ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ.
ನನ್ನ ಮರ್ಯಾದಪುರುಷೋತ್ತಮ ರಾಮ, ನಿನಗೆ ಕೆಲವು ಪ್ರಶ್ನೆಗಳು ಎಂಬ ಲೇಖನಕ್ಕೆ ಪ್ರತಿಕ್ರಿಯೆಯನ್ನು ನೀಡಿದ ವಾದಿರಾಜ, ಸಾಲಿಮಠ್ ಮುಂತಾದವರಿಗೆ ನನ್ನ ಧನ್ಯವಾದಗಳು ಹಾಗೂ ನನ್ನ ಕೃತಜ್ಞತೆಗಳು.
೧. >>ಅವನನ್ನು ಕೊಲ್ಲುವುದಾಗಿ ರಾಮ ಶಪಥ ಮಾಡಿದ್ದ<<
ಹೌದು. ರಾಮನು ವಾಲಿಯನ್ನು ಕೊಲ್ಲುವುದಾಗ ಶಪಥ ಮಾಡಿದನು. ವಾಲ್ಮೀಕಿ ರಾಮಾಯಣ -ಕಿಷ್ಕಿಂಧಾ ಕಾಂಡ-ಸರ್ಗ ೫-ಶ್ಲೋಕ ೨೫ ಈ ಕೆಳಕಂಡ ಹಾಗಿದೆ.
ಉಪಕಾರ ಫಲಮ್ ಮಿತ್ರಮ್ ವಿದಿತಮ್ ಮೇ ಮಹಾಕಪೇ||
ವಾಲಿನಾಮ್ ತಮ್ ವದಿಷ್ಯಾಮಿ ತವ ಭಾರ್ಯಾ ಅಪಹರಿಣಾಮ್|
ಈ ಶ್ಲೋಕದ ತಾತ್ಪರ್ಯವನ್ನು ಕನ್ನಡದಲ್ಲಿ “ಮಹಾಕಪಿಯೇ! ಗೆಳೆತನವು ಉಪಕಾರದ ಫಲ. ಅದು ನನಗೆ ತಿಳಿದಿದೆ. ನಿನ್ನ ಹೆಂಡತಿಯನ್ನು ಅಪಹರಿಸಿದ ವಾಲಿಯನ್ನು ನಾನು ಕೊಲ್ಲುತ್ತೇನೆ”
ರಾಮನು ಕೊಟ್ಟ ಮಾತಿಗೆ ತಪ್ಪದೇ ನಡೆಯುವವನು. ಅರಣ್ಯಕಾಂಡದಲ್ಲಿ ರಾಮನು ಸೀತೆಗೆ “ಅಪಿ ಅಹಂ ಜೀವಿತಮ್ ಜಹ್ಯಾಮ್ ತ್ವಾಮ್ ವಾ ಸೀತೇ ಲಕ್ಷ್ಮಣಾಮ್” (೪-೧೦-೧೮) ಎನ್ನುತ್ತಾನೆ. ನೀಡಿದ ಮಾತಿಗೆ ತಪ್ಪುವ ಬದಲು ಜೀವವನ್ನಾದರೂ ಬಿಟ್ಟೇನು” ಎನ್ನುತ್ತಾನೆ. ರಾಮನು ವಾಲಿಯನ್ನು ಕೊಲ್ಲುವುದಾಗ ಅಗ್ನಿಸಾಕ್ಷಿಯಾಗಿ ಸುಗ್ರೀವನಿಗೆ ಮಾತನ್ನು ಕೊಡುತ್ತಾನೆ. ಇದು ಸ್ಪಷ್ಠ.
೨. >>ರಾಮನು "ನಿಮ್ಮಿಬ್ಬರಲ್ಲಿ ಯಾರು ಅಣ್ಣ, ಯಾರು ತಮ್ಮ ಎಂದು ಗೊತ್ತಾಗಲಿಲ್ಲ" ಎಂದು ನೆಪಹೇಳಿದ್ದು ಏಕೆ ಗೊತ್ತೇ? ಅಣ್ಣ ತಮ್ಮಂದಿರ ಜಗಳವನ್ನು ಬಗೆಹರಿಸುವ ವಿಧಾನ ಅದು, ಒಮ್ಮೆಗೆ ಅವರಿಬ್ಬರಲ್ಲಿ ವಿಷಬೀಜಕ್ಕೆ ನೀರೆರೆದು ಹೆಮ್ಮರವಾಗಿಸದೆ, ಒಂದು ಅವಕಾಶ ಒದಗಿಸಿದ ರಾಮ! ಅದಾದ ನಂತರವೂ ಸುಗ್ರೀವನಿಗೆ ಆ ಸೂಕ್ಷ್ಮ ಅರಿವಾಗಲಿಲ್ಲ,<<
ವಾಲಿ ಮತ್ತು ಸುಗ್ರೀವರು ನೋಡಲು ಒಂದೇ ತರಹವಿದ್ದರು. ಹಾಗಾಗಿ ವಾಲಿಯನ್ನು ಗುರುತಿಸಿ ಅವನನ್ನು ಕೊಲ್ಲುವುದು ಕಷ್ಟವಾಯಿತು ಎಂದು ರಾಮನು ಹೇಳುತ್ತಾನೆ. ಎರಡನೆಯ ಸಲ ಯುದ್ಧಕ್ಕೆ ಹೋಗುವಾಗ ಹೂವಿನ ಮಾಲೆಯನ್ನು ಧರಿಸಿ ಹೋಗುವಂತೆ ಹೇಳುತ್ತಾನೆ. ನಿಜ. ಆದರೆ ವಾದಿರಾಜರು ರಾಮನು ಅಣ್ಣ-ತಮ್ಮಂದಿರ ಜಗಳ ಪರಿಹಾರಕ್ಕೆ ಅವಕಾಶವನ್ನು ನೀಡಿದ ಕಾರಣ ಮೊದಲ ಸಲ ಕೊಲ್ಲಲಿಲ್ಲ ಎನ್ನುವ ವಾದಕ್ಕೆ ಪುರಾವೆ ವಾಲ್ಮೀಕಿ ರಾಮಾಯಣದಲ್ಲಿ ನನಗೆ ದೊರೆಯಲಿಲ್ಲ. ಸಂಬಂಧಪಟ್ಟ ಶ್ಲೋಕವನ್ನು ತಿಳಿಸಿದರೆ ನಾನು ಅವರಿಗೆ ಕೃತಜ್ಞನಾಗಿರುತ್ತೇನೆ.
ಒಂದು ಅನುಮಾನ.
ರಾಮನು, ಅಣ್ಣ ತಮ್ಮಂದಿರು ತಮ್ಮ ಜಗಳವನ್ನು ಬಿಡಿಸಿಕೊಳ್ಳಲಿ ಎಂಬ ಅಭಿಪ್ರಾಯವನ್ನು ಹೊಂದಿದ್ದರೆ, ಒಂದು ವೇಳೆ ವಾಲಿ-ಸುಗ್ರೀವರು ತಮ್ಮ ಜಗಳವನ್ನು ಬಿಡಿಸಿಕೊಂಡಿದ್ದರೆ, ಆಗ ರಾಮನು ವಚನ ಭ್ರಷ್ಟನಾಗುತ್ತಿದ್ದನು. ರಾಮನು ಜೀವವನ್ನಾದರೂ ಬಿಡಲಿಕ್ಕೂ ತಯಾರು. ನೀಡಿದ ವಚನವನ್ನು ಪಾಲಿಸಿಯೇ ತೀರುವವನು. ಹಾಗಾಗಿ ಅಂತಹ ಉದ್ದೇಶ ರಾಮನ ಮನದಲ್ಲಿ ಇದ್ದಿರಲಾರದು ಎಂದು ನನ್ನ ಅನಿಸಿಕೆ.
ವಾಲಿಯು ಎರಡನೆಯ ಬಾರಿ ಸುಗ್ರೀವನೊಡನೆ ಹೋರಾಡಲು ಹೊರಟಾಗ ತಾರೆಯು ತಾನು ಅಂಗದನ ಮೂಲಕ ರಾಮ ಹಾಗೂ ಲಕ್ಷ್ಮಣನು ಸುಗ್ರೀವನ ಜೊತೆ ಸೇರಿರುವುದನ್ನು ತಿಳಿಸುತ್ತಾಳೆ. ಆಗ ವಾಲಿಯು ಆಡುವ ಮಾತನ್ನು ಗಮನಿಸಬೇಕು.
ನ ಚ ಕಾರ್ಯೋ ವಿಶಾಧಃ ರೆ ರಾಘವಂ ಪ್ರತಿ ಮತ್ಕೃತಿ|
ಧರ್ಮಜ್ಞ: ಕೃತಿಜ್ಞ: ಕಥಮ್ ಪಾಪಮ್ ಕರಿಷ್ಯತಿ||
“ ರಾಘವನ್ನು ನನಗೆ ಅಪಾಯವನ್ನು ಉಂಟು ಮಾಡಬಹುದು ಎಂದು ಚಿಂತಿಸಬೇಡ. ಧರ್ಮವನ್ನು ತಿಳಿದವನು ಪಾಪ ಕಾರ್ಯವನ್ನು ಮಾಡುವುದಿಲ್ಲ.”
ರಾಮನ ಮೇಲೆ ಅಪಾರ ಸದ್ಭಾವನೆಯನ್ನು ಹಾಗೂ ವಿಶ್ವಾಸವನ್ನು ವಾಲಿಯು ಹೊಂದಿರುತ್ತಾನೆ. ರಾಮನು ಸುಗ್ರೀವನ ಪರವಾಗಿ ಯುದ್ಧ ಮಾಡಬೇಕಾದರೆ ತನ್ನ ಎದುರಿಗೇ ಬರುತ್ತಾನೆ ಎಂದು ವಾಲಿಯ ಅಬಿಪ್ರಾಯವಾಗಿರುತ್ತದೆ. ಆದರೆ ರಾಮನು ಈ ಭಾವನೆಯನ್ನು ಹುಸಿಗೊಳಿಸುತ್ತಾನೆ.
೩. >>ಮತ್ತೆ ಯುದ್ದಕ್ಕೆ ಬಂದ, ಆಗ ಹಿಂಬದಿಯಿಂದ ಬಾಣವನ್ನು ಬಿಟ್ಟು ಸಂಹರಿಸಿದ.<<
ಕಿಷ್ಕಿಂಧಾಕಾಂಡ-೧೬ನೆಯ ಸರ್ಗ-೩೫ನೆಯ ಶ್ಲೋಕ.
ಮುಕ್ತಸ್ತು ವಜ್ರ ನಿರ್ಘೋಷಃ ಪ್ರದೀಪ್ತ ಅಶನಿ ಸನ್ನಿಭಃ|
ರಾಘವೇನ ಮಹಾ ಬಾಣೋ ವಾಲಿ ವಕ್ಷಸಿ ಪಾತಿತಃ||
“ರಾಘವನು ಬಿಟ್ಟ ಬಾಣ, ಮಿಂಚಿನಂತೆ ಹೊಳೆಯುತ್ತಾ, ಸಿಡಿಲಿನಂತೆ ಶಬ್ದ ಮಾಡುತ್ತಾ ವಾಲಿಯ ಎದೆಯ ಮೇಲೆ ನಾಟಿತು” – ಇದು ಈ ಶ್ಲೋಕದ ಭಾವಾರ್ಥ. ರಾಮನು ವಾಲಿಯ ಬೆನ್ನಿಗೆ ಬಾಣ ಬಿಡಲಿಲ್ಲ. ಎದೆಗೆ ಬಿಟ್ಟ. ಆದರೆ ಮರೆಯಲ್ಲಿ ನಿಂತು ಬಿಟ್ಟ.
೪. >>ರಾಮ ವಾಲಿಯನ್ನು "ನಿನ್ನಿಛೆ ಇದ್ದರೆ ಮತ್ತೆ ಬದುಕಿಸುತ್ತೇನೆ" ಎಂದು ಕೇಳಿದ್ದು, ಇದೆಲ್ಲ ಯಾರಿಗೂ ಗೊತ್ತಿಲ್ಲದೇ ಹೋದದ್ದು ದುರಂತ<<
ಈ ಅರ್ಥ ಬರುವ ವಾಲ್ಮೀಕಿ ವಿರಚಿತ ಶ್ಲೋಕ ಯಾವುದು ಎಂದು ತಿಳಿಸಿದರೆ ಒಳಿತು. ಒಂದು ವೇಳೆ ವಾಲಿಯು ತಾನು ಬದುಕಲು ಇಚ್ಛಿಸುತ್ತೇನೆ ಎಂದು ಹೇಳಿದ್ದರೆ, ಹಾಗೆಯೇ ರಾಮನು ಅವನನ್ನು ಬದುಕಿಸಿದ್ದರೆ, ರಾಮ ಶಪಥ ವ್ಯರ್ಥವಾಗುತ್ತಿತ್ತು. ರಾಮನು ವಚನಭ್ರಷ್ಟನಾಗುತ್ತಿದ್ದನು. ಅಲ್ಲವೇ!
೫. >>ಹೀಗೆಯೇ ಹತ್ತು ಹಲವು ಸಂಶಯಗಳಿಗೆ ಎಡೆ ಮಾಡಿಕೊಡುವುದು ಯಾವುದೋ ದುರಾಗ್ರಹದಿಂದ….<<
ಈ ಲೇಖನವನ್ನು ಬರೆಯುವಾಗ, ಈಗಲೂ ನನ್ನ ಮನಸ್ಸಿನಲ್ಲಿ ಯಾವುದೇ ದುರಾಗ್ರಹವಿಲ್ಲ ಎಂದು ನಮ್ರತೆಯಿಂದ ತಿಳಿಸುತ್ತಿದ್ದೇನೆ. ಈ ದೇಶದ ಸಂಸ್ಕೃತಿಯ ಬಗ್ಗೆ ನನಗೆ ಅಭಿಮಾನವಿದೆ. ಪುರಾಣಮಿತ್ಯೇವ ನಾ ಸಾಧು ಸರ್ವಂ, ನ ಚಾಪಿ ಕಾವ್ಯಂ ನವಮಿತಿ ವಧ್ಯಂ – ಎಂಬ ಕಾಲೀದಾಸನ ಮಾತಿನಲ್ಲಿ ನಂಬಿಕೆಯಿರುವ ನಾನು, ಈ ಲೇಖನವನ್ನು ಬರೆದೆ. ಇದು ದುರಾಗ್ರಹವೆನ್ನುವುದಾದರೆ, ನಾನು ಪ್ರಶ್ನೆಯನ್ನೇ ಮಾಡಬಾರದೆ?
೬. >>ಒಂದೋ ರಾಮಾಯಣವನ್ನ ಸಂಪೂರ್ಣ ಓದಬೇಕು, ಇಲ್ಲ, ಸಂಪೂರ್ಣ ಓದಿದವರೊಡನೆ ಇಂಥ ಪ್ರಶ್ನೆಗಳನ್ನು ಕೇಳಿ ಬಗೆಹರಿಸಿಕೊಳ್ಳಬೇಕು!<<
ವಾದಿರಾಜರ ಸಲಹೆಯಂತೆ ನಾನು ರಾಮಾಯಣವನ್ನು ಮಗದೊಮ್ಮೆ ಓದುತ್ತೇನೆ. ವಾದಿರಾಜರು ರಾಮಾಯಣವನ್ನು ಸಂಪೂರ್ಣ ಓದಿದ್ದು, ಅರ್ಥ ಮಾಡಿಕೊಂಡಿದ್ದರೆ, ಅದನ್ನು ದಯವಿಟ್ಟು ತಿಳಿಸೋಣವಾಗಲಿ. (ಏಕೆಂದರೆ ಈ ಪ್ರಶ್ನೆಗಳಿಗೆ ನನಗೆ “ಬಲ್ಲವರಿಂದ” ಸಮಾಧಾನ ದೊರೆತಿಲ್ಲ).
೭. <<ವಾಲಿಯು ಓರ್ವ ಮಹಾನುಭಾವ ಎಂದು ನಾವು ಕೇಳಿದ್ದೇವೆ>>
· ವಾಲಿಯು ವೇದವಿಧನು. ಸಂಧ್ಯಾವಂದನಾದಿಗಳನ್ನು ನಿತ್ಯ ಮಾಡುತ್ತಿದ್ದವನು. ವಾಲಿಯು ಎರಡನೆಯ ಸಲ ಸುಗ್ರೀವನ ಜೊತೆ ಯುದ್ಧ ಮಾಡಲು ಹೊರಟಾಗ ತಾರೆಯು ವಿಧಿಪೂರ್ವಕನಾಗಿ ಬೀಳ್ಕೊಡುತ್ತಾಳೆ, ಇದು ವಾಲಿಯು ಒಬ್ಬ ವಿದ್ಯಾವಂತ ಹಾಗೂ ಆಚಾರಗಳನ್ನು ಪರಿಪಾಲಿಸುತ್ತಿದ್ದವನು ಎಂಬುದನ್ನು ತಿಳಿಸುತ್ತದೆ. ೪-೯-೧ ನೆಯ ಶ್ಲೋಕದ ಅನ್ವಯ ಸುಗ್ರೀವನಿಗೂ ವಾಲಿಯೂ ಪ್ರಿಯನೇ ಆಗಿರುತ್ತಾನೆ. ಈ ಹಿನ್ನೆಲೆಯಲ್ಲಿ ವಾಲಿಯನ್ನು ಮಹಾನುಭಾವ ಎಂದು ಕರೆದೆ. ಆದರೆ ಅವನು ವಾಲಿಯು ಸುಗ್ರೀವನ ಹೆಂಡತಿಯನ್ನು ಅಪಹರಿಸಿದ್ದು ನಿಜ. ಆಕೆಯೊಡನೆ ಅಕ್ರಮ ಸಂಬಂಧವನ್ನು ಹೊಂದಿದ್ದೂ ನಿಜ.
೮. >>ಕೆಟ್ಟ ಆಡಳಿತಗಾರ. ರಾವಣನೊಡನೆ ಹೆಣ್ಣೂ ಸೇರಿದಂತೆ ಆಸ್ತಿಗಳ common usage ಬಗ್ಗೆ ಒಪ್ಪಂದ ಮಾಡಿಕೊಂಡವನು<<
· ಈ ಮಾತಿಗೆ ನನಗೆ ಆಧಾರ ದೊರೆತಿಲ್ಲ. ಈ ಬಗ್ಗೆ ಮಾಹಿತಿ ರಾಮಾಯಣದ ಯಾವ ಭಾಗದಲ್ಲಿ ದೊರೆಯಬಹುದು ಎಂದು ಸಾಲಿಮಠ್ ಅವರು ತಿಳಿಸಿದರೆ ಉಪಕೃತನಾಗುತ್ತೇನೆ.
೯. >>ಶ್ರೀಯುತ ಶಂಭೂಕರವರು ಪಾರ್ವತಿ ತನ್ನ ಹೆಂಡತಿಯಾಗಬೇಕೆಂಬ ಇಚ್ಛೆಯಿಂದ ತಪಸ್ಸು ಮಾಡುತ್ತಿದ್ದರು. ಇವರಿಗೆ ರಾಮನು ಏನು ಮಾಡಬೇಕಿತ್ತು? ಬುದ್ದಿ ಹೇಳಬೇಕಿತ್ತೇ?<<
ಸಾಲಿಮಠ್ ಅವರ ವ್ಯಂಗ್ಯ ನನ್ನನ್ನು ತಲುಪಿದೆ.
ಶಂಭೂಕನು ಪಾರ್ವತಿಯನ್ನು ಬಯಸಿ ತಪಸ್ಸನ್ನು ಮಾಡುತ್ತಿದ್ದನು. ಅದಕ್ಕಾಗಿ ರಾಮನು ಶಂಭೂಕನನ್ನು ವಧಿಸಿದನು ಎಂದು ಸಾಲಿಮಠ್ ಅವಾ ಅಭಿಪ್ರಾಯ. ಇದನ್ನು ಒಪ್ಪತಕ್ಕದ್ದು. ನಾನೂ ಒಪ್ಪುವೆ. ಆದರೆ ವಾಲ್ಮೀಕಿ ರಾಮಾಯಣದ ಯಾವ ಕಾಂಡ, ಯಾವ ಸರ್ಗ, ಯಾವ ಶ್ಲೋಕದಲ್ಲಿ ಹೀಗೆ ಹೇಳಿದೆ? ಇದನ್ನು ಸಾಲಿಮಠ್ ಅವರು ತಿಳಿಸಿದರೆ, ಅದನ್ನು ಓದಿ ನನ್ನ ತಪ್ಪನ್ನು ತಿದ್ದಿಕೊಳ್ಳುತ್ತೇನೆ.
ಶಂಭೂಕ ಪ್ರಸಂಗವು ವಾಲ್ಮೀಕಿ ರಾಮಾಯಣದ ಉತ್ತರಕಾಂಡದ ೭೩-೭೬ ಸರ್ಗಗಳಲ್ಲಿ ಬರುತ್ತದೆ. ಇಡೀ ಸರ್ಗವನ್ನು ಇಲ್ಲಿ ಬರೆಯುವ ಬದಲು ಈ ಸರ್ಗಗಳ ಸಾರಾಂಶವನ್ನಷ್ಟೇ ಇಲ್ಲಿ ದಾಖಲಿಸುವೆ.
೧. ಒಂದು ದಿನ ಓರ್ವ ವೃದ್ಧ ಬ್ರಾಹ್ಮಣನು, ತನ್ನ ಮಗನ ಶವವನ್ನು ಹೊತ್ತುಕೊಂಡು ರಾಮನ ಬಳಿ ಬರುತ್ತಾನೆ. ರಾಮ ನಿನ್ನ ರಾಮರಾಜ್ಯದಲ್ಲಿ ಯಾವುದೋ ಅಧಾರ್ಮಿಕ ಕಾರ್ಯ ನಡೆದಿದೆ. ಅದರ ಫಲವಾಗಿ ನನ್ನ ಮಗನು ಸತ್ತಿದ್ದಾನೆ ಎಂದು ದೂರನ್ನು ಕೊಡುತ್ತಾನೆ. ಆಗ ನಾರದರು ಶಂಭೂಕನೆಂಬ ಶೂದ್ರನು ಮಾಡುತ್ತಿರುವ ತಪಸ್ಸೇ ಈ ಮಗುವಿನ ಸಾವಿಗೆ ಕಾರಣ ಎಂದು ಹೇಳುತ್ತಾನೆ. ರಾಮನು ತನ್ನ ಪುಷ್ಪಕ ವಿಮಾನವನ್ನು ಏರಿ ಶಂಭೂಕನನ್ನು ಹುಡುಕುತ್ತಾ ಹೊರಡುತ್ತಾನೆ.
೨. ರಾಮನು ಶಂಭೂಕನ ಬಗ್ಗೆ ವಿಚಾರಿಸುವಾಗ ತಲಕೆಳಕಾಗಿ ತಪಸ್ಸು ಮಾಡುತ್ತಿದ್ದ ಶಂಭೂಕನೇ ಮಾತನಾಡುತ್ತಾನೆ. "ಓ ರಾಮ! ನಾನೇ ಶಂಭೂಕ! ನಾನು ಸುಳ್ಳನ್ನು ಹೇಳುತ್ತಿಲ್ಲ. ನಿಜವನ್ನೇ ನುಡಿಯುತ್ತಿದ್ದೇನೆ. ನಾನೊಬ್ಬ ಶೂದ್ರ. ಸಶರೀರಿಯಾಗಿ ಸ್ವರ್ಗಕ್ಕೆ ಹೋಗಬೇಕೆಂದು ನನ್ನ ಆಸೆ. ಅದಕ್ಕಾಗಿ ತಪಸ್ಸು ಮಾಡುತ್ತಿದ್ದೇನೆ" ಎಂದು ನುಡಿಯುತ್ತಾನೆ. ಶಂಭೂಕನ ಮಾತಿನ್ನು ಮುಗಿದಿರುವುದಿಲ್ಲ. ರಾಮನು ಕೂಡಲೇ ತನ್ನ ಖಡ್ಗವನ್ನು ತೆಗೆದುಕೊಂಡು ಶಂಭೂಕನ ತಲೆಯನ್ನು ಹಾರಿಸುತ್ತಾನೆ.
೩. ಶಂಭೂಕನ ವಧೆಯಾಗುತ್ತಿರುವಂತೆಯೇ ದೇವತೆಗಳು ಹೂಮಳೆಗರೆಯುತ್ತಾರೆ. ಶೂದ್ರನೊಬ್ಬ ಸ್ವರ್ಗಕ್ಕೆ ಬರದಂತೆ ತಡೆದ ರಾಮನ ಕೆಲಸವನ್ನು ಹೊಗಳುತ್ತಾರೆ. ರಾಮನು ಬಯಸಿದ ವರವನ್ನು ನೀಡಲು ಮುಂದಾಗುತ್ತಾರೆ.
ಸ್ವಯಂ ಶಂಭೂಕನು ಸ್ಪಷ್ಟವಾಗಿ ಸಶರೀರಿಯಾಗಿ ಸ್ವರ್ಗವನ್ನು ಪ್ರವೇಶಿಸಲು ತಪಸ್ಸನ್ನು ಮಾಡುತ್ತಿರುವುದಾಗ ಹೇಳುತ್ತಾನೆ. ಸಾಲಿಮಠ್ ಅವರು ಹೇಳಿದ ಹಾಗೆ ಪಾರ್ವತಿಯನ್ನು ಬಯಸಿ ಅಲ್ಲ.
ಶ್ರೀ ಸಾಲಿಮಠ್ ಅವರಿಗೆ ಸ್ವಲ್ಪ ಮಟ್ಟಿಗೆ ಗೊಂದಲವಾಗಿರಬಹುದು ಎಂದು ನನ್ನ ಭಾವನೆ. ಶಂಭೂಕನು ಪಾರ್ವತಿಯನ್ನು ಬಯಸಿ ತಪಸ್ಸನ್ನು ಮಾಡುತ್ತಿದ್ದನು ಎಂಬ ವಿವರವು ಬಹುಶಃ ವಲ್ಲಭಾಚಾರ್ಯರವರ ಬರಹಗಳಲ್ಲಿ ಓದಿರಬಹುದು. ಈ ಕಥೆಯ ಅನ್ವಯ ಶಂಭಾ ಎಂಬ ರಾಕ್ಷಸನಿದ್ದನಂತೆ. ಅವನು ಪಾರ್ವತಿಯನ್ನು ಬಯಸಿ ತಪಸ್ಸು ಮಾಡಿದನಂತೆ. ಇವನೇ ಮುಂದಿನ ಜನ್ಮದಲ್ಲಿ ಶಂಭೂಕನಾಗಿ ಹುಟ್ಟುತ್ತಾನಂತೆ. ರಾಮನ ಕೈಯಲ್ಲಿ ಸಾವನ್ನು ಪಡೆದು ಮುಕ್ತಿ ಹೊಂದಲು ಹೀಗೆ ಪಾರ್ವತಿಯನ್ನು ಕೆಣಕಿದ ಎಂದು ವಲ್ಲಭಾಚಾರ್ಯರ ಅನಿಸಿಕೆ. ರಾಮ ಪಾರಮ್ಯವನ್ನು ಎತ್ತಿ ಹಿಡಿಯಲು ಇಂತಹ ಕಥೆಯನ್ನು ಕಟ್ಟಿರಬೇಕು ಎಂದು ಅನಿಸುತ್ತದೆ. ಈ ಮೂಲವಲ್ಲದೇ ಇನ್ಯಾವುದಾದರೂ ಮೂಲದಲ್ಲಿ, ಮುಖ್ಯವಾಗಿ ವಾಲ್ಮೀಕಿ ರಾಮಾಯಣದಲ್ಲಿ, ಶಂಭೂಕನು ಪಾರ್ವತಿಯನ್ನು ಬಯಸಿ ತಪಸ್ಸು ಮಾಡುತ್ತಿದ್ದನು ಎಂದು ಬರೆದಿದ್ದರೆ, ಸಾಲಿಮಠರು ಅದನ್ನು ನನಗೆ ತಿಳಿಸಲಿ. ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ.
೧೦. >>ಅಗಸನೊಬ್ಬನ ಮಾತಿನಿಂದಲ್ಲ ರಾಜ್ಯದಾದ್ಯಂತ ಸೀತೆಯ ಬಗ್ಗೆ ಗುಲ್ಲೆದ್ದಿತು. ಆಗ ರಾಮ ಪ್ರತಿಯೊಬ್ಬನನ್ನೂ ಕರೆದು ತಿಳಿ ಹೇಳಬೇಕಿತ್ತೇ? ಸೀತೆ ಪುನೀತೆ ಅಂತ ಡಂಗುರ ಸಾರಿಸಬೇಕಿತ್ತೇ? ದಾರಿಯಲ್ಲಿ ಹೋರ್ಡಿಂಗ್ ಗಳನ್ನು ಹಾಕಿಸಬೇಕಿತ್ತೇ? ಊರೂರಲ್ಲಿ ಭಾಷಣ ಮಾಡಬೇಕಿತ್ತೇ? ಅಕಸ್ಮಾತ್ ರಾಮ ಹೆಂಡತಿಗಾಗಿ ಕುರ್ಚಿ ಬಿಟ್ಟಿದ್ದ ಎಂದುಕೊಳ್ಳಿ.. ಆಗ ಆರನೆಯ ಜಾರ್ಜ್ ನನ್ನು ಆಡಿಕೊಂಡು ನಕ್ಕಂತೆ ರಾಮನ ಬಗ್ಗೆಯೂ ಆಡಿಕೊಂಡು ನಗುತ್ತಿದ್ದಿರಿ.<<
ಸಾಲಿಮಠ್ ಅವರು ರಾಮರಾಜ್ಯದಲ್ಲಿ ಹೋರ್ಡಿಂಗ್ ಹಾಕಿಸುವ ಬಗ್ಗೆ ಬರೆಯುವಾಗ ಅವರ ಮನಸ್ಸಿನಲ್ಲಿ ಎಂತಹ ಭಾವವಿದ್ದಿರಬಹುದು ಎಂದು ನಾನು ಊಹಿಸಬಲ್ಲೆ.
ಯುದ್ಧಕಾಂಡ-ಸರ್ಗ-೧೧೫-ಶ್ಲೋಕಗಳ ಒಟ್ಟು ಭಾವಾರ್ಥವನ್ನು ತುಸು ಗಮನಿಸೋಣ.
ಶ್ಲೋಕ ೧೭: ನಿನ್ನ ಶೀಲದ ಬಗ್ಗೆ ಅನುಮಾನ ಬಂದಿದೆ. (ರಾಮನಿಗೆ ಮಾತ್ರ ಅನುಮಾನ. ಅಲ್ಲಿದ್ದ ಯಾರೂ ಅಲ್ಲಿಯವರೆಗೆ ಸೀತೆಯ ಶೀಲದ ಬಗ್ಗೆ ವಿಚಾರವನ್ನೇ ಮಾದಿರುವುದಿಲ್ಲ). ನಿನ್ನನು ನಾನು ಒಪ್ಪಲಾರೆ.
ಶ್ಲೋಕ ೧೮: ನಿನ್ನಿಂದ ನನಗೇನೂ ಆಗಬೇಕಾಗಿಲ್ಲ ಓ ಸೀತೆ! ಹತ್ತು ದಿಕ್ಕುಗಳು ಮುಕ್ತವಾಗಿವೆ. ನೀನು ಎಲ್ಲಿ ಬೇಕಾದರೂ ಹೋಗಬಹುದು.
ಶ್ಲೋಕ ೧೯: ಕಾಮ ಪೀಡಿತರಾದ ಪರರ ಮನೆಯಲ್ಲಿ ಇದ್ದ ಹೆಣ್ಣನ್ನು ಹೆಸರಾಂತ ಕುಲದಲ್ಲಿ ಹುಟ್ಟಿದ ಯಾವ ಮನುಷ್ಯ ತಾನೇ ಒಪ್ಪಬಲ್ಲ?
ಶ್ಲೋಕ ೨೨: ಭದ್ರೆ! ನಿನ್ನ ಇಚ್ಛೆಯಂತೆ ಲಕ್ಷ್ಮಣನ್ನಾದರೂ ಆಯ್ಕೆ ಮಾಡಿಕೋ ಇಲ್ಲವೇ ಭರತನನ್ನು ಆಯ್ಕೆ ಮಾಡಿಕೊ.
ಶ್ಲೋಕ ೨೩: ಶತ್ರುಘ್ನ, ಸುಗ್ರೀವ, ವಿಭೀಷಣ-ಯಾರನ್ನು ಬೇಕಾದರೂ ಆಯ್ಕೆ ಮಾಡಿಕೊ.
ಯುದ್ಧಕಾಂಡ-ಸರ್ಗ-೧೧೬
ರಾಮನ ಮಾತನ್ನು ಕೇಳಿ ಸೀತೆಯು ತತ್ತರಿಸಿಹೋಗುತ್ತಾಳೆ.
ಶ್ಲೋಕ ೧೮: ಮಿಥ್ಯಾರೋಪವನ್ನು ಹೊತ್ತು ನಾನು ಬದುಕಿರಲಾರೆ. ಚಿತೆಯನ್ನು ಹೊತ್ತಿಸು ಎಂದು ಲಕ್ಷ್ಮಣನಿಗೆ ಹೇಳುತ್ತಾಳೆ.
ಶ್ಲೋಕ ೧೯: ನನ್ನ ಪತಿಯಿಂದ ಪರಿತ್ಯಕ್ತಳಾದ ನಾನು ಈಗ ಬೆಂಕಿಯನ್ನು ಪ್ರವೇಶಿಸುವುದೇ ಸೂಕ್ತ.
ಲಕ್ಷ್ಮಣನು ಚಿತೆಯನ್ನು ಹೊತ್ತಿಸುತ್ತಾನೆ. ಸೀತೆಯು ರಾಮನಿಗೆ ಪ್ರದಕ್ಷಿಣೆ ಬಂದು, ದೇವಾನುದೇವತೆಗಳನ್ನು ನೆನೆಯುತ್ತಾ, "ಕಾಯಾ-ವಾಚಾ-ಮನಸಾ ಕೇವಲ ರಾಮನನ್ನು ಮತ್ರ ನಾನು ನೆನೆದಿದ್ದರೆ ಅಗ್ನಿಯು ನನ್ನನ್ನು ರಕ್ಷಿಸಲಿ" ಎಂದು ಪ್ರಾರ್ಥಿಸುತ್ತಾ ಅಗ್ನಿಯನ್ನು ಪ್ರವೇಶಿಸುತ್ತಾಳೆ.
ಯುದ್ಧಕಾಂಡ-ಸರ್ಗ-೧೧೭
ಬ್ರಹ್ಮ, ವಿಷ್ಣು, ಇಂದ್ರಾದಿ ದೇವತೆಗಳು ಪ್ರತ್ಯಕ್ಷರಾಗುತ್ತಾರೆ. ರಾಮನು ವಿಷ್ಣುವಿನ ಅವತಾರ ಎನ್ನುವುದನ್ನು ರಾಮನಿಗೆ ಮನದಟ್ಟು ಮಾಡಲು ಎಲ್ಲರೂ ಪ್ರಯತ್ನಿಸುತ್ತಾರೆ.
ಯುದ್ಧಕಾಂಡ-ಸರ್ಗ-೧೧೮
ಶ್ಲೋಕ ೧-೩: ಅಗ್ನಿಯು ಸೀತೆಯನ್ನು ತನ್ನ ಬಾಹುಗಳಲ್ಲಿ ಹೊತ್ತು ಬೆಂಕಿಯ ನಡುವಿನಿಂದ ಪ್ರತ್ಯಕ್ಷನಾಗುತ್ತಾನೆ.
ಶ್ಲೋಕ ೫: ಲೋಕ ಸಾಕ್ಷಿಯಾದ ಅಗ್ನಿಯು "ಪಾಪಮಸ್ಯಾಮ್ ನ ವಿದ್ಯತೆ" - ಸೀತೆ ಪಾರರಹಿತಳು-ಎಂದು ಹೇಳುತ್ತಾನೆ.
ಮುಂದಿನ ಶ್ಲೋಕಗಳಲ್ಲಿ ಸೀತೆಯು ಹೇಗೆ ರಾಮಾಸಕ್ತಳಾಗಿದ್ದಳು ಎನ್ನುವುದನ್ನು ವಿವರವಾಗಿ ಅಗ್ನಿಯು ಹೇಳಿ, ಸೀತೆಯನ್ನು ಸ್ವೀಕರಿಸು, ಆಕೆಯು ಪರಿಶುದ್ಧಳು, ಆಕೆಯ ಮನಸ್ಸನ್ನು ನೋಯಿಸಬೇಡ. ಇದು ನನ್ನಾಜ್ನೆ" ಎನ್ನುತ್ತಾನೆ.
ಶ್ಲೋಕ ೧೪: " ದಶರಥನ ಮಗ ರಾಮನು ಮುಠ್ಠಾಳ. ರಾಕ್ಷಸನ ಮನೆಯಲ್ಲಿದ್ದ ಸೀತೆಯನ್ನು ಪರೀಕ್ಷೆಗೆ ಒಳಪಡಿಸದೇ ಕಾಮಪೀಡಿತನಾಗಿ ಹಾಗೆಯೇ ಸ್ವೀಕರಿಸಿದ " ಎಂದು ಜನರು ನಾಳೆ ಮಾತನಾಡಬಹುದು.
ಶ್ಲೋಕ ೧೭: ಸತ್ಯಸಂಧನಾದ ನಾನು, ಮೂರು ಲೋಕಗಳನ್ನು ಸಂತೃಪ್ತಿ ಪಡಿಸುವುದಕ್ಕೋಸ್ಕರ ಸೀತೆಯು ಅಗ್ನಿಪ್ರವೇಶ ಮಾಡುತ್ತಿದ್ದರೂ ಸಹಾ ಸುಮ್ಮನಿದ್ದೆ.
ಶ್ಲೋಕ ೨೦: ವಿಶುದ್ಧ ತ್ರಿಷು ಲೋಕೇಶು ಮೈಥಿಲಿ ಜನಕಾತ್ಮಜಾ|
ನ ವಿಹಾತುಮ್ ಮಯಾ ಶಕ್ಯ ಕೀರ್ತಿರಾತ್ಮವತಾ ಯಥಾಃ||
" ಸೀತೆ, ಜನಕರಾಜ ಕುವರಿಯ ಶೀಲ ಪವಿತ್ರವಾಗಿದೆ. ನಾನವಳನ್ನು ಸ್ವೀಕರಿಸುತ್ತೇನೆ " ಎಂದು ರಾಮನು ಸೀತೆಯನ್ನು ದೇವತೆಗಳು, ವಾನನರು ಹಾಗೂ ರಾಕ್ಷಸರ ನಡುವೆ ಒಪ್ಪಿಕೊಳ್ಳುತ್ತಾನೆ.
ಸಾಲಿಮಠರಲ್ಲಿ ನನ್ನ ಪ್ರಶ್ನೆ:
ಯುದ್ಧಕಾಂಡದಲ್ಲಿ ಸೀತೆಯನ್ನು ಅಗ್ನಿಪ್ರವೇಶ ಮಾಡುವಂತೆ ರಾಮ ಒತ್ತಡವನ್ನು ಹೇರುತ್ತಾನೆ. ಸೀತೆಯು ರಾಮನು ಒಡ್ಡುವ ಅಗ್ನಿಪರೀಕ್ಷೆಯಲ್ಲಿ ಯಶಸ್ವಿಯಾಗಿ ಬರುತ್ತಾಳೆ. ಅಗ್ನಿಯನ್ನು ಒಳಗೊಂಡಂತೆ ಎಲ್ಲ ದೇವತೆಗಳೂ ಸೀತೆಯು ಪವಿತ್ರಳು ಎಂದು ಸಾರುತ್ತಾರೆ. ಉತ್ತರಕಾಂಡದಲ್ಲಿ ಅಗಸನು ರಾಮನನ್ನು ಹಳಿದಾಗ (ಸಾಲಿಮಠ್ ಅವರು ಹೇಳುವಂತೆ ಊರಿಗೆ ಊರೇ ಸೀತಾ-ರಾಮರನ್ನು ಹಳಿದಾಗ) ರಾಮನು ಆ ವಿಷಯವನ್ನು ಸೀತೆಯೊಡನೆ ಚರ್ಚಿಸಬಹುದಿತ್ತು. ಗುರು ವಸಿಷ್ಠರೊಡನೆ, ಮೂವರು ತಾಯಂದಿರೊಂದಿಗೆ, ತನ್ನ ಮೂವರು ಸಹೋದರರೊಂದಿಗೆ, ಸುಮಂತನಂತಹ ಹಿತೈಷಿಗಳೊಂದಿಗೆ ಚರ್ಚಿಸಬಹುದಿತ್ತು. ಯುದ್ಧಕಾಂಡದಲ್ಲಿ ರಾಮ ಯಾರೊಡನೆಯೋ ಚರ್ಚಿಸದೇ ತಾನೇ ಏಕಾಏಕಿಯಾಗಿ ಸೀತೆ ಕಳಂಕಿಗೆ ಎಂದು ಸಾರಿಬಿಡುತ್ತಾನೆ. ಹಾಗೆಯೇ ಉತ್ತರಕಾಂಡದಲ್ಲಿಯೂ ರಾಮ ನಡೆದುಕೊಂಡ ಎಂದು ಭಾವಿಸೋಣ. ಯುದ್ಧಕಾಂಡದಲ್ಲಿ ಮಾಡಿದಂತೆ ಉತ್ತರಕಾಂಡದಲ್ಲಿಯೂ ರಾಮನು ಸೀತೆಯ ಮೇಲೆ ಆರೋಪ ಮಾಡಿದ್ದರೆ, ಆಗ ಸೀತೆಯು ಮತ್ತೆ ಅಗ್ನಿಪ್ರವೇಶವನ್ನು ಮಾಡಿ ತನ್ನ ಪಾತಿವ್ರತ್ಯಕ್ಕೆ ಮತ್ತೊಮ್ಮೆ ಋಜುವಾತನ್ನು ಒದಗಿಸುತ್ತಿದ್ದಳಲ್ಲವೆ! ಅಗಸನ ಹಾಗೂ ಆಯೋಧ್ಯಾವಾಸಿಗಳಿಗೆ ನಂಬಿಕೆಯನ್ನು ತರಿಸುತ್ತಿದ್ದಳಲ್ಲವೆ! ರಾಮ ಇದ್ಯಾವುದನ್ನು ಮಾಡುವುದಿಲ್ಲ.
- ಗರ್ಭಿಣಿಯಾದ ಸೀತೆಯನ್ನು ಕಾಡಿಗಟ್ಟುತ್ತಾನೆ.
- ಆಶ್ರಮವಾಸಿಗಳನ್ನು ನೋಡಿ ಬಾ ಎಂದು ಸುಳ್ಳು ಹೇಳಿ ಸೀತೆಯನ್ನು ಕಾಡಿಗಟ್ಟುತ್ತಾನೆ.
- ಕೋಸಲ ದೇಶದ ಭಾವೀ ಅರಸ ಸೀತೆಯ ಹೊಟ್ಟೆಯಲ್ಲಿದ್ದಾನೆ ಎಂಬುದನ್ನೂ ತಿಳಿದು ಸೀತೆಯನ್ನು ಕಾಡುಪಾಲು ಮಾಡುತ್ತಾನೆ. ಕೋಸಲ ದೇಶಕ್ಕೆ ದ್ರೋಹ ಬಗೆಯುತ್ತಾನೆ.
- ಇಕ್ಷ್ವಾಕು ವಂಶವು ಸೀತೆಯ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವಿನಿಂದ ಮುಂದುವರೆಯಬೇಕು. ಆದರೆ ಸೀತೆಯನ್ನು ಕಾಡಿಗಟ್ಟಿ ತನ್ನ ವಂಶಕ್ಕೂ ದ್ರೋಹ ಬಗೆಯುತ್ತಾನೆ.
- ರಾಮನು ಸೀತೆ-ಸೀತೆಯ ಮಗನನ್ನು ಕಾಡಿಗಟ್ಟುವುದೇ ಸರಿ ಎಂದು ತೀರ್ಮಾನಿಸಿದ್ದರೆ, ಅದನ್ನು ತಾನೇ ಮಾಡಬೇಕಿತ್ತು. ಲಕ್ಷ್ಮಣನಿಗೆ ಹೇಳುವ ಅಗತ್ಯವೇನಿತ್ತು? ಸೀತೆಯ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕ ಧೈರ್ಯ ತನಗಿಲ್ಲ ಎಂಬ ಭೀತಿಯೇ ರಾಮನಿಗೆ?
- ಕಾಡಿನಲ್ಲಿ ಒಂದು ವೇಳೆ ಸೀತೆ ಸತ್ತಿದ್ದರೆ ಸ್ತ್ರೀ ಹತ್ಯಾ ದೋಷ ಹಾಗೂ ಭ್ರೂಣಹತ್ಯಾ ದೋಷ ರಾಮ ಲಕ್ಷ್ಮಣರನ್ನು ಸುತ್ತಿಕೊಳ್ಳುತ್ತಿರಲಿಲ್ಲವೆ?
ರಾಮನು ಢಂಗುರ ಹೊಡೆಸಬೇಕಿತ್ತೆ, ಭಾಷಣ ಮಾಡಿಸಬೇಕಿತ್ತೆ, ಹೋರ್ಡಿಂಗ್ ಹಾಕಿಸಬೇಕಿತ್ತೆ ಎಂದ ಸಾಲಿಮಠ ಅವರು ನನ್ನ ಮೇಲಿನ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಸಲಿ. ನನ್ನ ತಿಳಿವಳಿಕೆ ತಪ್ಪಾಗಿದ್ದರೆ ನಾನು ಲೇಖನವನ್ನು ಬರೆದದ್ದೇ ತಪ್ಪು ಎಂದು ಒಪ್ಪಿಕೊಳ್ಳುತ್ತೇನೆ.
ವಾಲ್ಮೀಕಿ ರಾಮಾಯಣವನ್ನು ಓದಿದವರು, ಓದಿ ಅರ್ಥ ಮಾಡಿಕೊಂಡವರು ನನ್ನ ಅನುಮಾನವನ್ನು ಪರಿಹರಿಸಬೇಕು ಎಂದು ಮತ್ತೊಮ್ಮೆ ನಮ್ರತೆಯಿಂದ ಕೇಳಿಕೊಳ್ಳುತ್ತಿದ್ದೇನೆ.
ವಿನಂತಿ: ಸಂಸ್ಕೃತ ಶ್ಲೋಕಗಳನ್ನು ಬರೆಯುವಾಗ ಹಾಗೂ ಅದರ ಅರ್ಥವನ್ನು ಹೇಳುವಾಗ ಏನಾದರೂ ತಪ್ಪಾಗಿದ್ದಲ್ಲಿ ಬೇಷರತ್ ಕ್ಷಮೆ ಯಾಚಿಸುತ್ತೇನೆ. ಏಕೆಂದರೆ ಸಂಸ್ಕೃತವನ್ನು ಅರ್ಥಮಾಡಿಕೊಳ್ಳುವ ನನ್ನ ಸಾಮರ್ಥ್ಯ ತೀರಾ ಸೀಮಿತವಾಗಿದೆ.
Comments
ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ.
ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ.
In reply to ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ. by vadi84
ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ.
In reply to ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ. by naasomeswara
ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ.
ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ.
In reply to ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ. by thesalimath
ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ.
In reply to ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ. by naasomeswara
ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ.
In reply to ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ. by thesalimath
ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ.
In reply to ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ. by naasomeswara
ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ.
In reply to ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ. by naasomeswara
ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ.
ಉ: ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ.