ದೆಹಲಿ ಕರ್ನಾಟಕ ಸಂಘದಲ್ಲಿ ಶ್ರೀ ವಿ.ಕೆ.ಮೂರ್ತಿ ಹಾಗೂ ಶ್ರೀ ಶಿವಧ್ವಜ್ ಅವರುಗಳಿಗೆ ಸನ್ಮಾನ
ಇಂದು ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡಿಗರಾದ ಶ್ರೀ ವಿ.ಕೆ.ಮೂರ್ತಿ (ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರು) ಹಾಗೂ ಶ್ರೀ ಶಿವಧ್ವಜ್ (ಅತ್ಯತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ 'ಗಗ್ಗರ' ತುಳು ಚಿತ್ರದ ನಿರ್ದೇಶಕರು) ಅವರುಗಳನ್ನು ಶಾಲು ಹೊದೆಸಿ, ಹಾರ ಹಾಕಿ, ಹೂಮಳೆ ಸುರಿಸಿ, ಫಲ ಸಮರ್ಪಣೆಯೊಂದಿಗೆ ನೆನಪಿನ ಕಾಣಿಕೆಯನ್ನಿತ್ತು, ಹೃತ್ಪೂರ್ವಕವಾಗಿ ಸನ್ಮಾನಿಸಲಾಯಿತು.
ಶ್ರೀ ಮೂರ್ತಿಯವರು ಮಾತನಾಡುತ್ತ, ಕನ್ನಡಿಗರಾದ ನೀವು ತಾಯ್ನಾಡಿನಿಂದ ದೂರದ ದೆಹಲಿಯಲ್ಲಿ ಆತ್ಮೀಯವಾಗಿ ನೀಡುತ್ತಿರುವ ಈ ಸಮ್ಮಾನ ತಮಗೆ ಫಾಲ್ಕೆ ಪ್ರಶಸ್ತಿ ಬಂದ ಸಂತೋಷವನ್ನು ಇಮ್ಮಡಿಗೊಳಿಸಿದೆ. ತಮ್ಮ ಕಣ್ಣುಗಳು ಆನಂದ ಭಾಷ್ಪಗಳಿಂದ ತುಂಬಿ ಬರುತ್ತಿವೆ ಎಂದೆನ್ನುತ್ತ ಭಾವುಕರಾದರು.
ಶ್ರೀ ಶಿವಧ್ವಜ್ ಅವರು ಮಾತನಾಡಿ, ಪ್ರಶಸ್ತಿ ತಮ್ಮ ಹನ್ನೆರಡು ವರ್ಷಗಳ ಸತತ ಪರಿಶ್ರಮದ ಫಲ; ಈ ಪ್ರಶಸ್ತಿಯಿಂದಾಗಿ ತಮ್ಮ ಜವಾಬ್ದಾರಿ ಇನ್ನೂ ಹೆಚ್ಚಿದೆ ಎಂದು ಭಾವಿಸಿರುವುದಾಗಿ ಹೇಳಿದರು. ತಾನೆಂದೂ ವ್ಯಾಪಾರಿಕ ಧೋರಣೆಯಿಂದಲೇ ಮಚ್ಚು-ಲಾಂಗುಗಳ ಚಿತ್ರ ಮಾಡಲಾರೆ. ಸಮಾಜಕ್ಕೆ ಉಪಯುಕ್ತವಾಗಬಲ್ಲ ಸಂದೇಶವನ್ನು ಸಾರುವ ಚಿತ್ರಗಳನ್ನು ಮಾಡುವುದೇ ತಮ್ಮ ಗುರಿ ಎಂದರು.
ನಿನ್ನೆ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಸಮಾರಂಭದಲ್ಲಿ ಮೂರ್ತಿಯವರಿಗೆ ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ತಾವು ಮತ್ತು ಶೇಷಾದ್ರಿಯವರು ಮೊತ್ತ ಮೊದಲು ಎದ್ದು ನಿಂತು ಕರತಾಡನ ಮಾಡಬೇಕೆಂದು ಅಂದುಕೊಂಡಿದ್ದೆವು. ಆದರೆ ಪೂರ್ತಿ ಸಭಾಭವನವೇ ಎದ್ದು ನಿಂತು ತಮಗಿಂತ ಮೊದಲೇ ಕರತಾಡನ ಮಾಡಲಾರಂಭಿಸಿದಾಗ ಕನ್ನಡಿಗರಾಗಿದ್ದಕ್ಕೆ ಹೆಮ್ಮೆ ಎನ್ನಿಸಿತು; ಮೈ ನವಿರೆದ್ದಿತು ಎಂದರು.
ಇದೇ ಸಮಯದಲ್ಲಿ ಗುರುದತ್ ನಿರ್ದೇಶನದ, ವಿ.ಕೆ.ಮೂರ್ತಿಯವರ ಛಾಯಾಗ್ರಹಣದ ಕಾಗಜ್ ಕೆ ಫೂಲ್ ಚಿತ್ರವನ್ನು ಪ್ರದರ್ಶಿಸಲಾಯಿತು.