ವರ್ಷ ೨೦೦೯ ರ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಶ್ರೀ. ವಿ. ಕೆ. ಮೂರ್ತಿಯವರನ್ನು ಮುಂಬೈನ ಜನತೆ ಅಭಿನಂದಿಸಿತು !

ವರ್ಷ ೨೦೦೯ ರ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಶ್ರೀ. ವಿ. ಕೆ. ಮೂರ್ತಿಯವರನ್ನು ಮುಂಬೈನ ಜನತೆ ಅಭಿನಂದಿಸಿತು !

ಬರಹ

 

Pyasa :
जाने क्या तूने कही,
जाने क्या मैने सुनी
बात कुछ बन ही गयी
सनसनाहट सी हुई,
थरथराहट सी हुई
जाग उठे ख्वाब कई,
बात कुछ बन ही गयी

 

ಗುರುದತ್ ರ ಹಿಂದಿಚಿತ್ರ,  "ಪ್ಯಾಸಾದ ಗೀತೆ",  " ಜಾನೇ ಕ್ಯಾ..."  ನಮ್ಮೆಲ್ಲರ ಮನಸ್ಸಿನಮೇಲೆ ಮಾಡಿದ ಪರಿಣಾಮ ಅಪಾರ. ಅದನ್ನು ಅದ್ಭುತವಾಗಿ ಚಿತ್ರೀಕರಿಸಿದ ಶ್ರೇಯಸ್ಸು ನಮ್ಮಕನ್ನಡಿಗ,  ಮೂರ್ತಿಯವರದು !

जाने क्या तूने कही,

जाने क्या मैने सुनी

बात कुछ बन ही गयी

सनसनाहट सी हुई,

थरथराहट सी हुई

जाग उठे ख्वाब कई,

बात कुछ बन ही गयी

ಮುಂಬೈನ ನಾಗರಿಕರಿಗೆ, ೨೦೧೦ ರ ಮಾರ್ಚ್, ೨೧ ಒಂದು ಅವಿಸ್ಮರಣೀಯ ದಿನಗಳಲ್ಲೊಂದು ! ಈಗಾಗಲೇ ಮುಂಬೈನಗರದ ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿವಿಜೇತರ ಪಂಕ್ತಿಯಲ್ಲಿ ಮತ್ತೊಬ್ಬ ಚಲನಚಿತ್ರ ಕಲಾವಿದ, ಸಿನೆಮಾಟೊಗ್ರಾಪರ್, ಶ್ರೀ ವಿ. ಕೆ. ಮೂರ್ತಿಯವರ ಹೆಸರು ಸೇರ್ಪಡೆಯಾದ ಸನ್ನಿವೇಶವದು !

ಇದಲ್ಲದೆ ಮುಂಬೈನ ಹೆಸರಾಂತ ಹಿರಿಯ ಕನ್ನಡ ಸಂಸ್ಥೆ  ಮೈಸೂರ್ ಅಸೋಸಿಯೇಷನ್ ನ ಮುಡಿಗೆ ಮತ್ತೊಂದು ಹೊಸಗರಿಯ ಶೃಂಗಾರ ಲಭ್ಯವಾಗಿದೆ.

ಮುಂಬೈನಗರದ ಫಿಲ್ಮ್ ಫ್ರೆಟರ್ನಿಟಿಯ ಗೋವಿಂದ್ ನಿಹಲಾನಿಯವರು, ಶ್ಯಾಮ್ ಬೆನೆಗಲ್ ರವರು, ಮೂರ್ತಿಯವರ ಜೊತೆಯಲ್ಲಿ ದೀಪ ಪ್ರಜ್ವಲನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭವನ್ನು ಮಾಡಿದರು. ಮೈಸೂರ್ ಅಸೋಸಿಯೆಷನ್ ನ ಹಿರಿಯ ಕಾರ್ಯಕರ್ತ, ಶ್ರೀ. ಮಂಜುನಾಥಯ್ಯನವರು ವಿ. ಕೆ. ಮೂರ್ತಿಯವರ ಜೊತೆಯಲ್ಲಿ ಕೆಲವು ಸುಂದರ ನಿಮಿಷಗಳನ್ನು ನೆನೆಸಿಕೊಳ್ಳುತ್ತಿದ್ದಾರೆ....

ಮೈಸೂರಿನಲ್ಲಿ ೨೬, ನವೆಂಬರ್, ೧೯೨೨ ರಲ್ಲಿ  ಜನಿಸಿದ  ಶ್ರೀ. ವೆಂಕಟರಾಮ ಪಂಡಿತ್ ಕೃಷ್ಣಮೂರ್ತಿಯವರು, ಒಬ್ಬ ಆದರ್ಶಪ್ರಾಯದ ಯುವಕರಾಗಿ ಅಂದಿನ ಬೊಂಬಾಯಿನಗರಕ್ಕೆ ಪಾದಾರ್ಪಣೆಮಾಡಿದಾಗಿನ ಸನ್ನಿವೇಶಗಳು ಬೇರೆಯೇ ಇದ್ದವು. ಎಲ್ಲಿನೋಡಿದರೂ ಹತ್ತಿಗಿರಣಿಗಳ ಹೊಗೆಯ ಕೊಳವೆಗಳೇ ಕಾಣಿಸುತ್ತಿದ್ದವು. ಈಗಿನಂತ ಐಟಿ, ಮುಂತಾದ ಉದ್ಯೋಗಾವಕಾಶಗಳು ಇರಲಿಲ್ಲ. ಮೂರ್ತಿಯವರು ಮೈಸೂರ್ ಅಸೋಸಿಯೇಷನ್ ನ ಅಜೀವ ಸದಸ್ಯರು ಹಾಗೂ ಲಲಿತಕಲಾಶಾಖೆಯ ಪ್ರಮುಖರಾಗಿ ದುಡಿದವರು. ಮೂರ್ತಿಯವರು  ಸಿನಿಮಾ ಛಾಯಾಗ್ರಹಣ ವೃತ್ತಿಯನ್ನು ಆರಿಸಿಕೊಂಡಿದ್ದರು. ಅದರಲ್ಲಿ ಅವರು ಕಠಿಣ ಪರಿಶ್ರಮ ಮತ್ತು ಕಾರ್ಯಕ್ಷಮತೆಗಳಿಂದ ತಮ್ಮದೇ ಆದ ವಿಶೇಷ ಛಾಪನ್ನು ಭಾರತದ ಎಳೆಯ ಛಾಯಾಗ್ರಾಹಕರಮೇಲೆ ಮೂಡಿಸಿದ್ದಾರೆ. ಹಾಗೆ ನೋಡಿದರೆ, ವಿ. ಕೆ. ಮೂರ್ತಿಯವರ ಪ್ರವೃತ್ತಿ ನಾಟಕ ರಂಗ. ಅದರ ಕೃಷಿಯಲ್ಲಿ ಅವರು ಮಾಡಿದ ಸಾಧನೆಗಳು ಅಧ್ಭುತ. ಸಂಗೀತದಲ್ಲಿ ಅಪಾರ ಆಸಕ್ತಿಯಿರುವ ಸ್ವತಃ ವಯೊಲಿನ್ ವಾದಕರು ಸಹಿತ. ಇದಕ್ಕೆ ಅವರು ಮೂಕಿ ಟಾಕೀಸ್ ಗಳನ್ನು ಶ್ಲಾಘಿಸುತ್ತಾರೆ. ಅಂದಿನ ದಿನಗಳಲ್ಲಿ ಒಂದು ಮೂಕಿ ಚಿತ್ರ ಪ್ರದರ್ಶಿಸುತ್ತಿರುವಾಗ, ಹಿನ್ನೆಲೆ ಗಾಯಕರು ತಮ್ಮ ವಾದ್ಯಗಳೊಂದಿಗೆ ಸರಿಹೊಂದುವ ಯಾವುದಾದರೂ ಗೀತೆಯನ್ನು ನುಡಿಸುತ್ತಿದ್ದರು. ಪ್ರೇಕ್ಷರು ಸುಮ್ಮನಿರುತ್ತಿದ್ದರು. ಹೀಗೆ ಚಾಲ್ತಿಯಲ್ಲಿದ್ದ ಅವರ ಊರಿನ ಚಿತ್ರಮಂದಿರದಲ್ಲಿ ಮೂರ್ತಿಯವರು ಪಿಟೀಲು ಬಾರಿಸುತ್ತಿದ್ದರು. ಮತ್ತು ಸಮಯಬಂದರೆ ಹಾರ್ಮೋನಿಯಮ್ ಸಹಿತ ! 

ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುವುದಕ್ಕೆ ಮೊದಲು ಅವರೊಂದು ಸೊಗಸಾದ ಆರ್ಕೆಸ್ಟ್ರಾ ತಂಡವನ್ನು ಹೊಂದಿದ್ದರು. ಮೈಸೂರ್ ಅಸೋಸಿಯೇಷನ್ ನ ಪ್ರಾರಂಭದ ದಿನಗಳಿಂದಲೂ ಹಲವಾರು ನಾಟಕ ಕಲಾವಿದರು, ದಿಗ್ದರ್ಶಕರು,  ತಮ್ಮ ಅನುಪಮ ಕೊಡುಗೆಗಳನ್ನು ಕೊಡುತ್ತಾಬಂದಿರುವುದನ್ನು ನಾವು ಕಾಣಬಹುದು. ಆದರೆ ಮೂರ್ತಿಯವರು ತಮ್ಮ ಅನನ್ಯ ಕಾರ್ಯವಿಧಾನಗಳಿಂದ ಅವರೆಲ್ಲರಿಗೂ ವಿಭಿನ್ನವಾಗಿ ಎದ್ದು ಕಾಣಿಸುತ್ತಾರೆ. ಕುಟ್ಟಿಯೆಂದು ಹೆಸರುವಾಸಿಯಾಗಿದ್ದ ಅವರು ಎಲ್ಲ ಕಲಾಕಾರರನ್ನೂ ತಮ್ಮ ಕುಟುಂಬದ ಸದಸ್ಯರಂತೆ ಕಂಡು ಅವರಲ್ಲಿ ಸುಪ್ತವಾಗಿದ್ದ ನಟನಕಲೆಯನ್ನು ಹೊರತರಲು ಬಹುವಾಗಿ ಪ್ರಯತ್ನಿಸಿದರು. ಆಕಾಲದಲ್ಲಿ ಗಂಡಸರೇ ಸ್ತ್ರೀಪಾತ್ರಗಳನ್ನು ಮಾಡಬೇಕಾಗಿತ್ತು. ಆದರೆ ಮೂರ್ತಿಯವರ ಪ್ರಭಾವಕ್ಕೊಳಗಾಗಿ ಅನೇಕ ಹೆಣ್ಣುಮಕ್ಕಳು ರಂಗಮಂಚದಮೇಲೆ ಬಂದು ಅಭಿನಯವನ್ನು ನೀಡಿದ ಪ್ರಸಂಗ ಅನುಕರಣೀಯ. ಅದರಲ್ಲಿ ನಿವೃತ್ತ ನ್ಯಾಯಾಧೀಶ ಶ್ರೀ. ಬಿ. ಎನ್. ಶ್ರೀಕೃಷ್ಣ ರವರ ಮಾತೋಶ್ರೀ. ಶ್ರೀಮತಿ. ಶಾರದಮ್ಮನವರು ಒಂದು ಜೀವಂತ ಉದಾಹರಣೆಯಾಗಿದ್ದಾರೆ.

ಮುಂಬೈನ ಅನೇಕ ಕನ್ನಡ ಸಂಸ್ಥೆಗಳ ಪದಾಧಿಕಾರಿಗಳು ಬಂದು ಮೂರ್ತಿಯವರಿಗೆ ಸನ್ಮಾನಮಾಡಿದರು. ಕೊಡಕ್ ಇಂಡಿಯದ ಪದಾಧಿಕಾರಿಗಳು, ಮತ್ತು ಸಿನಿ ಆರ್ಟಿಸ್ಟ್ಸ್ ಗಿಲ್ಡ್ ನ ಪದಾಧಿಕಾರಿಯಾಗಿರುವ ಶ್ರೀ. ಮನಮೋಹನ ಶೆಟ್ಟಿಯವರು ಕುಟ್ಟಿಯವರನ್ನು ಅಭಿನಂದಿಸಿದರು,ಮತ್ತು ಸ್ಮೃತಿ ಫಲಕವನ್ನು ಕೊಟ್ಟರು. ಮುಂಬೈನ ನಾಟಕರಂಗದಲ್ಲಿ ಹೆಸರುಮಾಡಿರುವ, ನಾಟಕ ಕರ್ತೃ, ನಿರ್ದೇಶಕ, ಹಾಗು ನಟ, ಡಾ. ಬಿ. ಆರ್. ಮಂಜುನಾಥ್, ಮೈಸೂರ್ ಅಸೋಸಿಯೇಷನ್ ನ ಹಲವಾರು ಸದಸ್ಯರು,  ಶಿಕ್ಷಣ ಕಲೆ, ನಾಟಕ, ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಮಾಡಿರುವ ಅನುಸಂಧಾನಗಳ ಅಪಾರಕೊಡುಗೆಗಳನ್ನು ಸ್ಮರಿಸುತ್ತಾ, ಮೂರ್ತಿಯವರ ಜೊತೆಯಲ್ಲಿ ಅವರಿಗಿದ್ದ ಒಡನಾಟದ ಹಲವು ದಶಕಗಳ ಮಧುರಕ್ಷಣಗಳನ್ನು ನೆನಸಿಕೊಂಡರು.

ಈ ಸುಂದರ ಸಂಜೆ ಶ್ರೀ ಪದ್ಮನಾಭರವರ, ’ವಂದೆ ಶಾರದೆ ವೀಣಾಧಾರಿಣಿ ಮಾತಾ’ ಯೆಂಬ ದೇವರ ಪ್ರಾರ್ಥನಾಗೀತೆಯೊಂದಿಗೆ ಆರಂಭವಾಯಿತು.

ನಂತರ ಶ್ರೀ ಗೋವಿಂದ್ ನಿಹಲಾನಿಯವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಪ್ಪು-ಬಿಳುಪಿನ ಒಂದು ವ್ಯಕ್ತಿಚಿತ್ರವನ್ನು ಪ್ರದರ್ಶಿಸಲಾಯಿತು. ವಿ. ಕೆ. ಮೂರ್ತಿಯವರು ಬಾಲಿವುಡ್ ವಲಯದಲ್ಲಿ ನಡೆದುಬಂದ ದಾರಿಯ ಸುಂದರ ಚಿತ್ರಣ ಸಭಿಕರನ್ನು ತಣಿಸಿತು. ಅಧ್ಯಕ್ಷ ಶ್ರೀ. ರಾಮಭದ್ರರು ಮೂರ್ತಿಯವರನ್ನು, ಅತಿಥಿಯವರನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು. ಅವರು ಸಂಗ್ರಹಿಸಿದ ಹಲವಾರು ಸಂಗತಿಗಳನ್ನು ಸಭೆಗೆ ತಿಳಿಸಿದರು. ಅಂದಿನ ದಿನಗಳಲ್ಲಿ ಮೂರ್ತಿಯವರ ಒಡನಾಟಿಯಾಗಿದ್ದ ಶ್ರೀ. ಕರ್ವೆಯವರ ಮಾತುಗಳು ನಮ್ಮನ್ನು ಕೆಲವು ದಶಕಗಳ ದೂರದ ವರೆಗೆ ಕರೆದೊಯ್ಯಿತು.

ಮೈಸೂರ್ ಅಸೋಸಿಯೇಷನ್ ನ ಸದಸ್ಯೆ, ಶ್ರೀಮತಿ. ಉಮಾ ಪ್ರಭಾಕರ್ ರಾವ್, ವೇದಿಕೆಯಮೇಲೆ ಬಂದು ಮಾತಾಡಿ ತಾವು ರಚಿಸಿರುವ, ಮೂರ್ತಿಯವರ ಜೀವನ ಚಿತ್ರದ ಬಿಸಿಲು ಕೋಲು ಪುಸ್ತಕದ ಕೆಲವು ಪುಟಗಳ ಕೆಲವಾರು ಸಂಗತಿಗಳನ್ನು ಮೂರ್ತಿಯವರ ಸಮ್ಮುಖದಲ್ಲಿ ಸಭಿಕರೊಡನೆ ಹಂಚಿಕೊಂಡರು. ಸುಮಾರು ೨ ವರ್ಷಗಳ ಕಾಲ ಸತತವಾಗಿ ಮೂರ್ತಿಯವರು ಲೇಖಕಿಯೊಂದಿಗೆ ಸಹಕರಿಸಿ ಬೇಕಾದ ಸಂಗತಿಗಳನ್ನು ಅವರದೇ ಆದ ಶೈಲಿಯಲ್ಲಿ ತಿಳಿಸಿದ ಹಾಗೂ ಆ ಪುಸ್ತಕವನ್ನು ಬರೆಯಲು ಅನುವುಮಾಡಿಕೊಟ್ಟದ್ದಕ್ಕಾಗಿ ಅವರ ಪರಿವಾರದವರನ್ನೂ ಶ್ಲಾಘಿಸಿದರು. 

ಮೈಸೂರ್ ಅಸೋಸಿಯೇಷನ್ ನ, ನೇಸರು ಪತ್ರಿಕೆಯ ಸಂಪಾದಕಿ, ಡಾ. ಗಿರಿಜಾ ಶಾಸ್ತ್ರಿಯವರು ಅತ್ಯಂತ ಆಸ್ತೆಯಿಂದ ಹೊರತಂದ  ’ನೇಸರು ಪತ್ರಿಕೆಯ ವಿಶೇಷ ಸಂಚಿಕೆ” ಯನ್ನು ಶ್ಯಾಮ್ ಬೆನೆಗಲ್ ರವರು  ಬಿಡುಗಡೆ ಮಾಡಿದರು. ಮನಮೋಹನ್ ಶೆಟ್ಟಿ ಮತ್ತು ಕೊಡಕ್ ಇಂಡಿಯದ ಪದಾಧಿಕಾರಿಯವರು ಮಾತಾಡಿದರು.  

ಇಂದಿನ ಪೀಳಿಗೆಯ ಅನಿಲ್ ಮೆಹ್ತಾ ರವರು ಮೂರ್ತಿಯವರ ಕಾರ್ಯವನ್ನು ಕೊಂಡಾಡಿ ಅವರ ಸಂಶೋಧನೆ ಮತ್ತು ಕಾರ್ಯಕ್ಷಮತೆಗಳು ಇಂದಿನ ಯುವ ಕ್ಯಾಮರಾಮೆನ್ ಗಳಿಗೆ ಒಂದು ದಾರಿದೀಪವಾಗಿದೆ ಎಂದರು. ಸನ್ಮಾನ ಪತ್ರಮತ್ತು ಪುಷ್ಪಗುಚ್ಛಗಳನ್ನು ಇತ್ತು ತಮ್ಮ ಪ್ರೀತಿ, ಗೌರವಗಳನ್ನು ವ್ಯಕ್ತಪಡಿಸಿದರು. ನಂತರ ಮೈಸೂರ್ ಅಸೋಸಿಯೇಷನ್ ನ ಪದಾಧಿಕಾರಿ, ಶ್ರೀ. ನಾರಾಯಣ ನವಿಲೇಕರ್ ರವರು, ಅಸೋಸಿಯೇಷನ್ ನ ಬಿನ್ನವತ್ತಳೆಯ ಫಲಕವನ್ನು ಓದಿದರು. ನಂತರ ಅಧ್ಯಕ್ಷ ರಾಮಭದ್ರರು , ಕುಟ್ಟಿಯವರಿಗೆ ಶಾಲುಹೊದಿಸಿ, ಪುಷ್ಪಗುಚ್ಛದೊಂದಿಗೆ, ಸ್ಮೃತಿಫಲಕವನ್ನಿತ್ತು ಗೌರವ ಸಲ್ಲಿಸಿದರು. ಸಮಾರಂಭದ ಪ್ರಮುಖ ಅತಿಥಿಯಾಗಿದ್ದ ಶ್ರೀ. ಶ್ಯಾಮ್ ಬೆನೆಗಲ್ ಮೂರ್ತಿಯವರ ಜೊತೆಯಲ್ಲಿ ಕೆಲಸಮಾಡಿದ ಸುಂದರ ಕ್ಷಣಗಳನ್ನು ನೆನೆಸಿಕೊಂಡರು. ಅವರ ಜವಹರ್ಲಾನ್ ನೆಹೃರವರ ಪುಸ್ತಕದ ಆಧಾರದಮೇಲೆ ನಿರ್ಮಿಸಿದ ಟೆಲಿವಿಷನ್ ಧಾರಾವಾಹಿ,’ಭಾರತ್ ಏಕ್ ಖೋಜ್ ”ನಲ್ಲಿ ಕ್ಯಾಮರಾಮನ್ ಆಗಿದ್ದ ಮೂರ್ತಿಯವರು ಸೂಚಿಸಿದ ಕೆಲವು ಲೊಕೇಶನ್ ಗಳನ್ನು ಮತ್ತು ವಿಷಯದಬಗ್ಗೆ ಅವರಿಗಿದ್ದ ಪ್ರಭುತ್ವವನ್ನು ತುಂಬಾ ಹೊಗಳಿದರು. ೫೩ ಗಂಟೆಗಳ ಕಾಲದ ಆ ಟೆಲೆವಿಶನ್ ಸೀರಿಯಲ್ ನ ಯಶಸ್ಸಿನ ಹಿಂದೆ ಮೂರ್ತಿಯವರ ಪಾಲು ಅತಿ ಮಹತ್ವದ್ದೆಂದು ಅವರು ವಿವರಿಸಿದರು.

ಇದರ ತರುವಾಯ ಕೊನೆಯಲ್ಲಿ ವಿ. ಕೆ. ಮೂರ್ತಿಯವರು ಕನ್ನಡ ಭಾಷೆಯಲ್ಲಿ ಮಾತನಾಡುತ್ತಾ, ತಮ್ಮ ಮುಂಬೈಜೀವನದಲ್ಲಿ ಮೈಸೂರ್ ಅಸೋಸಿಯೇಷನ್ ನ ಮಹತ್ವ, ಮತ್ತು ಅಲ್ಲಿನ ಗೆಳೆಯರ ಸಹಕಾರ, ಮತ್ತು ಒಳ್ಳೆತನಗಳನ್ನು ಮುಕ್ತವಾಗಿ ಹೊಗಳಿ, ಸುಮಾರು ೫೦ ವರ್ಷಗಳ ಕಾಲದ ಅಸೋಸಿಯೇಷನ್ ನ ಸಂಬಂಧ ಒಂದು ಮರೆಯಲಾರದ ಅನುಭವವೆಂದು, ಮನಸಾರೆ ಅಭಿನಂದಿಸಿದರು.

ಸಭಾಂಗಣದಲ್ಲಿ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ, ಡಾ. ಪ್ರಭಾಕರ್ ರಾವ್, ಶ್ರಿಮತಿ. ರಾಮಭದ್ರ,  ಶ್ರಿಮತಿ. ಉಮಾ ಪ್ರಭಾಕರ್ ರಾವ್ , ಶ್ರಿಮತಿ. ಶಾರದಮ್ಮ, ಡಾ. ಪೂರ್ಣಿಮಾ ಶ್ರೀಕೃಷ್ಣ, ಮತ್ತು ಶ್ರೀ. ಬಿ. ಎನ್. ಶ್ರೀಕೃಷ್ಣ, ಮುಂತಾದ ಗಣ್ಯರು..

ಕೊನೆಯಲ್ಲಿ ವಂದನಾರ್ಪಣೆಯನ್ನು ಶ್ರೀ. ಮಂಜುನಾಥಯ್ಯನವರು ಮಾಡಿದರು. ಊಟದ ಏರ್ಪಾಡನ್ನು ಅಸೋಸಿ ಯೇಷನ್ ನ ಟೆರೇಸ್ ಮೇಲೆ ಏರ್ಪಡಿಸಲಾಗಿತ್ತು.

ವಿ. ಕೆ. ಮೂರ್ತಿಯವರು ಛಾಯಾಗ್ರಾಹಕರಾಗಿ ಮಾಡಿದ ಕೆಲಸಗಳನ್ನು ನೆನಪಿಸುವ ಅನೇಕ ಸುಂದರ ಚಲನಚಿತ್ರಗಳ ಚಿತ್ರ-ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಆದಿನ ಮೂರ್ತಿಯವ ಜೊತೆಯಲ್ಲಿ ಶ್ರಿ ಗೋವಿಂದ ನಿಹಲಾನಿಯವರು, ಮನಮೋಹನ ಶೆಟ್ಟಿಯವರು, ಶ್ಯಾಮ್ ಬೆನೆಗಲ್ ರವರು, ಮತ್ತು ನಿವೃತ್ತ ನ್ಯಾಯಾಧೀಶ, ಶ್ರೀ. ಬಿ. ಎನ್. ಶ್ರೀಕೃಷ್ಣರವರು, ಮತ್ತು ಅಪಾರ ಚಿತ್ರರಸಿಕರು, ಭಾಗವಹಿಸಿದ್ದರು.

 

ಚಿತ್ರ, ಮತ್ತು ನಿರೂಪಣೆ, ವೆಂಕಟೇಶ್

http://www.youtube.com/watch?v=oogNj3IyR_Y