ಚುನಾವಣಾ ಸ್ವಾರಸ್ಯಗಳು

ಚುನಾವಣಾ ಸ್ವಾರಸ್ಯಗಳು

ಬರಹ

  ಈಚೆಗಷ್ಟೇ ಸಂಪನ್ನಗೊಂಡ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರಪಾಲಿಕೆ) ಚುನಾವಣೆಯ ಮತದಾನದ ದಿನ ನಾನು ಒಪ್ಪೊತ್ತಿಡೀ ಬೆಂಗಳೂರು ಮಹಾನಗರ ಸುತ್ತಾಡಿದೆ. ಯಾವುದೇ ಸಾರ್ವಜನಿಕ ಚುನಾವಣೆಯ ಮತದಾನದ ದಿನ ಇದು ನನ್ನ ಖಾಯಂ ಹವ್ಯಾಸ. ಅಂದು ನಾನು ಗಮನಿಸಿದ ಕೆಲವು ಸ್ವಾರಸ್ಯಕರ ಘಟನೆಗಳು ಇಂತಿವೆ:

  ಬೆಳಗ್ಗೆ ಮತದಾನ ಮಾಡಲು ನನ್ನ ಮತಗಟ್ಟೆಕಡೆ ಹೋಗುತ್ತಿದ್ದೆ.
  "ಸಾರ್, ಒಂದು. ನೆನಪಿರಲಿ", ಎಂದು ಯಾರೋ ಕೂಗಿಹೇಳಿದರು.
  ಬೆನ್ನಿಗೇ, "ಸಾರ್, ಎರಡು", ಎಂದು ಇನ್ನೊಂದು ಕಡೆಯಿಂದ ಧ್ವನಿ ಬಂತು.
  "ಮೂರು ಸಾರ್, ಮೂರು", ಮತ್ತೊಂದು ಆವಾಜ್.
  "ನನ್ನದು ನಾಲ್ಕನೇದಕ್ಕೆ", ಎಂದು ಹೇಳುತ್ತ ನಾನು ಮುಂದುವರಿದೆ.
  ನನ್ನ ಆ ವಾರ್ಡಿನಲ್ಲಿ ಸ್ಪರ್ಧಿಸಿದ್ದುದು ಕಮಲ-ಕೈ-ತೆನೆ.....ಮೂರೇ ಮಂದಿ!
  ***
  ಮತಗಟ್ಟೆಯ ಸರತಿ ಸಾಲಿನಲ್ಲಿ ನಿಂತಿದ್ದೆ. ನನ್ನ ಮುಂದಿದ್ದವನ ಪಾಳಿ ಬಂತು. ಮತದಾರರ ಪಟ್ಟಿಯಲ್ಲಿ ಆತನ ಕ್ರಮಸಂಖ್ಯೆ ಗುರುತಿಸಿದ ಮತಗಟ್ಟೆ ಅಧಿಕಾರಿ ಅಲ್ಲಿದ್ದ ಏಜೆಂಟರಿಗೆ ತಿಳಿಸಲು ಗಟ್ಟಿಯಾಗಿ ಒದರಿದ,
  "ಫೋರ್‍ಟ್ವೆಂಟಿ."
  ನನ್ನ ಪಾಳಿ ಬಂದಾಗ ನಾನು ಆ ಅಧಿಕಾರಿಗೆ ಮೆತ್ತಗೆ ಹೇಳಿದೆ.
  "ಫೋರ್ ಹಂಡ್ರೆಡ್ ಟ್ವೆಂಟಿ ಅನ್ನಬಹುದಿತ್ತು ನೀವು. ಅಥವಾ, ಅಚ್ಚ ಕನ್ನಡದಲ್ಲಿ ’ನಾನ್ನೂರಾ ಇಪ್ಪತ್ತು’ ಅನ್ನಬಹುದಿತ್ತು."
  ಆ ಅಧಿಕಾರಿ ನನ್ನ ಮುಖ ನೋಡಿ ಒಂದು ಕಿರುನಗೆ ಎಸೆದ.
  ***
  ಮಹಿಳಾ ಮೀಸಲು ವಾರ್ಡಿನ ಅಭ್ಯರ್ಥಿಯೊಬ್ಬರು ರಸ್ತೆಬದಿಯಲ್ಲಿ ಗುಂಪೊಂದರೊಡನೆ ಮಾತನಾಡುತ್ತ ನಿಂತಿದ್ದರು. ಗುಂಪಿನೊಡನೆ ನಾನೂ ಸೇರಿಕೊಂಡೆ. ಅದೂ ಇದೂ ಮಾತನಾಡುತ್ತ ನಾನು, "ಬಿಬಿಎಂಪಿ ಫುಲ್ ಪಾರ್ಮ್ ಏನು?" ಎಂದು ಆ ಅಭ್ಯರ್ಥಿಯನ್ನು ಕೇಳಿದೆ.
  "ಬಿ ಫಾರ್ಮಾ ಸಾರ್?" ಎಂದು ಆಕೆ ಮರಳಿ ನನ್ನನ್ನೇ ಪ್ರಶ್ನಿಸಿದರು.
  "ಅಲ್ಲಮ್ಮಾ. ಬಿಬಿಎಂಪಿ ಅಂತ ಯಾಕಂತಾರೆ? ಹಾಗಂದರೆ ಏನು?" ಎಂದು ಮತ್ತೆ ಕೇಳಿದೆ.
  "ಬ್ಬೆ ಬ್ಬೆ" ಅಂದರು ಆಯಮ್ಮ!
  ಅರ್ಧ ಫಾರ್ಮ್ ಗೊತ್ತಾಯಿತು.
  ಫುಲ್ ಫಾರ್ಮನ್ನು ಆಕೆಯ ಮಾಜಿ ಕಾರ್ಪೊರೇಟರ್ ಪತಿ ಆಕೆಗೆ ಹೇಳಿಕೊಟ್ಟಿರಲಿಲ್ಲವೆನ್ನಿಸುತ್ತೆ.
  ***
  ಪುರುಷ ಅಭ್ಯರ್ಥಿಯೊಬ್ಬರು ಕೊಳೆಗೇರಿಯೊಂದರ ಮತದಾರರಿಗೆ ಆಶ್ವಾಸನೆ ನೀಡುತ್ತಿದ್ದರು.
  "ಗೋಹತ್ಯೆ ನಿಷೇಧ ಕಾನೂನು ಬರಲಿ ಬಿಡಿ. ಚಿಂತೆ ಮಾಡ್ಬೇಡಿ. ನನ್ನ ಈ ವಾರ್ಡಿಗೆ ಮಾತ್ರ ಆ ಕಾನೂನು ಲಾಗೂ ಆಗದಂತೆ ನೋಡಿಕೊಳ್ತೀನಿ. ಪ್ರೈಂ ಮಿನಿಷ್ಟರ್ ಇಂದ ಪೆಷಲ್ ಕನ್ಸಿಷನ್ ತಕಂಬತ್ತೀನಿ."
  ಅಲ್ಲಿದ್ದ ಅಮಾಯಕ ಮತದಾರರೆಲ್ಲ ಗೋಣುಹಾಕುತ್ತಿದ್ದರು.
  ***
  ಎದುರು ಪಕ್ಷದವರು ಮತ ಗಳಿಕೆಗಾಗಿ ಭ್ರಷ್ಟ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆಂದು ಅಭ್ಯರ್ಥಿಯೊಬ್ಬ ಗುಂಪೊಂದರೆದುರು ಎಗರಾಡುತ್ತಿದ್ದ. ಆತ ಯಾರೆಂದು ನೋಡಲು ಹತ್ತಿರ ಹೋದೆ.
  ಅರೆ! ೨೫ ವರ್ಷಗಳ ಕೆಳಗೆ ಆ ಏರಿಯಾದಲ್ಲಿ ನಾನು ಬ್ಯಾಂಕ್ ಮೇನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಇದೇ ವ್ಯಕ್ತಿ ಒಂದೆರಡು ಬಾರಿ ಯಾರ್ಯಾರನ್ನೋ ಬ್ಯಾಂಕಿಗೆ ಕರೆದುಕೊಂಡುಬಂದು ಅವರಿಗೆ ಸಾಲ ಕೊಡಿಸಲು (ಮತ್ತು ತನ್ಮೂಲಕ ತಾನು ಹಣ ಮಾಡಿಕೊಳ್ಳಲು) ವಿಫಲಯತ್ನ ನಡೆಸಿ ನನ್ನಿಂದ ಬೈಸಿಕೊಂಡು ವಾಪಸಾಗಿದ್ದ!
  ***
  ಬೆರಳಿಗೆ ಹಚ್ಚಿದ ಶಾಯಿಯನ್ನು ಅದುಹೇಗೋ ಒರೆಸಿಕೊಂಡು ಇನ್ನೊಮ್ಮೆ ಮತದಾನ ಮಾಡಲೆತ್ನಿಸುವ ನಕಲಿ ಮತದಾರರ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಬ್ಬನ ಎರಡು ಬೆರಳುಗಳಿಗೆ ಶಾಯಿ ಹಚ್ಚಲಾಗಿತ್ತು. ಅದು ಹೇಗೆಂದು ಆತನನ್ನು ಕೇಳಿದೆ.
  "ಎಡಗೈ ಬೆರಳಿಗೆ ಇಂಕ್ ಹಚ್ಚಿದರು ಸಾರ್. ಆಗ ಪಕ್ಕದಲ್ಲಿದ್ದೋರು ’ಎಡಗೈ ಅಲ್ರೀ, ಬಲಗೈಗೆ ಹಚ್ಬೇಕು’ ಅಂದ್ರು. ಆಗ ಆಯಪ್ಪ ಬಲಗೈ ಬೆರಳಿಗೆ ಇನ್ನೊಮ್ಮೆ ಇಂಕ್ ಹಚ್ಚಿದ್ದರು. ವೋಟ್ ಮಾಡಿದ್ದು ಮಾತ್ರ ಒಂದೇ ಸಲ", ಎಂದ ಆತ!
  ***
  ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲವೆಂದು ಒಂದಷ್ಟು ಜನರು ಪ್ರತಿಭಟಿಸುತ್ತಿದ್ದರು. ಇನ್ನೊಂದಷ್ಟು ಜನರು ಅವರನ್ನು ನೋಡುತ್ತ ನಿಂತಿದ್ದರು. ಅಲ್ಲಿಗೆ ಬಂದ ಟಿವಿ ಕ್ಯಾಮೆರಾಮನ್‌ನ ಕೋರಿಕೆಯಂತೆ ಪ್ರತಿಭಟನಾಕಾರರೆಲ್ಲ ತಮ್ಮ ಮತದಾರರ ಗುರುತಿನ ಚೀಟಿಗಳನ್ನು ಕ್ಯಾಮೆರಾದೆದುರು ಹಿಡಿದು ನಿಂತರು. ಕ್ಯಾಮೆರಾಮನ್ ಚಿತ್ರೀಕರಿಸತೊಡಗಿದ.
  ಹಾಗೆ ಗುರುತಿನ ಚೀಟಿ ಪ್ರದರ್ಶಿಸುತ್ತ ಕ್ಯಾಮೆರಾದೆದುರು ನಿಂತವರ ಪೈಕಿ ಇಬ್ಬರ ಬೆರಳಿನಲ್ಲಿ, ಮತದಾನ ಮಾಡಿದ್ದರ ಕುರುಹಾಗಿ ಶಾಯಿ ಶೋಭಿಸುತ್ತಿತ್ತು! ಮೆತ್ತಗೆ ಕ್ಯಾಮೆರಾಮನ್‌ನ ಭುಜ ತಿವಿದು ನಾನು ಅತ್ತ ಅವನ ಗಮನ ಸೆಳೆದೆ. ಒಂದು ಕ್ಷಣ ಆತ ಅವಾಕ್ಕಾದ! ಮರುಗಳಿಗೆಯೇ ಸುಧಾರಿಸಿಕೊಂಡು, "ನೀವ್ಯಾಕೆ ನಿಂತಿದ್ದೀರಿ, ಆಚೆ ಸರೀರಿ", ಎನ್ನುತ್ತ ಅವರಿಬ್ಬರನ್ನೂ ಆಚೆ ಸರಿಸಿ ಮತ್ತೆ ಚಿತ್ರೀಕರಿಸತೊಡಗಿದ. ದಶಕಗಳ ಕೆಳಗೆ ’ತುಷಾರ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ’ಟೀವೀಲಿ ಮುಖ ಕಾಣ್ಸೋದು ಅಂದ್ರೆ..’ ಎಂಬ ನನ್ನ ಹಾಸ್ಯಲೇಖನ ನೆನಪಾಯಿತು.
  ***
  ನಾನು ಆರು ದಿನಪತ್ರಿಕೆಗಳನ್ನು ತರಿಸುತ್ತೇನೆ. ಅವುಗಳೊಳಗೆ ಪ್ರತಿನಿತ್ಯ ಇರುತ್ತಿದ್ದ ಬಿಬಿಎಂಪಿ ಚುನಾವಣಾ ಕರಪತ್ರಗಳನ್ನೆಲ್ಲ ಒಟ್ಟುಮಾಡಿ ಬಂಡಲ್ ಕಟ್ಟಿ ಇಟ್ಟಿದ್ದೆ. ಮತದಾನದ ಮರುದಿನ ಆ ಬಂಡಲ್ಲನ್ನು ರದ್ದಿ ಪೇಪರ್ ಅಂಗಡಿಗೆ ಕೊಟ್ಟೆ. ಒಂದು ಕೆಜಿಗೂ ಹೆಚ್ಚು ತೂಗಿತು. ಮೂರು ರೂಪಾಯಿ ಸಿಕ್ಕಿತು. ಪಕ್ಕದ ದೇವಸ್ಥಾನದ ಬಳಿ ಕುಳಿತಿದ್ದ ಮೂವರು ವೃದ್ಧ ಭಿಕ್ಷುಕರಿಗೆ ತಲಾ ಒಂದೊಂದು ರೂಪಾಯಿ ಕೊಟ್ಟು ಮನೆಗೆ ವಾಪಸಾದೆ.