ಬೆಂಗಳೂರಿನ ಬಗ್ಗೆ ಅರಿವು

ಬೆಂಗಳೂರಿನ ಬಗ್ಗೆ ಅರಿವು

ಬರಹ

ಬೆಂಗಳೂರಿನಲ್ಲಿ ಕೋಟೆ ಇದೆಯೇ? ನನಗೆ ಗೊತ್ತಿಲ್ಲವಲ್ಲ! ನಾವು ಕೇಳೇ ಇಲ್ಲ. ಆಟೋದವನಿಗೂ ಗೊತ್ತಿಲ್ಲ. ಕೋಟೆ ವೆಂಕಟರಮಣ ದೇವಸ್ಥಾನ ಗೊತ್ತು, ವಾಣಿವಿಲಾಸ ಆಸ್ಪತ್ರೆ ಗೊತ್ತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಗೊತ್ತು. ಆದರೆ ಕೋಟೆ ಎಲ್ಲಿದೆಯೋ ಗೊತ್ತಿಲ್ಲ.

ಇದು ಕಳೆದ ಭಾನುವಾರ ಇಂಟ್ಯಾಕ್ ಸಂಸ್ಥೆಯವರು ಆಯೋಜಿಸಿದ ಬೆಂಗಳೂರು ಕೋಟೆ ವೀಕ್ಷಣೆಗೆ ನಾನು ಹೋಗಿದ್ದಾಗ, ಅಲ್ಲಿಗೆ ಬಂದಿದ್ದ ಕೆಲವರ ಅನಿಸಿಕೆ. ಅವರೆಲ್ಲರಿಗೆ ಹೊಸತು ಏನನ್ನೋ ನೋಡಿದ ಅನುಭವ. ಇದು ಬೆಂಗಳೂರಿಗೆ ಮೊದಲ ಬಾರಿ ಬಂದವರ ಅನುಭವವಲ್ಲ. ಇಲ್ಲಿಯೇ ಹುಟ್ಟಿ ಬೆಳೆದವರ ಪಾಡು. ಬಹಳಷ್ಟು ಯುವ ಪೀಳಿಗೆಯವರು ಬೆಂಗಳೂರಿನ ಹೊರವಲಯಗಳಲ್ಲಿ ತಲೆಯಿತ್ತಿರುವ ಬಡಾವಣೆಗಳಲ್ಲಿ ವಾಸಿಸುತ್ತಿರುವವರು. ಉದ್ಯೋಗಕ್ಕೆ ಎಂ.ಜಿ. ರಸ್ತೆಯೋ, ಕೆಂಪೇಗೌಡ ರಸ್ತೆಯೋ ಇಲ್ಲಾ ಐಟಿ.ಬಿಟಿ ತವರಾದ ಕೋರಮಂಗಲ, ಹೊಸೂರು ರಸ್ತೆಯ ಆಸುಪಾಸು  ಓಡಾಡುವವರು. ಅವರಿಗೆ ಬೆಂಗಳೂರಿನ ಪ್ರಾಚೀನ ಐತಿಹಾಸಿಕ ವಿಷಯಗಳ ಅರಿವೇ ಇಲ್ಲ. ಈ ಪರಿಸ್ಥಿತಿಯಲ್ಲಿ ಬೆಂಗಳೂರಿನ ಇತಿಹಾಸದ ಬಗ್ಗೆ  ಸರಿಯಾದ ಅರಿವು ಮೂಡಿಸುವವರು ಬೇಕಾಗಿದ್ದಾರೆ. ಬೆಂಗಳೂರು ಕೋಟೆ, ಅದರ ಇತಿಹಾಸ, ಕೆಂಪೇಗೌಡರ ಟೌನ್ ಪ್ಲಾನಿಂಗ್, ಟಿಪ್ಪೂ ಅರಮನೆ, ಕೋಟೆ ವೆಂಕಟರಮಣ ದೇವಸ್ಥಾನ ವೈಶಿಷ್ಟ್ಯತೆ, ಬಳಿಯಲ್ಲೇ ಕಲಾಸಿಪಾಳ್ಯದಲ್ಲಿ ಅವಿತಿರುವ ಟಿಪ್ಪುವಿನ ಮದ್ದುಗುಂಡಿನ ಮನೆ, ಇಷ್ಠೇ ಅಲ್ಲದೆ, ಗವಿ ಗಂಗಾಧರ ದೇವಸ್ಥಾನದಲ್ಲಿ ಲಿಂಗದ ಮೇಲೆ ಬೀಳುವ ಸೂರ್ಯ ರಶ್ಮಿ,  ಕಲ್ಲಿನಲ್ಲಿ ಕೆತ್ತಿರುವ ಡಮರುಗ ಇತ್ಯಾದಿ, ಬಸವನಗುಡಿ, ಅದರ ಪಕ್ಕ ಇರುವ ಕಹಳೆ ಬಂಡೆ, ಕಾರಂಜಿ ಆಂಜನೇಯ ದೇವಸ್ಥಾನ, ಒಂದೇ ಎರಡೇ. 

ನಮ್ಮಲ್ಲಿ ಯೂರೋಪ್, ಅಮೆರಿಕ, ಇಂಗ್ಲೆಂಡ್ ಪ್ರವಾಸ ಮಾಡಿದವರು ಬಹಳಷ್ಟಿದ್ದಾರೆ. ಅವರೆಲ್ಲರ ಬಾಯಲ್ಲಿ ಆಯಾ ದೇಶಗಳ ವರ್ಣನೆ ರಸಭರಿತವಾಗಿ ಮೂಡಿರುವುದನ್ನು ಕೇಳಿದ್ದೇವೆ. ಅಲ್ಲಿ ಶೇಕ್ಸ್ ಪಿಯರ್ ನ  ಮನೆಯನ್ನು ಹಾಗೆ ಇಟ್ಟಿದ್ದಾರೆ, ಹೀಗೆ ಇಟ್ಟಿದ್ದಾರೆ, ಅಲ್ಲಿ ಮ್ಯೂಸಿಯಂ ಅಷ್ಟು ಚೆನ್ನಾಗಿದೆ, ಅಲ್ಲಿ ಮೇಯ್ನ್ ಟೇನೆನ್ಸ್ ಹೀಗೆ ಎಂದೆಲ್ಲ ವರ್ಣಿಸುತ್ತಾರೆ.   ಆದರೆ ಯಾರಾದರೂ ಬೆಂಗಳೂರಿನ ಇತಿಹಾಸ ಪ್ರಸಿದ್ಧ ಸ್ಥಳಗಳ ವರ್ಣನೆ ಮಾಡುವುದನ್ನು ಕೇಳಿದ್ದೇವೆಯೇ? ಖಂಡಿತವಾಗಿಯೂ ಇಲ್ಲ. ಯಾಕೆಂದರೆ ನಮಗೆ ಅದರ ಅರಿವೇ ಇಲ್ಲ. ಅದನ್ನು ಹೇಳುವವರೂ ಈಗ ವಿರಳ. ಈ ನಿಟ್ಟಿನಲ್ಲಿ ಇಂಟ್ಯಾಕ್ ಸಂಸ್ಥೆ ಸ್ತುತ್ಯರ್ಹರು. ತಿಂಗಳಿಗೆ ಒಮ್ಮೆ ಇಂಥಾ ಚಾರಿತ್ರಿಕ ಸ್ಥಳಗಳಿಗೆ ಆಸಕ್ತರನ್ನು ಕರೆದೊಯ್ಯುತ್ತಿದ್ದಾರೆ. ಅದರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ, ಅರಿವನ್ನು ಮೂಡಿಸಲು ಯತ್ನಿಸುತ್ತಿದ್ದಾರೆ. 

ನಿಜವಾಗಿಯೂ ನಮಗೆ ಬೇಸರವಾಗುವ ಸಂಗತಿ, ತಲೆತಗ್ಗಿಸುವ ಸಂಗತಿ ಎಂದರೆ ನಮ್ಮ ನಗರಪಾಲಿಕೆಯವರು, ಸಂಬಂಧಪಟ್ಟ ಇಲಾಖೆಯವರು ತೋರಿಸುತ್ತಿರುವ ಬೇಜವಾಬ್ದಾರಿ ನಡತೆ. ಕಲಾಸಿಪಾಳ್ಯದಲ್ಲಿ ಅಡಗಿ ಕುಳಿತಿರುವ ಟಿಪ್ಪುವಿನ ಆರ್ಮರಿಯನ್ನು ನಿಜಕ್ಕೂ ಪ್ರವಾಸಿಗರಿಗೆ ತೋರಿಸಲು ಮುಂದಾಗಬೇಕು. ಅದರ ಬಗ್ಗೆ ಪ್ರಚಾರ ಕೊಡಬೇಕು. ಅದರ ಸುತ್ತ ಮುತ್ತ ಫಲಕವನ್ನು ಹಾಕಿ. ಅದನ್ನು ಒಂದು ಸಂರಕ್ಷಿತ ಸ್ಮಾರಕ ಎಂದು ಘೋಷಿಸಬೇಕು. ಯಾವುದಕ್ಕೋ ಕೋಟಿಗಟ್ಟಲೆ ಹಣ ಚೆಲ್ಲುವ ನಮ್ಮ ಘನ ಸರ್ಕಾರ,ಇಂಥಾ ವಿಚಾರಗಳಲ್ಲಿ ಕಣ್ಣುಮುಚ್ಚಿ ಕುಳಿತಿರುವುದು ನಿಜಕ್ಕೂ ನಾಚಿಕೆಗೇಡು. ಇಂತಹ ಮನೋಭಾವ ಬದಲಾದೀತೆ? ಎಲ್ಲಿಂದ ಪ್ರಾರಂಭಿಸೋಣ ಈ ಕಾರ್ಯವನ್ನು? ತಿಳಿದವರು ಹೇಳುವಿರಾ? ಈ ಸುಕಾರ್ಯಕ್ಕೆ ಕೈಜೋಡಿಸುವಿರಾ?