ನಾಯಿ ಬಾಲ
ಬರಹ
ನಾಯಿ ಬಾಲ
ರೋಗಿ ಹೆಂಡತಿ ಸಾವ ಭಯದಲಿ
ಪತಿಯೊಡನೆ ಹೀಗೊಮ್ಮೆ ಉಲಿದಳು
ಪ್ರಾಣನಾಥ ನಾ ಒಂದೊಮ್ಮೆ ಸತ್ತರೆ
ನಿಮ್ಮ ಗತಿ ಏನಾದೀತು ಅಂದರೆ
ತುಂಬಿದಾ ಈ ಯವ್ವನದ ಆಸರೆ
ನನಗಂತೂ ಅದ ಎಣಿಸಿಯೇ ಬರೆ
ನಿಮ್ಮ ಜೀವನ ನರಕವೇ ಸರೆ
ಎಲ್ಲ ನೋವ ತಾನೋರ್ವ ನುಂಗುತಲಿ
ಅಂದ ಪತಿ ತನ್ನ ಶುಷ್ಕ ದನಿಯಲಿ
ಪ್ರಾಣದಾ ಪ್ರಿಯೆ ನಾ ಏನ ಹೇಳಲಿ
ತಳ್ಳಿದೇ ನನ್ನ ನೀ ದುಃಖದಾ ಮಡುವಲಿ
ವಿರಹದಾ ಉರಿ ಬಾಳ ದಳ್ಳುರಿ
ಈ ಜನ್ಮ ಶೂನ್ಯವು ನೀ ಇಲ್ಲದಿರೆ
ಅಂಧಕಾರ ನನ್ನ ಬಾಳಿನಾಸರೆ
ಆದರೂ ನೀ ಕ್ಲೇಶ ಪಡದಿರು
ಈ ಚಿಂತೆಯಾ ಭಾರ ಹೊರದಿರು
ನಾಳೆ ಸಾವಿದೂ ಇಂದೆ ಬರಲಿರು
ನಿಶ್ಚಿಂತೆಯಲಿ ನೀನು ಸತ್ತಿರು
ನಿನ್ನೊಡನೆ ನಿನ್ನ ಚಿಂತೆ ಸಾವುದು
ಚಿತೆಯೊಡನೆ ಈ ಪ್ರೀತಿ ಉರಿವುದು
ಹೊಸ ವಧುವ ನನ್ನ ಮನೆಗೆ ತರುವೆನು
ಹೊಸ ಬದುಕ ಹೊಸ ಬೆಳಕ ಕರೆವೆನು