ಬೆಂಗಳೂರಿನಲ್ಲಿ ತಿರುಕರಂಗ ಮಲ್ಲಾಡಿಹಳ್ಳಿ ನಾಟಕೋತ್ಸವಕ್ಕೆ ಆಹ್ವಾನ
ಅನಾಥಸೇವಾಶ್ರಮ ಟ್ರಸ್ಟ್ (ರಿ) ಮಲ್ಲಾಡಿಹಳ್ಳಿ, ಹೊಳಲ್ಕೆರೆ (ತಾ), ಚಿತ್ರದುರ್ಗ(ಜಿ).
ಅನಾಥಸೇವಾಶ್ರಮ
ಅನಾಥಸೇವಾಶ್ರಮವು ತಿರುಕ ಎಂಬ ಕಾವ್ಯನಾಮದಿಂದ ಯೋಗ, ಆಯುರ್ವೇದ, ಸಾಹಿತ್ಯ ಕೃತಿಗಳನ್ನು ರಚಿಸಿದ ಅಭಿನವ ಧನ್ವಂತರಿ, ಯೋಗಾಚಾರ್ಯ ಎನ್ನುವ ಅನ್ವರ್ಥಕ ಬಿರುದುಗಳನ್ನು ಪಡೆದ ಶ್ರೀ ರಾಘವೇಂದ್ರಸ್ವಾಮೀಜಿ ಅವರಿಂದ೧೯೪೩ ರಲ್ಲಿ ಸ್ಥಾಪಿಸಲ್ಪಟ್ಟಿದೆ. ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ, ಸಮಾಜೋ-ಅರ್ಥಿಕ ಉನ್ನತಿಯನ್ನು ಸಾಧಿಸಿದ ಅನಾಥಸೇವಾಶ್ರಮವು ಇಂದು ನಾಡಿನ ಹೆಮ್ಮೆಯ ವಿದ್ಯಾಕೇಂದ್ರ ಮತ್ತು ಯೋಗತರಭೇತಿ ಕೇಂದ್ರವಾಗಿ ಹೊರಹೊಮ್ಮಿದೆ. ಈ ವಿದ್ಯಾಕೇಂದ್ರದಲ್ಲಿ ಇಂದು ೩೫೦೦ರಷ್ಟು ವಿದ್ಯಾರ್ಥಿಗಳು ವಿವಿಧ ಕೋರ್ಸ್ಗಳಲ್ಲಿ ಅಧ್ಯಯನ ಮಾಡುತಿದ್ದಾರೆ .
ತಿರುಕರಂಗ
೨೦೦೩ರ ನವೆಂಬರನಲ್ಲಿ ಸ್ಥಾಪಿತವಾದ ತಿರುಕರಂಗ ಸಾಂಸ್ಕೃತಿಕ ವೇದಿಕೆಯು ಅನಾಥಸೇವಾಶ್ರಮದ ಸಾಂಸ್ಕೃತಿಕ ಅಂಗವಾಗಿದೆ. ನಾಡಿನ ಹೆಸರಾಂತ ರಂಗಕರ್ಮಿಗಳನ್ನು ಕರೆಸಿ ಆಶ್ರಮದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ರಂಗತರಭೇತಿಯನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲ್ಲಿ ರಂಗಾಸಕ್ತಿಯನ್ನು ಬೆಳೆಸುವ ಮಹತ್ವದ ಕಾರ್ಯವನ್ನು ತಿರುಕರಂಗ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದೆ. ಪ್ರತೀ ವರ್ಷದ ಜನವರಿ ೯ರಿಂದ ೧೩ರವರೆಗೆ ಈ ವಿದ್ಯಾರ್ಥಿಗಳು ನಟಿಸುವ ನಾಟಕಗಳ ಉತ್ಸವವು ನಡೆಯುತ್ತದೆ, ಇದುವರೆಗೆ ೭ ತಿರುಕರಂಗೋತ್ಸವದ ರಂಗದಾಸೋಹ ಉತ್ಸವಗಳು ನಡೆದಿವೆ, ನಾಡಿನ ಹೆಸರಾಂತ ನಿರ್ದೇಶಕರಾದ ಶ್ರೀಯುತರಾದ ಕೃಷ್ಣಮೂರ್ತಿ ಕವತ್ತಾರ್, ನಟರಾಜ್ ಹೊನ್ನವಳ್ಳಿ, ಮಹಾದೇವ ಹಡಪದ್, ಮಂಜುನಾಥ್ ಬಡಿಗೇರ, ಎಂ.ಪಿ.ಎಂ.ವೀರೇಶ್ ಇವರು ಆಶ್ರಮದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ರಂಗತರಭೇತಿಯನ್ನು ನೀಡಿದ್ದಾರೆ.
ಈ ವರ್ಷದ ತಿರುಕರಂಗದ ನಾಟಕಗಳು
ಚೋರ ಚರಣದಾಸ -
ಹಬೀಬ್ ತನ್ವೀರ್ ರಚಿಸಿದ ಈ ಹಿಂದಿ ನಾಟಕವನ್ನು ಡಾ.ಸಿದ್ದಲಿಂಗ ಪಟ್ಟಣಶೆಟ್ಟಿಯವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಕಳ್ಳನೊಬ್ಬ ಸತ್ಯನಿಷ್ಠೆಯ ಪ್ರತಿಜ್ನೆಗೈದು ಅದನ್ನು ಆಚರಿಸುವಲ್ಲಿ ತನ್ನ ಜೀವವನ್ನೇ ಕಳೆದುಕೊಳ್ಳಬೇಕಾದ ವಿಚಿತ್ರಸಂಗತಿಯನ್ನು ಈ ನಾಟಕವು ಕಟ್ಟಿಕೊಡುತ್ತದೆ. ಆಶ್ರಮದ ಪ್ರಾಥಮಿಕಶಾಲೆ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯಂತ ಮನೋಜ್ಞವಾಗಿ ಈ ನಾಟಕವನ್ನು ಅಭಿನಯಿಸಿದ್ದಾರೆ.
ಚಿತ್ರಪಟ ರಾಮಾಯಣ -
ಕನ್ನಡದ ಪ್ರಸಿದ್ಧ ಕವಿಯಾದ ಡಾ.ಹೆಚ್.ಎಸ್.ವೆಂಕಟೇಶಮೂರ್ತಿಯವರು ರಚಿಸಿದ ನಾಟಕವಿದು. ಹೆಳವನಕಟ್ಟೆ ಗಿರಿಯಮ್ಮ ಬರೆದ ವಿಭಿನ್ನ ದೃಷ್ಟಿಕೋನದ ರಾಮಾಯಣದ ಪಠ್ಯವನ್ನು ಈ ನಾಟಕ ಅವಲಂಬಿಸಿದೆ. ಸೀತೆ ಬರೆದ ರಾವಣನ ಚಿತ್ರಕ್ಕೆ ಜೀವ ಬಂದು, ರಾಮ-ರಾವಣರ ನಡುವೆ ಮತ್ತೊಮ್ಮೆ ಸಂಘರ್ಷ ಏರ್ಪಡುವ ಇಲ್ಲಿ ಹೆಣ್ಣಿನ ಶೋಷಣೆಯ ಚಿತ್ರವು ಅತ್ಯಂತ ಸೂಕ್ಷ್ಮವಾಗಿ ಬಿಂಬಿತವಾಗುತ್ತದೆ. ಆಶ್ರಮದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅತ್ಯಂತ ಮನೋಜ್ಞವಾಗಿ ಈ ನಾಟಕವನ್ನು ಅಭಿನಯಿಸಿದ್ದಾರೆ.
ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳ ವಿವರ -
ದಿನಾಂಕ ಮತ್ತು ಸಮಯ |
ನಾಟಕದ ಹೆಸರು |
ಸ್ಥಳ |
೧೫-೦೪-೨೦೧೦ ಸಂಜೆ-೭.೩೦ |
ಚೋರ ಚರಣದಾಸ |
ರಂಗ ಶಂಕರ, ಜೆ.ಪಿ.ನಗರ,ಬೆಂಗಳೂರು. |
೧೬-೦೪-೨೦೧೦ ಸಂಜೆ-೬.೩೦ |
ಚಿತ್ರಪಟ ರಾಮಾಯಣ |
ಡಾ.ಹೆಚ್.ಏನ್.ಕಲಾಕ್ಷೇತ್ರ ೭ನೇ ಬ್ಲಾಕ್ ಜಯನಗರ,ಬೆಂಗಳೂರು. |
೧೭-೦೪-೨೦೧೦ ಸಂಜೆ-೭.೦೦ |
ಚೋರ ಚರಣದಾಸ |
ರವೀಂದ್ರ ಕಲಾಕ್ಷೇತ್ರ, ಟೌನ್ ಹಾಲ್ ಸಮೀಪ, ಜೆ.ಸಿ.ರೋಡ್,ಬೆಂಗಳೂರು. |
ಎಲ್ಲರಿಗೂ ಹೃದಯಪೂರ್ವಕ ಸ್ವಾಗತ ,
ರಾಘವೇಂದ್ರ ಪಾಟಿಲ್