ಜರ್ಮನಿಯಲ್ಲಿ, ಅಮೆರಿಕದಲ್ಲಿ,.....ಬಿಜಾಪುರದಲ್ಲಿ ಮಂಜು

ಜರ್ಮನಿಯಲ್ಲಿ, ಅಮೆರಿಕದಲ್ಲಿ,.....ಬಿಜಾಪುರದಲ್ಲಿ ಮಂಜು

ಬರಹ

  ಜರ್ಮನಿಯಲ್ಲಿರುವ ಹಿರಿಯ ವಿದ್ವಾಂಸ ಬಿ.ಎ. ವಿವೇಕ ರೈ ಅವರು ಅಲ್ಲಿ ತಾವು ತಮ್ಮ ಕಿಟಕಿಯಿಂದ ಕಂಡ ಮಂಜಿನ ಚಿತ್ತಾರಗಳ ಮನೋಹರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ತಮ್ಮ ಬ್ಲಾಗ್ ಮೂಲಕ ನಮಗೆ ತಲುಪಿಸಿದ್ದಾರೆ.
  ನನ್ನ ತಂಗಿಯ ಮಗಳು ಸಂಧ್ಯಾ ಮತ್ತು ಅಳಿಯ ಶ್ರೀವತ್ಸ ನಾಡಿಗೇರ ಇವರು ಅಮೆರಿಕೆಯಲ್ಲಿ ತಮ್ಮ ನಿವಾಸದ ಹೊರಗೆ ಮಂಜಿನ ರಾಶಿಯನ್ನು ಸಲಿಕೆಯಿಂದ ತಾವು ಎತ್ತೆತ್ತಿ ಒಗೆಯುತ್ತಿದ್ದ ಸಾಹಸಕಾರ್ಯದ ಫೋಟೊಗಳನ್ನು ಮಿಂಚಂಚೆಯಲ್ಲಿ ನನಗೆ ಕಳಿಸಿದ್ದಾರೆ.
  ಜರ್ಮನಿ ಮತ್ತು ಅಮೆರಿಕದ ಬಯಲುಗಳಲ್ಲಿನ ಆ ಮಂಜಿನ ಮಂಜುಲ ಮಂಜೂಷಗಳನ್ನು ಕಂಡಾಗ ನನಗೆ ಬಹು ಹಿಂದೆ ನಾನು ಬರೆದಿದ್ದ ’ಬಿಜಾಪುರದಲ್ಲಿ ಮಂಜು’ ಎಂಬ ಕವನದ ನೆನಪಾಯಿತು.
  ಹೌದು; ಬಿಜಾಪುರದಲ್ಲೂ ಚಳಿಗಾಲದಲ್ಲಿ ಕೆಲವು ದಿನ ಮಂಜು ಮುಸುಕುತ್ತದೆ! ಅಲ್ಲಿ ವಾಸವಿದ್ದ ನಾನು ಕಣ್ಣಾರೆ ಕಂಡ ಆ ಮಂಜಿನ ’ಮಹಾತ್ಮೆ’ಯನ್ನು ಕವನದಲ್ಲಿ ಹಿಡಿದಿಡುವ ಯತ್ನ ಮಾಡಿದ್ದೇನೆ. ಬಿಜಾಪುರದಲ್ಲಿ ನಾನು ಕಂಡ ಆ ಮಂಜಿನಮೇಲೆ ನೀವೂ ಒಮ್ಮೆ ಕಣ್ಣುಹಾಯಿಸಿ.

ಬಿಜಾಪುರದಲ್ಲಿ ಮಂಜು

ಮಡಿಕೇರೀಲಿ ಮಂಜು ವಿಶೇಷವೇನಲ್ಲ
ಬಿಜಾಪುರದಲ್ಲಿ ಮಂಜು ಭಾರೀ ವಿಶೇಷ
ಅದಿಲ್‌ಶಾಹಿ ಇಮಾರತ್‌ಗಳಿಗೆಲ್ಲ ಬಿಳೀ ಘೋಷಾ!
ಗಾಂಧೀಚೌಕ ಮಂಜುಮಂಜು; ತಾತನ
ಧೋತ್ರಾನೂ ಮಂಜು, ಚಾಳೀಸೂ ಮಂಜು.
ಬಸವೇಶ್ವರಚೌಕದ ಬಸವಣ್ಣ
ಕಾಣಲೇವಲ್ಲ!
ಎತ್ತ ಹೊತಗೊಂಡುಹೋತೋ ಕುದರಿ
ಯಾಂ ಬಲ್ಲ?

ಅತಾತ ನಡದ್ಹಾಂಗ ಗೋಲ್‌ಗುಂಬಜ್ಜು
ಕಾಣಿಸಬೇಕಿತ್ತಲ್ಲ! ’ಎಲ್ಲೋತೋ ಮುತ್ಯಾ?!’
’ಸನೇವು ಓಗಿ ನೋಡೋ ತಮ್ಮಾ,
ಮಂಜು ಮುಸುಕೇತಿ
ದೂರದಿಂದ ಏನು ಕಂಡಾತು ಸತ್ಯ?’
* * *
ಊರುಬಿಟ್ಟು ಹಾಗೇ
ಹೊರಗೆ ನಡೆದಹಾಗೆ
ಮೊದಲೇ ಬೋಳು ಬಯಲು
ಈಗ ಪೂರಾ ಮುಗಿಲು
ಎಲ್ಲದಾನಪಾ ಸೂರ್ಯ?
ತಲಾಷ್ ಮಾಡೂದೇ ಇವತ್ತಿನ
ಮುಂಜಾನಿ ಕಾರ್ಯ.

’ಮುಂಜಾನಲ್ಲೋ ತಮ್ಮಾ, ಗಂಟಿ ಎಂಟಾತು.’
’ಹೌದೇನ್ರಿ? ಎಂಟಾತೇನ್ರಿ? ಮತ್ತ... ಗೌಡ ಇನ್ನೂ
ಹಾಸಿಗಿ ಬಿಟ್ಟು ಏಳವಲ್ಲ ನೋಡ್ರಿ!’
’ಏನು ಮಾಡಾದು, ಮಂಜಿನ ಮಾತ್ಮೆ!
ಲೈಟುಕಂಬದ ಮ್ಯಾಗ ಶಟಗೊಂಡು ಕುಂತ
ಗಿಣಿ ಸುದ್ದ ಅಳ್ಳಾಡ್ವಲ್ದು!
ಗಿಣಿ ಬಾಯಾಗ ಹೊಗಿ
ಮುಕಳ್ಯಾಗ ಹೊಗಿ
ರಸ್ತೀಮ್ಯಾಗ ಹೊಗಿ
ಬೆಳದುನಿಂತ ಹೊಲದಮ್ಯಾಗ ಹೊಗಿ
ಹಿಂಗಾದ್ರ ಬೆಳಿ ಕೈಗ್ಹತ್ತ್ವಲ್ದು ತೆಗಿ
ಆ ಮಂಜಿನ ಮುಖ್ಖ್‌ಕಿಸ್ಟು ಕ್ಯಾಕರ್ಸಿ ಉಗಿ!’
* * *
ಮಡಿಕೇರೀಲಿ ಮಂಜು ವಿಶೇಷವೇನಲ್ಲ
ಬಿಜಾಪುರದಲ್ಲಿ ಮಂಜು ಭಾರೀ ವಿಶೇಷ
ಸುರೇಪಾನ, ತೊಗರಿ, ದಾಳಿಂಬ್ರ, ದ್ರಾಕ್ಷಿ,....
ನಿಃಶೇಷ!

(ಯಾಂ=ಯಾವನು/ಯಾರು; ಅತಾತ=ಅತ್ತತ್ತ; ಮುತ್ಯಾ=ಮುದುಕ/ಅಜ್ಜ; ಸನೇವು=ಸನಿಹ; ಸುರೇಪಾನ=ಸೂರ್ಯಕಾಂತಿ)