ನಮ್ಮ ಬೆಂಗಳೂರು ಅಥವ ಅವರ್ ಬ್ಯಾಂಗ್ಳೂರ್

ನಮ್ಮ ಬೆಂಗಳೂರು ಅಥವ ಅವರ್ ಬ್ಯಾಂಗ್ಳೂರ್

ಮಾನ್ಯರೆ,

ಸುವರ್ಣ ಕರ್ನಾಟಕದ ಶುಭ ಸಂಧರ್ಭದಲ್ಲಿ, ಘನತೆವೆತ್ತ ಕರ್ನಾಟಕ ಸರ್ಕಾರ ಜ್ಞಾನಪೀಠ ಪ್ರಶಸ್ತಿ ವಿಜೇತ ಯು. ಆರ್. ಅಂನಂತಮೂರ್ತಿ ಹಾಗು ಹಲವಾರು ಕನ್ನಡಿಗರ ಆಶಯದಂತೆ ಬ್ಯಾಂಗ್ಳೂರ್ ಹಾಗು ಇತರ ನಗರಗಳ ಹೆಸರನ್ನು ಕನ್ನಡದ ಹೆಸರುಗಳಿಂದ ಮರು ನಾಮಕರಣ ಮಾಡಲು ನಿರ್ಧರಿಸಿದೆ. ಈ ವಿಷಯ ಹಲವರ ಪರ-ವಿರೋಧದಿಂದಾಗಿ, ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನ ಮೂಲ ಹೆಸರನ್ನು ಉಳಿಸಲು ಸರ್ಕಾರ ಮುಂದಾಗಿದಕ್ಕೆ ಕನ್ನಡಿಗರೂ ಸೇರಿದಂತೆ ಹಲವಾರು ಅನ್ಯಭಾಷಿಗರು ಎಷ್ಟೋ ಮಂದಿ ಇದಕ್ಕೆ ಅಪಸ್ವರ ಎತ್ತಿದ್ದಾರೆ. ಕೇವಲ ಅನ್ಯಭಾಷಿಗರು ವಿರೋದಿಸಿದರೆ ನಾವು ತಲೆಕೆಡಿಸಿಕೊಳ್ಳುವ ಅಗತ್ಯವೂ ಇರಲ್ಲಿಲ್ಲ. ಬೆಂಗಳೂರಿನ ಮರು ನಾಮಕರಣಕ್ಕೆ ವಿರೋಧಿಸುತ್ತಿರುವ ಕನ್ನಡಿಗರೆಲ್ಲರಿಗೂ ನನ್ನದೊಂದು ಕಿವಿ ಮಾತು. ಕನ್ನಡ ೨೦೦೦ ವರ್ಷಕ್ಕೂ ಹಳೆಯದಾದ ಭಾಷೆ. ದಕ್ಷಿಣ ಭಾರತದ ೨ನೇ ಹಳೆಯ ಭಾಷೆ ಅದು ನಿಮಗೂ ಗೊತ್ತು! ಅನನ್ಯ ಸಂಸ್ಕೃತಿ ವೈಭೋಗತೀತ ಇತಿಹಾಸವಿರುವ ಕನ್ನಡ ನಾಡಿನಲ್ಲಿ, ಊರುಗಳ ಹೆಸರು ಇಂಗ್ಲೀಷದ್ದಾಗಿರಬೇಕೆ? ಮರು ನಾಮಕರಣವನ್ನು ವಿರೋಧಿಸುವವರು ನೀಡುವ ಮೊದಲ ಕಾರಣ ಬೆಂಗಳೂರಿನ ರಸ್ತೆ, ನೈರ್ಮಲ್ಯ ಹೀಗೆ ಹಲವಾರು ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು. ಇವರಿಗೆ ಸಮಸ್ಯೆಗಳು ಬಗೆಹರಿಯುವುದೆಂದು ಹೇಳಿದವರು ಯಾರು? ಸರ್ಕಾರ ಆರೋಗ್ಯ, ನೈರ್ಮಲ್ಯ, ರಸ್ತೆ ಇವುಗಳ ಬಗ್ಗೆ ಆಲೋಚಿಸಬೇಕೆಂದು ಹೇಳುವ ಇವರ ಮಾತು ನಿಜ, ಹಾಗಾದರೆ ಸರ್ಕಾರ ಹಾಗು ಜನತೆ ಭಾಷೆ ಹಾಗು ಸಂಸ್ಕೃತಿಯ ಸಮಸ್ಯೆಗಳಿಗೆ ಆಲೋಚಿಸಬಾರದೆ? ನಮ್ಮ ಭಾಷೆ ಹಾಗು ಸಂಸ್ಕೃತಿಯು ಅಳಿಸುತ್ತಿರುವಾಗ ನಾವೆಲ್ಲರೂ ಕೈಕಟ್ಟಿ ಕೂರಬೇಕೇ? ಹೀಗಿರುವಾಗ ಬ್ಯಾಂಗ್ಳೂರ್ ಹಾಗು ಇತರ ನಗರಗಳ ಹೆಸರನ್ನು ಕನ್ನಡದ ಹೆಸರುಗಳಿಂದ ಮರು ನಾಮಕರಣ ಮಾಡಿದರೆ ತಪ್ಪೇನು?

ಇನ್ನೂ ಕೆಲವರ ಆಂಬೋಣವೇನೆಂದರೆ, ಮರು ನಾಮಕರಣಕ್ಕೆ ಸರ್ಕಾರಕ್ಕೆ/ಖಾಸಗಿ ಕಂಪನಿಗಳಿಗೆ ಕೋಟ್ಯಾಂತರ ರೂಪಾಯಿ ಖರ್ಚಾಗುವುದೆಂದು. ಕನ್ನಡದಲ್ಲಿ ಒಂದು ಗಾದೆ ಮಾತಿದೆ 'ಅಡ್ಡಾಡ್ಡಾಗಿ ಹೋಗುವಾಗ ಹಿಡುಗಿನ ಬರಲಿಂದೇನು?' ಎಂದು. ಸರ್ಕಾರದ ಹಲವಾರು ಯೋಜನೆಗಳಲ್ಲಿ ಸೋರಿಕೆಯಾಗುವ ಹಣದ ಸಾವಿರದ ಒಂದು ಭಾಗವು ಮರುನಾಮಕರಣಕ್ಕೆ ಖರ್ಚಾಗದು. ಇನ್ನು ಖಾಸಗಿ ಕಂಪನಿಗಳು ಇಲ್ಲಿನ ಜಲ, ನೆಲ ಹಾಗು ಜನರನ್ನು ಉಪಯೋಗಿಸಿಕೊಳ್ಳುವುದಿಲ್ಲವೆ? ಹಾಗೆಂದ ಮೇಲೆ ಕಂಪನಿಗಳಿಗೆ ಇಲ್ಲಿನ ಭಾಷೆಯನ್ನು ಬೆಂಬಲಿಸುವುದು ಅವರ ಸಾಮಾಜಿಕ ಜವಾಬ್ದಾರಿಯಾಗುವುದಿಲ್ಲವೇ? ಹಾಗಾದಲ್ಲಿ ಇದರಿಂದಾಗುವ ಖರ್ಚನ್ನು ಭರಿಸುವುದರಲ್ಲಿ ತಪ್ಪೇನು?

ಮೂರನೆಯದಾಗಿ ಬ್ಯಾಂಗ್ಳೂರ್ ಏಟಿ ಸಿಟಿ ಎಂಬ ಬ್ರಾಂಡ್ ಹಾಳಾಗುವುದೆಂಬುದು ಕೆಲವರ ಆಂಬೋಣ. ಬಾಂಬೆಯನ್ನು ಭಾರತದ ವಾಣಿಜ್ಯ ರಾಜಧಾನಿ ಎಂದು ಎಲ್ಲರೂ ಗುರುತಿಸಿದ್ದರು. ಮುಂಬೈ ಎಂದು ಮರುನಾಮಕರಣ ಮಾಡಿದ ಮೇಲೆ ಮುಂಬೈಯನ್ನು ವಾಣಿಜ್ಯ ರಾಜಧಾನಿ ಎಂದು ಯಾರೂ ಗುರುತಿಸುತಿಲ್ಲವೆ?.

ಇನ್ನು, ವಿದೇಶಿಯರಿಗೆ ಹಾಗು ಅನ್ಯ ಭಾಷಿಗರಿಗೆ ಉಚ್ಚಾರ ಕಷ್ಟವೆಂದು ಹೇಳುವುದು ಹಾಸ್ಯಾಸ್ವದವಾಗಿದೆ. ಎಕೆಂದರೆ, ಹಲವಾರು ನಗರಗಳ ಹೆಸರುಗಳು ಈಗಲೂ ಭಾರತೀಯ ಹೆಸರುಗಳೇ ಹಾಗಿವೆ ಉದಾಹರಣೆಗೆ ಬೀದರ್, ಕಾಸರಗೋಡು, ದಕ್ಷಿಣ ಕನ್ನಡ ಇತ್ಯಾದಿ. ಇನ್ನು ಬದಲಾವಣೆಗೆ ಒಗ್ಗುವುದು ಕಷ್ಟವೆಂಬುದಾದರೆ, ಮುಂಬೈ, ಕೋಲ್ಕತ್ತವನ್ನು ಸರಿಯಾಗಿ ಉಚ್ಚಾರಿಸುತ್ತಿಲ್ಲವೆ? ಉಪಯೋಗಿಸಿದಂತೆ ಉಚ್ಚಾರಿಸುವುದು ಸುಲಭ. ಹೀಗಾಗಿ ಬೆಂಗಳೂರು ಹಾಗು ಇತರ ನಗರಗಳ ಮರು ನಾಮಕರಣ ಸುವರ್ಣ ಕರ್ನಾಟಕದ ಸುಸಂದರ್ಭದಲ್ಲಿ ಸಮಯೋಜಿತವೂ ಹಾಗು ಇದು ಅಗತ್ಯವೂ ಆಗಿದೆ. ಹಾಗಾಗಿ ಎಲ್ಲ ಕನ್ನಡಿಗರೂ ಒಗ್ಗಟ್ಟಿನಿಂದ ಇದನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಸಲಹೆಯನ್ನು ಸಕಾಲದಲ್ಲಿ ನೀಡಿದ ಸಾಹಿತಿಗಳಿಗೆಲ್ಲರಿಗೂ ನಾವು ಕೃತಜ್ಞತೆಗಳನ್ನು ಸಲ್ಲಿಸೋಣ.

ಧನ್ಯವಾದಗಳು,
ಎಂ.ವಿ. ಕಿಶನ್

Rating
No votes yet

Comments