(ಹಿಂ)ಬಾಲಕರಿಗೂ ಸೈಕಲ್: ಸರ್ಕಾರಿ ಯೋಜನೆ ವಿಫಲ
ಬೊಗಳೂರು, ನ.14- ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಪ್ರಕಟವಾದಾಗ ಹುಡುಗಿಯರೇ ಮೇಲುಗೈ ಸಾಧಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ವೇದ್ಯವಾದ ಸಂಗತಿ. ಇತ್ತೀಚೆಗೆ ಕರ್ನಾಟಕ ಸರಕಾರವು ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್‌ಗಳನ್ನು ವಿತರಿಸಿ ಅವರನ್ನು ಮತ್ತಷ್ಟು ವೇಗವಾಗಿ ಮುಂದುವರಿಯುವಂತೆ ಮಾಡಿರುವುದರಿಂದ ಆತಂಕಗೊಂಡಿರುವ ಹುಡುಗ ವಿದ್ಯಾರ್ಥಿ ಸಮುದಾಯವು ಸರಕಾರಕ್ಕೆ ಮೊರೆ ಹೋಗಿದೆ. ಒಟ್ಟಿನಲ್ಲಿ ಸರಕಾರದ ಯೋಜನೆಯೊಂದು ಅಸಫಲವಾಗುವ ಮೂಲಕ ಬಾಲಕರು ಹಿಂ-ಬಾಲಕರೇ ಆಗಿಯೂ, ಬಾಲಕಿಯರು ಮುಂ-ಬಾಲಕಿಯರೇ ಆಗಿಯೂ ಉಳಿಯುವಂತಾದ ಕತೆಯಿದು. (Bogaleragale.blogspot.com)
ನಮಗೆ ಈ ಹುಡುಗಿಯರನ್ನು ಹಿಂಬಾಲಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳ ಒಕ್ಕೊರಲ ಬೇಡಿಕೆಗೆ ಮಣಿದ ಸರಕಾರವು, ಹುಡುಗಿಯರನ್ನು ಹಿಂಬಾಲಿಸಲು ಅನುವಾಗುವಂತೆ ಹುಡುಗರಿಗೂ ಸೈಕಲ್‌ಗಳನ್ನು ವಿತರಿಸಲು ನಿರ್ಧರಿಸಿತ್ತು ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಸೈಕಲೇರಿ ಹುಡುಗಿಯರನ್ನು ಹಿಂಬಾಲಿಸಲು ಹೊರಟ ಹುಡುಗರ ದಂಡು ಅಲ್ಲಲ್ಲಿ ಮುಗ್ಗರಿಸುತ್ತಾ ಮುಂದೆ ಸಾಗುತ್ತಿರುವುದು ಗಮನಕ್ಕೆ ಬಂದಿದೆ. ಎಷ್ಟು ಮುಂದುವರಿದಿದ್ದಾರೆ ಎನ್ನುವುದನ್ನು ಪರೀಕ್ಷಾ ಫಲಿತಾಂಶದಿಂದಲೇ ಅರಿಯಬಹುದಾಗಿರುವುದರಿಂದ ಈ ಕುರಿತು ಅವಸರ ಮಾಡಿದ ಬೊಗಳೆ ರಗಳೆಯು ಭವಿಷ್ಯ ವಾಣಿ ಬ್ಯುರೋದ ಮೊರೆ ಹೋಗಲಾಯಿತು.
ಈ ಭವಿಷ್ಯ ನುಡಿಯ ಪ್ರಕಾರ, ಹುಡುಗಿಯರ ಹಿಂದೆ ಬಿದ್ದ ಹುಡುಗ ವಿದ್ಯಾರ್ಥಿಗಳು ಸೈಕಲೇರಿ ಮುಂದೆ ನಡೆಯುವ ಬದಲು ಮತ್ತಷ್ಟು ಹಿಂದೆ ಬೀಳಲಿದ್ದಾರೆ. ಇದಕ್ಕೆ ಕಾರಣವನ್ನೂ ಪತ್ತೆ ಹಚ್ಚಲಾಗಿದ್ದು, ಅವರ "ಹುಡುಗಿಯರ ಹಿಂದೆ ಬೀಳುವಿಕೆ" ಪ್ರಕ್ರಿಯೆಯಿಂದಾಗಿ ಅವರು ಓದಿನಲ್ಲೂ ಹಿಂದೆ ಬಿದ್ದಿದ್ದರು!
ಈ ವರದಿಯನ್ನು ತೀವ್ರವಾಗಿ ಪ್ರತಿಭಟಿಸಿರುವ ಹುಡುಗ ವಿದ್ಯಾರ್ಥಿಗಳು, ತಾವು ಹಿಂದೆ ಬೀಳಲು ಕಾರಣವನ್ನೂ ನೀಡಿದ್ದಾರೆ.
"ಈ ಹುಡುಗಿಯರು ನಮ್ಮ ಸೈಕಲನ್ನು (ಮನಸ್ಸನ್ನು ಎಂದು ಓದಿಕೊಳ್ಳುವುದು) ಹಾಳು ಮಾಡುತ್ತಾರೆ, ಅವರು ನಮ್ಮ ಸೈಕಲ್ ಚಕ್ರದ (ಕನಸಿನ ಬಲೂನಿನ ಅಂತ ಓದಿಕೊಳ್ಳುವುದು) ಗಾಳಿ ಠುಸ್ಸೆಂದು ತೆಗೆದುಬಿಡುತ್ತಾರೆ. ಹಾಗಾಗಿ ಎದ್ದು ಬಿದ್ದು ಸರಿಪಡಿಸಿಕೊಂಡು ಮುಂದೆ ಬರುವಾಗ ವಿಳಂಬವಾಗಿದೆ!!!" ಎಂಬುದು ಅವರಿಂದ ದೊರೆತ ಉತ್ತರ.
------------------
ಬರಲಿದೆ ಪ್ರಯಾಸ ಕಥನ!!!
ಬೊಗಳೆ ರಗಳೆ ಬ್ಯುರೋದಿಂದ ಆವಂತಿಕಾಪುರಿ(ಉಜ್ಜಯಿನಿ) ಪ್ರಯಾಸ ಕಥನ!
ಭಟ್ಟಿ ವಿಕ್ರಮಾದಿತ್ಯನ ನಾಡಿಗೆ ಅಸತ್ಯಾನ್ವೇಷಿ ಭೆಟ್ಟಿ!
ಎಂದೂ ಕಂಡು ಕೇಳರಿಯದ ಪ್ರಯಾಸ ಕಥನ ಶೀಘ್ರವೇ
ಸಚಿತ್ರವಾಗಿ ಮೂಡಿಬರಲಿದೆ.
ನಿರೀಕ್ಷಿಸಬೇಡಿ...