ಸವೆಯುತ್ತಿರುವ ಚಕ್ರ....
ಬಹಳ ದಿನಗಳಾದ ನಂತರ ಬದುಕಿನ ಚಕ್ರ ಸವೆಯುತ್ತಿದೆ ಎಂದು ಅನ್ನಿಸುತ್ತದೆ. ಸುಮ್ಮನೆ ಕುಳಿತು ಹಿಂದೆ ನೋಡೋಣ ಎಂದುಕೊಂಡು ಕುಳಿತರೆ ಚಕ್ರ ಓಡುತ್ತಲೇ ಇದೆ. ಅದನ್ನುನಿಲ್ಲಿಸಲು ಸಾಧ್ಯವಿಲ್ಲ ಎಂದು ಗೊತ್ತಾಗುತ್ತದೆ. ಹೀಗಾಗಿ ಓಡುತ್ತಿರುವ ಚಕ್ರ ಮತ್ತು ನಿಂತ ಮನಸ್ಸಿನ ಸ್ಥಿತಿಯಲ್ಲಿ ಯೋಚಿಸೋಣ ಎಂದುಕೊಳ್ಳುತ್ತೇನೆ. ಯೋಚಿಸುವಾಗ ಮನಸ್ಸು ನಿಂತಿರುತ್ತದೆಯೇ? ಈ ಭ್ರಮೆ ಬೇಕಿಲ್ಲವೆಂದು ಇದ್ದಹಾಗೆಯೇ ಚಲಿಸುತ್ತಾ ಇರುವಾಗ.....
ಮನೆಯ ಮಕ್ಕಳ ಕಲರವ ಶಾಲೆಯ ದೈನಂದಿನ, ಹೆಂಡತಿಯ ನಿತ್ಯದ ಕಾಯಕ ...ಅಣ್ಣನ(ಅಪ್ಪ) ದಿನ ನಿತ್ಯದ ಕೆಲಸಗಳು ಉರುಳುತ್ತಲಿವೆ. ಹಾಲಿನವನೂ, ಪೇಪರ್ರಿನವನೂ, ಎಲ್ಲತರದ ಸೌಕರ್ಯಗಳ ಬಿಲ್ಲುಗಳೂ ಚಾಲನೆಯಲ್ಲಿವೆ..ತಿಂಗಳ ಸಾಲ ಕಟ್ಟಬೇಕು... ಸಹಾಯಕರಿಗೆ ಸಂಬಳ ಕೊಡಬೇಕು....
ಕೆಲಸಗಳ ನಡುವೆಯೂ ನನ್ನನ್ನು ಕಾಡುವ ಏಕಾಂಗಿತನ ನೆನಪಾಗಿ ....
ಯಾಕೆ ಏಕಾಂಗಿತನ? ಯಾಕೆ ಎಂದು ಹುಡುಕುತ್ತೇನೆ. ಮಾಡುವ ಕೆಲಸ ತೃಪ್ತಿಯನ್ನು ಕೊಟ್ಟಿಲ್ಲವೆ? ಕೊಡುತ್ತಿದೆ. ಪೂರ್ಣವಲ್ಲ. ಪೂರ್ಣ ತೃಪ್ತಿಯನ್ನು ಕೊಟ್ಟರೆ ಅಲ್ಲಿ ಹುಡುಕಾಟವಿಲ್ಲದೇ ಸೊರಗುತ್ತದೆ ಎಂಬ ಭಯ. ಇನ್ನೇನನ್ನೋ ಮಾಡಬೇಕಿತ್ತು ಎಂಬ ಕೊರಗು.. ಸಂಪಾದನೆ ಹೆಚ್ಚಿಸಬೇಕು ಎಂಬ ಒತ್ತಡ.... ಕೆಲಸದಲ್ಲಿ ನ್ಯಾಯ ಸಲ್ಲಿಸುತ್ತಿಲ್ಲ ಎಂಬ ಕಳವಳ.
ಇದೆಲ್ಲ ಇದ್ದದ್ದೆ ಎಲ್ಲರಿಗೆ. ನನ್ನದೇನು ಮಹಾ; ಎಂದು ಸಮಾಧಾನ ಪಡುತ್ತೇನೆ. ಮನೆಯ ಪರಧಿಯಲ್ಲಿ ಇರುವ ಎಲ್ಲ ವಸ್ತುಗಳೂ, ನಮ್ಮ ಮುದ್ದಿನ ನಾಯಿಮರಿ, ಪುಸ್ತಕಗಳೂ ಹಾಗೇ ಇವೆ. ಹತ್ತಿರ ಹೋಗಬೇಕೆನಿಸುತ್ತಿಲ್ಲ. ರಾಶಿ ರಾಶಿ ನಿಯತಕಾಲಿಕಗಳೂ, ದಿನಪತ್ರಿಕೆಗಳೂ, ಟಿ.ವಿ ಚಾನೆಲ್ ಗಳೂ ನನ್ನನ್ನು ಕರೆಯುತ್ತಿಲ್ಲ. ಆದರೂ ಪುನ: ಟಿ.ವಿ ನೋಡೋಣವೆಂದರೆ ಮತ್ತೆ ಮತ್ತೆ ಅದೇ ಸುದ್ದಿಗಳು. ಜೋತಿಷಿಗಳೂ,ಪೂರ್ವ ಜನ್ಮ, ರಾಜಕಾರಣದ ವಿಶ್ಲೇಷಣೆಗಳೂ ಕರಕರೆ ಅನ್ನಿಸಿ ಸುಮ್ಮನೆ ಆಫ್ ಮಾಡಿ ಮನೆಯಲ್ಲೆ ಸುತ್ತುತ್ತೇನೆ.....
ಬರುವಾಗ ದಾರಿಯಲ್ಲಿ ಸತ್ತುಬಿದ್ದ ನಾಯಿಗಳನ್ನು ನೋಡಿ ನೋಡಿ ಸಂವೇದನೆಗಳನ್ನು ಕಳಕೊಂಡು ಹೀಗಾಗಿದ್ದೇನೆಯೇ? ಈ ನಾಯಿ-ಮರಿಗಳು ಈಗಿನ ವೇಗದ ರಸ್ತೆಗೆ ಹೊಂದದೇ ಅವಸಾನಗೊಳ್ಳುತ್ತಿರುವುದು ವೇಗಕ್ಕೆ ಹೊಂದಿಕೊಳ್ಳದವರ ಕುರಿತು ಸೂಚನೆಯೇ?? ಎಂಬ ಕಳವಳದೊಂದಿದೆ ಹಾಸಿಗೆಗೆ ಒರಗುತ್ತೇನೆ.
ಪುನ: ಬೆಳಗಿನ ಚಿಲಿಪಿಲಿ...ತಂಪಾದ ಗಾಳಿ ಎಬ್ಬಿಸುತ್ತದೆ. ಅವ್ಯಕ್ತ ಹೊರಡು ಹೊರಡು ಎನ್ನುತ್ತದೆ. ಎಲ್ಲಿಗೆ ಎಂದು ಕೇಳಲಾಗದಂತೆ ದೂಡುತ್ತದೆ. ಮತ್ತೆ ಚಕ್ರವೂ..ನಾನೂ ಒಟ್ಟಾಗಿ ಉರುಳುತ್ತಾ ಹೋಗುವಂತೆ........ .
ಸವೆದ ಚಕ್ರವನ್ನು ನಾನೂ, ಸವೆಯುತ್ತಿರುವ ನನ್ನನ್ನು ಚಕ್ರವೂ; ನೋಡುತ್ತಾ ಉರುಳುತ್ತೇನೆ. ಉರುಳುವಾಗಲೇ ನೋಡುತ್ತೇನೆ ಹೊರಗಿನದನ್ನು.
ಸಹಿಸಿ - ಅಸಯ್ಹಿಸಿ.
ಕಾಮಿಸಿ- ತಿರಸ್ಕರಿಸಿ.
ಚಿಂತಿಸಿ -ಅಚಿಂತ್ಯಿಸಿ.
ಮೋಹಿಸಿ - ದು:ಖಿಸಿ.
ಹೊರಟಲ್ಲಿಗೆ ಹೋಗಿ ಪುನಃ ಗೂಡು ಸೇರುವ ತನಕ. ಅನ್ನಿಸಿದ್ದೆಲ್ಲಾ ಅಲ್ಲೇ ಖಾಲಿ. ಯಾವುದನ್ನೂ ಮುಟ್ಟಿಲ್ಲ. ಎತ್ತಿಕೊಂಡಿಲ್ಲ. ಆಲಂಗಿಸಿಕೊಂಡಿಲ್ಲ. ಪೊರೆಯಲಿಲ್ಲ. ಪುನಃ ಕತ್ತಲು. ರಾತ್ರಿ.
ನಾಳಿನ ಸುಡುವ ಬಿಸಿಲು ಯಾಕೆ ನಮ್ಮನ್ನಾವರಿಸಿದ ಈ ಮಂಕನ್ನು ಸುಡಬಾರದು? ಸುಡಲು ಯಾಕೆ ಮೈ ಓಡ್ಡಬಾರದು? ಒಳಗಡೆಯ ಮಾತಿಗೆ ಯಾಕೆ ಕಿವಿಕೊಡಬಾರದು? ಸವೆದ ಚಕ್ರವೂ - ನಾನೂ ಯಾಕೆ ಹೊಳೆಯಬಾರದು ಕೋಟಿ ಕೋಟಿ ಜೀವಗಳನ್ನು ಹೊತ್ತು ಹರಿವ ನದಿಯಂತೆ.. ಅದು ಪೊರೆವಂತೆ .......
ಶ್ರೀಧರ್.ಕೆ.ಜಿ.
೧೮/೦೩/೨೦೧೦
Comments
ಉ: ಸವೆಯುತ್ತಿರುವ ಚಕ್ರ....
In reply to ಉ: ಸವೆಯುತ್ತಿರುವ ಚಕ್ರ.... by rameshbalaganchi
ಉ: ಸವೆಯುತ್ತಿರುವ ಚಕ್ರ....
ಉ: ಸವೆಯುತ್ತಿರುವ ಚಕ್ರ....
In reply to ಉ: ಸವೆಯುತ್ತಿರುವ ಚಕ್ರ.... by Kiranaa1234
ಉ: ಸವೆಯುತ್ತಿರುವ ಚಕ್ರ....