ತಮಿಳ್ಗನ್ನಡ

ತಮಿಳ್ಗನ್ನಡ

ಹೀಗೇ ಕನ್ನಡ ಬ್ಲಾಗುಗಳ ನಡುವೆ ಸುಳಿದಾಡುತ್ತಿದ್ದಾಗ ಕಣ್ಣಿಗೆ ಬಿದ್ದ ಸುದ್ದಿ ಮತ್ತು ಸಂತೋಷ ಹೆಗ್ಡೆಯವರ ಆಂಗ್ಲ ಭಾಷಣದ ಬಗೆಗೆ ಬಂದ ಪ್ರತಿಕ್ರಿಯೆಗಳು ನನ್ನ ತಂಗಿ ಮನೆಯಲ್ಲಿ ನಡೆದ ನೆಗೆಯ ಹಬ್ಬವನ್ನು ನೆನಪಿಸಿದವು. ಇದು ನಡೆದದ್ದು ತಿರುವಳ್ಳುವರ್ ಪ್ರತಿಮೆ ಅನಾವರಣಗೊಳಿಸುವ ಹಿಂದಿನ ದಿನ. ನಾನಂದು ಬೆಂಗಳೂರಿಗೆ ಕಚೇರಿಯ ಕಾರ್ಯನಿಮಿತ್ತ ಹೋಗಿದ್ದೆ. ನನ್ನ ತಂಗಿ ಮನೆಯಲ್ಲಿ ಸಂಜೆ ಟಿವಿ ನೋಡುತ್ತಿದ್ದಾಗ ನಡೆದದ್ದು. ಅದು H1N1 ಹಬ್ಬುತ್ತಿದ್ದ ಸಮಯ ಹಾಗೂ ಪರೀಕ್ಷಾ kitಗಳು ಬೆಂಗಳೂರಿನ ಅನೇಕ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದೆ ಎಲ್ಲಡೆ ಜನರ ಆತಂಕ ಹೆಚ್ಚಾಗಿತ್ತು. ಟೀವಿಯವರಿಗೆ ಇದಕ್ಕಿಂತ ಸುಸಂಧರ್ಭ ಬೇರೇನು ಬೇಕು? ಎಲ್ಲಾ ಚಾನೆಲ್ಲುಗಳಲ್ಲೂ H1N1 ಹಾಗೂ Testing kits ಸಿಗದಿರುವ ಬಗಗಿನ ವರದಿಗಳಿಂದ ಜನರಿಗೆ ಆತಂಕವನ್ನೂ ತಮ್ಮ TRPಯನ್ನೂ ಹೆಚ್ಚಿಸುವ ಪೈಪೋಟಿಯಲ್ಲಿದ್ದವು. ಆಗ ಟೀವಿಯಲ್ಲಿ ಕಾಣಿಸಿಕೊಂಡವರೇ ನಮ್ಮ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಾನ್ಯ ಪೆರುಮಾಳ್ ರವರು. ಅವರ ತಮಿಳ್ಗನ್ನಡ ಹಾಗೂ ಟೀವಿ ವಿವರಣೆ ಉಂಟು ಮಾಡಿದ ನೆಗೆಹೊನಲನ್ನು ಇಲ್ಲಿ ಹಂಚಿದ್ದೇನೆ.

"ಅದು ನೋಡಿ ಜನ ಚುಮ್ಮನೆ ಟೆನ್ಸನ್ ಮಾಡಿ ಆಸ್ಪತ್ರೆ ಮುಂದೆ ಕ್ಯೂ ನಿಂತಾರೆ. ನಮ್ಮಲ್ಲಿ ನಲ್ಲ ಫೆಸಲಿಟಿ ಅದೆ. ಎಲ್ಲರಿಗೂ ಟೆಸ್ಟ್ ಮಾಡ್ತಾರೆ."

"ಅಲ್ಲಾ ಸಾರ್ H1N1ನಿಂದ ಜನ ಸಾಯ್ತಾ ಇದಾರಲ್ಲಾ ಅದಕ್ಕೇನು ಹೇಳ್ತಿರಾ?"

"ಅದು ವೇರೆ ವೇರೆ ನಾಲ್ಕು ತರದ ಕಾಯಿಲೆ ಬಂದು ಜನ ಸತ್ತು ಬಿಟ್ಟಿss, ಎಲ್ಲ ಎಚ ಒನ ಎನ ಒನ ಅಂತಾರೆ. ಇದು ನೀವು ಟೀವಿಲಿ ತೋರ್ಸಿ ನಮ್ಮ ಟೀವಿಲಿ ಬರತ್ತೆ, ನಿಮ್ಮ ಟೀವಿಲಿ ಬರತ್ತೆ. ಜನ ಟೆನ್ಸನ್ ಆಗಿ ಆಸ್ಪತ್ರೆಗೆ ಕ್ಯೂ ನಿಲ್ತಾರೆ."

"ಅಂದ್ರೆ ನೀವು ಹೇಳೋ ರೀತಿ ಎಲ್ಲಾರೂ ಸತ್ತಿರೋದು H1N1ನಿಂದ ಅಲ್ಲಾ?"

"ಹೌದು. ಎಚ ಒನ ಎನ ಒನ ನೋಡಿ ಉಸಿರು ಬಿಟ್ರೆ ಬರತ್ತೆ. ಬಿಪಿ, ಸುಗರ್ರು, ಎಲ್ಲ ಇದ್ದು ಎಚ ಒನ ಎನ ಒನ ಬಂದು respiratory systemಗೆ ಬೇಜಾರಾಗಿ ಜನ ಸತ್ತು ಹೋಗ್ತಾರ"

"ಜನ ಎಲ್ಲ ಟೆಸ್ಟಿಂಗ್ ಕಿಟ್ಸ್ ಇಲ್ಲಾಂತ ಕಂಪ್ಲೈಂಟ್ ಮಾಡ್ತಾ ಇದಾರಲ್ಲ?"

"ಅದು ಚುದ್ದ ಸುಳ್ಳು. ಎಲ್ಲಾ ಕಡೆ, ಎಲ್ಲಾ ಅಸ್ಸತ್ರೆಲೂ ಎಚ ಒನ ಎನ ಒನ ಫುಲ್ಲು ಸ್ಟಾಕು, ನೋ ಟೆನ್ಸನ್!"

ಆಗ್ಲೇ ಗೊತ್ತಾಗಿದ್ದು, ನಮ್ಮ ಪ್ರತಿ ಅಂಗಕ್ಕೂ ತನ್ನದೇ ಆದ ಮನಸ್ಸು ಇರತ್ತೇ ಅಂತ. ಅಂದಿನಿಂದ ನಾನು ಯಾವುದೇ ಅಂಗಕ್ಕೂ ಬೇಜಾರು ಮಾಡಲು ಬಯಸಲ್ಲ! ಹೀಗೇ ಟೀವೀ ನೋಡ್ತಾ ಈ ತಮಿಳ್ಗನ್ನಡಕ್ಕೆ ನಗ್ತಾಯಿದ್ದಾಗ ನನ್ನ ತಂಗಿ ರೇಗಿಸ್ತಾಯಿದ್ಲು "ಏನೋ, ತಿರುವಳ್ಳುವರ್ ನ ಇನ್ಯಾಗುರೇಟ್ ಮಾಡೋಕ್ಕೆ ಬಂದಿದೀಏನೋ?"

"ಅದು ಬಿಡೆ, ನಾಳೆ ಉದ್ಘಾಟನೆ ಏನಾದ್ರೂ ಪೆರುಮಾಳ್ ನಡೆಸಿಕೊಡೋದಾದ್ರೆ? ಊಹಿಸ್ಕೋ ಹೇಗಿರುತ್ತೇ ಅಂತ"

ತಕ್ಷಣ ನಮ್ಮ ಚಿಕ್ಕಪ್ಪ ಶುರು ಮಾಡಿದ್ರು ನೋಡಿ ಅಣಕವನ್ನು "ಅದು ನೋಡಿ, ಎಂಟು ಹತ್ತು ವರ್ಷಂ ನಿಂದ ನಮ್ಮ ತಿರುವಳ್ಳುವರ್ ಮುಸುಕುಗೆ ಬಿಟ್ಟಿದಾರೆ. ಕಾಗೆ, ಗೂಬೆರವರೆಲ್ಲ ಬಂದು ಗಲೀಜು ಮಾಡಿ, ಬೇಜಾರು ಮಾಡಿದೆ. ನಮ್ಮ ಕರುಣಾನಿಧಿ ಹಾಗೂ ಯಡಿಯೂರಪ್ಪ ನವರು ಪೆರಿಯ ಮನಸು ಮಾಡಿ, ಎಲ್ಲಾ ಕ್ಲೀನ ಮಾಡಿ ಈಗೆ ಮುಸುಕು ತೆಗೆದು ಬಿಟ್ಟರು" ಹಾಗೇ ಮುಂದುವರಿಸಿ, "ಇವೆಲ್ಲಾ ಏನೂ ಇಲ್ಲಾ, ನಾವು ಹಳ್ಳಿಯಲ್ಲಿದ್ದಾಗ ನಮ್ಮಲ್ಲಿಗೆ ಬರೋ ತಮಿಳರು ಮಾತಾಡೋದು ಹಾಗೂ ಪ್ರಸಂಗಗಳನ್ನು ಹೇಳ್ತೇನೆ ಕೇಳು"

ಬೆಲ್ಲಂ ಬೇಕೇ?

ನಮ್ಮೂರು ತಮಿಳುನಾಡಿನ ಗಡಿಯಲ್ಲಿರುವ ಸಣ್ಣ ಹಳ್ಳಿ. ಸುಮಾರು ತಮಿಳರೂ ಜಮೀನು ಮಾಡಿಕೊಂಡು ಕರ್ನಾಟಕದಲ್ಲೇ ನೆಲಸಿ, ತಮ್ಮ ದೈನಂದಿನ ವ್ಯವಹಾರಕ್ಕೆ ತಕ್ಕಷ್ಟು ಕನ್ನಡವನ್ನೂ ಕಲಿತಿದ್ದರು. ಹೀಗೇ ಒಂದು ದಿನ ಒಬ್ಬ ತಮಿಳ ಬಂದು ಕೇಳಿದ "ಬೆಲ್ಲಂ ಬೇಕೇsss?" ನಮ್ಮ ಅಣ್ಣ ದಿನಸಿ ಅಂಗಡಿ ಇಟ್ಟಿದ್ರು, ಆಗ ಸಂತೆಗಳನ್ನ ಬಿಟ್ಟರೆ ಈಗಿನ ರೀತಿ APMC ಅಥವಾ ಬೇರೆ ಯಾವುದೇ ವ್ಯವಸ್ಥೆ ಇರಲಿಲ್ಲ. ರೈತರಿಂದ ನೇರವಾಗಿ ಖರೀದಿಸಿ ವ್ಯಾಪಾರ ಮಾಡುವುದೂ ಇತ್ತು. ಇವನ್ಯಾರೋ ರೈತನಿರಬೇಕು ಬೆಲ್ಲ ಮಾರಲಿಕ್ಕೆ ಬಂದಿದ್ದಾನೆ ಅಂತ ಮನೆಯೊಳಗ ನೋಡಿದರೆ, ನೂರಾರು ಬೆಲ್ಲದ ಪಿಂಡಿಗಳು ಜೋಡಿಸಿದ್ದವು. ನಾನವನಿಗೆ "ಈಗೇನೂ ಬೇಡ, ನಮ್ಮಲ್ಲೇ ಸಾಕಷ್ಟು ಬೆಲ್ಲ ಇದೆ" ಅಂದೆ.

ಅದಕ್ಕವನು "ಇಲ್ಲೈ, ಎನಹೆ ಬೆಲ್ಲಂ ಬೇಕೇssss?" ಅಂದ.

"ನಿನಗೆ ಬೆಲ್ಲ ಬೇಕೋ ಬೇಡ್ವೋ ನನಗೇನು ಗೊತ್ತು?" ನಾನೆಂದೆ. ಅಷ್ಟರಲ್ಲಿ ನಮ್ಮಣ್ಣ ಬಂದು "ಹಾಗಲ್ಲ, ಅವನು ಬೆಲ್ಲ ತಗೊಳ್ಳೋಕೆ ಬಂದಿದ್ದಾನೆ, ನಿನಗಿದು ಅರ್ಥವಾಗಲ್ಲ!" ಅಂದು ಅವನಿಗೆಷ್ಟು ಬೇಕೋ ಬೆಲ್ಲ ಕೊಟ್ಟು ಸಾಗಹಾಕಿದರು. ಅವನು "ಶಿನ್ನ ಅಯ್ಯರಿಕಿ ನಾ ಪೇಷಿನ ಕನ್ನಡ ತೆರಿಯವಿಲ್ಲೈ" ಅಂದು ನನ್ನತ್ತ ನೋಡಿ ನಕ್ಕು ಹೋದ. ಅವನ ನೋಟದಲ್ಲಿ ನಾನಾಡಿದ್ದೇ ಸರಿಯಾದ ಕನ್ನಡ ಇವನಿಗೆ ಕನ್ನಡಾನೂ ಬರಲ್ಲ ಅಂತ ಅನ್ನಿಸ್ತಿತ್ತು!! ಇವನು ಪೇಶಿದ್ದು ಒಂದು ಪೇಚಿನ ಘಟನೆಯಾಗಿತ್ತು!

ಇದ್ದಾದಿ

ಇವನ ಒರಿಜಿನಲ್ ಹೆಸರು ಯಾರಿಗೂ ಗೊತ್ತಿಲ್ಲ, ಎಲ್ಲರೂ ಅವನ್ನ ಇದ್ದಾದಿ ಅಂತ್ಲೇ ಕರಿತಾ ಇದ್ರು. ಯಾಕೆಂದರೆ, ಅವನು "ಇದೆ" ಅನ್ನೋಕೆ "ಇದ್ದಾದಿ" ಅನ್ತಾಯಿದ್ದ. ಅವನೂ ನಮ್ಮಣ್ಣ ಅಂಗಡಿಗೆ ಬರ್ತಾ ಇದ್ದ ಮತ್ತೆ ನಮ್ಮಣ್ಣ ಅವನ ಲೆಕ್ಕವನ್ನ ಇದ್ದಾದಿ ಲೆಕ್ಕ ಅಂತ್ಲೇ ಬರೆದಿಟ್ಟಿದ್ದ. ಅವನೊಮ್ಮೆ ತನ್ನ ಜೋಳ ಮಾರೋಕೆ ಬಂದಾಗೆ ಹೇಳಿದ್ದು:

"ಎನಹೆ ರಂಡು ಎಹರೆ ಶೋಳಂ ಇದ್ದಾದಿ. ಒರು ಚಡಿಕ್ಕು ರಂಡು ತೆನೆ ಇದ್ದಾದಿ" ಅಂದ್ರೆ ನನಗೆ ಎರಡೆಕ್ರೆ ಜೋಳ ಇದೆ. ಪೈರಿಗೆರೆಡು ತೆನೆ ಬಿಟ್ಟಿದೆ, ಭರ್ಜರಿ ಫಸಲು ಅಂತ ಹೇಳ್ತಾಯಿದ್ದ.

ಅಂದಂತೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೇ ನಕ್ಕಿದ್ದು. ನಮ್ಮ ಲೋಕಾಯುಕ್ತರ ಆಂಗ್ಲ ಭಾಷಣ ನನ್ನಲ್ಲಿ ಈ ತಮಿಳರು ಕಷ್ಟ ಪಟ್ಟು ಮಾತನಾಡುವ ಕನ್ನಡಕ್ಕೆ ಅಭಿನಂದಿಸುವುದೋ ಅಥವಾ ಅವರನ್ನು ಲೇವಡಿ ಮಾಡುವುದೋ ತಿಳಿಯದ ದ್ವಂದ್ವವನ್ನುಂಟುಮಾಡಿತ್ತು!!

Rating
No votes yet