ಪುಣೆಯಲ್ಲಿ ನಡೆದ ಲೊಕಲೈಸೇಶನ್ ಕ್ಯಾಂಪ್
ಉಚಿತ ಮುಕ್ತ ಆಕರ ತಂತ್ರಾಂಶಗಳೆಡೆಗೆ ಪ್ರೀತಿಯಿರುವ ಹಾಗು ಅದನ್ನು ಬಳಸುವ ಬಹಳಷ್ಟು ಸಾಮಾನ್ಯ ಜನರಿಗೆ ಅದರ ಅನುವಾದದಲ್ಲಿ ತೊಡಗಿಸಿಕೊಳ್ಳಬೇಕೆಂಬ ಹಂಬಲವಿದ್ದರೂ ಸಹ ಎಲ್ಲಿಂದ ಆರಂಭಿಸಬೇಕು, ಹೇಗೆ ಆರಂಭಿಸಬೇಕು ಎನ್ನುವುದರಿಂದ ಹಿಡಿದು ಇದರಲ್ಲಿ ಎದುರಾಗುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಎನ್ನುವಂತಹ ಸಮಸ್ಯೆಗಳಿಂದಾಗಿ ಮುಂದುವರೆಯಲು ತೊಡುಕುಂಟಾಗುತ್ತದೆ. ಈ ಬಗೆಯ ಆಸಕ್ತಿಯನ್ನು ಹೊಂದಿದ ಕೆಲವರನ್ನು ಒಂದೆಡೆ ಸೇರಿಸಿ ಉಚಿತ ಹಾಗು ಮುಕ್ತ ಆಕರ ತಂತ್ರಾಂಶಗಳ ಅನುವಾದದ ಬೆನ್ನೆಲುಬಾದಂತಹ ಸಮುದಾಯವನ್ನು ಬೆಳೆಸುವ ಮುಖ್ಯ ಉದ್ಧೇಶದಿಂದ ಪುಣೆಯಲ್ಲಿ ಕಳೆದ ವಾರಾಂತ್ಯ, ಅಂದರೆ ಮಾರ್ಚ್ ೨೦ ಹಾಗು ೨೧ ರಂದು ಲೊಕಲೈಸೇಶನ್ ಕ್ಯಾಂಪೊಂದನ್ನು ನಡೆಸಲಾಯಿತು. ಇದನ್ನು ಸ್ವತಂತ್ರ ಮಲೆಯಾಳಂ ಕಂಪ್ಯೂಟಿಂಗ್, Uncode (Lokayat Free Software Initiative) ಹಾಗು ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್(CoEP)ನ Free Software Users Group ನ ನೆರವಿನಿಂದ Red Hatನ ಆಫೀಸ್‌ನಲ್ಲಿ ಆಯೋಜಿಸಲಾಗಿತ್ತು. ಸ್ಥಳದ ಅಭಾವವಿದ್ದ ಕಾರಣ, ಕೇವಲ ೨೫ ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೆಚ್ಚಿನ ಪ್ರಚಾರವಿಲ್ಲದೆ ಇದ್ದರೂ ಸಹ ನಿರೀಕ್ಷಿಸಿದಷ್ಟು ಆಸಕ್ತರು ಸೇರಿದ್ದರು. ಹೆಚ್ಚಿನವರು ಪುಣೆ ಇಂಜಿನಿಯರಿಂಗ್ ಕಾಲೇಜ್‌ನ ವಿದ್ಯಾರ್ಥಿಗಳಾಗಿದ್ದರು. ಭಾಗವಹಿಸುವವರಿಗಾಗಿ ಅಂತರಜಾಲ ಸಂಪರ್ಕದ ಸಲುವಾಗಿ ವೈಫೈ ಅನ್ನು ಸಹ ಅಣಿಗೊಳಿಸಲಾಗಿತ್ತು. ಲ್ಯಾಪ್‌ಟಾಪ್ ಇಲ್ಲದೆ ಬಂದವರಿಗೆ ಕ್ಯಾಂಪ್‌ನಲ್ಲಿ ಬಳಸಲು ಲ್ಯಾಪ್‌ಟಾಪ್ ಅನ್ನೂ ಸಹ ವ್ಯವಸ್ಥೆ ಮಾಡಲಾಗಿತ್ತು.
ಉಚಿತ ಹಾಗು ಮುಕ್ತ ಆಕರ ತಂತ್ರಾಂಶಗಳ ಬಗೆಗಿನ ಕಿರುಪರಿಚಯದಿಂದ ಆರಂಭಗೊಂಡು, ಉಚಿತ ತಂತ್ರಾಂಶದ ತತ್ವಗಳು ಹಾಗು ಅದರ ವಾಣಿಜ್ಯ ಮಾದರಿ(ಬಿಸ್‌ನೆಸ್ ಮಾಡೆಲ್) ಕುರಿತಾದ ಕುತೂಹಲಕರವಾದ ಚರ್ಚೆ ನಡೆಯಿತು. ಅಲ್ಲಿ ಅನುವಾದಗೊಂಡ ಅನ್ವಯಗಳಲ್ಲಿ ಎನ್ಕೋಡಿಂಗ್ ಇಂದ ಹಿಡಿದು ರೆಂಡರಿಂಗ್‌ವರೆಗೆ ಏನೆಲ್ಲಾ ಘಟಕಗಳಿರುತ್ತವೆ, ಯೂನಿಕೋಡ್‌ನ ಮಹತ್ವವೇನು ಎಂಬ ಮಾಹಿತಿಯನ್ನು ನೀಡಲಾಯಿತು. ಅನುವಾದದಿಂದ ಮೊದಲುಗೊಂಡು ಅಂತಿಮ ಅನುವಾದಿತ ತಂತ್ರಾಂಶವಾಗಿ ಹೊರಬರುವಲ್ಲಿ ಏನೆಲ್ಲಾ ಕಾರ್ಯವಿಧಾನವನ್ನು ಒಳಗೊಂಡಿದೆ ಹಾಗು ಅನುವಾದದಲ್ಲಿ ನೆರವಾಗಲು ಏನೆಲ್ಲಾ ಸಲಕರಣೆಗಳು(ತಂತ್ರಾಂಶಗಳು) ಲಭ್ಯವಿವೆ ಎನ್ನುವುದರ ಬಗೆಗೆ ಸಂಕ್ಷಿಪ್ತವಾಗಿ ತಿಳಿಸಿಲಾಯಿತು. ಅನುವಾದಿಸಬೇಕಿರುವ ಕಡತಗಳನ್ನು ಹೇಗೆ ಪಡೆದುಕೊಳ್ಳಬೇಕು, ಸ್ಥಳೀಯ ಭಾಷೆಯಲ್ಲಿ ಟೈಪ್ ಮಾಡುವುದು ಹೇಗೆ, ಅನುವಾದ ಕಾರ್ಯದಲ್ಲಿ ನೆರವಾಗುವ ಲಭ್ಯವಿರುವ ತಂತ್ರಾಂಶವನ್ನು ಬಳಸಿಕೊಂಡು ಹೇಗೆ ಅನುವಾದಿಸಬೇಕು, ಅದರಲ್ಲಿರುವ ಸವಲತ್ತುಗಳೇನು ಮುಂತಾದ ಹತ್ತು ಹಲವು ಮಾಹಿತಿಗಳ ಬಗೆಗೆ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು ಹಾಗು ಸ್ಥಳದಲ್ಲೆ ಅನುವಾದವನ್ನೂ ಸಹ ಮಾಡಿಸಲಾಯಿತು. ಇನ್‌ಸ್ಕ್ರಿಪ್ಟ್ ಕೀಲಿಮಣೆಯನ್ನು ಬಳಸಿಕೊಂಡು ಸುಲಭವಾಗಿ ಟೈಪ್ ಮಾಡುವುದು ಹೇಗೆ ಎಂಬ ಟ್ರಿಕ್ ಒಂದನ್ನು ಇಂಡ್‌ಲಿನಕ್ಸಿನ ಸಂಸ್ಥಾಪಕರಾದ ಕರುಣಾಕರ್ ತಿಳಿಸಿಕೊಟ್ಟರು. ಅನುವಾದಿಸುವಾಗ ಎದುರಾಗುವ ತೊಂದರೆಗಳು, ಹಾಗು ಇದರಿಂದಾಗಿ ಕೆಲವೊಮ್ಮೆ ಅಸಂಬದ್ಧ, ಅರ್ಥಹೀನ ಅನುವಾದಕ್ಕೆ ಕಾರಣವಾಗುವ ಸನ್ನಿವೇಶಗಳನ್ನು ಹಾಗು ಅದನ್ನು ಹೇಗೆ ನಿವಾರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಉದಾಹರಣೆಯ ಸಹಿತ ವಿವರಿಸಲಾಯಿತು. ಭಾರತೀಯ ಭಾಷೆಗೆ ತಂತ್ರಾಂಶಗಳನ್ನು ಅನುವಾದಿಸುವಾಗ ಪದೆ ಪದೆ ಬಳಸಲಾಗುವ ಸಾಮಾನ್ಯ ಪದಗಳನ್ನು ಶಿಷ್ಟಗೊಳಿಸುವ ಉದ್ಧೇಶವನ್ನು ಹೊಂದಿರುವ FUEL(Frequently Used Entries in Translations) ಪರಿಯೋಜನೆಯ ಬಗೆಗೆ ತಿಳಿಸಿಕೊಡಲಾಯಿತು.
ಒಟ್ಟಿನಲ್ಲಿ, ಅನುವಾದಕ್ಕೆ ಜನರನ್ನು ಸೇರಿಸುವುದು ಹಾಗು ಅವರಿಗೆ ಅನುವಾದದ ಬಗೆಗೆ ಸರಳವಾಗಿ ತಿಳಿಸುವ ಈ ಕ್ಯಾಂಪ್‌ನ ಉದ್ಧೇಶ ಬಹುಮಟ್ಟಿಗೆ ಸಾರ್ಥಕವಾಯಿತು ಎನ್ನುಬಹುದು. ಇಂತಹ ಕ್ಯಾಂಪ್ ಅನ್ನು ದೊಡ್ಡ ಪ್ರಮಾಣದಲ್ಲಿ ಹಾಗು ಪ್ರತಿ ರಾಜ್ಯದಲ್ಲೂ ನಡೆಸಿದಲ್ಲಿ ಉಚಿತ ತಂತ್ರಾಂಶದತ್ತ ಆಸಕ್ತಿಯೂ ಹೆಚ್ಚುತ್ತದೆ. ಈ ಬಗೆಯ ಕಾರ್ಯಕ್ರಮಗಳಿಂದಾಗಿ, ಎಲ್ಲಾ ಭಾರತೀಯ ಭಾಷೆಗಳಲ್ಲಿ ಅನುವಾದಗೊಂಡ ಉತ್ತಮ ಗುಣಮಟ್ಟದ ಉಚಿತ ಹಾಗು ಮುಕ್ತ ಆಕರ ತಂತ್ರಾಂಶಗಳ ಪ್ರಮಾಣವು ವೃದ್ಧಿಸುವುದರಲ್ಲಿ ಸಂದೇಹವಿಲ್ಲ.
ಇನ್ನೊಂದು ತಮಾಶೆಯ ವಿಷಯವೆಂದರೆ, ಉಚಿತ ಹಾಗು ಮುಕ್ತ ತಂತ್ರಾಂಶಗಳ ಅನುವಾದದ ಬಗೆಗೆ ಆಸಕ್ತಿಯನ್ನು ತೋರಿಸಿದ ಪ್ರೆಸ್ ಕವರೇಜ್‌ಗೆಂದು ಡಿಎನ್‌ಎ ದಿನಪತ್ರಿಕೆಯ ವತಿಯಿಂದ ಬಂದಿದ್ದ ವರದಿಗಾರರೊಬ್ಬರು, ತಾನೊಬ್ಬ ಕ್ರೈಮ್ ವರದಿಗಾರನೆಂದೂ, ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ವರದಿ ಮಾಡಲು ಯಾರೂ ಇರದ ಕಾರಣ ನಾನೇ ಬರಬೇಕಾಯ್ತು ಎಂದು ಒಪ್ಪಿಕೊಂಡರು!
ಹೆಚ್ಚಿನ ಓದಿಗಾಗಿ:
ಲೊಕಲೈಸೇಶನ್ ಕ್ಯಾಂಪ್: http://wiki.smc.org.in/Localisation_Camp/Pune
ಲೋಕಲೈಸೇಶನ್ ಹಾಗು ಇಂಟರ್ನ್ಯಾಶನಲೈಸೇಶನ್: http://www.fosscommunity.in/wiki/Localization_and_Internationalization
ಕ್ಯಾಂಪ್‌ನ ಕುರಿತವಾದ ವಿವರವಾದ ಮಾಹಿತಿ: http://www.j4v4m4n.in/2010/03/23/a-day-after-pune-localisation-camp/