ಕೀಟವೇ ಊಟ...
ಬರಹ
ಊಟದ ಬಗೆಗಳ ಬಗ್ಗೆ ಸಂಪದದಲ್ಲಿ ಕೆಲವು ದಿನಗಳಿಂದ ಲೇಖನ ಮಾಲಿಕೆ, ಅದರ ಬಗ್ಗೆ ಚರ್ಚೆ ಎಲ್ಲ ಓದುತ್ತಿದ್ದೆ. ಹಾಗೆಯೇ ಒಮ್ಮೆ ಇಲ್ಲಿ ಥೈಲ್ಯಾಂಡಿನ ಮಾರುಕಟ್ಟೆಯಲ್ಲಿ ತಿರುಗುತ್ತಿದ್ದಾಗ ತೆಗೆದ ಚಿತ್ರ ಸಿಕ್ಕಿ ನಿಮ್ಮೊಂದಿಗೆ ಹಂಚಿಕೊಳ್ಳೋಣ ಅನ್ನಿಸಿತು.
ಇಲ್ಲಿನ ಜನ ಹೆಚ್ಚಾಗಿ ಮಾಂಸಾಹಾರಿಗಳು. ಅಂದರೆ ಭಾರತದಲ್ಲಿನ ಹಾಗೆ ಒಮ್ಮೊಮ್ಮೆ ಮಾಂಸ ತಿನ್ನುವವರಲ್ಲ. ತಿನ್ನುವ ಪ್ರತಿಯೊಂದು ವಸ್ತುವಿನಲ್ಲು ಒಂದಲ್ಲ ಒಂದು ಪ್ರಾಣಿಯಿರಬೇಕು...! ಇವರಿಗೆ ನಾನು ಹುಟ್ಟಿದಾಗಿನಿಂದ vegetarian ಅಂತ ಹೇಳಿದರೆ ವಿಚಿತ್ರ ಪ್ರಾಣಿಯನ್ನು ನೋಡುವಂತೆ ನೋಡುತ್ತಾರೆ. ಕೆಲವೊಮ್ಮೆ ನನಗೆ rabit ಅಂತ ತಮಾಷೆ ಮಾಡುವುದೂ ಇದೆ. :)
ಇಂತಿಪ್ಪ ಇವರಿಗೆ vegetarian ಅಂದರೆ ಏನು ಅಂತ ವಿವರಿಸುವುದು ಒಂದು ಸಾಹಸದ ಕೆಲಸ. ವಿವರಿಸದಿದ್ದರೆ ನನ್ನ ಆಹಾರದಲ್ಲಿ ಏನು ಹಾಕುತ್ತಾರೋ ಅಂತ ಭಯ. ಏನೇನು ಹಾಕಬಹುದು ಮತ್ತು ಹಾಕಬಾರದು ಅಂತ ಪಟ್ಟಿಯನ್ನೇ ಓದಬೇಕಾಗುತ್ತದೆ ಕೆಲವು ಸಲ. ಈಗ ಮನೆಯಲ್ಲೇ ಅಡಿಗೆ ಮಾಡುವುದರಿಂದ ಅಷ್ಟು ಸಮಸ್ಯೆ ಇಲ್ಲ ಮತ್ತು ಎಲ್ಲೆಲ್ಲಿ ಶುದ್ಧ ಸಸ್ಯಾಹಾರಿ ತಿನಿಸು ಸಿಗುತ್ತದೆ ಅಂತ ಗೊತ್ತಾಗಿದೆ.
ಇವರು ಏನೆಲ್ಲಾ ತಿನ್ನುತ್ತಾರೆ ಅಂದರೆ ಸಾಮಾನ್ಯವಾಗಿ ಹೆಚ್ಚಿನವರು ತಿನ್ನುವ ಮಾಂಸವರ್ಗದ ಜೊತೆಗೆ ಇಲಿ, ಹೆಗ್ಗಣ, ಮಿಡತೆ, ರೇಷ್ಮೆಹುಳದಂತಹ ಹುಳ, (ಕೆಲವರು) ಹಾವುಗಳು ಇತ್ಯಾದಿ ಇತ್ಯಾದಿ. ಜೀವಂತ ಮರಿ ಏಡಿಗಳನ್ನು ಉಪ್ಪು ಹಾಕಿ, ಅದು ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗಲೇ ಬಾಯಿಗೆ ಇಳಿಸುತ್ತಾರೆ ಇವರು...! ಕೆಲವೊಮ್ಮೆ ನಾನು ಅವರಿಗೆ ತಮಾಷೆಗೆ ಹೇಳುತ್ತೇನೆ, "ನಡೆಯುವ-ಹರಿಯುವ ಏನನ್ನಾದರೂ ತಿನ್ನುತ್ತೀರಿ, ನನ್ನನ್ನು ಬಿಟ್ಟಿದ್ದೀರಿ, ಥ್ಯಾಂಕ್ಸ್" ಅಂತ. :)