ಸಂಭ್ರಮದ ಶನಿವಾರ

ಸಂಭ್ರಮದ ಶನಿವಾರ

ವಾರವೆಲ್ಲಾ ಬೆಳ್ಳಂಬೆಳಿಗ್ಗೆ ೪.೩೦ಕ್ಕೆ ಎದ್ದು ಎದ್ದೂ ಸಾಕಾಗಿ ಹೊಗಿತ್ತು. ವಾರಾಂತ್ಯಕ್ಕೆ ಕಾಯ್ತಾ ಇದ್ದೆ. ಅಂತೂ ಇಂತೂ ಶನಿವಾರ ಬಂದೇಬಿಡ್ತು. :) ಶನಿವಾರದ ಮೊದಲ ಕೆಲಸ ಅಂದ್ರೆ 10:00 ಘಂಟೇತನಕ ನಿದ್ದೆ ಮಾಡೋದು ;) ಆಮೇಲೆ ಮಿಕ್ಕಿದ ಕೆಲಸಗಳೆಲ್ಲಾ... ನನ್ನ ಅನಿಸಿಕೆಯಂತೇ ಬೆಳಗ್ಗೆ 9:30ರ ತನಕ ಗಡದ್ದಾಗಿ ನಿದ್ದೆ ಮಾಡ್ದೆ. ಆಮೇಲೆ ಮಾಮೂಲಿ ಯೋಚನೆ... ಇವತ್ತು ತಿಂಡಿ ಏನು ಮಾಡೋದು ಅಂತ. ಆಗ ನೆನ್ಪಾಗಿದ್ದೇ ನನಗೆ ಇಷ್ಟವಾದ ಮಾಡಲು ಸುಲಭವಾದ ತಿಂಡಿ- "ಗಂಜಿ". ಗಂಜಿಯ ಜೊತೆಗೆ ಮಿಡಿ ಉಪ್ಪಿನಕಾಯಿ, ಸ್ವಲ್ಪ ಮೊಸರು, ಸ್ವಲ್ಪ ಕುತ್ತುಂಬರಿ ಚಟ್ನಿ, ಇಷ್ಟಿದ್ಬಿಟ್ರೇ... ಸ್ವರ್ಗಕ್ಕೆ 3ರೇ ಗೇಣು... ಮಾಡುವುದು ಅತಿ ಸುಲಭ, So ಅದನ್ನೆ ಮಾಡಲು ಒಲೇಮೇಲೆ cooker ಇಟ್ಟು ಮನೆಗೆಲಸ ಶುರು ಮಾಡ್ಕೊಂಡೆ. ಮೊದಲನೇದು ಬಟ್ಟೆ ಒಗೆಯೋದು. ವಾರದಲ್ಲಿ ಬೆಂಗಳೂರಿನ ಕೊಳೆ, ಧೂಳು ಹೊತ್ಕೊಂಡು ತಂದಿದ್ದನ್ನ ಬ್ರಷ್ ಉಜ್ಜಿ ಉಜ್ಜಿ ತೆಗೆಯೋದು.

ಅಬ್ಬಬ್ಬಾ!!! ಬೆನ್ನೆಲ್ಲಾ ಲಟ ಲಟಾ ಅಂತು ಅದನ್ನ ಒಗೆಯೋಷ್ಟ್ರಲ್ಲಿ. ಒಲೆಯಮೇಲಿಟ್ಟಿದ್ದ ನನ್ನ ಕುಕ್ಕರ್ ಕೂಗಿ ಕೂಗಿ ಗಂಜಿ ಆಗಿರೋದನ್ನ ಇಡೀ ಬೀದಿಗೇ ಸಾರಿ ಹೆಳ್ತಾ ಇತ್ತು. ಅದನ್ನ ಒಲೆಮೇಲಿಂದ ಕೆಳಗಿಳಿಸಿ, ಒಗೆದ ಬಟ್ಟೆಗಳನ್ನ ಒಣಗಿಸಿ ಮನೆಯನ್ನೆಲ್ಲಾ ಒಮ್ಮೆ ಗುಡಿಸಿ ಬಂದು ಇನ್ನೇನು ಗಂಜಿಯ ಸವಿರುಚಿ ಅನುಭವಿಸಬೇಕು... ನನ್ನ ಮಿತ್ರನ ಕರೆ ನನ್ನ ಮೊಬೈಲಿನಲ್ಲಿ ಮೊಳಗಿತು. ನಮ್ಮ ಸಂಭಾಷಣೆ ಕಡಿಮೆ ಅಂದ್ರೂ 30 ನಿಮಿಷ ನಡೀತು. ಅಷ್ಟರಲ್ಲಿ ನಾನು ಬಿಸಿ ಬಿಸಿಯಾಗಿ ತಿನ್ನಬೇಕೆಂದಿದ್ದ ಗಂಜಿ ತಣ್ಣಗೆ ಕುಳಿತಿತ್ತು. ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ಅದನ್ನು ಹಾಗೇ ಕೊತ್ತಂಬರಿ ಚಟ್ನಿ, ಉಪ್ಪಿನ ಕಾಯಿಯ ಜೊತೆ ಹೊಟ್ಟೆಗೆ ಇಳಿಸ ತೊಡಗಿದೆ... ಅಹಾ... ತಣ್ಣಗಿದ್ದರೂ ಅದರ ರುಚಿಗೆ ಬೇರಾವ ತಿಂಡಿಯೂ ಸಾಟಿಯಿಲ್ಲ...

ನನ್ನ ಬೆಳಗಿನ ಕಾರ್ಯಕ್ರಮಗಳೆಲ್ಲಾ ಮುಗಿದು ಸುಮಾರು 1:00 ಘಂಟೆಯ ಹೊತ್ತಿಗೆ ಕಣ್ಣು ಜೊಂಪು ಹತ್ತ ತೊಡಗಿತು. ಒಂದು ಅರ್ಧ ಘಂಟೆ ಮಲಗಿ ಏಳೋಣ ಅಂತ ಮಲಗಿದವನಿಗೆ ಎಚ್ಚರವಾದದ್ದು 4 ಘಂಟೆಗೇ... ಸೋಮಾರಿ ತನದಿಂದ ಎದ್ದು ಗಿಡಗಳ ಬಳಿಗೆ ಬಂದೆ... ಪಾಪ, ಅವಕ್ಕೆ re-poting ಮಾಡೋ ಕಾರ್ಯಕ್ರಮ ಕಳೆದ ಒಂದು ತಿಂಗಳಿಂದಾ ಮುಂದೂಡಲ್ಪಡುತಿತ್ತು... ಅದಕ್ಕೆ ಇವತ್ತು ಕಾಲ ಕೂಡಿಬಂದಿತ್ತು. ಎಲ್ಲಾ ಕುಂಡಗಳ ಹಳೆಯ ಮಣ್ಣನ್ನು ತೆಗೆದು ತರಕಾರಿ ಸಿಪ್ಪೆಯ ಗೊಬ್ಬರವನ್ನ ಸೇರಿಸಿ ಮತ್ತೆ ಅದೇ ಕುಂಡಗಳಿಗೆ ತುಂಬುವ ಹೊತ್ತಿಗೆ ಸಂಜೆ 6:15 ನಿಮಿಷ. ಮನೆಯೊಳಗೆ ಬಂದು Freshಆಗಿ IPL match ನೋಡ್ಕೊಂಡು ತರಕಾರಿ ತರಲು ನಡೆದು ಹೊರಟೆ. ದಾರಿಯುದ್ದಕ್ಕೂ ತಂಗಾಳಿ ನನ್ನ ಜೊತೆ ಜೊತೆಯಲ್ಲೇ ಬಂದಿತ್ತು. ಹಿತವಾದ ಆ ಗಾಳಿಯಲ್ಲಿ ಅಪರಿಚಿತ ಮುಖಗಳ ನಡುವೆ ಪರಿಚಿತ ಮುಖವೇನಾದರೂ ಕಂಡೀತೇನೋ ಎಂಬಂತೆ ಹುಡುಕುತ್ತಾ ಹೊರಟೆ. ದಾರಿಯಲ್ಲಿ ಹೋಗುವಾಗ ಅಮ್ಮನಿಗೆ ಫೋನಾಯಿಸಿ ಕ್ಷೇಮ ಸಮಾಚಾರ ವಿಚಾರಿಸಿ ಮಾತನಾಡುತ್ತಿದ್ದಾಗ ಆಕೆ ಪಡವಲಕಾಯಿಯ ತೊವ್ವೆ ಮಾಡ್ಕೊ... ಚೆನ್ನಗಿರತ್ತೆ ಅಂದಿದ್ದು ನೆನಪಾಯಿತು. ಮನೆಯ ಬಳಿಯಿದ್ದ Safal ತರಕಾರಿ ಅಂಗಡಿಗೆ ಹೋಗಿ 2 ಪಡವಲಕಾಯಿಗಳನ್ನು ತಂದೆ.

ಮನೆಗೆ ಮರಳುವ ಮಾರ್ಗದಲ್ಲಿ ಕೆಂಪು ಕೆಂಪು ಕಲ್ಲಂಗಡಿ ನನ್ನನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿತ್ತು. ವ್ಯಾಪಾರಿಯೊಂದಿಗೆ ಮಾತನಾಡಿ ಒಂದು ಹಣ್ಣನ್ನು ಖರೀದಿ ಮಾಡುವಾಗ ಪಕ್ಕದಲ್ಲಿ ಯಾವುದೋ ಚಿರಪರಿಚಿತ ಮುಖ ನನ್ನನ್ನೇ ನೋಡುತ್ತಿರುವಂತೆ ಭಾಸವಾಯಿತು. ಹೌದು... ಅದು ಪರಿಚಿತ ಮುಖವೇ ಹೌದು, ಗೌರವವರ್ಣ ವಲ್ಲದಿದ್ದರೂ ನೋಡಲು ಆಕೆ ಲಕ್ಷಣವಾಗಿದ್ದಳು. ಆಕೆ ನಮ್ಮ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದವಳು ನನ್ನಕಡೆ ನೆಟ್ಟದೃಷ್ಟಿ ಬೀರಿದ್ದಳು. ಹೆಚ್ಚಾಗಿ ಆಕೆಯ ಪರಿಚಯವಿಲ್ಲದ ಕಾರಣದಿಂದ ದಾರಿಯೆಡೆಗೆ ದೃಷ್ಟಿ ನೆಟ್ಟು ಮನೆಯಕಡೆ ಪಯಣ ಬೆಳೆಸಿದೆ. ಮನಸ್ಸಿನಿಂದ ಹಾಡು ಹೊರಹೊಮ್ಮಿತ್ತು... ಚಲುವೆ ಎಲ್ಲಿರುವೇ... ಮನವ ಕಾಡುವ ರೂಪಸಿಯೇ.....

ಮನೆಗೆ ಬಂದು ತಂದಿದ್ದ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾ Royal challenger's ನ ಗೆಲುವನ್ನು ನೋಡುತ್ತಾ ನನ್ನ ಕನಸಿನ ಕನ್ಯೆಯನ್ನ ಭೇಟಿಮಾಡಲು ಸ್ವಪ್ನಲೋಕಕ್ಕೆ ಹೊರಡುವ ಹೊತ್ತಿಗೆ ಸಂಭ್ರಮದ ಶನಿವಾರ ಮುಕ್ತಾಯ ವಾಗಿತ್ತು :)

Rating
No votes yet