ಬಾಲ ಅಲ್ಲಾಡಿಸಲು ಜಾಗದ ಕೊರತೆ

ಬಾಲ ಅಲ್ಲಾಡಿಸಲು ಜಾಗದ ಕೊರತೆ

(ಬೊಗಳೂರು ಶ್ವಾನಾನ್ವೇಷಿ ಬ್ಯುರೋದಿಂದ)
ಬೊಗಳೂರು, ನ.15- ಹಿಂದೊಂದು ಕಾಲವಿತ್ತು, ಬಸ್ಸಿಂದ ಕೆಳಗೆ ಕಾಲಿಟ್ಟ ತಕ್ಷಣ ನಾಯಿಗಳು ಇರುವೆಗಳಂತೆ ಮುತ್ತಿಕೊಳ್ಳುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ನಾಯಿಗಳು ನಗರ ಜೀವನದಿಂದ ರೋಸಿ ಹೋಗಿವೆ. ಅವುಗಳು ಬೇರೆ ಪುಟ್ಟ ಪಟ್ಟಣಗಳಿಗೆ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ.(bogaleragale.blogspot.com)

ಇದಕ್ಕೆ ಕಾರಣವೆಂದರೆ ನಾಯಿಗಳಿಗೆ ಬಾಲ ಅಲ್ಲಾಡಿಸಲು ಜಾಗವೇ ಇಲ್ಲ. ಇರೋದು ಒಂದು ಬಾಲ. ಅದನ್ನೂ ಅಲ್ಲಾಡಿಸಲು ಜಾಗವಿಲ್ಲದ ಮೇಲೆ ನಮಗೇಕ್ರೀ ಬೇಕು ಈ ಸಿಲ್ಲಿ-ಕಾನ್ ಸಿಟಿಯ ಸಹವಾಸ ಅಂತ ಹೇಳಿ ಶ್ವಾನಮಹೋದಯರು ಅಲ್ಲಿಂದ ಕಾಲ್ಕಿತ್ತಿರುವುದಾಗಿ ವರದಿಯಾಗಿದೆ.

ಇನ್ನೊಂದು ನಾಯಿಯನ್ನು ಸಮೀಪ ಕರೆದು ಅದರ ಮೂತಿಯ ಬಳಿ ಬಾಯಿ ಇರಿಸಿ ಕೇಳಲಾಯಿತು. "ನಿಜಕ್ಕೂ ನೀವುಗಳು ಈ ನಗರಿ ಬಿಡಲು ಕಾರಣವೇನು?"
ಅದಕ್ಕೆ ಬಂದ ಉತ್ತರ ಮಾತ್ರ ಸಖತ್ತಾಗಿತ್ತು.

ಅಲ್ಲ ಬೊಗಳೆ ಮಹೋದಯರೇ, ನೀವು ಕೂಡ ನಮ್ಮಂತೆಯೇ ಬೊಗಳ್ತಾ ಇರ್ತೀರಿ. ಇಲ್ಲಿ ಕನ್ನಡ ಮಾತಾಡ್ಕೋತಾ, ಖುಷಿಯಾಗಿ ಬಾಲ ಅಲ್ಲಾಡಿಸುತ್ತಾ ನಮ್ ಪಾಡಿಗೆ ನಾವಿದ್ವಾ? ಇಲ್ಲಿಗೆ ತೆಲುಗಿನಲ್ಲಿ, ತಮಿಳಿನಲ್ಲಿ ಬೊಗಳೆ ಬಿಡೋ (ಬೊಗಳೋ ಅಂತ ಖಂಡಿತವಾಗಿಯೂ ಹೇಳಿಲ್ಲ) ಮಂದಿ ಬರಾಕ್ ಹತ್ತಿದರು. ಅವುಗಳು ಕೂಡ ಬಾಲ ಬಿಚ್ಚಲಾರಂಭಿಸಿದವು. ಮಾತ್ರವಲ್ಲ ಜೋರಾಗಿಯೇ ಅಲ್ಲಾಡಿಸತೊಡಗಿದವು. ಸಿಕ್ಕಿದ್ದನ್ನು ಮೇಯ್ದು ಗಟ್ಟಿಮುಟ್ಟಾದ ಕಪ್ಪು ಕಪ್ಪನೆಯ ದಪ್ಪ ಶರೀರವಲ್ವೇ...? ಹಾಗಾಗಿ ಅವುಗಳ ಬಾಲ ಅಲ್ಲಾಡಿಸುವಿಕೆಯ ಮಧ್ಯೆ ನಮ್ಮ ಬಾಲ ತೂರಿಸಲು ಅವಕಾಶವೇ ಸಿಗುತ್ತಿಲ್ಲ. ಅಷ್ಟು ಗಟ್ಟಿಯಾಗಿ ಬಾಲ ಅಲ್ಲಾಡಿಸುತ್ತಿವೆ ಎಂಬ ಉತ್ತರ ಬಂದಿತು.

ಈ ಕಾರಣಕ್ಕೆ ಅಲ್ಲಿದ್ದವುಗಳು ಬಾಲ ಮಡಚಿಕೊಂಡು ಊರು ಬಿಡತೊಡಗಿವೆ. ಪರಊರಿನ ನಾಯಿಗಳೇ ಅಲ್ಲಿ ಠಿಕಾಣಿ ಹೂಡುತ್ತಿವೆ ಎಂಬ ಆತಂಕಕಾರಿ ವಿದ್ಯಮಾನ ನಡೆದಿರುವ ಹಿನ್ನೆಲೆಯಲ್ಲಿ ಬೊಗಳೂರನ್ನು ಬೆಂಗಳೂರಿನಂತಾಗಲು ಬಿಡುವುದಿಲ್ಲ ಎಂದು ಬೊಗಳೂರು ಬ್ಯುರೋ ಪ್ರತಿಜ್ಞೆ ತೊಟ್ಟಿದೆ

Rating
No votes yet