ನಂಬಿ ಕೆಟ್ಟವರಿಲ್ಲ ಎನ್ನುವ ಕಾಲ ಹೋಗುತ್ತಿದೆ...

ನಂಬಿ ಕೆಟ್ಟವರಿಲ್ಲ ಎನ್ನುವ ಕಾಲ ಹೋಗುತ್ತಿದೆ...

    ಇತ್ತೀಚಿಗೆ ಉಗ್ರರದಾಳಿ, ಅದೊಂದು ಮಾಮೂಲು ಸುದ್ದಿ  ಎಂಬಷ್ಟು  ಸಹಜವಾಗತೊಡಗಿದೆ. ದಿನ ನೋಡುವ ಕ್ರೈಂ ಡೈರಿಯಷ್ಟೇ  ಸುಲಭವಾಗಿ ಜನ  ಈ ಕೃತ್ಯವನ್ನು  ಸ್ವೀಕರಿಸತೊಡಗಿದ್ದಾರೆ. ಆದರೆ ಮಾಸ್ಕೋ ಮೆಟ್ರೋದಲ್ಲಿ ನಡೆದ ಆತ್ಮಹತ್ಯಾದಳದ ಬಾಂಬ್ ಸ್ಫೋಟವನ್ನು ಇಷ್ಟೊಂದು ಸರಳವಾಗಿ ತೆಗೆದುಕೊಳ್ಳಲಾಗುವುದಿಲ್ಲ. ಕಾರಣ ೩೭ ಜನ ಜನರನ್ನು ಬಲಿ ತೆಗೆದುಕೊಂಡವರು ಇಬ್ಬರು ಮಹಿಳಾ ಭಯೋತ್ಪಾದಕಿಯರು.
    ಮಾಸ್ಕೋದ ಸಬ್ ವೇ ಯ ಜನ ನಿಭಿಡ ಸಮಯದಲ್ಲಿ ತಮ್ಮನ್ನು ತಾವೇ ಸ್ಫೋಟಸಿಕೊಂಡಿದ್ದರಿಂದ ೩೭ ಜನ ಮೃತಪಟ್ಟು, ೧೦೨ ಜನ ಗಾಯಗೊಂಡರು. ಇದನ್ನು ರಷ್ಯಾ ಸರ್ಕಾರ ಚೆಚನ್ಯಾದ ಕೌಕಸಸ್ ಪ್ರದೇಶದ ಉಗ್ರವಾದಿಗಳು ನಡೆಸಿರಬಹುದೆಂದು ಶಂಕಿಸಿದೆ. ಕಳೆದ ವರ್ಷ ನಡೆದ ಧಾಳಿಯ ಹೊಣೆಯನ್ನು ಇದೇ ಚೆಚನ್ಯಾ ಉಗ್ರರು ಹೊತ್ತುಕೊಂಡಿದ್ದರು.
    ಇಲ್ಲಿ ಘಟನೆಯನ್ನು ಹೊರತುಪಡಿಸಿಯೂ ನಾವು ಸ್ಫೋಟದಲ್ಲಿ ಭಾಗಿಯಾದ  ಮಹಿಳೆಯರ ಕುರಿತು ಯೋಚಿಸುವಾಗ  ಮಮತೆಯ ಮೂರ್ತಿಯಾಗಿ, ವಾತ್ಸಲ್ಯಮಯ ತಾಯಿಯಾಗಿ ಚಿತ್ರಿತವಾಗಿದ್ದ ಹೆಣ್ಣು ತಾನಾಗಿಯೇ ಇಂಥ ಮತಾಂಧತೆಯ ಸುಳಿಗೆ ಸಿಲುಕಿದಳೇ? ಅಥವಾ ಒತ್ತಾಯದಿಂದ ಇಂಥ ಹೀನಕೃತ್ಯಕ್ಕೆ ಪ್ರೇರೇಪಿಸಲಾಯಿತೇ? ಎಂಬ ವಿಚಾರಗಳು ಒಮ್ಮೆ ಮನಸ್ಸಿನಲ್ಲಿ ಬಂದು ಹೋಗುತ್ತವೆ.
    ಧರ್ಮಗಳು ಎಂದೂ ಮಹಿಳೆಯನ್ನು ಪುರುಷರ ಸಮಾನವಾಗಿ ಕಂಡಿಲ್ಲ ಎಂಬ ಮಾತನ್ನು ಮಹಿಳಾವಾದಿಗಳು ಹೇಳುತ್ತಾರೆ. ಹೀಗಿದ್ದೂ ತನ್ನನ್ನು ಎರಡನೆಯ ದರ್ಜೆಯ ಪ್ರಜೆಯಾಗಿ ಮಾಡಿದ ಧಾರ್ಮಿಕ ಮೂಲಭೂತವಾದದಲ್ಲಿಯೇ ಆಕೆ  ಸಿಲುಕಿಕೊಂಡದ್ದು ಹೇಗೆ? ಆಕೆಯನ್ನು ದುರ್ಬಲಳನ್ನಾಗಿಸಿ ತನ್ನ ಹೀನಕೃತ್ಯಗಳಿಗೆ ಬಳಸಿಕೊಳ್ಳುವ ಪುರುಷರ ಕುರಿತು ಒಂದಷ್ಟು ತರ್ಕಬದ್ಧ ಮನಸ್ಥಿತಿ ಮಹಿಳೆಯರಲ್ಲಿ ಮೂಡದಿದ್ದಲ್ಲಿ  ಇನ್ನಷ್ಟು ಸಜೀವ ಬಾಂಬ್ ಗಳಾಗಿ ಮಹಿಳೆಯರು ಬಲಿಯಾಗಬಹುದು. ಯಾಕೆಂದರೆ ಉಗ್ರಳಾದರೂ ಜನ ಆಕೆಯನ್ನು ನಂಬುತ್ತಾರೆ. ಕಾರಣ ಮಹಿಳೆಯರ ಸಾಚಾತನದ ಬಗ್ಗೆ ಜಗತ್ತಿಗಿರುವ ನಂಬಿಕೆ. ಇದನ್ನು ಉಳಿಸಿಕೊಳ್ಳುವ ಹೊಣೆ ಎಲ್ಲ ಮಹಿಳೆಯರ ಮೇಲಿದೆ.  
    
      

Rating
No votes yet

Comments