'ಶಿಕ್ಷಕರೇ, ಮರಳಿ ಬನ್ನಿ' ಯೋಜನೆ ಜಾರಿಗೆ
ಬೊಗಳೂರು, ನ.16- ಮಕ್ಕಳ ಹಾಜರಾತಿ ಕೊರತೆಯಿಂದಾಗಿ ಸರ್ವ ಶಿಕ್ಷಾ ಅಭಿಯಾನದಡಿ 'ಮರಳಿ ಬನ್ನಿ ಶಾಲೆಗೆ' ಎಂಬ ಯೋಜನೆ ಹಮ್ಮಿಕೊಂಡು ಮಕ್ಕಳಿಗೆ ಹಾಲು, ಮೊಟ್ಟೆ, ಅಕ್ಕಿ... ಇತ್ಯಾದಿ ಹಾಳು ಮೂಳು ಕೊಡಲು ಆರಂಭಿಸಿದ್ದು ಹಳೆ ಕಥೆ. (Bogaleragale.blogspot.com)
ಈಗ ಶಿಕ್ಷಕರಿಗಾಗಿ 'ಮರಳಿ ಬನ್ನಿ ಶಾಲೆಗೆ' ಎಂಬ ಹೊಸ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ.
ಇತ್ತೀಚೆಗೆ ಶಾಲೆಗೆ ಹಾಜರಾಗುತ್ತಿರುವ ಶಿಕ್ಷಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಅವರಿಗೆ ಕಲಿಸಲು ಬೇರೆ ಕಡೆಯೂ ಕೆಲಸವಿದೆ ಎಂಬುದು ಇದರ ಹಿಂದಿರುವ ಕಾರಣವೆಂದು ಪತ್ತೆ ಹಚ್ಚಲಾಗಿದೆ. ಶಿಕ್ಷಕರ ಮತ್ತು ಶಿಕ್ಷಕಿಯರ ಹಾಜರಾತಿ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಈ ಮಧ್ಯೆ, ಶಾಲೆಗೆ ಚಕ್ಕರ್ ಹೊಡೆಯುತ್ತಿರುವ ಮತ್ತು ಬಾಲ-ಕರುಗಳಿಗೆ ಶಿಕ್ಷೆ ನೀಡುತ್ತಲೇ "ಶಿಕ್ಷ-ಕರು" ಎಂದು ಹೆಸರು ಗಳಿಸಿರುವವರ ವಿರುದ್ಧ ವಿದ್ಯಾರ್ಥಿಗಳು ತಾವು ಕೂಡ ತರಗತಿಗೆ ಚಕ್ಕರ್ ಹೊಡೆಯಲು ಇದೇ ಸುಸಮಯ ಎಂದುಕೊಂಡು ಬೀದಿಗಿಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಮಕ್ಕಳನ್ನು ಮರಳಿ ಶಾಲೆಗೆ ಕರೆಸಲು ಹಾಲು ಹಣ್ಣು ಅಕ್ಕಿ ಇತ್ಯಾದಿ ಆಮಿಷವೊಡ್ಡಲಾಗಿತ್ತು. ಆದರೆ ಶಿಕ್ಷಕರನ್ನು ಶಾಲೆಯತ್ತ ಸೆಳೆಯಲು ಯಾವ ಕ್ರಮ ಕೈಗೊಳ್ಳಬಹುದು, ಯಾವ ಆಮಿಷ ಒಡ್ಡಬಹುದು ಎಂಬುದನ್ನು ಆಲೋಚಿಸಲಾಗುತ್ತಿದೆ.