ನಮ್ಮ ಕಷ್ಟಾನೂ ಸ್ವಲ್ಪ ಅರ್ಥ ಮಾಡಿಕೊಳ್ರೀ !!

ನಮ್ಮ ಕಷ್ಟಾನೂ ಸ್ವಲ್ಪ ಅರ್ಥ ಮಾಡಿಕೊಳ್ರೀ !!

ಬರಹ

 ಅದೃಷ್ಟವಶಾತ್ ಬೆಳಿಗ್ಗೆ ಎದ್ದೆ ! 



ಸತ್ಯ ಕಣ್ರೀ. ನೆನ್ನೆ ಇದ್ದೋರು ಇವತ್ತಿಲ್ಲ. ಇವತ್ತಿರೋರು ನಾಳೆ ಇಲ್ಲ. ದುರಾದೃಷ್ಟವಶಾತ್ ಎಡ ಮಗ್ಗುಲಲ್ಲಿ ಎದ್ದೆ. ಅಲ್ಲ, ಬಲ ಮಗ್ಗುಲಲ್ಲಿ ಎದ್ದೇ ದಿನವೂ ಬಾಸ್ ಕೈಲಿ (ಬಾಯಲ್ಲಿ) ಉಗಿಸಿಕೊಳ್ಳೋದು ಗ್ಯಾರಂಟಿ.. ಹಾಗಿರಬೇಕಾದರೆ ಇನ್ನು ಎಡ ಮಗ್ಗುಲಲ್ಲಿ ಎದ್ರೆ ಏನು ಗತಿಯೋ ಏನೋ. 


ಇಲ್ಲ ಕಣ್ರೀ, ಹಂಗೆಲ್ಲ ಅಂದುಕೊಂಡ್ರೆ ಅಸ್ತು ದೇವತೆಗಳು ಅಸ್ತು ಅಂದುಬಿಡ್ತಾರಂತೆ ! ಇಲ್ಲ ಇಲ್ಲ, ಅವೆಲ್ಲ ಮೂಢನಂಬಿಕೆಗಳು !! ಛೇ! ಇಲ್ಲ, ಎಡ ಮಗ್ಗುಲಲ್ಲಿ ಎದ್ದದ್ದಕ್ಕೆ ಒಂದು ರೂಪಾಯಿ ತಪ್ಪು ಕಾಣಿಕೆ ಹಾಕಿಬಿಡ್ತೀನಿ, ಮೊದಲೇ  Performance Evaluation ಸಮಯ ... ಯಾಕ್ ಬೇಕು ರಿಸ್ಕೂ !!! 


ಮಂಚ ಮತ್ತು ಹಾಸಿಗೆ ಒಟ್ಟಿಗೆ ನುಡಿದವು "ಸದ್ಯ ದಡಿಯ ಎದ್ದ" ಅಂತ.


ಬ್ರಷ್ ತೊಳೆದು, ಪೇಸ್ಟ್ ಹಾಕಿಕೊಳ್ಳೋಣ ಎನ್ನುವಾಗ ನೆನಪಾಯ್ತು ಅಂಗಡಿಯಿಂದ ನೆನ್ನೆ ಪೇಸ್ಟ್ ತರಬೇಕಿತ್ತು ಅಂತ. ಹಿಂಡಿ ಹಿಪ್ಪೆಯಾಗಿದ್ದರೂ ಟ್ಯೂಬನ್ನು ಎಸೆದಿರಲಿಲ್ಲ. ಆದ್ದರಿಂದ, ಅದನ್ನೇ ಮತ್ತೆ ಹಿಂಡಿದೆ. ಇಪ್ಪತ್ತು ಹಲ್ಲುಗಳಿಗೆ ಆಗುವಷ್ಟು ಪೇಶ್ಟನ್ನು ಹೊರಚೆಲ್ಲಿ ನನ್ನತ್ತ ದೈನ್ಯತೆಯಿಂದ ನೋಡಿ 'please put me to sleep' ಅಂದಿತು. ಅದು ಅಮೇರಿಕನ್ ಕಂಪನಿ ಟೂತ್ ಪೇಸ್ಟು ! ಮಾಲ್’ನಲ್ಲಿ ಕೊಂಡಿದ್ದು !! ಆಂಗ್ಲ ಬಿಟ್ರೆ ಬೇರೆ ಬಾಷೆ ಬರೋಲ್ಲ.


ಅಷ್ಟು ಪೇಸ್ಟನ್ನೇ ಇರೋ ಮೂವತ್ತು ಹಲ್ಲುಗಳಿಗೂ ಅಡ್ಜಸ್ಟ್ ಮಾಡಿದೆ. ಬ್ರಷ್ ಮುಗಿಸಿ ಬಾಯಿ ತೊಳೆದುಕೊಂಡ ಮೇಲೆ ’ಉಸ್ಸಪ್ಪ’ ಅಂತ ಸುಸ್ತಾದ ದನಿ. ನಾನಲ್ರೀ, ನನ್ನ ಹಲ್ಲುಗಳು. ’ನನ್ನನ್ನೇನು ಹಲ್ಲು ಅಂದುಕೊಂಡ್ಯೋ ಇಲ್ಲಾ ಬಚ್ಚಲೂ ಅಂದುಕೊಂಡ್ಯೊ, ಅಷ್ಟು ಜೋರಾಗಿ ತಿಕ್ಕಿ ತೊಳೆಯೋದಕ್ಕೇ? ಇನ್ನೆಷ್ಟು ತಿಕ್ಕಿದರೂ ನನಗೇನೂ ಐಶ್ವರ್ಯಾ ರೈ ಬಣ್ಣ ಬರೋಲ್ಲ. ನನ್ನನ್ನು ನೋಡಿದ ಎಷ್ಟೊ ಜನ ತಮಗೆ ಜಾಂಡೀಸ್ ಆಗಿದೆ ಎಂದುಕೊಂಡು ಡಾಕ್ಟರ್ ಬಳಿ ಹೋಗಿದ್ದಿದೆ’ ಅಂದವಾ ಹಲ್ಲುಗಳು.


ಹಲ್ಲುಗಳು ಏನಾದ್ರೂ ಅಂದುಕೊಳ್ಳಲಿ ನಾನು ಕೇರ್ ಮಾಡುವವನಲ್ಲ. 


ಸ್ನಾನಕ್ಕೆ ಇಳಿದೆ. ಬಿಸಿ ಬಿಸಿ ನೀರು ಹೊಯ್ದುಕೊಳ್ಳುತ್ತ ಹಾಡಲೂ ತೊಡಗಿದ್ದೆ, ’ಕೋಳೀಗೆ ಹಲ್ಲಿಲ್ಲ, ಗೂಳಿಗೆ ಮಾತಿಲ್ಲ, ಬಾಸ್’ಗಂತೂ ಬುದ್ದಿ ಇಲ್ವೇ ಇಲ್ಲ ’ ಅಂತ. ಆಮೇಲೆ ರಪ ರಪ ಅಂತ ಒರೆಸಿಕೊಂಡು ಹೊರ ಬಂದೆ. ಇಡೀ ದೇಹ ಒಮ್ಮೆ ಅದುರಿತು. ಚರ್ಮ ನುಡಿಯಿತು ’ಕೊಳಚೆ ಆದ್ರೂ ಪರವಾಗಿಲ್ಲ, ನಿನ್ನ ಮೈಮೇಲೆ ಇರೋ ಬದಲು ಹಂದಿ ಮೈಮೇಲಿನ ಚರ್ಮ ಆಗಿದ್ರೆ ಎಷ್ಟೊ ಚೆನ್ನಾಗಿತ್ತು. ಅಲ್ಲಯ, ಅಷ್ಟೇನಯ್ಯಾ ಬಿಸಿ ನೀರು ಸುರಿದುಕೊಳ್ಳೋದು? ಪಾಪಿ ... ಈಗ ನಾನು ಹಾಡ್ತೀನಿ ಕೇಳು "ಕೆಂಪಾದವೋ ಎಲ್ಲ ಕೆಂಪಾದವೋ, ಕರ್ರಗಿದ್ದ ಮುಖವೆಲ್ಲ, ಹೊಟ್ಟೆ, ಕೈಕಾಲೆಲ್ಲ, ನೆತ್ತಾರ ಸುರಿದಂಗೇ ಕೆಂಪಾದವೋ" ಅಂತ ಗೋಳಿಟ್ಟಿತು.


ಮುಖಕ್ಕೆ ಕ್ರೀಮ್ ಹಚ್ಚದೆ, ಪೌಡರ್ ಬಳಿದೆ. ಆಗ ’ಮೊದಲೇ ಬಿಸಿ ನೀರಿನ ಸ್ನಾನ. ಜೊತೆಗೆ ಕ್ರೀಮನ್ನೂ ಹಚ್ಚದೆ ಪೌಡರ್ ಹಚ್ಚಿದೆಯಲ್ಲೋ ಅಧಮ ! ಒರಟು ಒರಟಾಗಿ ಬಂಡೆಯ ಹಾಗೆ ಆಗಿದ್ದೇನೆ’ ಅಂದು ಹಲುಬಿತು ಎನ್ನ ಕೆನ್ನೆಗಳು.  


ಕೇಳಿಸಿಕೊಳ್ಳದೆ ತಲೆ ಬಾಚುತ್ತಿದ್ದೆ. ’ನನಗೆ ಎಣ್ಣೆ ತೋರಿಸಿ ಎಷ್ಟು ವರ್ಷ ಆಯ್ತೋ? ಎಣ್ಣೆ ಸ್ನಾನ ಮಾಡಲ್ಲ, ಕೂದಲಿಗೆ ಕೊಬ್ಬರಿ ಎಣ್ಣೆ ಹಚ್ಚಲ್ಲ. ಇನ್ನು ಸ್ವಲ್ಪ ದಿನಕ್ಕೆ ಬಿಳೀ ಮೋಡದ ಹಾಗೆ ಆಗೋ ಸೂಚನೆ ಕಾಣ್ತಿದೆ’ ಎಂದವು ಆ ಕೆಂಚು ಕೂದಲುಗಳು. ನಾನು ಕ್ಯಾರೇ ಅನ್ನಲಿಲ್ಲ.


’ಮೊದಲು ನನಗೆ ಕನ್ನಡಕ ಹಾಕಲೇ. ಏನೂ ಕಾಣ್ತಿಲ್ಲ’ ಅಂದಿತು ಕಣ್ಣುಗಳು. 


ಕೂಡಲೆ ’ಬೇಡ, ಬೇಡ. ಸ್ವಲ್ಪ ಹೊತ್ತು ನನ್ನನ್ನು ನೆಮ್ಮದಿಯಾಗಿ ಬಿಡು. ಈಗ ಹಾಕಿದರೆ ಆ ಕಬ್ಬಿಣದ ಕಡ್ಡಿ ನನ್ನ ಮೇಲೆ ರಾತ್ರಿವರೆಗೂ ಕೂತಿರುತ್ತೆ. ನನ್ನ ಸಂಕಟ ಯಾರಿಗೆ ಅರ್ಥ ಆಗುತ್ತೆ?’ ಅಂದಿತು ಕಿವಿಗಳು.


ಕಣ್ಣಿಂದ ಕಿವಿಗೆ ಎಷ್ಟು ಮಹಾ ದೂರಾ ... ಅಲ್ಲೇ ಎರಡು ರೀತಿ ಬೇಡಿಕೆಗಳು !!


ಎಲ್ಲರಿಗೂ ಒಳ್ಳೆಯವನಾಗೋಕ್ಕೆ ಆಗಲ್ಲ ನೋಡಿ. ಹೋಗ್ಲಿ ಪಾಪ ಅಂತ ಬಟ್ಟೆ ತೊಡೋ ತನಕ ಕಿವಿಗಳನ್ನು ಸ್ವಲ್ಪ ಫ್ರೀ ಬಿಡೋಣ ಅನ್ನಿಸಿ ಪ್ಯಾಂಟು ತೊಟ್ಟೆ. ಪ್ಯಾಂಟು ಒದರಿತು ’ಸತತವಾಗಿ ನಾಲ್ಕನೇ ದಿನ ಹಾಕಿಕೊಳ್ತಾ ಇದ್ದೀಯ ನನ್ನ. ಒಂದು ದಿನ ನನಗೆ ರಜ ಕೊಡಲೇ’. ನಾನು "ಅಯ್ಯೋ ಹೋಗಲೇ. ಬೇರೆ ಪ್ಯಾಂಟ್ ಅಂದ್ರೆ ಅದನ್ನ ಇಸ್ತ್ರಿ ಮಾಡಬೇಕು. ಬೇಜಾರು" ಅಂತ. ಪ್ಯಾಂಟಿನ ಒದರುವಿಕೆಯನ್ನು ಕೇರ್ ಮಾಡಲಿಲ್ಲ. 


ಶರಟು ಧರಿಸಿದೆ. ಕೆಟ್ಟದಾಗಿ ಕಿರುಚಿತು ಕೊಂಕಳು "ಥೂ ಶರಟು ಬದಲಿಸೋ. ಈ ಬೆವರಿನ ವಾಸನೆ ತಡೆಯಲಾರೆ". 


ಕನ್ನಡಕವನ್ನು ನೀರಿನಲ್ಲಿ ತೊಳೆದು ಕಣ್ಣುಗಳನ್ನು ಅಲಂಕರಿಸಿದೆ. ಕನ್ನಡಿಯ ಮುಂದೆ ನಿಂತು ಮತ್ತೊಮ್ಮೆ ತಲೆ ಬಾಚಿಕೊಂಡೆ "ಬಿಸಿಲಲ್ಲಿ ಹೋಗೋ ತನಕ ನಿನ್ನಷ್ಟು ಸುಂದರ ಬೇರಾರೂ ಇಲ್ಲ" ಎಂದು ನುಡಿಯಿತೆನ್ನ ಕಂಗಳು.


ಸೀದ ಅಡುಗೆ ಮನಗೆ ಹೋದೆ. ಹೃದಯ ನುಡಿಯಿತು. ’ಕನಿಷ್ಟ, ದೇವರಿಗೆ ಅಡ್ಡ ಬೀಳೋ ಕಂದ. ಸ್ವಲ್ಪ ನನ್ನ ಸ್ನೇಹಿತನಾದ ’ಮನಸ್ಸಿಗೂ’ ನೆಮ್ಮದಿ ಸಿಗುತ್ತೆ’. 


ಬಲ ಹಸ್ತ ನುಡಿಯಿತು. ’ದಿನಕ್ಕೊಂದು ಸಲವಾದರೂ ನನ್ನ ಅವಳಿ ಸೋದರನನ್ನು ಮಾತನಾಡಿಸೋದಕ್ಕೆ ಅವಕಾಶ ಕೊಡೋ.’ 


ಕಿವಿಯಿದ್ದೂ ಕಿವುಡನಾಗಿ ಸಾಕ್ಸ್ ತೆಗೆದುಕೊಂಡು ಹಾಕಿಕೊಂಡೆ. ಒಂದೇ ಸಮನೆ ನರಳಾಟ ’ಉಸಿರು ಕಟ್ಟುತ್ತಿದೆ ಈ ಕೆಟ್ಟ ವಾಸನೆಯಿಂದ. ಬೇರೆ ಸಾಕ್ಸ್ ಹಾಕ್ಕೊಳ್ಳೋ’ ಅಂದವು ಪಾದಗಳು. ಶೂ ಧರಿಸಿದೆ. ಪಾದಗಳು ಮತ್ತೊಮ್ಮೆ ಕಿರುಚಿತು ’ಅಯ್ಯೋ, ಯಾವಾಗಲಾದರೂ ಬರೀ ಕಾಲಲ್ಲಿ ಶೂ ತೊಟ್ಟೆಯೇನೋ ಪಾಪಿ. ಚೂರು ಪಾರು ಬದುಕೋ ಆಸೇನೋ ಬತ್ತಿಹೋಗ್ತಿದೆ’


ಶೂ ತೊಟ್ಟು ಎದ್ದು ನಿಂತು ಲ್ಯಾಪ್ ಟಾಪ್ ಬ್ಯಾಗು ತೆಗೆದುಕೊಳ್ಳಲು ಹೊರಟೆ. ’ನಿನ್ನನ್ನು ಹೀಗೇ ಬಿಟ್ಟರೆ  ನಮಗೆ ಉಳಿಗಾಲವಿಲ್ಲ.... ಆಕ್ರಮಣ್’ ಎಂಬ ವೀರೋಚಿತ ಕೂಗು ಒಟ್ಟಾಗಿ ಬಂತು. 


ಏನು, ಎತ್ತ ಅಂತ ಅರ್ಥವಾಗ್ತಿಲ್ಲ ! ಬ್ಯಾಗನ್ನು ತೆಗೆದುಕೊಳ್ಳಲು ಕೈಗಳು ಒಪ್ಪುತ್ತಿಲ್ಲ !! ಆ ಕಡೆ ಈ ಕಡೆ ಕದಲೋದಕ್ಕೆ ಕಾಲುಗಳು ಒಪ್ಪುತ್ತಿಲ್ಲ !!! ಕಿವಿ ಕೇಳ್ತಿಲ್ಲ !!!! ಕಣ್ಣು ಕಾಣ್ತಿಲ್ಲ !!!!! ಕಿರುಚಿಕೊಳ್ಳಲಿಕ್ಕೆ ಹೋದರೆ ದನಿಯೇ ಮೂಡುತ್ತಿಲ್ಲ !!!!!! ಅಯ್ಯೋ ...


ಇದ್ದಬದ್ದ ಶಕ್ತಿಯೆಲ್ಲ ಒಟ್ಟುಗೂಡಿಸಿ ಧಡಕ್ಕನೆ ಕದಲಿದೆ. ನನ್ನೊಂದಿಗೆ ನನ್ನ ಹೆಂಡತಿಯೂ ಎದ್ದು ಕುಳಿತು "ಏನ್ರೀ ಕೆಟ್ಟ ಕನಸು ಬಿತ್ತಾ?". ಓ! ಕನಸಾ ಅದು ... ನನ್ನ (ದುರ್)ಅಭ್ಯಾಸಗಳೆಲ್ಲ ಸಿನಿಮಾ ರೀಲಿನಂತೆ ಕನಸು ಬಿತ್ತಲ್ಲಾ ?


ಹೌದು ಎಂದು ತಲೆ ಆಡಿಸಿ ಅವಳು ಕೊಟ್ಟ ನೀರನ್ನು ಕುಡಿದು, ಸ್ವಲ್ಪ ಹೊತ್ತು ಕೂತು ಆಮೇಲೆ ಮಲಗಿದೆ.


ಏಳು ಘಂಟೆಗೆ ಎದ್ದೆ. ಇನ್ನೂ ಕನಸಿನಲ್ಲಿ ಕಂಡ ಅಂಗಾ೦ಗಗಳ ಮುಷ್ಕರ ಹಸಿರಾಗೇ ಇತ್ತು.


ಬಚ್ಚಲಿಗೆ ಹೋದೆ. ತುಂಬು ಗರ್ಭಿಣಿಯಂತಿದ್ದ ಟೂತ್ ಪೇಶ್ಟಿನ ಟ್ಯೂಬಿನಿಂದ ಪೇಸ್ಟನ್ನು ಬ್ರಷ್’ಗೆ ಹಾಕಿಕೊಂಡು ಲಕ್ಷಣವಾಗಿ ಉಜ್ಜಿ, ಅಂದವಾಗಿ ಶೇವ್ ಮಾಡಿಕೊಂಡು, ಉಗುರು ಬೆಚ್ಚನೆ ನೀರಿನಲ್ಲಿ ಶಾಂಪೂಯುಕ್ತ (ಸದ್ಯಕ್ಕೆ) ಸ್ನಾನ ಮಾಡಿ, ಮೃದುವಾಗಿ ಮೈ ಒರೆಸಿಕೊಂಡು, ಕಂಗಳಿಗೆ ಲೆನ್ಸ್ ಹಾಕಿಕೊಂಡು, ಮುಖಕ್ಕೆ ಕ್ರೀಮ್ ಹಚ್ಚಿಕೊಂಡು, ಕೈಕಾಲುಗಳಿಗೆ ಬಾಡಿ ಕ್ರೀಮ್ ಬಳಿದು, ನವಿರಾಗಿ ಪೌಡರ್ ಬಳಿದುಕೊಂಡು ಹೊರಬಂದೆ. 


ಒಗೆದ ಪ್ಯಾಂಟು ಶರಟು ತೆಗೆದುಕೊಂಡು ಇಸ್ತ್ರಿ ಮಾಡಿ ತೊಟ್ಟುಕೊಂಡೆ. ಸೀದ ದೇವರ ಕೋಣೆಗೆ ಹೋಗಿ ದೇವರಿಗೆ ಕೈ ಜೋಡಿಸಿ ನಮಸ್ಕರಿಸಿ, ಎರಡು ನಿಮಿಷ ಹಾಗೇ ಇಟ್ಟುಕೊಂಡು, ನಂತರ, ಶುಭ್ರವಾದ ಸಾಕ್ಸ್ ತೊಟ್ಟು, ಎರಡು ತಿಂಗಳ ಹಿಂದೆ ಕೊಂಡು ತಂದಿದ್ದ ಶೂ ಹಾಕಿಕೊಂಡು ಸಿದ್ದನಾಗಿ ನಿಂತೆ. ಕಾಫಿ ಅಭ್ಯಾಸವಿಲ್ಲ. ತಿಂಡಿ, ಊಟ ಪ್ಯಾಕ್ ಆಗಿರುತ್ತದೆ.


ನನ್ನ ಹೊಸ ಗೆಟಪ್ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿ ನನ್ನಾಕೆ ಓಡೋಡಿ ಬಂದು ಕೊಟ್ಟೇ ಬಿಟ್ಟಲು ಕಣ್ರೀ.... ಲ್ಯಾಪ್ ಟಾಪ್ ಬ್ಯಾಗು !!!