪಗಳು. ನಮಗೇಕೆ ಇವೆಲ್ಲಾ ಹೆಚ್ಚಾಯಿತು ಎನ್ನಿಸುತ್ತಿಲ್ಲ?
ಸ್ವಲ್ಪ ದಿನಗಳ ಹಿಂದೆ ರಾತ್ರಿ ಹತ್ತು ಗಂಟೆಯಲ್ಲಿ ’ಕುಟುರ’ ಪಕ್ಷಿಯೊಂದು ಕೂಗುತ್ತಿದ್ದದ್ದು ಕೇಳಿ ಆಶ್ಚರ್ಯವಾಯಿತು. ಕಾಗೆಗಳು ರಾತ್ರಿಯಾಗಿದೆಯೋ ಇಲ್ಲವೋ ಎಂಬ ಗೊಂದಲದಿಂದ ರಾತ್ರಿಯಿಡೀ ಹಾರಾಡುವುದು, ಕೋಗಿಲೆಗಳು ರಾತ್ರಿಯ ಹೊತ್ತು ಕೂಗುವುದು ಇವೆಲ್ಲಾ ಅತಿಯಾದ ಬೆಳಕಿನಿಂದ ಆ ಜೀವಿಗಳ ಜೈವಿಕ ಗಡಿಯಾರ ಏರುಪೇರಾಗುವುದರಿಂದ.
ಬೆಳಕು ಜ್ಞಾನದ ಸಂಕೇತ. ಅದಕ್ಕಾಗಿಯೇ ನಾವು ದೀಪಾವಳಿ ಆಚರಿಸುತ್ತೇವೆ. ನಮ್ಮಲ್ಲಿರುವ ಅಜ್ಞಾನ ಕತ್ತಲೆಯನ್ನು, ಜ್ಞಾನವೆಂಬ ಬೆಳಕು ತೊಡೆದು ಹಾಕುವುದರ ಸಂಕೇತ ಅದು. ಬೆಳಕು ನಮಗೆಲ್ಲ ಅವಶ್ಯಕ. ಆದರೆ ದೀಪಾವಳಿಯ ದಿನಗಳಲ್ಲಿ ಉಸಿರಾಡಲೂ ಕಷ್ಟವಾಗುವಂತೆ ಹೊಗೆಯನ್ನು, ಧೂಳನ್ನು, ವಾತಾವರಣಕ್ಕೆ ತುಂಬುತ್ತೇವೆ.
ನಗರ ಪಾಲಿಕೆ, ನಗರ-ಪಟ್ಟಣ ಸಭೆಗಳಿಗೆ ರಸ್ತೆಯ ಇಂಚೂ ಬಿಡದೆ ದೀಪಗಳನ್ನು ಅಳವಡಿಸುವುದೇ ಅಭಿವೃದ್ಧಿಯ ಸಂಕೇತ. ಆದರೆ ಉತ್ತಮ ತಂತ್ರಜ್ಞಾನ ಬಳಸಿಕೊಂಡು ಹೇಗೆ ಬೀದಿ ದೀಪಗಳು ಎಲ್ಲಿಗೆ ಬೇಕೊ ಅಲ್ಲಿಗೆ, ಎಷ್ಟು ಬೇಕೊ ಅಷ್ಟು ಬೆಳಕನ್ನು ಪಡೆಯುವುದರಲ್ಲಿ ವಿಫಲರಾಗುತ್ತಿದ್ದೇವೆ. ಈಗಿರುವ ಬೀದಿ ದೀಪಗಳ ವಿನ್ಯಾಸ ಸ್ವಲ್ಪವೇ ಬದಲಾದರೂ ವ್ಯರ್ಥವಾಗುವ ಬೆಳಕನ್ನು ತಡೆಯಬಹುದು. ಅಷ್ಟೆಲ್ಲಾ ಮೌಲ್ಯದ ಕಾಡುಗಳನ್ನು ಕಡಿದು ಉತ್ಪಾದಿಸುವ ವಿದ್ಯುತ್ತನ್ನು ಹೀಗೆ ವ್ಯರ್ಥ ಮಾಡುವುದು ಎಷ್ಟು ಸರಿ? ಅಷ್ಟೆಲ್ಲಾ ಬೀದಿ ದೀಪಗಳಿದ್ದರೂ, ವಾಹನಗಳ ದೀಪಗಳೂ ಏಕೆ ಉರಿಯಬೇಕು? ತುಂಬಾ ಬೆಳಕಿರುವ ಕಡೆ ವಾಹನಗಳ ದೀಪಗಳನ್ನು ಆರಿಸಿಕೊಂಡು ಹೋಗಲು ನಿಯಮಗಳನ್ನು ಸಡಿಲಿಸಬೇಕು.
ಬೇರೆ ದೇಶಗಳಲ್ಲಿ ಈ ಬಗ್ಗೆ ಜಾಗೃತಿ ಉಂಟಾಗುತ್ತಿದೆ. ಇಂತಹ ಬೆಳಕಿನ ಮಾಲಿನ್ಯದ ಅರಿವಿರುವ ಕೆಲವು ಜನ ಒಟ್ಟಾಗಿ ಹಲವಾರು ಚಟುವಟಿಕೆ ನಡೆಸುತ್ತಿದ್ದಾರೆ. ವ್ಯರ್ಥವಾಗುವ ಬೆಳಕಿನ ಸಧ್ಬಳಕೆಗಾಗಿ ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸುತ್ತಿದ್ದಾರೆ. www.darksky.org ನಲ್ಲಿ ಇಂತಹ ಚಟುವಟಿಕೆಗಳ ಬಗ್ಗೆ ಮಾಹಿತಿಯಿದೆ. ಗೆಳೆಯರೆ, ನಾವೀಗ ದೀಪದಡಿಯ ಕತ್ತಲೆಯಲ್ಲಿ ನಿಂತಿದ್ದೇವೆ. ಹೊರಬರಲು ನಾವೇನು ಮಾಡಬಹುದು?
ಆಧಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2006 ರಲ್ಲಿ ಪ್ರಕಟಿಸಿದ ಸುವರ್ಣ ಕರ್ನಾಟಕ ಪುಸ್ತಕ ಮಾಲಿಕೆಯಲ್ಲಿ ’ವಿಜ್ಞಾನದ ಬಿಂದುಸಾರ’ (ಸಂಪಾದಕರು:ನಾಗೇಶ ಹೆಗಡೆ) ಪುಸ್ತಕದಲ್ಲಿ ಸುದರ್ಶನ ಬೇಳೂರು ಅವರ ಲೇಖನ ’ಬೆಳಕಿನ ವಕ್ರೀಭವನ’