ನಾನೆಂಬ ಪರಕೀಯ...
ಕಾಲೇಜಿಗೆ ಬರುವವರೆಗೆ ನಾನು ಕಾಸರಗೋಡು ಕರ್ನಾಟಕದಲ್ಲಿದೆ ಎಂದೇ ಭಾವಿಸಿದ್ದೆ. ನಂತರ ಅದು ಕೇರಳದಲ್ಲಿದೆ ಎಂದು ತಿಳಿದ ಬಳಿಕ ಅಲ್ಲಿನ ಕನ್ನಡ-ಕನ್ನಡಿಗರ ಕುರಿತ ಕುತೂಹಲ ಇನ್ನು ಹೆಚ್ಚಿತು. ಕವಿವರ್ಯರ ಕವನಗಳಲ್ಲಿ ಯಾಕೆ ಯಾತನೆಯ ಬಿಂಬಗಳಿವೆ ಎಂಬುದೂ ತಿಳಿಯಿತು. ಕರ್ನಾಟಕವೆಂಬ ಹಸುವಿನಿಂದ ಕಾಸರಗೋಡು ಎಂಬ ಕರುವನ್ನು ಬೇರ್ಪಡಿಸಿ ಕೇರಳ ರಾಜ್ಯಕ್ಕೆ ಸೇರಿಸಲಾಗಿತ್ತು. ಅದೂ ಕನ್ನಡಿಗರ ಉಗ್ರ ಪ್ರತಿಭಟನೆಯ ನಡುವೆ.
ನಾನು ಮಂಗಳೂರು ವಿವಿಗೆ ಎಂ.ಎ ಮಾಡಲು ಸೇರಿದಾಗ ಕಾಸರಗೋಡಿಗೊಮ್ಮೆ ಭೇಟಿ ಕೊಡಬೇಕೆಂಬ ಒತ್ತಾಸೆಗೆ ಪೂರಕವಾಗಿ ಮಂಜೇಶ್ವರದ ಗೋವಿಂದ ಪೈಗಳ ಮನೆಯನ್ನು ನೋಡುವ ಅವಕಾಶ ಸಿಕ್ಕಿತು. ಅಂದು ಭೇಟಿಯಾದ ಹಲವು ಹಿರಿಯರು ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಇಂಚಿಂಚು ಮನಮುಟ್ಟುವಂತೆ ವಿವರಿಸಿದ್ದರು. ಕಾಸರಗೋಡನ್ನು ಕೇರಳಕ್ಕೆ ಸೇರಿಸಿಕೊಳ್ಳಲು ನಡೆಸಿದ ಕುತಂತ್ರ, ಕರ್ನಾಟಕ ಸರ್ಕಾರ ವಾಪಾಸು ಪಡೆಯಲು ತೋರಿಸುತ್ತಿರುವ ಅನಾದಾರ, ಇವುಗಳು ಕನ್ನಡ ಹೋರಾಟಗಾರರಿಗೆ ಹುಟ್ಟಿಸಿದ ನಿರಾಶೆಯನ್ನು ಸಾದೋಹರಣವಾಗಿ ವಿವರಿಸಿದ್ದರು. ಇಂಥ ಕಾಸರಗೋಡು ಜಿಲ್ಲೆಯ ಗಡಿಯಾದ ಕರ್ನಾಟಕದ ತಲಪಾಡಿ ಗ್ರಾಮವು ಮಂಗಳೂರು ವಿಶ್ವವಿದ್ಯಾನಿಲಯದಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿದೆ. ನಾವು ಆಗಾಗ ವಿವಿ ಗ್ರಂಥಾಲಯದ ಮೊದಲ ಮಹಡಿಯಲ್ಲಿ ನಿಂತು ಮೊಬೈಲ್ ನೆಟ್ವರ್ಕ್ ನೋಡುವುದಿತ್ತು. ಅಲ್ಲಿ ಕೇರಳದ ಹಲವು ನೆಟ್ವರ್ಕ್ ಗಳು ಸಿಗುತ್ತವೆ. ಅಷ್ಟು ಹತ್ತಿರ ಕಾಸರಗೋಡು. ಕನ್ನಡಿಗರ ಮನಸ್ಸಿಗೂ ಕೂಡ.
ಇತ್ತೀಚೆಗಂತೂ ಈ ಪ್ರದೇಶ ವ್ಯವಸ್ಥಿತವಾಗಿ, ಹಂತಹಂತವಾಗಿ ಮಲೆಯಾಳಿಕರಣಕ್ಕೆ ಒಳಗಾಗುತ್ತಿದೆ. ಮುಖ್ಯವಾಗಿ ಇಲ್ಲಿನ ತುಳುವರು ಮತ್ತು ಹವ್ಯಕರು ಕನ್ನಡಪರ ಹೋರಾಟಗಳಲ್ಲಿ ಮುನ್ನೆಲೆಯಲ್ಲಿ ಇರುವವರು. ಕೇರಳ ಸರ್ಕಾರವು ಕೇರಳಕ್ಕೆ ಪ್ರತ್ಯೇಕವಾದ ಕೇರಳ ತುಳು ಅಕಾಡೆಮಿಯನ್ನು ಸ್ಥಾಪಿಸುವ ಮೂಲಕ ತುಳುವರನ್ನು ಕನ್ನಡಪರ ವಿಚಾರಧಾರೆ ಮತ್ತು ಕನ್ನಡ ಕರಾವಳಿಯ ಸಂಪರ್ಕವನ್ನು ತಪ್ಪಿಸುವಲ್ಲಿ ನಿರತರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಎಲ್ಲ ಮುಖ್ಯ ಅಧಿಕಾರ ಕೇಂದ್ರಗಳಲ್ಲೂ ಮಲೆಯಾಳಿಗಳನ್ನು ನೇಮಿಸಲಾಗುತ್ತಿದೆ. ಇಂದಿಗೂ ಇರುವ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ, ಪಠ್ಯಪುಸ್ತಕಗಳ ವಿತರಣೆ ಸರಿಯಾಗಿ ನಡೆಯುತ್ತಿಲ್ಲವೆಂಬ ಕೂಗು ಇದೆ. ವಿಶೇಷವೆಂದರೆ ನಮ್ಮಲ್ಲಿ ನಡೆಯುವ ಹೋರಾಟಗಳಂತೆ ಇಲ್ಲಿನ ಮಲೆಯಾಳಿಗಳು ಬೊಬ್ಬೆ ಹಾಕುವುದಿಲ್ಲ, ಮುಖಕ್ಕೆ ಮಸಿ ಬಳಿಯುವುದಿಲ್ಲ ಅಷ್ಟೇ ಏಕೆ ಜೋರಾಗಿ ಇನ್ನೊಂದು ಭಾಷೆಯವರನ್ನು ನಿಂದಿಸುವುದೂ ಇಲ್ಲ. ಆದರೆ ತಮ್ಮ ಸಂಸ್ಕೃತಿ ಮತ್ತು ಭಾಷೆಯನ್ನು ಅತ್ಯಂತ ನಾಜೂಕಾಗಿ ತಂದು ಬಿಟ್ಟಿರುತ್ತಾರೆ.
ಇಲ್ಲಿ ಕನ್ನಡಪರ ಹೋರಾಟಕ್ಕೆ ಹಿನ್ನಡೆಯಾಗಲು ಇನ್ನೊಂದು ಮುಖ್ಯಕಾರಣ ಕನ್ನಡ ಭಾಷೆಯನ್ನಾಡುವ ಧಾರ್ಮಿಕ ಸಮುದಾಯದಷ್ಟೇ ಮಲೆಯಾಳಂ ಮಾತನಾಡುವ ಇತರೆ ಧಾರ್ಮಿಕ ಸಮುದಾಯದವರು ಹೆಚ್ಚು ಕಡಿಮೆ ಸಮ ಪ್ರಮಾಣದಲ್ಲಿ ಇದ್ದಾರೆ. ಇಂಥ ಬಹುಭಾಷಿಕ ಸನ್ನಿವೇಶವು ಕನ್ನಡಪರ ಹೋರಾಟ ತುಸು ಮಂಕಾಗಲು ಕಾರಣವಾಗಿದೆ. ಕಯ್ಯಾರರ ಮಾತಿನಲ್ಲಿ ಹೇಳುವುದಾದರೆ - ಕರ್ನಾಟಕ ಸರ್ಕಾರ ಕಾಸರಗೋಡನ್ನು ನಿರ್ಲಕ್ಷಿಸಲು ಜಾತಿಯೂ ಕೂಡ ಒಂದು ಕಾರಣ. ಕರ್ನಾಟಕದಲ್ಲಿರುವ ಯಾವ ಮುಖ್ಯ ಜಾತಿಗಳು ಇಲ್ಲಿಲ್ಲ. ಹಾಗಾಗಿಯೇ ಮತ ಬ್ಯಾಂಕ್ ಇಲ್ಲದ ಮೇಲೆ ಯಾವ ಪಕ್ಷಗಳು ಯಾಕೇ ಹೋರಾಡುತ್ತವೆ? ಹೀಗೆ ಹಲವು ಸಮೀಕರಣಗಳು ಇಲ್ಲಿನ ಕನ್ನಡದ ಏಳ್ಗೆಯ ನಿರ್ಧರಿಸುತ್ತವೆ. ಅಲ್ಲದೇ ಈಗೀಗ ತಾವು ಕೇರಳದಲ್ಲಿಯೇ ಸುಖವಾಗಿದ್ದೇವೆ ಎಂಬ ಭಾವ ಕಾಸರಗೋಡಿಗರಲ್ಲಿ ಮನೆಮಾಡುತ್ತಿದೆ. ಇದು ಕೇರಳ ಸರ್ಕಾರದ ಅಭಿವೃದ್ಧಿಯ ಫಲವೋ ಅಥವಾ ಹೋರಾಟ ಮಾಡಿಯೂ ಪ್ರಯೋಜನವಿಲ್ಲದ ಸ್ಥಿತಿಯ ನಿರಾಶೆಯೋ ತಿಳಿಯದು. ಆದರೆ ಇದು ಕನ್ನಡಕ್ಕಂತೂ ಜೀವನ್ಮರಣದ ಪ್ರಶ್ನೆ.
ಹಾಗೆಂದು ಕನ್ನಡ ಸಂಸ್ಕೃತಿ ಇಲ್ಲಿ ಸಂಪೂರ್ಣ ಅಳಿಸಿ ಹೋಗಿದೆಯೆಂದು ಹೇಳಲಾಗದು. ನಿಮ್ಮನ್ನು ದಾರಿಯುದ್ದಕ್ಕೂ ಸ್ವಾಗತಿಸುವ ಕನ್ನಡ ಬೋರ್ಡ್ ಗಳು, ಜಾತ್ರೆ-ಉತ್ಸವಗಳಲ್ಲಿ ನಡೆಯುವ ಯಕ್ಷಗಾನಗಳು, ಕವಿಗೋಷ್ಠಿಯೂ ಸೇರಿದಂತೆ ನಡೆಯುವ ಎಲ್ಲ ಸಾಹಿತ್ಯಿಕ ಚಟುವಟಿಕೆಗಳು, ವಿಶೇಷವೆಂಬಂತೆ ಕಾಸರಗೋಡಿನಿಂದ ಪ್ರಕಟವಾಗುವ ಕನ್ನಡ ಸಂಜೆ ಪತ್ರಿಕೆಗಳು ಇನ್ನು ಕನ್ನಡ ಇಲ್ಲಿನ ಜನರ ಮನಸ್ಸಿನಲ್ಲಿ ಉಳಿದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಜಿಲ್ಲೆಯ ಸರ್ಕಾರಿ ಕಾಲೇಜಿಗಳಲ್ಲಿ ಕನ್ನಡವನ್ನು ಒಂದು ಐಚ್ಛಿಕ ವಿಷಯವಾಗಿ ಓದಬಹುದು. ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳು ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲ ಧ್ವನಿಎತ್ತಿ ಹೋರಾಟ ನಡೆಸಿದ್ದಾರೆ. ರಾಜಕೀಯ ಪಕ್ಷಗಳು ಕೂಡ ಕನ್ನಡವನ್ನು ತಮ್ಮ ಪ್ರಣಾಳಿಕೆಯಲ್ಲಿ ಒಂದು ಅಂಶವಾಗಿ ಇಟ್ಟುಕೊಂಡಿವೆ. ಆದರೆ ಈ ಆಸೆ ಎಷ್ಟು ದಿನದ್ದು ಎಂಬುದು ತಿಳಿಯದು. ಯಾಕೆಂದರೆ ಮುಂಬೈಯಲ್ಲಿ ನೆಲೆಸಿದ ತುಳುಕುಟುಂಬಗಳ ಇತ್ತೀಚಿನ ತಲೆಮಾರಿನ ಮಕ್ಕಳಲ್ಲಿ ಕನ್ನಡ ಮಾಯಾವಾಗತೊಡಗಿದೆ. ಅಂಥ ಒಂದು ಪ್ರಕ್ರಿಯೆ ಆರಂಭವಾದರೆ ಇಲ್ಲಿ ಕನ್ನಡದ ಸ್ಥಿತಿ ಶೋಚನೀಯವಾಗಲಿದೆ.
ಇಂಥ ಎಷ್ಟೋ ವಿಚಾರಗಳು ಮನಸ್ಸಿನಲ್ಲಿ ಮೂಡಿದ್ದು ಕಾಸರಗೋಡಿನ ಕನ್ನಡದ ಧ್ವನಿ ಕಯ್ಯಾರ ಕಿಞ್ಞಣ್ಣ ರೈ ಅವರನ್ನು ಸಂಪದ ಸಂದರ್ಶನಕ್ಕಾಗಿ ಭೇಟಿಯಾಗಲು ಹೊರಟಾಗ. ನಾನು, ಹರಿಪ್ರಸಾದ್, ಪ್ರತಾಪಚಂದ್ರಶೆಟ್ಟಿ ಮೂವರು ಬದಿಯಡ್ಕದ ಸಮೀಪದ ಪೆರಡಾಲ ಗ್ರಾಮದ ಕವಿತಾ ಕುಟೀರದಲ್ಲಿ ಕಯ್ಯಾರರನ್ನು ಭೇಟಿಯಾದೆವು. ೯೬ ರ ಪ್ರಾಯದಲ್ಲೂ ೨೬ ರ ಹುಮ್ಮಸ್ಸು. ಕನ್ನಡ ಹೋರಾಟದಲ್ಲಿ ಇಡೀ ತಮ್ಮ ಬದುಕನ್ನೇ ಸವೆಸಿರುವ ಶ್ರೀಯತರಿಂದ ಆ ಕುರಿತು ಕೇಳುವುದೇ ಒಂದು ಆನಂದ. ಕರ್ನಾಟಕ ಸರ್ಕಾರ ಮನಸ್ಸು ಮಾಡಿದರೆ ಇವತ್ತಿಗೂ ಕಾಸರಗೋಡನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲು ಸಾಧ್ಯ ಎಂಬ ಅಚಲ ನಂಬಿಕೆ ಅವರದ್ದು. ಬದುಕಿನ ಸಂಧ್ಯಾಕಾಲದಲ್ಲೂ ತಮ್ಮ ಎಂದಿನ ಚಟುವಟಿಗಳಿಂದ ಅವರು ದೂರವಾಗಿಲ್ಲ. ಅವರ ಮನೆಯೇ ಒಂದು ಗ್ರಂಥಾಲಯ. ಅಲ್ಲ್ಲೆಲ್ಲ ಪ್ರಶಸ್ತಿಗಳ ರಾಶಿ. ಬೆಂಕಿಬಿದ್ದಿದೆ ಮನೆಗೆ... ಓ ಬನ್ನಿ ಸೋದದರೇ .. ಎಂದು ಕಾಸರಗೋಡು ಕೇರಳಕ್ಕೆ ಸೇರಿದಾಗ ಕನ್ನಡಿಗರನ್ನು ವಿನಂತಿಸಿ ಹೋರಾಟಕ್ಕೆ ಸಜ್ಜಾಗುವಂತೆ ಮಾಡಿದ್ದನ್ನೂ ಯಾರೂ ಮರೆಯುವಂತಿಲ್ಲ.
ಇಷ್ಟು ಹೇಳಿದ ಬಳಿಕ ನನ್ನ ಮಲೆಯಾಳಿ ಸ್ನೇಹಿತನ ವಿಚಾರವೊಂದನ್ನು ತಿಳಿಸಲೇ ಬೇಕು. ಕಾಸರಗೋಡನ್ನು ನೀವು ನಿಮ್ಮಿಂದ ಕಿತ್ತುಕೊಂಡಿರಿ, ಅದು ನಮ್ಮದು ಎಂದು ಹೇಳಿದ ಮಾತಿಗೆ ಅವನು ಮೆಲುನಗೆ ನಗುತ್ತಾ, ನಾವು ಇನ್ನು ಸ್ವಲ್ಪ ದಿವಸ ಮಂಗಳೂರು ನಮ್ಮದು ಎಂದು ಹೇಳುವುದಿಲ್ಲ ಎಂದು ತಣ್ಣಗೆ ಹೇಳಿದ. ನನಗೆ ಮುಂದೆ ಮಾತುಗಳಿರಲಿಲ್ಲ....
Comments
ಉ: ನಾನೆಂಬ ಪರಕೀಯ...
In reply to ಉ: ನಾನೆಂಬ ಪರಕೀಯ... by ಅರವಿಂದ್
ಉ: ನಾನೆಂಬ ಪರಕೀಯ...
ಉ: ನಾನೆಂಬ ಪರಕೀಯ...
In reply to ಉ: ನಾನೆಂಬ ಪರಕೀಯ... by Rakesh Shetty
ಉ: ನಾನೆಂಬ ಪರಕೀಯ...
In reply to ಉ: ನಾನೆಂಬ ಪರಕೀಯ... by sathvik N V
ಉ: ನಾನೆಂಬ ಪರಕೀಯ...
ಉ: ನಾನೆಂಬ ಪರಕೀಯ...
In reply to ಉ: ನಾನೆಂಬ ಪರಕೀಯ... by asuhegde
ಉ: ನಾನೆಂಬ ಪರಕೀಯ...
In reply to ಉ: ನಾನೆಂಬ ಪರಕೀಯ... by sathvik N V
ಉ: ನಾನೆಂಬ ಪರಕೀಯ...