ನರಹತ್ಯೆಯ ಅಜೆಂಡಾ ಹೀಗೊಂದು ವಿಡಂಬನೆ
ಗೋಹತ್ಯೆಯ ನಿಷೇಧ ಕಾನೂನು ಜಾರಿಗೆ ಬಂದದ್ದರಿಂದ ಕೆಲವರಿಗೆ ಕಣ್ಣುರಿ ಮೈ ಉರಿ ಬಂದು ಪರಚಿಕೊಳ್ಳುತ್ತ ಬಾಯಿಗೆ ಬಂದಂತೆ ಮಾತನಾಡುತ್ತಾ ಅದನ್ನು ವಿರೋಧಿಸುವುದು ನೋಡುತ್ತಿದ್ದರೆ, ಇವರ ಈ ಮಾತುಗಳು ಲೇಖನಗಳ ಹಿಂದಿರುವ ಉದ್ದೇಶ ಏನೆಂಬುದು ಸ್ಪಷ್ಟವಾಗುತ್ತಿಲ್ಲ.
ಗೋಹತ್ಯೆಯನ್ನು ಮಾಡೀಯೆ ತೀರಬೇಕೆಂದು ಇವರೇಕೆ ಇಷ್ಟು ಮುತುವರ್ಜಿ ವಹಿಸುತ್ತಿದ್ದಾರೆ? ಇನ್ನು ಕೆಲವು ಪುಣ್ಯಾತ್ಮರು ವಯಸ್ಸಾದ ದನಗಳನ್ನು ಮನೆಯಲ್ಲಿಟ್ಟುಕೊಳ್ಳಬೇಕೆ ಎಂದು ಕೇಳಿದ್ದಾರೆ. ದನಗಳನ್ನು ಮನೆಯಲ್ಲಿಟ್ಟುಕೊಂಡರೆ ಆಗುವ ನಷ್ಟವನ್ನು ಪೈಸೆಗಳ ಲೆಕ್ಕದಲ್ಲಿ ಕೊಡುತ್ತಾರೆ.
ನಾವಂತೂ ಬಾಲ್ಯದಲ್ಲಿ ಹಸು ಎಮ್ಮೆ ಕರುಗಳನ್ನು ಹಾಸಿಗೆಯಲ್ಲಿ ಮಲಗಿಸಿಕೊಂಡೆ ಮಲಗಿದ್ದೆವು. ಎಂದಿಗೂ ಮನೆಯ ದನಗಳನ್ನು ಕಟುಕರಿಗೆ ಮಾರಿದ್ದಿಲ್ಲ. ವಯಸ್ಸಾದರೆ ಮಾರಬೇಕನ್ನುವ ಇವರ ಬಾಯಿ ಚಪಲ ಆಗ ನಮ್ಮಲ್ಯಾರಿಗೂ ಇರಲೇ ಇಲ್ಲ. ಮಾರುತ್ತೇನೆಂದರೂ ಮನೆಯ ಹಿರಿಯರು ಬೈಯುತ್ತಿದ್ದದ್ದು ಹೀಗೆ, "ಒಂದು ಹೊರೆ ಹುಲ್ಲು ಒಂದು ತಂಬಿಗೆ ನೀರು" ಅದಕ್ಕಿನ್ನೇನು ಬೇಕು ಅದನ್ಯಾಕೆ ಮಾರ್ತೀಯ ನಮ್ಮನೆಲೆ ಸಾಯ್ಲಿ ಬಿಡು. ಸತ್ರೆ ತೋಟಕ್ಕೆ ಗೊಬ್ಬರ ಆಗುತ್ತೆ ಇಲ್ಲಾಂದ್ರೆ ನಾಯಿ ನರಿಗಳಿಗೆ ಆಹಾರ ಎಂದು ಈಗಲೂ ನನ್ನೂರಿನಲ್ಲಿ ಹೇಳುತ್ತಾರೆ.
ನನ್ನೂರಿನಲ್ಲಿ ಇಂದಿಗೂ ನಡೆಯುವ ದನದ ಜಾತ್ರೆಗೆ ಕಟುಕರನ್ನು ಬರಲು ಬಿಡುವುದಿಲ್ಲ. ಬಂದರೂ ಎಷ್ಟೆ ಹಣ ಕೊಡುತ್ತೇನೆಂದರೂ ರೈತ ಅವನ್ನು ಕೊಡುವುದಿಲ್ಲ. ವಯಸ್ಸಾದ ರಾಸುಗಳನ್ನು ಮಾರುವುದಕ್ಕೆ ತರುವುದೇ ಇಲ್ಲ. ಕಟುಕರಿಗೆ ಮಾರಬಾರದೆಂದು ಕೆಲವರು ಕರಪತ್ರದ ಮೂಲಕ ಮತ್ತು ಬೀದಿ ನಾಟಕಗಳ ಮೂಲಕ ಜಾಗೃತಿ ಉಂಟು ಮಾಡುತ್ತಾರೆ.
ಕಳೆದ ೧೦ ವರ್ಷಗಳವರೆಗೂ ರಾಸುಗಳನ್ನು ಲಾರಿಯಲ್ಲಿ ಸಾಗಿಸುವುದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಉತ್ತರ ಕರ್ನಾಟಕದವರೆಗೂ ನೂರಾರು ಕಿಮೀಗಳನ್ನು ನಡೆಸಿಕೊಂಡೆ ಹೋಗುವವರನ್ನು ಕಣ್ಣಾರೆ ಕಂಡಿದ್ದೇನೆ.
ನನಗೀಗ ಅನಿಸುತ್ತಿರುವುದು, ಗೋಹತ್ಯೆಯ ನಿಷೇದದ ಕಾನೂನು ವಿರೋಧಿಸಿದಂತೆ ನರಹತ್ಯೆ ಕಾನೂನನ್ನು ವಿರೋಧಿಸ ಬೇಕಲ್ಲವೆ? ಏಕೆಂದರೆ ವಯಸ್ಸಾದ ವ್ಯಕ್ತಿಗಳಿಂದಲೂ ಯಾವುದೇ ಉಪಯೋಗವಿರುವುದಿಲ್ಲ. ಬೆಂಗಳೂರಿನಲ್ಲಾದರೆ ಅವರಿಗೆ ವೃದ್ದಾಶ್ರಮವಿದೆ ಹಳ್ಳಿಗಳಲ್ಲಿ ಅವುಗಳಿಲ್ಲವಾದ್ದರಿಂದ ನರಹತ್ಯೆ ನಿಷೇಧವನ್ನು ಹಿಂತೆಗೆದು ಕೊಂಡರೆ ವಯಸ್ಸಾದವರೆಲ್ಲರನ್ನೂ ಸಾಯಿಸಿ ಬಿಟ್ಟರೆ ದೇಶದ ಆರ್ಥಿಕತೆಗೆ ಇಂಬು ಸಿಗುವುದಲ್ಲದೆ ಇವರಿಗೆ ಖರ್ಚು ಮಾಡುವ ಆಹಾರ ನೀರು ಎಲ್ಲವನ್ನೂ ಮಾರಿಕೊಳ್ಳುವುದರಿಂದ ವೈಯಕ್ತಿವಾಗಿ ಅಲ್ಲದೆ ದೇಶಕ್ಕೂ ಲಾಭವಾಗುವುದರಲ್ಲಿ ಸಂಶಯವಿಲ್ಲ. ಇನ್ನೂ ಒಂದು ಲಾಭವೂ ಇದೆ, ಭಾರತದಲ್ಲಿ ಇಂತಹ ಒಂದು ಕಾನೂನು ಬಂದರೆ ಭಯೋತ್ಪಾದನೆಯೂ ಕಡಿಮೆಯಾಗುತ್ತದೆ ಮನುಷ್ಯ ಜೀವಕ್ಕೆ ಬೆಲೆ ಇಲ್ಲದ ಮೇಲೆ ಕೊಲ್ಲುವವರು ಕಡಿಮೆಯಾಗುತ್ತಾರೆ.
ಬಾಳ ಸಂಜೆಯಲ್ಲಿರುವವರಿಗೂ ಮಾಡುವ ಖರ್ಚನ್ನೂ ಹೀಗೆಯೆ ಲೆಕ್ಕ ಹಾಕಿ ನೋಡಿದರೆ ಮುಂದೆ ಅದೂ ಬರಬಹುದು ನೀವೆನಂತೀರಾ?