ಕನ್ನಡಸಾಹಿತ್ಯಡಾಟ್‌ಕಾಂ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಲಿದೆ
ನಮ್ಮ ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ವ್ಯಾಪ್ತಿಯಲ್ಲಿನ ಪರಿಣತಿ, ವಾಣಿಜ್ಯ, ಸೇವೆಯ ಕ್ಷೇತ್ರಗಳಲ್ಲಿ - ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನ ನಕಾಶೆಯಲ್ಲಿ ಹೆಗ್ಗುರುತನ್ನು ಮೂಡಿಸಿರುವ ವಿಷಯ, ನಮಗೆಲ್ಲ ಹೆಮ್ಮೆಯ ವಿಷಯ. ಇದಕ್ಕೆ ರಾಜ್ಯ ಸರ್ಕಾರದ ನೀತಿ-ನಿಯಮಾವಳಿಗಳೂ ಕಾರಣವೆನ್ನುವುದನ್ನು ನಾವೆಲ್ಲ ನಂಬಿದ್ದೇವೆ. ಆದರೆ, ಕನ್ನಡ ಅಥವ ಸ್ಥಳೀಯ ದೇಸಗತಿಗೆ ತಕ್ಕಂತೆ ಕಂಪ್ಯೂಟರ್ ಪರಿಸರ ನಿರ್ಮಾಣವಾಗದೆ, "ಕೇವಲ ಇಂಗ್ಲಿಷ್ ಪರಿಸರ" ಮಾತ್ರ ಸೃಷ್ಟಿಯಾಗಿ ಹೋಗಿರುವ ವಾತಾವರಣ ಆತಂಕಕಾರಿಯೂ ಆಗಿದೆ ಎನ್ನುವುದರಲ್ಲಿಯೂ ಸಂಶಯವಿಲ್ಲ. ಮಕ್ಕಳನ್ನು ಕೇಳಿದರೆ: "ವರ್ಡ್, ಎಕ್ಸೆಲ್, ಪೈಂಟ್ ಇತ್ಯಾದಿ ಬರುತ್ತದೆ.." ಎಂದೆನ್ನುತ್ತಾರೆ. "ಕನ್ನಡವನ್ನು ಕಂಪ್ಯೂಟರ್‌ನಲ್ಲಿ ನೋಡಿದ್ದೀರ?" - ಎಂದು ಪ್ರಶ್ನಿಸಿದಾಗ ಪೆಚ್ಚು ಮುಖಗಳನ್ನು ಹಾಕಿಕೊಂಡು ನಿಲ್ಲುತ್ತಾರೆ. ಈ ದಿಸೆಯಲ್ಲಿ ಕನ್ನಡಸಾಹಿತ್ಯಡಾಟ್‌ಕಾಂ ತನ್ನ ಬೆಂಬಲಿಗರ ಬಳಗಗಳೊಡಗೂಡಿ ಸರ್ಕಾರ ಮತ್ತು ಸಂಬಂಧಿಸಿದವರಿಗೆ ಮನವಿಯೊಂದನ್ನು ಸಲ್ಲಿಸಲಿದ್ದು ಬೇಡಿಕೆಗಳು ಕೆಳಕಂಡಂತಿವೆ...
- ಕಂಪ್ಯೂಟರ್ ಕಲಿಸುವ ಎಲ್ಲ (ಇಂಗ್ಲಿಷ್ ಮಾಧ್ಯಮವೂ ಸೇರಿದಂತೆ) ಪ್ರಾಥಮಿಕ ಹಾಗು ಪ್ರೌಢ ಶಾಲೆ ಹಾಗು ಕಾಲೇಜುಗಳಲ್ಲಿರುವ ಕಂಪ್ಯೂಟರ್‌ಗಳಲ್ಲಿ ಕನ್ನಡ/ಪ್ರಾಂತೀಯ/ರಾಜ್ಯ ಭಾಷೆಗಳ ತಂತ್ರಾಂಶಗಳನ್ನು ಅನುಸ್ಥಾಪಿಸುವುದನ್ನು ಖಡ್ಡಾಯ ಮಾಡಿ ಆದೇಶಿಸಬೇಕು.
- ತಿಂಗಳಿಗೆ ಒಂದು ಗಂಟೆ ಕಾಲವನ್ನು ವಿದ್ಯಾರ್ಥಿಗಳಿಗೆ - ಅನುಸ್ಥಾಪಿಸಿದ ತಂತ್ರಾಂಶದ ಸಾಧ್ಯತೆಯನ್ನು ತೋರಿಸಿಕೊಡುವಂತೆ ಪಾಠ ಮಾಡಬೇಕು.
- ಇದು ಮುಂದಿನ ವರ್ಷವೇ ಜಾರಿಗೊಳಿಸುವಂತೆ ಆದೇಶವಿರಬೇಕು.
- ಪಠ್ಯಕ್ರಮವನ್ನು ರಚಿಸಲು ತಜ್ಞರ ಸಮಿತಿಯೊಂದನ್ನು ಕೂಡಲೆ ರಚಿಸಬೇಕು.
- ಕರ್ನಾಟಕದ ಎಲ್ಲ ಸೈಬರ್ ಕೆಫೆಗಳಲ್ಲಿ `ಬರಹ' ಹಾಗು 'ನುಡಿ' ಕನ್ನಡ ತಂತ್ರಾಂಶಗಳನ್ನು ಸ್ಥಾಪಿಸುವುದನ್ನು ಖಡ್ಡಾಯವಾಗಿಸಬೇಕು..
- ಕರ್ನಾಟಕದಲ್ಲಿ ಮಾರಾಟವಾಗುವ ಯಾವುದೇ ಕಂಪ್ಯೂಟರ್‌ನಲ್ಲಾಗಲಿ ಅದು ಬಳಕೆದಾರನಿಗೆ ತಲುಪುವ ಮುನ್ನ `ಬರಹ', `ನುಡಿ' ಅಥವ ಉಚಿತವಾಗಿ ಲಭ್ಯವಿರುವ ಸ್ಥಳೀಯ ಭಾಷೆಗಳ ಯಾವುದೇ ತಂತ್ರಾಂಶಗಳಿದ್ದರೂ ಅವುಗಳನ್ನು ಸ್ಥಾಪಿಸಿರಬೇಕು.
ಮೇಲಿನ ಬೇಡಿಕೆಗಳಿಗೆ ಎಲ್ಲರ ಬೆಂಬಲವನ್ನು ಕೋರುತ್ತಿದ್ದೇವೆ.
ಮನವಿ ಪತ್ರವನ್ನು ಮುದ್ರಿಸಿಕೊಳ್ಳಲು ಅನುಕೂಲವಾಗುವಂತೆ ಪಿಡಿಎಫ್ ಫೈಲನ್ನು, ಇಲ್ಲಿ ಅಪ್‌ಲೋಡ್ ಮಾಡಲಾಗಿದೆ.
"ಕನ್ನಡಸಾಹಿತ್ಯ.ಕಾಂ" ಸಲ್ಲಿಸಲಿರುವ ಮನವಿಯನ್ನು ಪ್ರಿಂಟ್‌ಔಟ್ ಮಾಡಿಕೊಂಡು ನಿಮ್ಮ ಸ್ನೇಹಿತರು, ಬಂಧು ಬಳಗದವರು, ಸಹೊದ್ಯೋಗಿಗಳ ಸಹಿ ಮಾಡಿಸಿ ಮೇಲೆ ತಲೆಬರಹದ ಲಿಂಕ್‌ನಲ್ಲಿರುವ ವಿಳಾಸಕ್ಕೆ ಕಳುಹಿಸಬೇಕಾಗಿ ಮನವಿ. ದಿನಾಂಕ ೩೦-೧೧-೨೦೦೬ರಂದು ಈ ಮನವಿಯನ್ನು ಸಲ್ಲಿಸಲು ಉದ್ದೇಶಿಸಲಾಗಿದೆ. ಆದುದರಿಂದ ಸಾಧ್ಯವಿದ್ದಷ್ಟು ಬೇಗ ಕಳುಹಿಸಿಕೊಡಿ. ನೀವು ಅಂಚೆ/ಕೊರಿಯರ್ ಮಾಡಿ ಮಾಹಿತಿ ನೀಡಿದರೆ ನವೆಂಬರ್ ೩೦ ದಾಟಿದರೂ ಕಾಯಬಹುದು. ಬೆಂಗಳೂರು ಹಾಗು ಸುತ್ತಮುತ್ತಲಿನವರು ಒಂದು ದಿನ ಸಭೆ ಸೇರಿ ಸಹಿಸಂಗ್ರಹ ಸಪ್ತಾಹದಲ್ಲಿ ಸಹಿಯಾದ ಮನವಿ ಪತ್ರಗಳನ್ನೆಲ್ಲ ಸೇರಿಸಿ, ಆಯೋಗವೊಂದನ್ನು ರಚಿಸಿ, ಆಯೋಗದ ಮೂಲಕ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಮನವಿ ಸಲ್ಲಿಸಿದನಂತರ ಮಾಧ್ಯಮಗಳಿಗೆ/ಪತ್ರಿಕೆಗಳಿಗೆ ಇದರ ಸಾರಾಂಶವನ್ನು ಬಿಡುಗಡೆ ಮಾಡಲಾಗುವುದು. ಸಹಿಮಾಡುವವರು, ದಯವಿಟ್ಟು ಸಾಧ್ಯವಾದಷ್ಟು ವಿವರಗಳನ್ನು ನೀಡಬೇಕಾಗಿ ಮನವಿ. ಸಹಿಗಾಗಿ, ಹೆಚ್ಚುಪುಟ(ಮನವಿ ಪತ್ರದ ನಮೂನೆ ಮತ್ತು ಸಂಪರ್ಕ ವಿಳಾಸ ಮೇಲೆ ಕೊಟ್ಟಿರುವ ಪಿಡಿಎಫ್ ಲಿಂಕ್‌ನಲ್ಲಿದೆ)ಗಳನ್ನು ಮುದ್ರಿಸಿಕೊಂಡಿದ್ದರೆ ಒಳ್ಳೆಯದು. ನಿಮ್ಮ ವಲಯದ ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಹಿ ಸಾಧ್ಯವಿದ್ದರೆ ಸಂಗ್ರಹಿಸಿ.
ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗ
Comments
ಸರ್ಕಾರಕ್ಕೆ ಕನ್ನಡ ಸಾಹಿತ್ಯ ಡಾ.ಕಾಂ ಮನವಿ !