ರಾಗಿ ರೊಟ್ಟಿಯ ಆತ್ಮ ಕಥನ :-
ನಿನ್ನೆ ರಾತ್ರಿ ಊಟಕ್ಕೆಂದು ನನ್ನನ್ನು ಈ ಮನೆಯಾಕೆ ಆರಿಸಿಕೊಂಡಾಗ, ನಾನು ಸ್ವಲ್ಪ ಬೀಗಿದ್ದೆ... ಅನೇಕ ದಿನಗಳಿಂದ, ಒಡತಿಯ ಪ್ರೀತಿಗೆ ಪಾತ್ರನಾಗದೆ, ಮುಚ್ಚಿಟ್ಟ ಡಬ್ಬಿಯಲ್ಲೇ ಕುಳಿತು... ಹೊಚ್ಚ ಹೊಸ ಗಾಳಿಯನ್ನೂ ಸವಿಯದೆ ಕಂಗಾಲಾಗಿದ್ದೆ.... ಉಸಿರು ಕಟ್ಟಿ ಒದ್ದಾಡುತ್ತಿದ್ದೆ... ಈ ದಿನ ಸಾಯಂಕಾಲ ನನ್ನ ಮೆಚ್ಚಿನ ಮನೆಯೊಡತಿ ನನ್ನನ್ನು ಆಚೆಗೆ ಬರಮಾಡಿಕೊಂಡಾಗ, ಆಹಾ... ನನಗೆಂತಹ ಸಂತೋಷವಾಗಿತ್ತು.... ಅದರಲ್ಲೂ ನನ್ನನ್ನು ಇಷ್ಟು ದಿನ ನಿಗಾವಹಿಸದೆ ಬಿಟ್ಟಿದ್ದಕ್ಕೇನೋ ಎಂಬಂತೆ... ಒಂಟಿಯಾಗಿದ್ದ ನನ್ನ ಜೊತೆಗೆ, ನನ್ನ ಸ್ನೇಹಿತರಾದ ಜೀರಿಗೆ, ಉಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಕೇಕ್ ಮೇಲೆ ಐಸ್ ಇಟ್ಟಂತೆ, ನನ್ನ ಕೆಂಪಗಿನ ಸುಂದರ ಬಳ್ಳಿಯಂತಿರುವ ಗಜ್ಜರಿಯನ್ನೂ ನನ್ನೊಡನೆ ಸೇರಿಸಿದಾಗ, ಆಹಾ..... ನಾನೆಲ್ಲೋ ಆಕಾಶದಲ್ಲಿ, ಕನಸಿನ ಲೋಕದಲ್ಲಿ, ಒಂಭತ್ತನೆಯ ಮೋಡದ ಮೇಲೆ ತೇಲಾಡತೊಡಗಿದ್ದೆ........... ಅನೇಕ ದಿನಗಳ ನಂತರ ಸ್ನೇಹಿತರ ಒಡನಾಟ ಅತ್ಯಂತ ಹರುಷ ತಂದಿತ್ತು. ಈ ಮಧ್ಯೆ ಒಡತಿ ನಮ್ಮೆಲ್ಲರನ್ನೂ ಒಟ್ಟಿಗೆ ಸೇರಿಸಲು ನಮ್ಮ ದಾಹ ತೀರಿಸಲು ಸ್ವಲ್ಪ ಸ್ವಲ್ಪವೇ ಜೀವಜಲ ತಾಯಿ ಕಾವೇರಿಯನ್ನು ನಮ್ಮೊಡನೆ ಬೆರೆಸ ತೊಡಗಿದಳು. ಎಲ್ಲರೂ ಗಲಗಲವೆಂದು ಮಾತನಾಡುತ್ತಾ, ಒಬ್ಬರ ಮೈಮೇಲೊಬ್ಬರು ಬೀಳುತ್ತ... ಒಬ್ಬರನ್ನೊಬ್ಬರು ತಬ್ಬುತ್ತಾ... ಹರಟುತ್ತಾ... ಗಲಾಟೆ ಎಬ್ಬಿಸತೊಡಗಿದೆವು..... ಸ್ನೇಹಿತರೆಲ್ಲರ ಸಮಾಗಮದೊಂದಿಗೆ, ಮನಸ್ಸು ಉಲ್ಲಾಸಭರಿತವಾಗಿತ್ತು....ಯಾವುದೇ ಭಯ, ಆತಂಕ, ಸಿಟ್ಟು ಏನೂ ಇಲ್ಲದೆ, ನಾವೆಲ್ಲರೂ ಒಟ್ಟಾಗಿ.. ಕೈ ಕೈ ಹಿಡಿದು, ಆತ್ಮಾಹುತಿಗೆ ಸಿದ್ಧರಾಗಿಬಿಟ್ಟಿದ್ದೆವು.... ಬೇರೆ ಬೇರೆಯಾಗುವ ಮುನ್ನ ಎಲ್ಲರೂ ವಿದಾಯ ಹೇಳಿಕೊಂಡೆವು....ಒಡತಿ ನಮ್ಮನ್ನು ಚಿಕ್ಕ ಚಿಕ್ಕ ಎರಡು ಗುಂಪುಗಳಾಗಿ ವಿಭಾಗಿಸಿದಳು.... ದೊಡ್ಡ ತವದ ಕಡೆ ಆತ್ಮಾಹುತಿಗಾಗಿ ಹೊರಡುವವರ ಪಡೆ ಗಾತ್ರದಲ್ಲಿ ಸ್ವಲ್ಪ ದೊಡ್ಡದಿತ್ತು ಮತ್ತು ಚಿಕ್ಕ ಬಾಣಲೆಯ ಕಡೆ ಹೊರಡುವ ಪಡೆ ಸ್ವಲ್ಪ ಚಿಕ್ಕದಿತ್ತು....
ಒಡತಿ ಮೊದಲು ದೊಡ್ಡ ಪಡೆಯವರನ್ನು ವಿಭಾಗಿಸಿದಳು.... ಎಷ್ಟಾದರೂ ದೊಡ್ಡವರಿಗೇ ಎಲ್ಲರೂ ಮೊದಲು ಮಣೆ ಹಾಕುವುದಲ್ಲವೇ... ಛೇ... ಇಲ್ಲ... ನನ್ನೊಡತಿ ಅಷ್ಟು ಕೆಟ್ಟವಳಲ್ಲ... ದೊಡ್ಡ ಪಡೆಯಿಂದ ಒಬ್ಬರ ಸರತಿ ಮುಗಿದ ನಂತರ, ತುಂಬು ಪ್ರೀತಿಯಿಂದ ಒಡತಿಯ ದೃಷ್ಟಿ ಚಿಕ್ಕ ಪಡೆಯ ಕಡೆ ತಿರುಗಿತು..... ಯಾರಿಗೂ ನೋವಾಗಬಾರದೆಂಬ ಉದ್ದೇಶದ ನನ್ನೊಡತಿಯ ಮನ ತುಂಬಾ ಮೃದು.... ನಮ್ಮನ್ನು ತವ ಹಾಗೂ ಬಾಣಲೆಯ ಚಿತೆ ಏರಿಸುತ್ತಲೇ, ಮನದೊಳಗೇ ಮರುಗುವಳು ಪಾಪ.... ತಮ್ಮ ಹೊಟ್ಟೆಯ ಬೆಂಕಿ ಆರಿಸಲು, ನಾವು ಬೆಂಕಿಗಾಹುತಿಯಾದೆವೆಂದು.... ನಿಧಾನವಾಗಿ ಮರುಗುತ್ತಲೇ ಒಡತಿ ನಮ್ಮಲ್ಲಿ ಇಬ್ಬರ ಬಲಿದಾನ ಕೊಟ್ಟು ಬಿಟ್ಟಿದ್ದಳು... ಮಿಕ್ಕಿದ್ದ ಇಬ್ಬರು, ಎರಡೂ ಪಡೆಗಳಲ್ಲಿ ಒಬ್ಬರಂತೆ, ತಮ್ಮ ಸರತಿಗಾಗಿ ಕಾಯುತ್ತಿದ್ದೆವು..... ನಮ್ಮನ್ನು ತನ್ನದೇ ಆದ ಭಾಷೆಯಲ್ಲಿ ಮಾತನಾಡಿಸುತ್ತಾ, ನಮ್ಮ ಮೈಗೆ ಸ್ವಲ್ಪವು ನೋವಾಗದಂತೆ ನಮ್ಮನ್ನು ಹಿತವಾಗಿ ಜೋಗುಳ ಹಾಡಿ ತಟ್ಟಿ ಮಲಗಿಸುವಂತೆ ಚಿತೆ ಏರಿಸುತ್ತಿದ್ದ ಒಡತಿಯ ಹಸ್ತ ಸ್ಪರ್ಶಕ್ಕಾಗಿ ಕಾಯುತ್ತಾ ಕುಳಿತಿದ್ದಾಗ.... ಅಯ್ಯೋ... ಇದೇನಿದು.... ನನ್ನ ಮನ ಮೆಚ್ಚಿನ ಒಡತಿ ಅಡಿಗೆಯ ಮನೆಯಿಂದ ಹೊರ ನಡೆಯುತ್ತಿದ್ದಾಳೆ.... ಉಳಿದ ನಮ್ಮಿಬ್ಬರನ್ನೂ ಬಿಟ್ಟು...... ದೇವಾ... ನಾವೇಕೆ ಇವಳಿಗೆ ಇಂದು ಬೇಡವಾದೆವೋ?... ಎಷ್ಟು ದಿನಗಳ ನಂತರ ನಮಗೆ ಆತ್ಮಾಹುತಿಯಾಗಿ, ಮರುಜನ್ಮ ಪಡೆಯುವ ಅವಕಾಶ ಲಭಿಸಿತ್ತು... ಛೇ... ಈಗೇನು ಈ ನನ್ನ ಒಡತಿ ನಮ್ಮನ್ನು ಮೊತ್ತೊಂದು ಚಿಕ್ಕ ಡಬ್ಬಿಯಲ್ಲಿ ಅಮುಕಿ, ಬಿಸಿ-ಶೆಕೆ ತಟ್ಟದಿರಲೆಂದು, ತಂಗಳ ಪೆಟ್ಟಿಗೆಯೊಳಗೆ ತಳ್ಳುತ್ತಾಳೋ...? ಭಗವಂತಾ ನಮಗೆ ಮುಕ್ತಿ ಕೊಡು ಎಂದು ಮೌನವಾಗಿ ರೋದಿಸ ತೊಡಗಿದ್ದಾಗ.......
ಅಬ್ಬಾ... ಅದೆಂಥಹ ಭಯಂಕರ ಶಬ್ದದ ಸಿಡಿಲು..... ಅಲ್ಲಲ್ಲ..... ಇದು ಮನೆಯೊಡೆಯನ ಧ್ವನಿ..... ಮೊದಲೇ ಆತಂಕದಿಂದ ಬೆದರಿರುವ ನಮ್ಮ ಮೇಲೆ ಕಪ್ಪೆ ಬಿಸಾಡಿದಂತೇಕೆ ಮಾತನಾಡುತ್ತಿದ್ದಾನೆ..... ? ಇಲ್ಲ... ನಮಗಲ್ಲ.... ಅವನು ಪ್ರೀತಿಯಿಂದ ತನ್ನ ಹೆಂಡತಿ, ಅರ್ಥಾತ್ ನಮ್ಮ ಮೆಚ್ಚಿನ ಒಡತಿಯೊಂದಿಗೆ ಮುದ್ದುಗರೆಯುತ್ತಿದ್ದಾನೆ.... ನೀ ಹೋಗು ಚಿನ್ನಾ ಪರವಾಗಿಲ್ಲ.... ನಾ ತಟ್ತೀನಿ ಒಂದು ರೊಟ್ಟಿ ಅಂತ..... :-) ಹೇ ಪರಮಾತ್ಮ, ನಯವಾದ, ನಾಜೂಕಾದ, ಒಡತಿಯ ಕೈಗಳಿಂದ ನಾನು ಸ್ವರ್ಗಕ್ಕೇರುವ ಕನಸು ಕಾಣುತ್ತಿದ್ದರೆ, ಇದೇನಿದು.. ಹಿಂದಿ ಸಿನೆಮಾದಲ್ಲಿ ಧುತ್ತೆಂದು ಪ್ರತ್ಯಕ್ಷವಾಗುವ ಖಳನಾಯಕನಂತೆ..... ನಮ್ಮ ಮನೆಯ ಒಡೆಯ ನಮ್ಮನ್ನು ಚಿತೆ ಏರಿಸುವ ಸಂಕಲ್ಪ ತೊಟ್ಟಿದ್ದಾನೆ.... ನನಗಾಗಿ ಒಡತಿ ಮೆಲುದನಿಯಿಂದ ಹಾಡುತ್ತಿಡ್ಡ ಹಾಡು ಕೊನೆಯ ಬಾರಿಗೆ ಕೇಳುವ ಒಂದೇ ಒಂದು ಅವಕಾಶವೂ ನನ್ನ ಕೈತಪ್ಪಿ ಹೋಗುತ್ತಿದೆಯಲ್ಲಾ..... ಏನು ಮಾಡಲಿ..? ಪರಮಾತ್ಮ ಏನಾದರೂ ಮಾಡು... ಒಡತಿಯನ್ನೇ ಹೃದಯವಿದ್ರಾವಕವಾಗಿ ಅಮ್ಮಾ....... ನೀನೇ ಬಾ ಎಂದರೂ... ಕೇಳಿಸಿಕೊಳ್ಳದೆಯೇ.... ಒಡತಿ ಹೊರನಡೆದೇ ಬಿಟ್ಟಳು......
ದೊಡ್ಡ ಗಾತ್ರದಲ್ಲಿದ್ದ ನನ್ನನ್ನೇ ಮೊದಲು ಈ ನನ್ನ ಕ್ರೂರಿ ಒಡೆಯ ಆರಿಸಿಕೊಂಡ.... ಚಿಕ್ಕ ಪಡೆಯ ನನ್ನ ತಮ್ಮ ಎಷ್ಟಾದರೂ ಚಿಕ್ಕವನಲ್ಲವೇ... ಅವನಿಗೆ ಕೊನೆಯ ವಿದಾಯ ಹೇಳಲು, ಮುದ್ದಿನಿಂದ ಬೀಳ್ಕೊಡಲು ಒಡತಿಯೇ ಬರುತ್ತಾಳೇನೋ.... ಹೂಂ.. ಅದೃಷ್ಟವಂತ.... ಹೀಗೇ ನನ್ನ ಲಹರಿ ಕೊನೆ ಮೊದಲಿಲ್ಲದೇ ಸಾಗುತ್ತಿರುವಂತೆಯೇ.... ಚಿತೆಯ (ತವದ) ಮೇಲೆ ಸ್ವಲ್ಪ ಎಣ್ಣೆ ಸವರಿ, ತನ್ನ ದಪ್ಪ, ಒರಟು ಕೈಗಳಿಂದ ನನ್ನೊಡೆಯ ನನ್ನನ್ನು ಎತ್ತಿಕೊಂಡೇ ಬಿಟ್ಟ.... ಕಣ್ಣೀರಿಡುತ್ತಾ ನಾ ನನ್ನ ತಮ್ಮನಿಗೆ ಕೈ ಬೀಸಲೂ ಅವಕಾಶವಿಲ್ಲದೆ (ಕೈಗಳನ್ನೂ ಮುದುರಿ ಗಟ್ಟಿಯಾಗಿ ಹಿಡಿದು ಬಿಟ್ಟಿದ್ದನಲ್ಲಾ...) ಕಣ್ಗಳಲ್ಲೇ ಬೀಳ್ಕೊಟ್ಟೆ...... ನನ್ನನ್ನು ಎತ್ತಿ ತಪ್ಪ್ ಎಂದು ತವದ ಮಧ್ಯದಲ್ಲಿ ಕೂರಿಸಿ...... ತಲೆಯ ಮೇಲೆ ಸಹಸ್ರ ತೆಂಗಿನಕಾಯಿ ಒಟ್ಟಿಗೇ ಒಡೆದಂತೆ ಒಂದು ತಟ್ಟು ತಟ್ಟಿಬಿಟ್ಟ ನನ್ನ ಒಡೆಯ...... ನಾನಾಗಲೇ ಅರ್ಧ ಜೀವವಾಗಿ ಬಿಟ್ಟೆ..... ಸರಿ... ನನ್ನ ಮುಖ, ಮೂತಿ ಏನನ್ನೂ ನೋಡದೆ ಶುರು ಮಾಡಿದ ಪ್ರಹಾರಗಳನ್ನು..... ನನಗೂ ಎಲ್ಲಿತ್ತೋ ಸಿಟ್ಟು... ಸರ್ ಎಂದು ಏರಿ ಬಂದು.... ನಾನು ಜೀವ ತ್ಯಾಗ ಮಾಡಲಾರೆ ಎಂದು ಸತ್ಯಾಗ್ರಹ ಹೂಡುತ್ತಾ...... ಒಡೆಯನ ಕೈಗೇ ಮೆತ್ತಿಕೊಂಡು ಬಿಟ್ಟೆ..... ಸಿಟ್ಟಿನಿಂದ ನಿಗಿ ನಿಗಿ ಹೊಳೆದ ಒಡೆಯ... ಏನೂ ಮಾಡಲೂ ತೋರದೆ... ನನ್ನ ಮೇಲೆ ಜಲಧಾಳಿ ಆರಂಭಿಸಿಬಿಟ್ಟ... ಕೈಯಲ್ಲಿ ಚೆನ್ನಾಗಿ ನೀರು ತೆಗೆದುಕೊಂಡು ನನ್ನ ತಲೆಯ ಮೇಲೆ ತಟ್ಟತೊಡಗಿದ. ಇದರಿಂದ ಬಾಯಾರಿಕೆಯಿಲ್ಲದಿದ್ದರೂ, ಹೊಟ್ಟೆಯುಬ್ಬಿದ್ದರೂ, ಬಿಡದೆ, ಜಲಪಾನ ಮಾಡಲೇ ಬೇಕಾದ ಆತಂಕ ಸೃಷ್ಟಿಯಾಗಿ ಬಿಟ್ಟಿತು..... ಅಂತೂ ಇಂತೂ ಹೇಗೋ ಏನೋ... ನನ್ನನ್ನು ಒರಟೊರಟಾಗಿ, ಒಂದು ಕಡೆ ದಪ್ಪ, ಒಂದು ಕಡೆ ತೆಳು.... ಯಾವುದೋ ದೇಶದ ಭೂಪಟದಂತೆ... ಎಲ್ಲಾ ಮಲಗಿಸಿ.... ನಾ ಮೇಲೇಳದಂತೆ ನೀರು ತಟ್ಟಿ.... ಮುಗಿಸಿ... ಗೆದ್ದೆನೆಂದು ಬೀಗತೊಡಗಿದ್ದ.... ಅಬ್ಬಾ ಅಂತೂ ಈ ಒಡೆಯನ ಕೈಯ ಒರಟುತನಕ್ಕಿಂತ ಚಿತೆಯೇ ಮೇಲು ಎಂದು ನಾ ನಿಟ್ಟುಸಿರು ಬಿಡುತ್ತಿದ್ದಂತೇ... ಮತ್ತೆ ಶುರು ಧಾಳಿ... ತನ್ನ ತನ್ನ ದೊಡ್ಡ, ಒರಟು ಬೆರಳುಗಳಿಂದ ನನ್ನಲ್ಲಿ ಐದು ಗುಂಡಿಗಳನ್ನು ಅಗೆದುಬಿಟ್ಟಿದ್ದ....... ಏನೋ ನಾ ಎಲ್ಲಾದರೂ ಸರಿಯಾಗಿ ದಹಿಸದೇ ಹೋದರೆ ಎಂಬ ಆತಂಕದಲ್ಲಿ... ಐದೂ ಗುಂಡಿಗಳಲ್ಲಿ.... ಧಾರಾಳವಾಗಿ ಎಣ್ಣೆ ಹಾಯಿಸಿದ...... ಸರಿ ಎಲ್ಲಾ ಮುಗಿಯಿತೂ.... ಇದೋ ನಿನ್ನ ಚರಮ ಗೀತೆ ಕೇಳು ಎನ್ನುತ್ತಾ.... ಅದೀಗಲೇ ಬಂದ ಒಡತಿಯೊಂದಿಗೆ ನೋಡಿದ್ಯಾ ನಾ ಹೇಗೆ ಮುಗಿಸಿದೆ ಕೆಲಸವನ್ನು ಎನ್ನುತ್ತಾ... ನನ್ನನ್ನು ಚೆತೆ ಏರಿಸಿದ....
ಚೆನ್ನಾಗಿ ಬೆಂಕಿ ಹೊತ್ತಿಕೊಂಡು ಚಿತೆ ಉರಿಯತೊಡಗಿತು..... ನನ್ನ ಆತ್ಮ ದೇಹದಿಂದ ಬೇರ್ಪಟ್ಟು ಮುಕ್ತಿ ಪಡೆಯಿತು.... ಹೊರಬಂದ ನಾನೂ ಕುತೂಹಲದಿಂದ ಅಲ್ಲೇ ಸುಳಿದಾಡುತ್ತಾ ನೋಡತೊಡಗಿದೆ..... ತನ್ನ ಕೆಲಸ ಮುಗಿಸಿ ಬಂದ ಒಡತಿ, ನನ್ನ ಬೇಯುತ್ತಿದ್ದ ದೇಹ ನೋಡಿ ಕಂಗಾಲಾಗಿ.... ಅಯ್ಯಪ್ಪಾ... ಇದೇನಿದೂ ಹೀಗಿದೆ? ..... ಇದೇಕೆ ಇಷ್ಟು ದಪ್ಪ...? ಬೇಯುವ ಪರಿಯಾದರೂ ಹೇಗೆ.... ? ಬೆಂಕಿ ಉರಿಯುವುದಿಲ್ಲವೆಂದು ಇಷ್ಟೊಂದು ಎಣ್ಣೆ ಹಾಗುತ್ತಾರೆಯೇ....? ಛೇ.... ಎಂದಳು..... ಮತ್ತೂ ಹತ್ತಿರ ಬಂದು ನೋಡಿದಾಗ, ತವದ ಮೇಲೆ ಉರಿಯುತ್ತಿದ್ದ ನನ್ನ ದೇಹದಲ್ಲಿನ ಐದು ಗುಂಡಿಗಳನ್ನು ನೋಡಿ, ಒಮ್ಮೆಲೇ ಅತಿ ಮರುಕದಿಂದ..... ಲೊಚಗುಟ್ಟಿದಳು....... ಏನಾದರೂ ಆಗುವ ಮೊದಲು ಇಲ್ಲಿಂದ ಪರಾರಿಯಾಗು... ಎನ್ನುವಂತೆ ನಾನೇನೋ ದೇಹ ಬಂಧನದಿಂದ ಕಳಚಿಕೊಂಡು, ಸಂತೋಷವಾಗಿ ಹಾರತೊಡಗಿದ್ದೆ.... ಆದರೆ ಪಾಪ ಮುಕ್ಕಾಲು ಬೆಂದಿದ್ದ, ನನ್ನ ತನುವಿಗಿನ್ನೂ ಮೋಕ್ಷ ಸಿಕ್ಕಿರಲಿಲ್ಲ..... ಅಯ್ಯೋ... ಅದನ್ನು ಎಬ್ಬಿಸು.... ಹೀಗೇ ಬಿಟ್ಟರೆ ಸುಟ್ಟು ಕರಕಲಾಗಿ, ಹಿಡಿ ಬೂದಿಯೂ ಸಿಗೋಲ್ಲವೆಂದು, ಒಡತಿ ಕಿರುಚಿದಾಗ, ಚೂಪಾದ ದೊಡ್ಡ ಚಮಚದಿಂದ, ಒಡೆಯ, ಆತ್ಮನಿಲ್ಲದ ಆ ದೇಹವನ್ನು ಎಲ್ಲಾ ಕಡೆಗಳಿಂದಲೂ ಚುಚ್ಚ ತೊಡಗಿದ್ದ.... ತವೆಯನ್ನೇ ತಲೆಕೆಳಗಾಗಿ ಹಿಡಿದ, ಈ ಕಡೆ ತಿರುಗಿ ಚುಚ್ಚಿದ, ಆ ಕಡೆ ತಿರುಗಿ ಚುಚ್ಚಿದ..., ಬೆಂಕಿಯಿಂದ ಕೆಳಗಿಳಿಸಿ ಚುಚ್ಚಿದ.... ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ ಎಂಬಂತೆ, ಆಗಾಗ ಜೀವಜಲವನ್ನು ಉಣಿಸಿ, ಮತ್ತೆ ಮತ್ತೆ ತಿವಿಯುತ್ತಾ.... ಅಬ್ಬಬ್ಬಾ... ಅಂತೂ , ನಾ ಬಿಟ್ಟು ಬಂದ, ಸುಟ್ಟು ಕರ್ರಗಾಗಿದ್ದ, ಆ ತನುವನ್ನು ಅವನು ಚಿತೆಯಿಂದ ಮೇಲಕ್ಕೆತ್ತಿದ.
ಗೆದ್ದೆನೆಂಬಂತೆ ಮುದ್ದಿನ ಮಡದಿಯ ಕಡೆಗೊಮ್ಮೆ ನೋಡಿ.... ಇದು ನೀನೇನೂ ಭಕ್ಷಿಸಬೇಡಮ್ಮಾ..... ನಾ ಮಾಡಿದ್ದು.... ನಾನೇ ಸ್ವಾಹಾ ಮಾಡ್ತೀನಿ ಎಂದು ಬೇರೆ ಹೇಳಿದ...... ಮಾಡಿದ್ದುಣ್ಣೋ ಮಹರಾಯನೆಂದು ನನ್ನ ಒಡತಿ, ಆ ನನ್ನ ಒಡೆಯನನ್ನೂ, ನಾನು ಬಿಟ್ಟು ಬಂದ, ಬೆಂದು ಕರಕಲಾದ ಆ ದೇಹವನ್ನೂ, ಅಲ್ಲಿಯೇ ಬಿಟ್ಟು... ಇದೆಲ್ಲವನ್ನೂ ಕಂಗೆಟ್ಟ ನೋಟದಿಂದ ನೋಡುತ್ತಾ, ಅಳುತ್ತಾ ಕುಳಿತಿದ್ದ ನನ್ನ ತಮ್ಮನನ್ನು ಮೃದುವಾಗಿ ತನ್ನ ಸುಕೋಮಲ ಹಸ್ತಗಳಿಂದೆತ್ತಿಕೊಂಡು..... ಆಪ್ಯಾಯಮಾನವಾದ ರಾಗದಲ್ಲಿ ಲಾಲಿ ಹಾಡುತ್ತಾ, ಮೋಡಿ ಮಾಡುತ್ತಾ.... ತಟ್ಟಲಾರಂಭಿಸಿದಳು...... ನಸುನಗುತ್ತಾ.... ಹಾಗೆಯೇ ನಿಧಾನವಾಗಿ ಕಣ್ಮುಚ್ಚಿ ಮಲಗಿದ ನನ್ನ ತಮ್ಮ ಮೇಲೆ ಬರುವವರೆಗೆ ಕಾಯುವ ನಿರ್ಧಾರದಿಂದ, ನಾನಿನ್ನೂ ಅಲ್ಲೇ ಸುಳಿಯುತ್ತಲಿದ್ದೆ.....
ಸ್ವಲ್ಪ ಹೊತ್ತಿನ ನಂತರ ನನ್ನೊಡತಿ ಊಟ ಮಾಡುವ ಮೇಜದ ಹತ್ತಿರ ಬಂದಾಗ, ನನ್ನೊಡೆಯ, ಅತ್ಯಂತ ಸಂತೋಷದಿಂದ, ತಾ ಮಾಡಿದನ್ನು, ತಾನೇ ಉಣ್ಣುತ್ತಾ ಕುಳಿತಿದ್ದ...... ತೆಳ್ಳಗೆ, ಬಳ್ಳಿಯಂತೆ, ಗರಿಗರಿಯಾಗಿ, ಮಾಡಿ ಕೊಡುವ ನನ್ನ ಒಡತಿ, ತನ್ನಿನಿಯನ ಫಜೀತಿ ನೋಡಲಾರದೆ, ತಾನು ಮಾಡಿದ್ದ ಅರ್ಧ ರೊಟ್ಟಿಯನ್ನು ಧಾರಳವಾಗಿ, ಅಕ್ಕರೆಯಿಂದ ಒಡೆಯನಿಗೆ ಹರಿದು ಕೊಟ್ಟು ಮುಗುಳ್ನಕ್ಕಳು..... ನಾನು ನನ್ನ ತಮ್ಮನೂ... ಮೋಕ್ಷ ಸಿಕ್ಕ ಸಂತೋಷದಲ್ಲಿ ಅಲ್ಲಿಂದ ಸ್ವಚ್ಛಂದವಾಗಿ, ಹಾರಾಡುತ್ತಾ...... ತೇಲಿ ಹೋದೆವು....
Comments
ಉ: ರಾಗಿ ರೊಟ್ಟಿಯ ಆತ್ಮ ಕಥನ :-
In reply to ಉ: ರಾಗಿ ರೊಟ್ಟಿಯ ಆತ್ಮ ಕಥನ :- by asuhegde
ಉ: ರಾಗಿ ರೊಟ್ಟಿಯ ಆತ್ಮ ಕಥನ :-
ಉ: ರಾಗಿ ರೊಟ್ಟಿಯ ಆತ್ಮ ಕಥನ :-
In reply to ಉ: ರಾಗಿ ರೊಟ್ಟಿಯ ಆತ್ಮ ಕಥನ :- by h.a.shastry
ಉ: ರಾಗಿ ರೊಟ್ಟಿಯ ಆತ್ಮ ಕಥನ :-
In reply to ಉ: ರಾಗಿ ರೊಟ್ಟಿಯ ಆತ್ಮ ಕಥನ :- by Shamala
ಉ: ರಾಗಿ ರೊಟ್ಟಿಯ ಆತ್ಮ ಕಥನ :-
In reply to ಉ: ರಾಗಿ ರೊಟ್ಟಿಯ ಆತ್ಮ ಕಥನ :- by Ananatha
ಉ: ರಾಗಿ ರೊಟ್ಟಿಯ ಆತ್ಮ ಕಥನ :-
ಉ: ರಾಗಿ ರೊಟ್ಟಿಯ ಆತ್ಮ ಕಥನ :-
In reply to ಉ: ರಾಗಿ ರೊಟ್ಟಿಯ ಆತ್ಮ ಕಥನ :- by bhalle
ಉ: ರಾಗಿ ರೊಟ್ಟಿಯ ಆತ್ಮ ಕಥನ :-