’ಪುಣೆಯ ಕಸ್ತೂರ್ ಬಾ ಸ್ಮಾರಕ’ !
ಆಗಾಖಾನ್ ಪ್ಯಾಲೆಸ್ ಇಟಿಲಿದೇಶದ ಅಮೃತಶಿಲೆಯ ವಿನ್ಯಾಸದೊಂದಿಗೆ ತನ್ನನ್ನು ಗುರುತಿಸಿಕೊಂಡು ಶೋಭಿಸುತ್ತಿದೆ. ದೊಡ್ಡದೊಡ್ಡ ಕೊಠಡಿಗಳು, ದಿವಾನ್ ಖಾನಗಳು ಮತ್ತು ಹೊರಗಡೆ ಸುಂದರವಾದ ಉದ್ಯಾನವನ, ಮತ್ತು ಹಚ್ಚ ಹಸಿರಿನ ಹುಲ್ಲುಬೆಳೆಗಳೊಂದಿಗೆ ಪರ್ಯಟಕರನ್ನು ಸೆಳೆಯುತ್ತದೆ. '೧೯೪೨ ರ ಕ್ವಿಟ್ ಇಂಡಿಯಾ ಆಂದೋಳನ ' ದ ಸಮಯದಲ್ಲಿ ಈ ಅರಮನೆಯ ಪಾತ್ರ ಬಹು ಮಹತ್ವದ್ದು. ಮಹಾತ್ಮ ಗಾಂಧಿ ಮತ್ತು ಕಸ್ತುರ್ ಬಾ ಗಾಂಧಿಯವರು ಈ ಪ್ಯಾಲೆಸ್ ನಲ್ಲಿ ಸೆರೆಯಾಳುಗಳಾಗಿ ಇಡಲ್ಪಟ್ಟಿದ್ದರು. ಮತ್ತೊಂದು ಮಹತ್ವದ ಸಂಗತಿಯೆಂದರೆ, ನ್ಯುಮೋನಿಯ ಕಾಯಿಲೆಯಿಂದ ಪೀಡಿತರಾಗಿದ್ದ ಬಾರವರು ತಮ್ಮ ಕೊನೆಯುಸಿರೆಳೆದದ್ದು ಈ ಮಹಲ್ ನಲ್ಲೇ ! ಅದೂ ನಮ್ಮ ಪೂಜ್ಯಬಾಪು ರವರ ತೊಡೆಯಮೇಲೆ ತಲೆಯಿಟ್ಟುಕೊಂಡು ತಮ್ಮ ಕಣ್ಣುಮುಚ್ಚಿದ್ದರು ! ಇದೊಂದು ಚಾರಿತ್ರ್ಯಿಕ ಘಟನೆ !
೧೮೮೯ ಸುಲ್ತಾನ್ ಮೊಹಮ್ಮದ್ ಶ ಆಗಾಖಾನ್-೩ ಪುಣೆಯ ಯರವಾಡ ಪ್ರದೇಶದಲ್ಲಿ ಈ ಸುಂದರವಾದ ಭವನದ ನಿರ್ಮಾಣಮಾಡಿದನು. ಬರಗಾಲ ಪೀಡಿತ ನೆರೆಹೊರೆಯ ಹಳ್ಳಿಯ ಜನರಿಗೆ ನೌಕರಿ ದೊರಕಿಸುವ ನಿಟ್ಟಿನ ಸಲುವಾಗಿ ಮಾಡಿದ್ದು, ಎಂದರೆ ಯಾರ್ಗಾದರೂ ಆಶ್ಚರ್ಯವಾಗಬಹುದೇನೊ ! ರಾಜಕುಮಾರ್ ಕರೀಮ್ ಏಲ್ ಹುಸ್ಸೆನಿ ಆಗಾಖಾನ್, ಈ ಅರಮನೆಯನ್ನು ೧೯೬೯ ರಲ್ಲಿ ಭಾರತ ಸರ್ಕಾರಕ್ಕೆ ದಾನವಾಗಿ ಕೊಟ್ಟರು, ಅವರಿಗೆ ಮಹಾತ್ಮ ಗಾಂಧಿಯವರ ಜೀವಶೈಲಿ, ಮತ್ತು ನುಡಿದಂತೆ ನಡೆಯುವ ಅವರ ಪ್ರಭಾವೀ ಗುಣಗಳು, ಮತ್ತು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ಮುಂದಾಳತ್ವವನ್ನು ತೆಗೆದುಕೊಂಡು ಸಾಧಿಸಿದ ಎಂದೆಂದಿಗೂ ಮರೆಯಲಾರದ ನಮ್ಮ ದೇಶದ ಸ್ವಾತಂತ್ರ್ಯದ ಮಹಾನ್ ಕೊಡುಗೆ !
ಆಗಾ ಖಾನ್ ಪ್ಯಾಲೆಸ್ ಪುಣೆಯ ಉಪನಗರ, ’ಕಲ್ಯಾಣಿನಗರ ’ ದಲ್ಲಿದೆ. ಅದು ’ಮಹಾತ್ಮಾ ಗಾಂಧಿಮೆಮೋರಿಯಲ್” ಎಂದೂ ಹೆಸರಾಗಿದೆ. ಕಾರಣ ೧೯೪೦ ರಲ್ಲಿ ಬಾಪೂಜಿಯವರನ್ನು ಇಲ್ಲಿ ಗೃಹಬಂಧನದಲ್ಲಿ ಇರಿಸಲಾಗಿತ್ತು. ಅವರ ಪ್ರೀತಿಯ ಪತ್ನಿ ಕಸ್ತೂರ್ ಬಾ ರವರು, ಮತ್ತು ಗಾಂಧಿಯವರ ಆಪ್ತ ಸಹಾಯ ಕಾರ್ಯದರ್ಶಿಯಾಗಿ ಅವಿರತವಾಗಿ ದುಡಿದ ’ಮಹಾದೇವ್ ದೇಸಾಯ್ ’ ರವರೂ ಇಲ್ಲೇ ತಮ್ಮ ಕೊನೆಯುಸಿರೆಳೆದರು. ಸುಪ್ರಸಿದ್ಧ ವಾಸ್ತುಶಿಲ್ಪಿ, ಚಾರ್ಲ್ಸ್ ಕೊರಿಯ ರವರು ಈ ಇಬ್ಬರು ಮಹಾಚೇತನಗಳ ಸಮಾಧಿಯ ವಿನ್ಯಾಸವನ್ನು ಮಹಲ್ ನ ಪ್ರಾಂಗಣದಲ್ಲೇ ಮಾಡಿದ್ದಾರೆ. ಮಹಲ್ಲಿನ ಒಳಗೆ ಒಂದು ಸುವ್ಯವಸ್ಥಿತವಾದ ವಸ್ತುಸಂಗ್ರಹಾಲಯವಿದೆ.
ಇಲ್ಲಿ ಮಹಾತ್ಮಾ ಗಾಂಧಿಯವರು ಬಳಸುತ್ತಿದ್ದ ದಿನಬಳಕೆಯ ವಸ್ತುಗಳು ಮತ್ತು ಅವರ ಸಹಚರರ ಬಗ್ಗೆ ಮಾಹಿತಿಯನ್ನು ದಾಖಲುಮಾಡಲಾಗಿದೆ. ಪಾತ್ರೆಗಳು, ಬಟ್ಟೆ ಬರೆಗಳು, ಹಾಕಿಕೊಳ್ಳುತ್ತಿದ್ದ ಪಾದರಕ್ಷೆಗಳು[ಚಪ್ಪಲಿಗಳು], ಇತ್ಯಾದಿಗಳು; ಪ್ರೀತಿಯ ಪತ್ನಿ ಬಾರವರ ಮರಣದಿಂದ ದಿಕ್ಕುಗೆಟ್ಟ ಬಾಪೂಜಿಯವರಿಗೆ, ಮತ್ತೊಂದು ಆಘಾತವೆಂದರೆ, ಅವರ ಆಪ್ತ ಕಾರ್ಯದರ್ಶಿ ಮಹಾದೇವ್ ದೇಸಾಯ್ ರವರ ಮರಣ. ತಮ್ಮ ಸಂತಾಪ ಸೂಚಕ ಪತ್ರವೂ ಸೇರಿದಂತೆ, ಸ್ವಲ್ಪ ಅವರ ಅಸ್ತಿಯ ಬೂದಿಯ ಕರಂಡವನ್ನೂ ಇರಿಸಲಾಗಿದೆ.
ರಿಚರ್ಡ್ ಅಟೆನ್ ಬರೊ ರವರು ನಿರ್ಮಿಸಿದ ಗಾಂಧಿ ಚಿತ್ರದ ಹಲವು ಪ್ರಮುಖ ಸನ್ನಿವೇಶಗಳನ್ನು ಇದೇ ಮಹಲ್ ನಲ್ಲಿ ಚಿತ್ರೀಕರಿಸಲಾಗಿತ್ತು. ೧೯೮೦ ರಿಂದ ವಸ್ತುಸಂಗ್ರಹಾಲಯ ಮತ್ತು ಸಮಾಧಿಯ ಜವಾಬ್ದಾರಿಯನ್ನು ಗಾಂಧಿ ಸ್ಮಾರಕ ನಿಧಿ ಸಮಾಜದವರು ವಹಿಸಿಕೊಂಡಿದ್ದಾರೆ. ಸಮಯ ಸಮಯದಲ್ಲಿ ಈ ಪ್ಯಾಲೆಸ್ ನ ಪ್ರಾಂಗಣದಲ್ಲಿ ಮಹಾತ್ಮ ಗಾಂಧಿಯವರ ನುಡಿ-ನಡೆಗಳನ್ನು ಬಿಂಬಿಸುವ, ಅನೇಕ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡ ಚರಿತ್ರೆಯಲ್ಲಿ ದಾಖಲಿಸಲು ಯೋಗ್ಯವಾದ ವೈಚಾರಿಕ ದೃಷ್ಟಿಕೋನದ ವಸ್ತುಪ್ರದರ್ಶನಗಳು ನಡೆಯುತ್ತಲೇ ಇರುತ್ತವೆ.
ಕಸ್ತುರ್ ಬಾ ರವರ ಜೀವನ ಪ್ರಭೆ :
'ಬಾ ' ಎಂದು ಎಲ್ಲರೂ ಗೌರವಾದರಗಳಿಂದ ಸಂಬೋಧಿಸುತ್ತಿದ್ದ ಕಸ್ತುರ್ ಬಾರವರು ಪ್ರೀತಿ ಆದರ್ಶ, ತ್ಯಾಗ ಮತ್ತು ಅನುಕಂಪದ ಅನ್ವರ್ಥನಾಮರು. ಭಾರತದ ಆದರ್ಶದಂಪತಿಗಳ ಸಾಲಿನಲ್ಲಿ ಗಾಂಧೀಜಿ ಮತ್ತು ಬಾರವರ ಸುಮಾರು ೬೨ ವರ್ಷಗಳ ದಾಂಪತ್ಯ ಜೀವನ, ಪ್ರಾಜ್ವಲ್ಯಮಾನವಾಗಿ ಶೋಭಿಸುತ್ತದೆ. ದೇಶಕ್ಕಾಗಿ ಮಾಡಿದ ಅಮೋಘ ಸೇವೆ ತ್ಯಾಗ, ಬಲಿದಾನಗಳಿಗೆ ಗಾಂಧಿಯವರಂತೆ ಬಾರವರ ಕೊಡುಗೆಯೂ ಅಮೂಲ್ಯ ಮತ್ತು ಚರಿತ್ರೆಯಲ್ಲಿ ದಾಖಲಿಸಲು ಯೋಗ್ಯವಾದದ್ದು.
ಕಸ್ತುರ್ ಬಾ, ಗುಜರಾತಿನ ಪೋರ್ಬಂದರ್ ಊರಿನ ಜವಳಿ ವ್ಯಾಪಾರಿ ಶ್ರೀ. ಗೋಕುಲ್ ದಾಸ್ ಮಖಂಜಿಯವರ ಪ್ರೀತಿಯ ಪುತ್ರಿಯಾಗಿ ಜನಿಸಿದ್ದು, ಏಪ್ರಿಲ್, ೧೧, ೧೮೬೯ ನಲ್ಲಿ. ಅವರು ಮೋಹನದಾಸ್ ಗಾಂಧಿಯವರನ್ನು ವಿವಾಹವಾದದ್ದು, ತಮ್ಮ ೧೩ ನೆಯ ವಯಸ್ಸಿನಲ್ಲಿ, ಅಂದರೆ, ೧೮೮೨ ರಲ್ಲಿ, ಆಗ ಗಾಂಧಿಯವರ ವಯಸ್ಸೂ ಅಷ್ಟೇ ಇತ್ತು. ಬಹುಶಃ ಬಾ ಗಿಂತ ಅವರು, ೫ ತಿಂಗಳು ಚಿಕ್ಕವರು. ಆಗಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸವೇಕೆ ಮನೆಕೆಲಸಗಳನ್ನು ನಿಭಾಯಿಸಿಕೊಂಡು ಹೋದರೆ ಸಾಕಲ್ಲವೇ ಎನ್ನುವ ಮನೋಭಾವ ತುಂಬಿತ್ತು. ಅದರಂತೆ, ಮಾತೃಭಾಷೆ ಗುಜರಾತಿ ಬಿಟ್ಟು ಅವರಿಗೆ ಬೇರೆ ಯಾವಭಾಷೆಯ ಪರಿಚಯವೂ ಇರಲಿಲ್ಲ.
ಮದುವೆಯ ಬಳಿಕ, ಗಾಂಧಿಯವರು, ಬಾರವರಿಗೆ ಇಂಗ್ಲೀಷ್ ಭಾಷೆ ಮತ್ತು ಕೆಲವು ಅದಕ್ಕೆ ಸಂಬಂಧಿಸಿದ ನಡವಳಿಕೆಗಳನ್ನು ಕಲಿಸಿಕೊಟ್ಟರು. ಬ್ಯಾರಿಸ್ಟರ್ ಆಗಿ ೧೮೯೭ ನಲ್ಲಿ, ದಕ್ಷಿಣ ಆಫ್ರಿಕದ, ಡರ್ಬನ್ ನಗರದಲ್ಲಿ ಸುಮಾರು ೧೯ ವರ್ಷ ವಾಸ್ತ್ಯವ್ಯ ಹೂಡಿದ್ದರಿಂದ, ಬಾರವರಿಗೂ ಇವೆಲ್ಲಾ ಅನಿವಾರ್ಯವಾಗಿತ್ತು. ಗಾಂಧಿದಂಪತಿಗಳಿಗೆ ೪ ಜನ ಗಂಡುಮಕ್ಕಳು, ಇದಕ್ಕೆ ಮೊದಲು, ಚೊಚ್ಚಲ ಗಂಡು ಕೂಸೊಂದು ಜನಿಸಿ, ಕೆಲವೇ ತಿಂಗಳಲ್ಲಿ ಮೃತವಾಗಿತ್ತು.
೧೯೦೪ ರಲ್ಲಿ ದಕ್ಷಿಣ ಆಫ್ರಿಕದ ಡರ್ಬನ್ ನಗರದ ರೈಲ್ವೆ ಸ್ಟೇಶನ್ ಬಳಿಯ ಜಮೀನು ಖರೀದಿಸಿ, ಅಲ್ಲೊಂದು ಆಶ್ರಮವನ್ನು ಸ್ಥಾಪಿಸಲಾಯಿತು. ಅದರಲ್ಲಿ ಬಾರವರ ಪಾತ್ರ ವಿಶೇಷವಾಗಿತ್ತು. ಆ ಸಮಯದಲ್ಲೇ ಅಲ್ಲಿನ ಭಾರತೀಯರನ್ನು ಹೀನಾಯವಾಗಿ ಪರಿಗಣಿಸುವ ವಿರುದ್ಧ ಬಾ ಕಿಡಿಕಾರಿ, ತಾವೂ ಸತ್ಯಾಗ್ರಹಕ್ಕೆ ಪತಿಯ ಜೊತೆ ಜೊತೆಗೂಡಿದಾಗ, ಅವರು ೩ ತಿಂಗಳ ಕಾಲ ಜೈಲುವಾಸ ಅನುಭವಿಸಬೇಕಾಯಿತು.
ಹೀಗೆ ಬ್ರಿಟಿಷ್ ಸರ್ಕಾರದ ನೀತಿಯನ್ನು ಖಂಡಿಸುತ್ತಾ ಸತ್ಯಾಗ್ರಹವನ್ನು ಮುಂದುವರೆಸುತ್ತಾ ಭಾರತಕ್ಕೆ ವಾಪಸ್ ಬಂದದ್ದು ೧೯೧೫ ರಲ್ಲಿ. ೧೯೪೦ ರಲ್ಲಿ ಭಾರತದಲ್ಲೂ ಸತಿಪತಿಗಳಿಬ್ಬರೂ ಸ್ವಾತಂತ್ರ್ಯದ ಆಂದೋಳನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಹಾಗಾಗಿ ಗಾಂಧಿಪರಿವಾರವನ್ನು ಪುಣೆಯ ಆಗಾಖಾನ್ ಪ್ಯಾಲೆಸ್ ನಲ್ಲಿ ಗೃಹಬಂದಿಯಾಗಿ ಸುಮಾರು ೨ ವರ್ಷ ಇರಿಸಲಾಗಿತ್ತು. ಇಲ್ಲಿ ಬಾರವರ ದೇಹಸ್ಥಿತಿ ತೀರ ಹದಗೆಟ್ಟಿತು. ಮೊದಲಿನಿಂದಲೂ ಅವರು ಅಸ್ತಮಾ ಮತ್ತು, ಸ್ವಾಶಕೋಶದ ತೊಂದರೆಯಿಂದ ತುಂಬಾಸೋತಿದ್ದರು.
ಮನೆಯ ಹದಗೆಟ್ಟ ವಾತಾವರಣ, ಮಾನಸಿಕ ಅಶಾಂತಿ, ಮಕ್ಕಳ ಯೋಗಕ್ಶೇಮ ವಿದ್ಯಾಭ್ಯಾಸದ ಕಡೆ ಗಮನಕೊಡದ್ದಕ್ಕೆ ಕೀಳರಿಮೆ, ಹರಿಲಾಲ್ ಮತ್ತು ಗಾಂಧಿಯವರ ಮಧ್ಯೆ ವೈಮನಸ್ಯಗಳು, ದೇಶದ ಅರಾಜಕತೆ, ಬ್ರಿಟಿಷ್ ಸರ್ಕಾರದ ದಬ್ಬಾಳಿಕೆ, ಕ್ರೌರ್ಯ, ಇತ್ಯಾದಿ ಇತ್ಯಾದಿ ಅವರ ಮನಸ್ಸಿನಲ್ಲೆಲ್ಲಾ ಮನೆಮಾಡಿಕೊಂಡು ಅವರ ತ್ಯಾಗ ಯಮ-ಸ್ತೈರ್ಯ ಜೀವನಕ್ಕೆ ಸವಾಲಾಗಿದ್ದವು.
ಎಲ್ಲವನ್ನೂ ಅತ್ಯಂತ ಸಮರ್ಥವಾಗಿ ಎದುರಿಸುತ್ತಾ, ಪತಿಯವರ ಆದರ್ಶಗಳಿಗೆ ಸ್ಪಂದಿಸುತ್ತಾ, ೧೯೪೪ ರ, ಫೆಬ್ರವರಿ, ೨೨ ರಂದು ಬಾರವರು, ತಮ್ಮ ಆದರ್ಶಪತಿ ಮಹಾತ್ಮಾ ಗಾಂಧಿಯವರ ತೊಡೆಯಮೇಲೆ ಮಲಗಿ ತಮ್ಮ ಕೊನೆಯುಸಿರೆಳೆದರು. ಅಂತಹ ಮಹಾಚೇತನವನ್ನು ಕಳೆದುಕೊಂಡ ಭಾರತದ ಜನತೆ ಮಮ್ಮಲ ಮರುಗಿತು. ಗಾಂಧಿಯವರಂತೂ ಕೆಲಕಾಲ ದಿಕ್ಕಿಗೆಟ್ಟು ಹುಚ್ಚರಂತಾಗಿದ್ದರು. ಸುಮಾರು ೬ ದಶಕಗಳ ಕಾಲ ಬಾರವರ ಪ್ರೀತಿಯ ಒಡನಾಟದಿಂದ ಸದೃಢರಾಗಿದ್ದ ಅವರು ಒಮ್ಮೆಲೇ ತಬ್ಬಲಿಯಾದಂತೆ ವ್ಯಥೆಪಟ್ಟರು. ಅದೇ ಆಘಾಖಾನ್ ಅರಮನೆಯ ಪ್ರಾಂಗಣದಲ್ಲಿ ಬಾರವರ ಸ್ಮಾರಕ ವೃಂದಾವನವನ್ನು ನಿರ್ಮಿಸಲಾಯಿತು.
ಗಾಂಧಿಪರಿವಾರದ ನೆರಳಿನಂತೆ ಹಿಂಬಾಲಿಸುತ್ತಾ ಯಾವಾಗಲೂ ನೆರವಾಗಿದ್ದ ಮಹದೇವ್ ದೇಸಾಯಿಯವರೂ ಆಗಾಖಾನ್ ಪ್ಯಾಲೆಸ್ ನಲ್ಲೇ ಕೆಲವು ಸಮಯದ ಹಿಂದೆ, ೧೯೪೨ ರ, ಆಗಸ್ಟ್, ೧೫ ರಂದು, ಮರಣಿಸಿದ್ದರು. ಅವರ ಸಮಾಧಿ, ಸ್ಮಾರಕವನ್ನೂ ಬಾರವರ ಪಕ್ಕದಲ್ಲೇ ನಿರ್ಮಿಸಲಾಗಿದೆ. ಗಾಂಧಿಯವರು ಮುಂದೆ ಕೊಲೆಮಾಡಲ್ಪಟ್ಟ ನಂತರ ಅವರ ಅಸ್ತಿಯನ್ನು ತಂದು ಕಸ್ತುರ್ ಬಾ ಮತ್ತು ಮಹದೇವ್ ದೇಸಾಯಿಯವರ ಸ್ಮಾರಕದ ಬದಿಯಲ್ಲೇ, ಒಂದು ಸ್ಮಾರಕ ಬೃಂದಾವನವನ್ನು ನಿರ್ಮಿಸಿದ್ದಾರೆ.
ಇವೆಲ್ಲಾ ಚಾರಿತ್ರ್ಯಿಕ ದಾಖಲೆಗಳನ್ನು ವೀಕ್ಷಿಸಿದಾಗ ನಮ್ಮ ತನುಮನಗಳು, ಗಡಿಯಾರದ ಮುಳ್ಳಿನಂತೆ ಮಿಡಿಯುತ್ತವೆ. ಒಂದು ತರಹದ ಕರುಳಿನ ವೇದನೆ, ನಮ್ಮದೇಹವನ್ನೆಲ್ಲಾ ಅವರಿಸುತ್ತದೆ. ನಮಗರಿವಿಲ್ಲದಂತೆ ಆ ಮಹಾನ್ ಆತ್ಮಗಳಿಗೆ ವಂದನೆಸಲ್ಲಿಸಲು ನಮ್ಮ ಶಿರಗಳು ಬಾಗುತ್ತವೆ, ಕಣ್ಣೀರು ಹನಿಹನಿಯಾಗಿ ಹೊರಬರುತ್ತದೆ !