ಮಾಯಾವತಿಯ ಆತ್ಮವೈಭವೀಕರಣ

ಮಾಯಾವತಿಯ ಆತ್ಮವೈಭವೀಕರಣ

ಬರಹ

(೨೮-೩-೨೦೧೦ರ ’ವಿಜಯ ಕರ್ನಾಟಕ’ದ ’ಸಾಪ್ತಾಹಿಕ ಲವಲವಿಕೆ’ಯಲ್ಲಿ ಪ್ರಕಟಿತ ಬರಹ) 

  ಜನನಾಯಕರು ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ಕಾಣಬೇಕೆಂದರೆ ಅವರ ಆ ಕಾರ್ಯಗಳ ಉದ್ದೇಶ ಪರಿಶುದ್ಧವಾಗಿರಬೇಕು. ಅಲ್ಲಿ ಸ್ವಾರ್ಥ ಅಡಕವಾಗಿರಬಾರದು. ಅಶುದ್ಧ ಹಾಗೂ ಸ್ವಾರ್ಥಭರಿತ ಕಾರ್ಯವು ಒಂದು ವೇಳೆ ಅನ್ಯ ಕಾರಣಗಳಿಂದಾಗಿ ಯಶಸ್ಸಿನ ಹಾದಿಯಲ್ಲಿ ಸಾಗತೊಡಗಿದರೂ ಆ ಯಾನ ಕ್ಷಣಿಕ.
  ಮಾಯಾವತಿಯ ತಥಾಕಥಿತ ದಲಿತೋದ್ಧಾರದ ಕಾರ್ಯ - ಅದನ್ನು ಕಾರುಬಾರು ಎನ್ನುವುದು ಹೆಚ್ಚು ಸೂಕ್ತ - ಶುದ್ಧವೂ ಸ್ವಾರ್ಥರಹಿತವೂ ಆಗಿಲ್ಲ. ತಾನು ಅಧಿಕಾರದ ಗದ್ದುಗೆ ಏರಲು ನೆರವಾದ ಮತ್ತು ತನ್ನ ಬಲಗೈ ಬಂಟನಾಗಿದ್ದ ಸತೀಶ್ಚಂದ್ರ ಮಿಶ್ರಾನನ್ನೂ ಒಳಗೊಂಡಂತೆ ಅನೇಕ ಬ್ರಾಹ್ಮಣ ವಕೀಲರ ಮತ್ತು ಅಧಿಕಾರಿಗಳಮೇಲೆ ಈಚೆಗಷ್ಟೇ ಆಕೆ ವಿನಾಕಾರಣ ಗದಾಪ್ರಹಾರ ಮಾಡಿರುವುದು ಆಕೆಯ ಅಶುದ್ಧ ಹಾಗೂ ಸ್ವಾರ್ಥಭರಿತ ಕಾರುಬಾರಿಗೊಂದು ನಿದರ್ಶನ. ತಾನು ಹತ್ತಿದ ಏಣಿಯನ್ನು ಆಕೆ ಈ ರೀತಿ ಒದ್ದದ್ದು ದಲಿತರ ವೋಟಿಗಾಗಿ ಹೊರತು ದಲಿತರ ಏಳಿಗೆಗಾಗಿ ಅಲ್ಲ. ದಲಿತರ ಏಳಿಗೆಯೇ ಆಕೆಯ ಸ್ವಾರ್ಥರಹಿತ ಗುರಿಯಾಗಿದ್ದಿದ್ದರೆ ಇದುವರೆಗಿನ ಅಧಿಕಾರಾವಧಿಯಲ್ಲಿ ಆಕೆ ದಲಿತರ ಸರ್ವಾಂಗೀಣ ಏಳಿಗೆಗಾಗಿ ನಿಃಸ್ವಾರ್ಥದಿಂದ ದುಡಿಯುವ ಮೂಲಕ ದಲಿತರೆಲ್ಲರ ಸಂಪೂರ್ಣ ವಿಶ್ವಾಸ ಗಳಿಸಬಹುದಿತ್ತು, ಮಾತ್ರವಲ್ಲ, ಈ ಹೊತ್ತಿಗಾಗಲೇ ಆ ವಿಶ್ವಾಸವನ್ನು ಅಚಲಗೊಳಿಸಿಕೊಂಡಿರಬಹುದಿತ್ತು. ಆಕೆ ನಿಃಸ್ವಾರ್ಥದಿಂದ ದುಡಿಯಲಿಲ್ಲವೆಂದೇ ಕಳೆದ ಲೋಕಸಭಾ ಚುನಾವಣೆಯಲ್ಲಿ ದಲಿತರು ಆಕೆಯನ್ನು ಮೊದಲಿನಂತೆ ಆದರಿಸಲಿಲ್ಲ, ಆಧರಿಸಲಿಲ್ಲ.
  ಪ್ರತಿಮೆ ಸ್ಥಾಪನೆ, ನೋಟಿನ ಹಾರ ಇಂಥ ವೈಭವೀಕರಣದ ನಡೆಗಳು ದೇಶದ ಜಾತಿ ರಾಜಕಾರಣಕ್ಕೆ ಮತ್ತು ಅವಮಾನಿಸುವ ವ್ಯವಸ್ಥೆಗೆ ತೋರುವ ಪ್ರತಿರೋಧ ಎಂದು ಬುದ್ಧಿಜೀವಿಗಳು ಹೇಳಬಹುದು. ಎಲ್ಲ ದಲಿತರೂ ಕೆಲ ಕಾಲ ಅದೇ ರೀತಿ ಭಾವಿಸಬಹುದು, ಆದರೆ, ದಲಿತರ ಮನಗಳಲ್ಲಿ ಕೊನೆಗೆ ಗಟ್ಟಿಯಾಗಿ ನಿಲ್ಲುವುದು ತಮ್ಮ ನೇತಾರ ತಮ್ಮ ಏಳಿಗೆಗಾಗಿ ಕೈಕೊಂಡ ಗಟ್ಟಿ ಕಾರ್ಯಗಳೇ ಹೊರತು ನೇತಾರ ಮೆರೆದ ವೈಭವವಲ್ಲ. ವ್ಯವಸ್ಥೆಗೆ ತೋರುವ ಪ್ರತಿರೋಧದ ಸಂಕೇತವಾಗಿ ಆರಂಭದಲ್ಲಿ ಪ್ರಾತಿನಿಧಿಕವಾಗಿ ಒಂದಷ್ಟು ಆತ್ಮವೈಭವ ನಿರಪಾಯಕಾರಿಯೇನೋ ಹೌದು. ಆದರೆ, ಅಂಥ ವೈಭವೀಕರಣ ಮಿತಿ ಮೀರಿದರೆ ಮತ್ತು ಮುಖ್ಯವಾಗಿ ಅದರಲ್ಲಿ ಕೀರ್ತಿಲಾಲಸೆ, ಐಶ್ವರ್ಯದಾಹ ಮೊದಲಾದ ಸ್ವಾರ್ಥ ಅಡಗಿದ್ದರೆ ಆಗ ಆ ವೈಭವೀಕರಣ ಕ್ರಮೇಣ ಆ ನೇತಾರನಮೇಲೆ ಜನರಿಗಿದ್ದ ವಿಶ್ವಾಸವನ್ನೇ ಅಲ್ಲಾಡಿಸುತ್ತ, ಕೊನೆಗೊಂದು ದಿನ ಹಾಗೆ ತನ್ನನ್ನು ವೈಭವೀಕರಿಸಿಕೊಂಡ ವ್ಯಕ್ತಿ ಮೂಲೆಗುಂಪಾಗುವುದು ನಿಶ್ಚಿತ. ಈ ದೇಶದ ದಲಿತರ ಆಶಾಕಿರಣವಾಗಿರುವ ಮಾಯಾವತಿ ಹಾಗೇನಾದರೂ ಮೂಲೆಗುಂಪಾದರೆಂದರೆ ಆಗ ದಲಿತರ ಅಭ್ಯುದಯದ ಸ್ಥಿತಿ ’ಕೈಗೆ ಬಂದ ತುತ್ತು ಬಾಯಿಗಿಲ್ಲ’ ಎಂಬಂತಾಗುತ್ತದೆ.
  ತಾನು ಈ ದೇಶದ ಪ್ರಧಾನಿಯಾಗಬೇಕು, ದಲಿತರ ಮನಗಳಲ್ಲಿ ಅಂಬೇಡ್ಕರರ ಸರಿಸಮನಾಗಿ ನೆಲೆಯೂರಬೇಕು ಎಂಬೆಲ್ಲ ಮಹತ್ವಾಕಾಂಕ್ಷೆ ಹೊಂದಿರುವ ಮಾಯಾವತಿಯವರು ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಅದೆಂದರೆ, ಅಂಬೇಡ್ಕರರು ಎಂದೂ ತಮ್ಮನ್ನು ವೈಭವೀಕರಿಸಿಕೊಳ್ಳಲಿಲ್ಲ.