ಸ-ಸಂ-ದರ್ಶನ
ಹುಣ್ಣಿಮೆಗೊಮ್ಮೆ ಅಮಾವಾಸ್ಯೆಗೊಮ್ಮೆ ತಪ್ಪದೇ ಪ್ರಕಟವಾಗುವ ಪ್ರಸಿದ್ಧ ದಿನಪತ್ರಿಕೆ ’ಸವಿವಾಣಿ’ಯು ಕನ್ನಡದ ಕ್ಯಾತ ಖಂಡಾಯ ಸಾಹಿತಿ ಹಾಗೂ ಕಂಡದ್ದನ್ನು ಕೆಂಡದಂತೆ ಉಗುಳುವ ಗುಂಡುಗಲಿ ಸಂಕ್ರಾಮಣ್ಣ ಅವರೊಡನೆ ನಡೆಸಿದ ಸಂದರ್ಶನ:
ಸವಿವಾಣಿ: ಕನ್ನಡ ಸಾಹಿತ್ಯ ಎಂಬುದು ನಿಂತ ನೀರಾಗಿದೆಯೆ?
ಸಂಕ್ರಾಮಣ್ಣ: ಇಲ್ಲ. ಹರಿಯುತ್ತಿರುವ ಬೀರಾಗಿದೆ.
ಸ: ಎಲ್ಲಿಗೆ ಹರಿಯುತ್ತಿದೆ?
ಸಂ: ಜಠರಕ್ಕೆ.
ಸ: ಓಹ್! ನೀವೂ ಬೀರು?
ಸಂ: ಇಲ್ಲ. ನನ್ನ ಸಾಹಿತ್ಯ ಖೀರು.
ಸ: ’ಅದಕ್ಕೆ ಕಡ್ಡಿ ಗೀರು’ ಅನ್ನುತ್ತಿದ್ದಾರಲ್ಲ ಇಲ್ಲೊಬ್ಬರು?
ಸಂ: ಇಂಥ ಹೇಳಿಕೆಗಳು ನನಗೆ ಬೋರು. ಇವು ಕ್ಲೀಷೆಗಳು. ಇಂಥ ಕ್ಲೀಷಾತ್ಮಕ ಶ್ಲೇಷಾತ್ಮಕ ಶ್ವಪಚ ಹೇಳಿಕೆಗಳೇ ಇಂದು ಕನ್ನಡ ಸಾಹಿತ್ಯಲೋಕದ ಕುಠಾರಪ್ರಾಯ ಕಂಟಕಗಳು ಎಂಬುದು ನನ್ನ ಅಭಿಪ್ರಾಯ. ಇನ್ನೂ ಕ್ಲಿಷ್ಟ ಪದಗಳು ಬೇಕಾದರೆ ಗರಬೂರು ಚಾಮರಂದ್ರಪ್ಪ ಅವರ ಯಾವುದಾದರೂ ಲೇಖನವನ್ನು ಓದಿ ನಾಳೆ ನಿಮಗೆ ಹೇಳುತ್ತೇನೆ.
ಸ: ಒಟ್ಟಾರೆ ನೀವು ಹೇಳುವುದೇನೆಂದರೆ ನಿಮ್ಮ ಸಾಹಿತ್ಯವನ್ನು ಯಾರೂ ತೆಗಳಬಾರದು; ಎಲ್ಲರೂ ಹೊಗಳುತ್ತಿರಬೇಕು.
ಸಂ: ಹೌದು. ತೆಗಳುವ ಹಕ್ಕು ಇರುವುದು ನನಗೆ ಮಾತ್ರ. ಇತರರ ಸಾಹಿತ್ಯವನ್ನು ತೆಗಳುವ ಹಕ್ಕು.
ಸ: ಅದಕ್ಕೇ ನಿಮ್ಮ ಸಾಹಿತ್ಯವನ್ನು ಯಾರೂ ಹೊಗಳುತ್ತಿಲ್ಲ. ಇರಲಿ. ಪ್ರಚಾರ ಸಿಗಬೇಕಾದರೆ ಏನು ಮಾಡಬೇಕು?
ಸಂ: ಎರಡು ಬಗೆಯಲ್ಲಿ ಪ್ರಚಾರ ಲಭ್ಯ.
ಒಂದನೆಯ ಬಗೆ: ನನ್ನ ಸಾಹಿತ್ಯವನ್ನು ಹೊಗಳಿ ನೀವು ಪತ್ರಿಕೆಯಲ್ಲಿ ಬರೆಯಬೇಕು. ನಿಮ್ಮ ಸಾಹಿತ್ಯವನ್ನು ಹೊಗಳಿ ನಾನು ಪತ್ರಿಕೆಯಲ್ಲಿ ಬರೆಯಬೇಕು. ಪತ್ರಿಕೆಯವರೊಡನೆ ಇಬ್ಬರೂ ಸ್ನೇಹದಿಂದಿರಬೇಕು. ಆಗ ನಮ್ಮಿಬ್ಬರಿಗೂ ಬೇಜಾನ್ ಪ್ರಚಾರ ಸಿಗುತ್ತದೆ.
ಎರಡನೆಯ ಬಗೆ: ನಾನು ಎಲ್ಲರನ್ನೂ ಎಲ್ಲ ಸಮಯದಲ್ಲೂ ತೆಗಳುತ್ತಲೇ ಇರಬೇಕು. ನನ್ನ ಎಲ್ಲ ತೆಗಳುವಿಕೆಗಳನ್ನೂ ನೀವು ಎಲ್ಲ ಸಮಯದಲ್ಲೂ ಖಂಡಿಸುತ್ತಲೇ ಇರಬೇಕು. ಆಗ ಕೂಡ ಇಬ್ಬರಿಗೂ ಭರ್ಜರಿ ಪ್ರಚಾರ ಗಿಟ್ಟುತ್ತದೆ.
ಸ: ಸಂತೋಷ. ನಿಮ್ಮ ಈ ಸಂದರ್ಶನವನ್ನು ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುವುದಿಲ್ಲ.
ಸಂ: ಪ್ರಕಟಿಸದಿದ್ದರೆ ಕತ್ತೆಬಾಲ.