ಮರುಭೂಮಿಯ ಎಲೆಮರೆಕಾಯಿ

ಮರುಭೂಮಿಯ ಎಲೆಮರೆಕಾಯಿ

ವಾರಾಂತ್ಯವಾದ್ದರಿಂದ ಮೊನ್ನೆ ಗುರುವಾರ ಜೆಡ್ಡಾ ದಿಂದ ೪೦೦ ಕಿ. ಮೀ ದೂರ ಇರುವ ಮದೀನಾ ನಗರಕ್ಕೆ ಹೊರಟೆವು ಪರಿವಾರ ಸಮೇತ. ಮಧ್ಯಾಹ್ನ ಬುತ್ತಿ ಕಟ್ಟಿಕೊಂಡು ( ಇಲ್ಲಿ ರಸ್ತೆಗೆ ತಾಗಿದ ಮರಳುಗಾಡಿನಲ್ಲಿ ಕಂಬಳಿ ಹಾಸಿ ಕೂತು ತಿನ್ನುವುದು ಒಂದು ರೀತಿಯ ಮೋಜು, ನಮ್ಮಲ್ಲಿನ ತೋಟದಲ್ಲಿ ಊಟದ ಥರ ) ಹೊರಟೆವು. ನಗರದ ಪರಿಮಿತಿ ಬಿಟ್ಟು ಸ್ವಲ್ಪ ದೂರ ಬರುತ್ತಲೇ ತಪಾಸಣಾ ನಿಲುಗಡೆ. ಸೌದಿ ಅರೇಬಿಯಾದಲ್ಲಿ ಎಲ್ಲಿ ನೋಡಿದರೂ ತಪಾಸಣೆಯೇ. ನಗರದ ಗಡಿ ಬಿಟ್ಟಾಗ, ಬೇರೆ ನಗರ ಪ್ರವೇಶಿಸುವಾಗ, ಇವೆರೆಡರ ನಡುವೆ random ಆಗಿ patrol ಮಾಡುವ ಪೋಲೀಸರ ತಪಾಸಣೆ ಅಲ್ಲಲ್ಲಿ. ೧೯೯೦ ರ ಕೊಲ್ಲಿ ಯುದ್ಧಾ ನಂತರ ಇಲ್ಲಿನ ಅರಸು ಮನೆತನಕ್ಕೆ ಮುನಿದು ಅಲ್ ಕೈದಾ ನಡೆಸಿದ ಕೆಲವು ಭಯೋತ್ಪಾದಕ ಚಟುವಟಿಕೆಗಳ ನಂತರ ಹೆಚ್ಚಿನ ಬಂದೋಬಸ್ತು. ಈಗ ಈ ದೇಶ ತುಂಬಾ ಸುರಕ್ಷಿತ. ಸರಿ ತಪಾಸಣಾ ನಿಲುಗಡೆ ಸಮೀಪಿಸುತ್ತಲೇ ನಾನು ಕಾರನ್ನು ನಿಧಾನಗೊಳಿಸಿ ಕಿಟಕಿಯ ಗಾಜನ್ನು ಇಳಿಸಿದೆ. ನನ್ನತ್ತ ನೋಡಿದ ಸುಮಾರು ಇಪ್ಪತ್ತರ ಚಿಗುರು ಮೀಸೆಯ ಮಂದಸ್ಮಿತ ಪೋಲಿಸ್ ಕೇಳಿದ ನಾನು ಯಾವ ದೇಶದವನೆಂದು. ನಾನು ಭಾರತೀಯ ಎಂದು ಹೇಳುತ್ತಿದ್ದಂತೆಯೇ ಆಹ್, ಹಿಂದಿ ಎನ್ನುತ್ತಾ ಸ್ವಾಗತ (ಮರ್ಹಬ) ಎಂದು ಅರಬ್ಬಿಯಲ್ಲಿ ಹೇಳಿ ನನ್ನ ಗುರುತು ಚೀಟಿ ಮತ್ತು ವಾಹನ ಚಾಲನಾ ಪರವಾನಗಿಯನ್ನು ತೆಗೆಯಲು ಬಿಡದೆ ಮುಂದೆ ಹೋಗಲು ಬಿಟ್ಟ. ಭಾರತೀಯರಿಗೆ ಅರಬರು ಹಿಂದಿ ಎಂದು ಕರೆಯತ್ತಾರೆ. ಹಿಂದ್ ದೇಶದವ ಎಂದರ್ಥ. ಕೆಲವು ಪಂಡಿತರ ಪ್ರಕಾರ ಹಿಂದೂ ಶಬ್ದ ಮೂಲವೂ ಅದೇ. ಅದೇ ಪದದಿಂದಲೇ ಹಿಂದೂ ಎನ್ನುವ ಪದವೂ ಬಂದಿದ್ದು. ಭಾರತೀಯರ ಮೇಲಿನ ಪೋಲಿಸ್ ಪೇದೆಯ ನಂಬುಗೆ ನೋಡಿ ನನಗೆ ಭಾರತೀಯನಾಗಿ ಹುಟ್ಟಿದ್ದು ಧನ್ಯ ಎನ್ನಿಸಿತು. ಈ ಮರ್ಯಾದೆ, ಆತಿಥ್ಯ  ಭಾರತದಲ್ಲೂ ನನಗೆ ಸಿಗಲಿಕ್ಕಿಲ್ಲವೇನೋ? ಭಾರತೀಯರು ತಮ್ಮ ದೇಶದ ಒಳಗೆ ಜಾತಿ ಧರ್ಮ, ಭಾಷೆ ಎಂದು ಹೇಗಾದರೂ ಕಚ್ಚಾಡಿಕೊಳ್ಳಲಿ, ಸಾಗರೋಲ್ಲಂಘನ ಅಥವಾ ಸೀಮೋಲ್ಲಂಘನ ಮಾಡಿದ ಕೂಡಲೇ ನಮ್ಮ identity ಎಲ್ಲಿ ಹೋದರೂ ಒಂದೇ. identical. ಭಾರತೀಯ. Indian. ಪೂರ್ಣ ವಿರಾಮ.

 ಭಾರತೀಯತೆಯೇ ಗುಣ, ಬಾಕಿ ಎಲ್ಲಾ ಗೌಣ.

 ಬೇರಾವುದೇ ದೇಶದವರನ್ನು ಕಂಡರೂ, ವಿಶೇಷವಾಗಿ ಪಾಕಿ, ಆಫ್ಘನ್ ರನ್ನು ಕಂಡರಂತೂ ಪೊಲೀಸರಿಗೆ ದೊಡ್ಡ ಕೆಲಸ. ಬರೀ ಅವರ ಕಾಗದ ಪತ್ರ, ಜಾತಕವಲ್ಲ, ವಾಹನವನ್ನೂ ಕೆಳಗೆ ಮೇಲೆ ಎಂದು ಕನ್ನಡಿ ಹಿಡಿದು ಪರೀಕ್ಷಿಸಿ ಮುಂದೆ ಬಿಡುತ್ತಾರೆ. ಅಂಥ reputation ಅವರದು. ಹೊಡಿ ಬಡಿ ಕಡಿ ಎಂದರೆ ಇವರುಗಳು ಮುಂದೆ. ಹೆಚ್ಚು ಮಾತನಾಡಿದರೆ ಪೇದೆಯನ್ನೂ ತದುಕಲು ಹೆದರುವುದಿಲ್ಲ. ಹಾಗಾಗಿ ಇವರಿಗೆ ತಪಾಸಣಾ ಸ್ಥಳಗಳಲ್ಲಿ ವಿಶೇಷ ಮನ್ನಣೆ ಮತ್ತು ಮಣೆ. ವಿಷದ ಹಲ್ಲು ಇಲ್ಲ ಎಂದು ಚೆನ್ನಾಗಿ ಖಾತ್ರಿ ಪಡಿಸಿಕೊಂಡ ನಂತರವೇ ಹಸಿರು ನಿಶಾನೆ ಮುಂದೆ ಹೋಗಲು. ಆದರೆ ಭಾರತೀಯ ಹಾಗಲ್ಲ, ತಾನಿರುವ ನಾಡಿನ ಕಾನೂನಿಗೆ ತಲೆಬಾಗಿ ಇರುವಷ್ಟು ದಿನ ಯಾವ ತಕರಾರುಗಳಿಗೂ ಹೋಗದೆ ಎಲೆಮರೆಕಾಯಿಯಂತೆ ತನ್ನ ಪಾಡಿಗೆ ದುಡಿದು ದಣಿದು ಬಂದು ರೂಮಿನಲ್ಲಿ ತನ್ನ ಪ್ರೀತಿ ಪಾತ್ರರ ಭಾವ ಚಿತ್ರಗಳನ್ನು ನೋಡುತ್ತಾ ಮುದುಡಿ ಬಿದ್ದಿರುತ್ತಾನೆ ತನ್ನ ನಾಡಿನ ಕನಸನ್ನು ಕಾಣುತ್ತಾ.  

 ಈ ದೇಶದ ಬಿಗಿಯಾದ ಕಾನೂನಿನ ಬಗ್ಗೆ ಒಂದೆರಡು ಮಾತುಗಳನ್ನೂ ಹೇಳುತ್ತೇನೆ, ಮತ್ತು ಇಂಥವನ್ನು ನಾವೂ ಅಳವಡಿಸಿಕೊಂಡರೆ ಮುಂಬೈಯಲ್ಲಿ ಪಾಕಿ ಪಾತಕಿಗಳು ನಡೆಸಿದ ನರಸಂಹಾರದಂಥ ಘಟನೆಗಳು ಮರುಕಳಿಸದಂತೆ ತಡೆಗಟ್ಟಬಹುದು. ಈ ದೇಶಕ್ಕೆ ಉದ್ಯೋಗಕ್ಕಾಗಿ ಬರುವ ಪ್ರತಿಯೊಬ್ಬನೂ ತನ್ನ ಪಾಸ್ ಪೋರ್ಟನ್ನು ತನ್ನ ಯಜಮಾನನಿಗೆ (employer) ಒಪ್ಪಿಸಿ ಅದರ ಬದಲಿಗೆ "ಇಕಾಮ" ಎಂದು ಕರೆಯಲ್ಪಡುವ ಗುರುತಿನ ಕಾರ್ಡನ್ನು ಪಡೆಯಬೇಕು. ಈ ಕಾರ್ಡನ್ನು ತಾನು ತನ್ನ ರೂಮನ್ನು ಬಿಟ್ಟು ಎಲ್ಲೇ ಹೋದರೂ ಜೊತೆಗೇ ಒಯ್ಯಬೇಕು. ಅಲ್ಲಲ್ಲಿ ನಡೆಯುವ random ತಪಾಸಣೆಗಳಲ್ಲಿ ಗುರುತು ಚೀಟಿ ಇಲ್ಲದ್ದನ್ನು ಕಂಡರೆ ಯಾವುದೇ ಸಮಜಾಯಿಷಿಗೂ ಕಿವಿಗೊಡದೆ ಒಳಗೆ ತಳ್ಳುತ್ತಾರೆ. ಚೀಟಿಯನ್ನು ತಂದ ನಂತರವೆ ಬಿಡುಗಡೆ. ಹಜ್ ಸಮಯದಲ್ಲಿ ತಪಾಸಣೆ ಸ್ವಲ್ಪ ಜೋರು. ಯಾತ್ರಾರ್ಥಿಯಾಗಿ ಬಂದು ಮರಳಿ ತಮ್ಮ ದೇಶಕ್ಕೆ ವಾಪಸು ಹೋಗದೆ ದುಡಿಯಲು ಇಲ್ಲೇ ಉಳಿದು ಕೊಳ್ಳುವ ಜನರು ಅಸಂಖ್ಯ. ಅವರಲ್ಲಿ ಬಡ ರಾಷ್ಟ್ರಗಳ ಅರಬರು ಮತ್ತು ಆಫ್ರಿಕನ್ನರು ಹೇರಳ. ಹೀಗೆ ಅಕ್ರಮವಾಗಿ ಉಳಿದು ಕೊಳ್ಳುವ ಯಾವ ದೇಶದವನೇ ಆಗಲಿ, ಮುಸ್ಲಿಮನೇ ಆಗಿರಲಿ ಯಾವ ರಿಯಾಯ್ತಿಯೂ ಇಲ್ಲ. forced deportation.  

 ಮೇಲೆ ಹೇಳಿದ ಮದೀನಾ ಹೋಗುವ ದಾರಿಯಲ್ಲಿನ  ತಪಾಸಣೆ ಮುಗಿದ ಕೂಡಲೇ, ದೇವನೊಬ್ಬನೇ ಆರಾಧನೆಗೆ ಅರ್ಹ ಎಂದು ವಿಶ್ವ ಕೇಳುವಂತೆ ಮೊಳಗಿಸಿ, ಸಮಾನತೆಯ ಕಹಳೆ ಊದಿದ ಮರಳುಗಾಡಿನ ನಿರಕ್ಷರಕುಕ್ಷಿ, ಸಂಪತ್ತು, ಕೀರ್ತಿ ನಶ್ವರ, ದೈವಭಕ್ತಿ, ಸನ್ನಡತೆಯೇ ಶಾಶ್ವತ ಎಂದು ಜಗಕ್ಕೆ ಹೇಳಿ ಕೊಟ್ಟ ಮಹಾ ಪ್ರವಾದಿಯ ಪ್ರೀತಿಯ ಪಟ್ಟಣದ ಕಡೆ ಕಾರು ಸಾಗುತ್ತಿದ್ದಂತೆ ನನಗೊಂದು ಕರೆ ಬಂದಿತು. ನಮ್ಮ ಕಂಪೆನಿಯಲ್ಲಿ ಕೆಲಸ ಮಾಡುವ store assistant ನನ್ನು ಗುರುತು ಚೀಟಿ ಇಲ್ಲದೆ ತನ್ನ ರೂಮಿನ ಹೊರಗಿನ browsing center ಹತ್ತಿರ ಅಡ್ಡಾಡುತ್ತಿದ್ದ ಎಂದು ಪೊಲೀಸರು ಬಂಧಿಸಿದರು ಎಂದು ಸುದ್ದಿ. ಜೆಡ್ಡಾ ಬಿಟ್ಟು ತುಂಬಾ ದೂರ ಬಂದಿದ್ದರಿಂದ ನಾನು ನಮ್ಮ ಮಾನವ ಸಂಪನ್ಮೂಲ ವಿಭಾಗದ ಸೌದಿಗೆ ಫೋನಾಯಿಸಿ ವಿಚಾರಿಸಲು ಹೇಳಿದೆ. ಸೌದಿಯ ವಿವರಣೆಗೂ ಪೊಲೀಸರು ಜಪ್ಪಯ್ಯ ಎನ್ನಲಿಲ್ಲ. ಕೊನೆಗೆ ಬಹಳಷ್ಟು ಮನವಿಯ ನಂತರವೇ ಆತನನ್ನು ಅವರು ಬಿಟ್ಟಿದ್ದು. ಹಿಡಿಯಲ್ಪಟ್ಟವನು ಮುಸ್ಲಿಂ ಮಾತ್ರವಲ್ಲ, ಪೊಲೀಸರು ಮರ್ಯಾದೆ ಕೊಡುವ, ಗೌರವಿಸುವ ವಿಶ್ವಾಸಿಗಳು ಬಿಡುವ  ದೊಡ್ಡ ಗಡ್ದವನ್ನೂ ಹುಲುಸಾಗಿ ಬೆಳೆಸಿದ್ದ. ಊಹೂಂ, ಚೀಟಿ ಇಲ್ಲವೋ ನಡಿ ಮಾವನ ಮನೆಗೆ ಎಂದರು ಪೊಲೀಸರು. ಧರ್ಮ, ಜಾತಿ ಎಲ್ಲಾ ಆಮೇಲೆ. ಈ ಗುರುತಿನ ಚೀಟಿಯ ನಿಯಮ ಬರೀ ವಿದೇಶೀಯರಿಗೆ ಮಾತ್ರವಲ್ಲ, ಸೌದಿ ಗಳೂ "ಬುತಾಕ" ಅಥವಾ "ಹವ್ವಿಯ್ಯ" ಎನ್ನುವ ಕಾರ್ಡನ್ನು ಹೊಂದಿರಲೇಬೇಕು. ಬ್ಯಾಂಕಿನಲ್ಲಿ ಹಣ ಪಾವತಿಸುವಾಗಲಾಗಲಿ, ಬೇರೆ ಯಾವುದೇ ಕಾರ್ಯಗಳಿಗೂ ಮೊದಲಿಗೆ ಕಾರ್ಡ್ ನ ದರ್ಶನ ಆಗಬೇಕು, ಇಲ್ಲದಿದ್ದರೆ ಕಾನೂನಿನ ದುರ್ದರ್ಶನ. ನಾನು ಮನೆಯಲ್ಲಿ ಮರೆತೆ, ಅತ್ತೆ ಮನೆಯಲ್ಲಿ ಬಿಟ್ಟು ಬಂದೆ ಹಾಗೆ ಹೀಗೆ ಎಂದು ಕತೆಗಳನ್ನ ನೇಯ್ದರೆ ಅವು ನಮ್ಮ ಕಿವಿಗಳಿ ಗೇ ಇಂಪು. ಕೇಳಿಸಿಕೊಳ್ಳುವವನ ಕಿವಿಗಲ್ಲ. ಎಷ್ಟೋ ಜನ ಸೌದಿಗಳು ಗೊಗರೆಯುವುದನ್ನು  ನೋಡಿದ್ದೇನೆ, ನಾನು ಕಾರ್ಡನ್ನು ಮರೆತು ಬಂದೆ, ನನ್ನ ಕೆಲಸ ಮಾಡಿ ಕೊಡು ಎಂದು. ಕೇಳುವವರು ಬೇಕಲ್ಲ.  ನಮ್ಮ ದೇಶದಲ್ಲೂ ಇಂಥ ಒಂದು ಕಟ್ಟುನಿಟ್ಟಿನ ವ್ಯವಸ್ಥೆ ಇರಬೇಕು. ಎಷ್ಟೇ ಹಣ ಖರ್ಚಾದರೂ ಭಾರತದ ಪ್ರತೀ ಪೌರನಿಗೆ ಒಂದು ಗುರುತು ಚೀಟಿಯನ್ನು ಹೊಂದಿಸಲೇ ಬೇಕು.

 ಅಕ್ರಮವಾಗಿ ನಮ್ಮ ಗಡಿ ಹಾರಿ ಬರುವ ನೇಪಾಳಿ ಮತ್ತು ಇತರೆ ದೇಶಗಳ ಜನರನ್ನು ತಡೆಯಲು ಇದೇ ಮಾದರಿಯ ಕಾರ್ಡು ಮತ್ತು ತಪಾಸಣೆ. ಅದಕ್ಕೆ ತಗಲುವ ಖರ್ಚು ದುಂದು ಖರ್ಚಲ್ಲ.  ದೇಶದ ಗಡಿ, ಜನ ಸುರಕ್ಷಿತವಾಗಿರಬೇಕೆಂದರೆ ನಾವು ನಿಷ್ಟುರರಾಗಿರಬೇಕು. ನಮ್ಮ ಒಳ್ಳೆಯತನವನ್ನು, ಹೃದಯ ವೈಶಾಲ್ಯತೆಯನ್ನು  ದೇಶದ ಒಳಗೆ ನೆಲೆಸಿ ಕೊಂಡಿರುವ ಸಹ ಭಾರತೀಯರಿಗೆ ಮಾತ್ರ ಮೀಸಲಿಟ್ಟರೆ ಸಾಕು.                 

 

 

Rating
No votes yet

Comments