ಬಿಬಿಎಂಪಿ: ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿತ ಅಭ್ಯರ್ಥಿಗಳ ಚುನಾವಣಾ ಪ್ರಣಾಳಿಕೆ ಬಗ್ಗೆ ಎರೆಡು ಮಾತು

ಬಿಬಿಎಂಪಿ: ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿತ ಅಭ್ಯರ್ಥಿಗಳ ಚುನಾವಣಾ ಪ್ರಣಾಳಿಕೆ ಬಗ್ಗೆ ಎರೆಡು ಮಾತು

ಎಲ್ಲರಿಗು ನಮಸ್ಕಾರ,
ಇನ್ನೇನು ಬಿಬಿಎಂಪಿ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಉಳಿದಿವೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ನಿಮ್ಮ ಮನೆ ಬಾಗಿಲಿಗೆ ಬಂದು ನಮ್ಮ ಪಕ್ಷಕ್ಕೆ ಓಟು ನೀಡಿ ಅಂತ ಕೇಳಿರುತ್ತಾರೆ (ಅದರಲ್ಲೂ ಪ್ರಮುಖವಾಗಿ ರಾಷ್ಟ್ರೀಯ ಪಕ್ಷಗಳು). ಆದರೆ ಈ ಬಾರಿಯ ವಿಶೇಷತೆ ಅಂದರೆ ಕಳೆದ ಒಂದು ದಶಕಗಳಿಂದ ಕನ್ನಡ-ಕನ್ನಡಿಗ-ಕರ್ನಾಟಕದ ಪರವಾಗಿ ದನಿ ಎತ್ತುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಅಭ್ಯರ್ಥಿಗಳನ್ನು ಬಿಬಿಎಂಪಿ ಚುನಾವಣಾ ಕಣಕ್ಕೆ ಇಳಿಸುವ ಮೂಲಕ ಹೊಸ ಇತಿಹಾಸ ಬರೆದಿದೆ.

ಯಾರು ಏನೇ ಹೇಳಲಿ, ಕರವೇ ಈ ನಾಡಿನ ಎಲ್ಲಾ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸ ಮಾಡಿದೆ. ಅದು ಗಡಿ, ನೆಲ, ಜಲ, ಭಾಷೆ ಯಾವುದೇ ಇರಲಿ ಕನ್ನಡಿಗರಿಗೆ ಅನ್ಯಾಯವಾದಗ ಕರವೇ ಮುಂಚೂಣಿಯಲ್ಲಿ ನಿಂತು ತನ್ನ ಕೆಲಸ ಮಾಡಿದೆ. ರಾಜ್ಯ ಸರಕಾರದಿಂದ ಆದ ಅನ್ಯಾಯವಿರಬಹುದು ಅಥವಾ ರಾಜ್ಯದೆಡೆಗಿನ ಕೇಂದ್ರದ ಮಲತಾಯಿ ಧೋರಣೆ ಇರಬಹುದು, ಹೋರಾಟದ ಮೂಲಕ ಆದ ಅನ್ಯಾಯ ಸರಿಪಡೆಸಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಇಂತಹ ಹಿನ್ನೆಲೆಯಿಂದ ಬಂದಿರುವ ಕರವೇ ಬಿಬಿಎಂಪಿ ಚುನಾವಣೆಯಲ್ಲಿ ಸುಮಾರು ೨೦ ಕಡೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿದೆ.

ಎಲ್ಲಾ ಪಕ್ಷಗಳು ಬಿಬಿಎಂಪಿ ಚುನಾವಣೆಗಾಗಿ ತಮ್ಮ ಪ್ರಣಾಳಿಕೆಯನ್ನು ಸೋಮವಾರ ಬಿಡುಗಡೆ ಮಾಡಿದವು. ಅಭಿವೃದ್ಧಿಗಿಂತ ಗಿಮಿಕ್ ಗೆ ಹೆಚ್ಚಿನ ಸ್ಥಾನ ನೀಡಿದ್ದಾರೆ ಅಂತ ಅನ್ನಿಸಿತು, ಮೂಲಭೂತ ಸೌಕರ್ಯಕ್ಕಿಂತ ಬೇಡವಾಗಿರುವ ಕೆಲವು ಅಂಶಗಳಿಗೆ ಒತ್ತು ನೀಡಲಾಗಿರುವುದು ಕಂಡುಬಂತು. ಕುತೂಹಲಕ್ಕೆ ನಾನು ಕರವೇ ಬೆಂಬಲಿತ ಅಭ್ಯರ್ಥಿಗಳ ಚುನಾವಣೆ ಪ್ರಣಾಳಿಕೆ ಏನಾದರು ಸಿಗುತ್ತ ಅಂತ ಕರ್ನಾಟಕ ರಕ್ಷಣಾ ವೇದಿಕೆಯ ತಾಣಕ್ಕೆ ಹೋದರೆ ಅಲ್ಲಿ ನನಗೆ ಪ್ರಣಾಳಿಕೆ ಸಿಕ್ತು. ಅಲ್ಲಿ ನನಗೆ ಪ್ರಮುಖವಾಗಿ ಕಂಡ ಹಾಗು ಇಷ್ಟವಾದ ಎರೆಡು ಅಂಶಗಳೆಂದರೆ ಬೆಂಗಳೂರಿನ ಅಭಿವೃದ್ಧಿಗೆ ಆದ್ಯತೆ ಹಾಗು ಬೆಂಗಳೂರಿನಲ್ಲಿ ಕನ್ನಡದ ವಾತಾವರಣ ನಿರ್ಮಿಸುವುದು (ಇದರಲ್ಲಿ ಆಡಳಿತ, ಗ್ರಾಹಕ ಸೇವೆಯಂತಹ ವಿಷಯಗಳು ಸೇರಿವೆ).

ನಿನ್ನೆ ನನಗೆ ಕರವೇಯಿಂದ ಬಂದ ಮಿಂಚೆಯನ್ನ ಅವರ ಅನುಮತಿಯೊಂದಿಗೆ ಇಲ್ಲಿ ಹಾಕುತ್ತಿದ್ದೇನೆ
ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿತ ಅಭ್ಯರ್ಥಿಗಳ ಚುನಾವಣಾ ಪ್ರಣಾಳಿಕೆ
ಕನ್ನಡದ ಬಂಧುಗಳೇ,

ಕಳೆದ ಹತ್ತು ವರ್ಷಗಳಿಂದ ಕನ್ನಡ-ಕನ್ನಡಿಗ-ಕರ್ನಾಟಕದ ಪರವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯು ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿತರಾದ ಈ ಅಭ್ಯರ್ಥಿಗಳು ಮಹಾನಗರ ಪಾಲಿಕೆಯಲ್ಲಿ
ಮಾಡಲಿರುವುದೇನು? ನಮ್ಮ ಪ್ರಣಾಳಿಕೆ ಏನು? ಎಂಬುದನ್ನು ಈ ಕೆಳಗಿನ ಕೊಂಡಿಯಲ್ಲಿ ಓದಿರಿ. ಕನ್ನಡಪರ ಅಭ್ಯರ್ಥಿಗಳಿಗೆ ಮತ ನೀಡಿ. ನಮ್ಮನ್ನು ಹರಸಿ.
 http://www.karnatakarakshanavedike.org/modes/view/127/krv-bembalita-abhyarthigala-bbmp-pranalike.html
 
ಮೇಲಿನ ಕೊಂಡಿಯನ್ನು ತೆರೆದರೆ ಕೆಳಗಿನ ಸಾಲುಗಳು ಕಾಣಿಸುತ್ತವೆ.....

ಕರ್ನಾಟಕವನ್ನು ಕಳೆದ ಅರವತ್ತು ವರ್ಷಗಳಿಂದ ಆಳಿದ್ದು ರಾಷ್ಟ್ರೀಯ ಪಕ್ಷಗಳು. ಹರಿದು ಹಂಚಿಹೋಗಿದ್ದ ನಮ್ಮ ನಾಡು ಒಂದಾದಾಗ ಇದ್ದ ಎಲ್ಲಾ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ ಎಂಬುದು ಇವುಗಳ ಕಾರ್ಯವೈಖರಿಗೆ ಸಾಕ್ಷಿ. ಗಡಿ ಸಮಸ್ಯೆ, ನದಿ ನೀರು ಹಂಚಿಕೆ ಸಮಸ್ಯೆಯಂತಹ ತಗಾದೆಗಳು ಇಂದಿಗೂ ಜೀವಂತ. ಕೇಂದ್ರಸರ್ಕಾರಕ್ಕೆ ಹರಿದು ಹೋಗುವ ತೆರಿಗೆ ಹಣದ ಪ್ರಮಾಣ ಅಪಾರವಾಗಿದ್ದರೂ... ನಮ್ಮ ನಾಡಿಗೆ ಬಂದ ಯೋಜನೆಗಳು, ರಸ್ತೆ, ರೈಲು ಮಾರ್ಗಗಳು, ನೆರೆ-ಬರ ಪರಿಹಾರಗಳು ಎಲ್ಲವೂ ನಗಣ್ಯ. ಕೃಷ್ಣಾ ಕಾವೇರಿ ಮಹದಾಯಿ ನದಿನೀರು ಹಂಚಿಕೆಯಿರಲಿ, ಬೆಳಗಾವಿ, ಕಾಸರಗೋಡು, ಹೊಗೆನಕಲ್ ಗಡಿ ತಕರಾರುಗಳಿರಲಿ, ರೈಲ್ವೇ ಯೋಜನೆಗಳಿರಲಿ, ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಯಾಗಲೀ ಯಾವುದೂ ಕೂಡಾ ಸರಳವಾಗಿ ದಕ್ಕಿಸಿಕೊಡಲಾಗದ ಕೈಲಾಗದತನ ಇವುಗಳದ್ದು. ನಾಡಿನ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತಿದ ಒಂದು ನಿದರ್ಶನವೂ ನಮ್ಮ ಮುಂದಿಲ್ಲ. ಕನ್ನಡನುಡಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಗಳಿಸಿಕೊಡುವಾಗಲಾಗಲೀ, ಕಾವೇರಿ ನ್ಯಾಯಾಧಿಕರಣದ ಐತೀರ್ಪಿನ ವಿರುದ್ಧವಾಗಲೀ ದನಿಯೆತ್ತಿ ಹೋರಾಡಿದ್ದು ಈ ಯಾವ ರಾಜಕೀಯ ಪಕ್ಷಗಳೂ ಅಲ್ಲ, ಬದಲಾಗಿ ನಾಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ. ಈ ನಾಡಿನ ಹಿತ ಕಾಪಾಡುವ, ನಾಡನ್ನು ಏಳಿಗೆಯ ದಾರಿಯತ್ತ ಒಯ್ಯುವ ಬದ್ಧತೆ ಇರುವುದು ಕನ್ನಡ ಕನ್ನಡಿಗ ಕರ್ನಾಟಕಗಳನ್ನು ಕೇಂದ್ರವಾಗಿಟ್ಟುಕೊಂಡ ಸಿದ್ಧಾಂತ ಹೊಂದಿರುವ ರಾಜಕೀಯ ಪಕ್ಷಕ್ಕೆ ಮಾತ್ರವೇ. ಕರ್ನಾಟಕದಲ್ಲಿ ಈ ಕೊರತೆಯನ್ನು ತುಂಬಲು ಕರ್ನಾಟಕ ರಕ್ಷಣಾ ವೇದಿಕೆಯು ಮುಂದಾಗಿದೆ. ಹಾಗಾಗಿ ಕರ್ನಾಟಕದ ಏಳಿಗೆ, ಕನ್ನಡದ ಸಾರ್ವಭೌಮತ್ವ ಸ್ಥಾಪನೆಗೆ ಪೂರಕವಾದ ಕಾರ್ಯಸೂಚಿಗಳೇ ನಮ್ಮ ಪ್ರಣಾಳಿಕೆ. ನಿಮ್ಮೆಲ್ಲರ ಬೆಂಬಲದಿಂದ ಈ ಗುರಿ ಈಡೇರಿಕೆಯತ್ತ ನಮ್ಮ ನಡೆ.

ಹೀಗೆ ಇನ್ನು ಅನೇಕ ವಿಚಾರಗಳನ್ನು ಕರವೇ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.........
ದಯವಿಟ್ಟು ಒಮ್ಮೆ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ...

Rating
No votes yet

Comments