ನಿಮ್ಮ ಓಟು ಯಾರಿಗೆ?
ಮುಂದಿನ ಭಾನುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ, ಅಂತೂ ಇಂತೂ ನಡೆಯುತ್ತದೆ. ಈಗಾಗಲೇ ಸಾವಿರಾರು ನಾಮಪತ್ರಗಳು ದಾಖಲಾಗಿವೆ. ನಮ್ಮ ನಿಮ್ಮೆಲ್ಲರ ಮನೆ ಮುಂದೆ ಉಮೇದುವಾರರ ದಂಡು ಧಾಂಗುಡಿಯಿಡುತ್ತಿದೆ. ನಿಮಗೆಲ್ಲ ಬಿಟ್ಟಿ ನಮಸ್ಕಾರಗಳು, ಎಸ್.ಎಂ.ಎಸ್.ಗಳ ಮಹಾಪೂರ ಹರಿದುಬರುತ್ತಿವೆ. ನಾವೆಲ್ಲ ಮತ`ಬಾಂಧವ'ರಾಗಿಬಿಟ್ಟಿದ್ದೇವೆ. ಮರೀಬೇಡ್ರೀ ಅಣ್ಣಾ, ಮರೀಬೇಡ ಕಣಣ್ಣೋ, ಮರೀಬೇಡಿ ಸಾರ್, ಮರೀಬೇಡಮ್ಮಾ, ತಾಯಿ, ದೇವರು, ಬುದ್ಧಿ, ಸಾರ್, ಅಂಕಲ್, ಎಲ್ಲಾ ಸಿಹಿ ಸಿಹಿ, ಜೇನು ತುಂಬಿದ ಮಾತುಗಳು ಕೇಳಿಬರುತ್ತಿವೆ.ಹೊರಗಡೆ ರಸ್ತೆಯಲ್ಲಿ ಆಟೊದಿಂದ ಸ್ಪೀಕರ್ ಅರಚುತ್ತಿದೆ, `ಮರೆಯದಿರಿ ಮತಬಾಂಧವರೆ, ಮರೆತು ನಿರಾಶರಾಗದಿರಿ' ಎಂದು. ಯಾರನ್ನು ಯಾರು ಮರೆಯುವುದು, ಯಾರು ಯಾತಕ್ಕಾಗಿ ನಿರಾಶರಾಗುವುದು, ಇವೆಲ್ಲ ನಮಗೆ ಹೊಸತೇನಲ್ಲ. ಬೆಂಗಳೂರನ್ನು ಸಿಂಗಪುರ ಮಾಡಲು ಹೊರಟಿದ್ದವರೊಬ್ಬರು, ಐ.ಟಿ./ಬಿಟಿ ನಗರ ಮಾಡಲು ಹೊರಟರೊಬ್ಬರು, ಬೆಂಗಳೂರಿನ ಸುತ್ತಮುತ್ತಲಿನ ಹಸಿರು ತುಂಬಿದ ತೋಟ, ಗದ್ದೆಗಳನ್ನು ನೈಸ್ ಆಗಿ ರಸ್ತೆಗೆ, ಮತ್ತು ರಸ್ತೆ ಮಾಡಹೊರಟವರ ಜೋಳಿಗೆಗೆ ಬಾಗಿನವಾಗಿತ್ತವರು ಒಬ್ಬರು, ದರಿದ್ರ ನಾರಾಯಣರ ದಾರಿದ್ರ್ಯವನ್ನೆಲ್ಲ ತಾನೇ ತೊಡೆದು ಹಾಕುವುದಾಗಿ ಪಣ ತೊಟ್ಟು ಅವರಿಗಾಗಿ ಕಣ್ಣೀರು ಹಾಕಿದವರೊಬ್ಬರು, ಅಹಿಂದ ಹುಟ್ಟು ಹಾಕಿ ಪಾದಯಾತ್ರೆ ನಡೆಸಿದವರೊಬ್ಬರು, ಮಣ್ಣಿನ ಮಗ ನಾನೆಂದು ಹೇಳಿಕೊಳ್ಳುವುದರಲ್ಲಿ ಪೈಪೋಟಿ, ಬಡವರ ನಿಜವಾದ ಬಂಧು ತಾನೆಂದು ಹೇಳಿಕೊಳ್ಳುವುದರಲ್ಲಿ ಮಹದಾನಂದ, ಸ್ವಾತಂತ್ರ್ಯ ಬಂದಾಗಿನಿಂದ ಅಧಿಕಾರ ಅನುಭವಿಸುತ್ತಿದ್ದರೂ ಜನಜೀವನ ಯಾವ ರೀತಿಯಿಂದಲೂ ಉತ್ತಮ ಪಡಿಸದ ಜನರಿಂದ ಈಗ ಮತ್ತೊಮ್ಮೆ ಆಶ್ವಾಸನೆಗಳ ಸುರಿಮಳೆ, ಇನ್ನೈದು ವರ್ಷಗಳಲ್ಲಿ ಬಡತನ ನಿರ್ಮೂಲನೆ, ಎಲ್ಲರಿಗೂ ಕುಡಿಯುವ ನೀರು, ಎಲ್ಲರಿಗೂ ಪಡಿತರ ಚೀಟಿ, ಎಲ್ಲರಿಗೂ ತಲೆ ಮೇಲೆ ಸೂರು, ಎಲ್ಲರಿಗೂ ಉದ್ಯೋಗ, ಎಲ್ಲೆಡೆ ಶಾಂತಿ, ಸಮಾಧಾನ, ನೆಮ್ಮದಿ, ಸಂತೋಷ, ಸಂಭ್ರಮ, ರಾಮರಾಜ್ಯವನ್ನು ಭುವಿಗೆ ತರುವ ಆಶ್ವಾಸನೆ.
ಆಡಳಿತದಲ್ಲಿ ಕನ್ನಡ ಈ ವರ್ಷದಿಂದಲೇ ಜಾರಿ, ಕರ್ನಾಟಕದಲ್ಲಿ ಕನ್ನಡಕ್ಕೆ ಮಾನ್ಯತೆ, ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಪ್ರಯತ್ನ, ಗೋಕಾಕ್ ವರದಿ ಅನುಷ್ಠಾನ, ಇವೆಲ್ಲ ಘೋಷಣೆಗಳು ಈಗಾಗಲೇ ನಮ್ಮ ಜನರ ಮನಸ್ಸಿನಿಂದ ಮರೆಯಾಗಿ ಹೋಗಿದೆ. ಅವೆಲ್ಲ ಈಗ ಸವಕಲು ಮಾತುಗಳು. ಯಾರೊಬ್ಬರೂ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮೇಲ್ಮಟ್ಟಕ್ಕೆ ತರುತ್ತೇವೆಂದು ಹೇಳುವುದಿಲ್ಲ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅವ್ಯವಹಾರ ತಡೆಯುವುದಾಗಿ ಆಶ್ವಾಸನೆ ಕೊಡುವುದಿಲ್ಲ, ವರ್ಗಾವಣೆಗಳಲ್ಲಿ ಪಾರದರ್ಶಕತೆ ತರುತ್ತೇವೆಂದು ತಪ್ಪಿಯೂ ಹೇಳುವುದಿಲ್ಲ, ಯಾಕೆಂದರೆ ಅವರಿಗೂ ಗೊತ್ತು, ಇವೆಲ್ಲ ಆಗುವುದಲ್ಲ-ಹೋಗುವುದಲ್ಲ ಎಂದು. ಇನ್ನೆಷ್ಟು ನಾಟಕಗಳನ್ನು ನೋಡಬೇಕು ನಾವು?
ಬೆಂಗಳೂರು ಕನ್ನಡಿಗರ ಕೈತಪ್ಪಿ ಹೋಗಿ ದಶಕಗಳೇ ಸಂದಿವೆ. ಈಗ ಏನಿದ್ದರೂ ಬೆಂಗಳೂರಿನಲ್ಲಿ, ಆಂಧ್ರದ ರೆಡ್ಡಿಗಳ, ಬಿಹಾರಿಗಳ, ಮಲೆಯಾಳಿಗಳ ಇದೀಗ ಹೊಸದಾಗಿ ಸೇರ್ಪಡೆಯಾಗಿರುವ ಈಶಾನ್ಯ ರಾಜ್ಯಗಳ ಜನರದೇ ಆರ್ಭಟ. ಮೂಲ ಬೆಂಗಳೂರಿಗರಿಗೆ ಸೈಟೂ ಇಲ್ಲ ಸ್ವಂತ ಮನೆಯೂ ಇಲ್ಲ. ನಾವು ಸೈಟು ಮಾಡಿಕೊಡುತ್ತಿರುವುದೇ ಹೊರಗಿನಿಂದ ಬಂದ ಆ ಅತಿಥಿ ಗಣ್ಯರಿಗೆ. ಅದಕ್ಕಾಗಿಯೇ ನಮ್ಮ ಬಿ.ಡಿ.ಎ. ಇರುವುದು.
ಹೋಗಲಿ ಈ ಬಾರಿ ಚುನಾವಣೆಗೆ ನಿಂತಿರುವ ಉಮೇದುವಾರರಾದರೂ ಯಾರು? ರಿಯಲ್ ಎಸ್ಟೇಟ್ ದೊರೆಗಳು, ಕಳ್ಳಬಟ್ಟಿ ರಾಣಿಯರು, ರೌಡಿ ಪಟ್ಟಿಯಲ್ಲಿರುವವರು, ಅಪಾರ ಹಣ ಚೆಲ್ಲಲು ಸಿದ್ದರಿರುವ ಪಕ್ಕದ ರಾಜ್ಯದ ಶ್ರೀಮಂತರು. ಇಲ್ಲಿ ವಿದ್ಯೆ, ಅರ್ಹತೆ, ಸೇವಾ ಮನೋಭಾವ ಪ್ರಾಮಾಣಿಕತೆ, ಸರಳತೆ, ಇವಕ್ಕೆ ಸ್ಥಾನ ಇಲ್ಲ. ಯಾವ ಪಕ್ಷವೂ ಒಳ್ಳೆಯದೆಂದು ಕಾಣುತ್ತಿಲ್ಲ. ಆದರೂ ಮತ ಚಲಾಯಿಸದೆ ವಿಧಿಯಿಲ್ಲ. ಈ ಸಂದರ್ಭದಲ್ಲಿ ನಾವು ಏನು ಮಾಡಬಹುದು ಬಲ್ಲವರು ತಿಳಿಸುವಿರಾ?