ನುಡಿ ನಡೆಗಳ ನಡುವೆ...

ನುಡಿ ನಡೆಗಳ ನಡುವೆ...

    ಯಾರ ಜಪ್ತಿಗೂ ಸಿಗದ ನವಿಲುಗಳು ಈ ಪುಸ್ತಕದ ಶೀರ್ಷಿಕೆಯನ್ನು ನೋಡುವಾಗಲೆಲ್ಲ ನನಗೆ ನೆನಪಾಗುವುದು ಯಾವುದೇ ಪಂಥದ ಜೊತೆ ಇದುವರೆಗೂ ಗುರುತಿಸಿಕೊಳ್ಳದ ವೈದೇಹಿಯವರು. ಆದರೂ ಅವರು ಸ್ವಭಾವತ: ಪ್ರಗತಿಪರ ಮನೋಭಾವದವರು. ಬದುಕು ಮತ್ತು ಬರೆವಣಿಗೆಯ ನಡುವೆ ಅಂತರ ಇಟ್ಟು ಕೊಂಡವರಲ್ಲ. ಅವರ ಬರೆವಣಿಗೆಯಲ್ಲಿ ಕಾಣುವ ಮಗುವಿನ  ಮುಗ್ಧತೆ , ಎಲ್ಲವನ್ನು ಕುತೂಹಲದಿಂದ ನೋಡುವ ಮನಸ್ಸು, ಭಾವ ಪ್ರಧಾನವಾದ ಅಲೋಚನೆ ಅವರ ವ್ಯಕ್ತಿತ್ವದಲ್ಲಿಯೂ ಇವೆ.
    ಹರಿಪ್ರಸಾದ್ ನಾಡಿಗ್, ಪ್ರತಾಪಚಂದ್ರ ಶೆಟ್ಟಿ, ಚಂದ್ರಶೇಖರ ಮಂಡೆಕೋಲು ಮತ್ತು ನಾನು, ಅವರ ಪಾಡ್ ಕಾಸ್ಟ್ ಗಾಗಿ ಉಡುಪಿ ಜಿಲ್ಲೆಯ ಪ್ರಖ್ಯಾತ ಶೈಕ್ಷಣಿಕ, ಬ್ಯಾಂಕುಗಳ ನಗರಿ ಮಣಿಪಾಲಕ್ಕೆ ಭೇಟಿ ಕೊಟ್ಟಾಗ ನನಗೆ ತುಸು ಭಯ, ಗಾಬರಿಯೂ ಇತ್ತು. ಒಬ್ಬ ಪ್ರಖ್ಯಾತ, ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿಯೊಬ್ಬರ ಮನೆಗೆ ತೆರಳುವುದು ಮತ್ತು ಅವರ ಸಾಹಿತ್ಯದ ಕುರಿತು ಚರ್ಚಿಸುವುದು ನನಗೆ ಅಪೂರ್ವ ಅನುಭವವೇ ಆಗಿತ್ತು.


    ಇಷ್ಟೆಲ್ಲಾ  ಅಲೋಚನೆಗಳ ಜತೆ  ಅವರ ಮನೆಯ ಬಾಗಿಲು ತಟ್ಟಿದಾಗ ವೈದೇಹಿಯವರೇ ಬಂದು ನಮ್ಮನ್ನು ಸ್ವಾಗತಿಸಿದರು. ತಮ್ಮ ಎಂದಿನ ನಗು ಅವರ ಮುಖದಲ್ಲಿತ್ತು. ಅವರ ಸಾಹಿತ್ಯದಲ್ಲಿ ಕಾಣುವ ಸರಳತೆ, ಚುರುಕುತನ ಅವರ ವೈಯಕ್ತಿಕ ನಡಾವಳಿಗಳಿಂದಲೇ ಬಂದಿರಬಹುದು ಎನಿಸುತ್ತದೆ. ಅವರ ಪತಿ ಶ್ರೀನಿವಾಸಮೂರ್ತಿಯವರು ಕೂಡ ಸಂದರ್ಶನದ ಸಮಯದಲ್ಲಿ ಇದ್ದುದ್ದು ಒಂದು ವಿಶೇಷ.
    ಉಭಯ ಕುಶಲೋಪರಿ, ಚಹಾ ಸೇವನೆ ನಂತರ ವೈದೇಹಿಯವರ ಸಂದರ್ಶನ ತೆಗೆದುಕೊಳ್ಳಲು ಸಿದ್ಧವಾದೆವು. ಪ್ರತಾಪಚಂದ್ರರಂತೂ ವಿಧೇಯ ವಿದ್ಯಾರ್ಥಿಯಂತೆ ಇಡೀ ರಾತ್ರಿ ಅವರ ಸಾಹಿತ್ಯವನ್ನು  ಓದಿ ಪ್ರಶ್ನೆಗಳನ್ನು ಸಿದ್ಧ ಮಾಡಿ ತಂದಿದ್ದರು. ಉದಯವಾಣಿಯ ಉಪಸಂಪಾದಕ ಚಂದ್ರಶೇಖರ ಮಂಡೆಕೋಲು ಕೂಡ ತಮಗಿರುವ ಸಾಹಿತ್ಯದ ಕೆಲವು ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಳ್ಳಲು ಇದೇ ಸರಿಯಾದ ಸಮಯವೆಂದು ಭಾರಿ ಖುಷಿಯಲ್ಲಿದ್ದರು. ನನಗೋ ಮೇಷ್ಟ್ರುಗಳನ್ನು ಪ್ರಶ್ನೆ ಕೇಳಿ ಸುಸ್ತು ಮಾಡುವುದೇ ನನ್ನ ವಿದ್ಯಾರ್ಥಿ ಜೀವನ ಮಹದ್ದೋದೇಶ ಎಂದುಕೊಂಡಿದ್ದೆ. ಇಲ್ಲಿ ನನ್ನ ನಂಬಿಕೆ ವರ್ಕ್ ಔಟ್ ಆಗಲಿಲ್ಲ. ಎಷ್ಟೇ ತಡಕಾಡಿದರೂ ಒಂದು ಪ್ರಶ್ನೆಯೂ ತಲೆಯಲ್ಲಿ ಮೂಡಲಿಲ್ಲ.
    ಹರಿಪ್ರಸಾದ್  ವೈದೇಹಿಯವರ ಮಾತುಗಳನ್ನು ಧ್ವನಿಮುದ್ರಿಸಿಕೊಳ್ಳಲು ತಮ್ಮ ಲ್ಯಾಪ್ ಟಾಪ್ ಅನ್ನು ಸಿದ್ಧಪಡಿಸಿದ್ದರು. ಸಂದರ್ಶನ ಪ್ರಾರಂಭವಾಗಿ ಹತ್ತು ನಿಮಿಷ ಕಳೆದಿರಬಹುದು. ಕರೆಂಟ್ ಕೈಕೊಟ್ಟಿತು. ಅಲ್ಲಿಗೆ ಸಂದರ್ಶನ ತುಸು ನಿಂತಿತು. ಆದರೂ ವೈದೇಹಿಯವರ ಜೊತೆಗೆ ಔಪಚಾರಿಕವಾಗಿ ಮಾತಾಡುವುದಕ್ಕಿಂತ ಹರಟಿದರೂ ಸಾಕು ಅವರ ಭಾವಲೋಕದ ಹತ್ತಾರು ಅನುಭವಗಳನ್ನು, ಸೀರೆ ಅಂಗಡಿಯವ ಸೀರೆಗಳನ್ನು ಒಂದರ ಮೇಲೊಂದರಂತೆ ತೆಗೆದು ತೆಗೆದು ಹಾಕುವ ಹಾಗೆ ಇವರು ತಮ್ಮ ಅನುಭವ ಕಥನಗಳನ್ನು ಅಗೆದು ಅಗೆದು ಕೇಳುಗರ  ಮುಂದಿಡುತ್ತಾರೆ. ಓರ್ವ ಗೃಹಿಣಿಯಾಗಿ, ತಾಯಿಯಾಗಿ ಲೋಕದ ವಿಚಾರಗಳನ್ನು 'ಅಡುಗೆ ಮನೆಯ ಒಳಗಿನಿಂದ ನೋಡುವ' ಪರಿ ವಿಶೇಷವಾದುದು. ಅವರು ಯಾವ ಪಂಥಕ್ಕೂ ಸೇರದೇ ಇದ್ದರೂ ಅನುಭವಜನ್ಯ ಆಸಕ್ತಿಗಳಿಂದ ಮಹಿಳಾಲೋಕದಲ್ಲಿ ತಮ್ಮ ಅಸ್ಮಿತೆಯನ್ನು ಪ್ರಕಟಪಡಿಸುತ್ತಾರೆ.
    ಕುಂದಾಪುರ ಪರಿಸರದ ತಮ್ಮ ಬಾಲ್ಯ ಜೀವನದ ಅನುಭವಗಳನ್ನು ತುಂಬು ಉತ್ಸಾಹದಿಂದ ಹಂಚಿಕೊಂಡದ್ದು ಕೂಡ ವಿಶೇಷ. ಪ್ರತಾಪಚಂದ್ರ ಹಟಕ್ಕೆ ಬಿದ್ದವರ ಹಾಗೆ ಪ್ರಶ್ನೆಗಳ ಸುರಿಮಳೆ ಸುರಿಯುತ್ತಿದ್ದರೂ ಒಂದಿಷ್ಟೂ ಅಲುಗದ ಆತ್ಮಸ್ಥೈರ್ಯ ಅವರದು. ಹೀಗೆ ಒಂದು ತಾಸು ನಮ್ಮ ಜೊತೆ ಸಂಪದ ಪಾಡ್ ಕಾಸ್ಟ್ ಗಾಗಿ ಮಾತನಾಡಿದರು. ನಂತರ ಲಘು ಉಪಾಹಾರವಾಯಿತು. ವೈದೇಹಿಯವರು ಹರಿಪ್ರಸಾದರಿಂದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಕೇಳಿ ತಿಳಿದುಕೊಂಡರು. ತಂತ್ರಜ್ಞಾನದ ಬಳಕೆಯ ಬಗೆಗಿನ ಕುತೂಹಲವನ್ನು ವ್ಯಕ್ತಪಡಿಸಿದರು.
    ಸಂದರ್ಶನ ಮುಗಿಸಿ ಹೊರಡುವ ವೇಳೆಗೆ ನಮಗೆ ವೈದೇಹಿಯವರ ಮಾತುಗಳು ನಮ್ಮ ಮನಸ್ಸಿನಲ್ಲಿ ಹತ್ತಾರು ಮಹಿಳಾಪರವಾದ ಭಾವಗಳನ್ನು  ಮೂಡಿಸಿದ್ದು ನಿಜ.

Rating
No votes yet

Comments