ಅಗ್ನಿ ನಕ್ಷತ್ರ

ಅಗ್ನಿ ನಕ್ಷತ್ರ

ಪ್ರಸ್ತುತ ಶೈಲಿಯಲ್ಲಿ ಕಥೆ ಬರೆಯಲು ಇದು ನನ್ನ ಮೊದಲ ಪ್ರಯತ್ನ. ಈ ಕಥೆಯನ್ನು ನಾನು ಕೆಲವು ಕಂತುಗಳಲ್ಲಿ ಈ ಬ್ಲಾಗಿನಲ್ಲಿ ಪ್ರಕಟಿಸಲಿದ್ದೇನೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಏನಾದರೂ ಸಲಹೆ ಸೂಚನೆಗಳಿದ್ದರೆ ಖಂಡಿತ ಬರೆದು ತಿಳಿಸಿ. ನಿಮ್ಮ ಸಲಹೆ ಸೂಚನೆಗಳಿಗೆ ನಾನು ಎಂದೂ ಆಭಾರಿ.
----
ಭಾಗ ೧

ನವಿರಾಗಿ ಬೀಸುತ್ತಿದ್ದ ತಿಳಿಗಾಳಿ ಇದ್ದಕ್ಕಿದ್ದಂತೆ ತನ್ನ ಸ್ವರೂಪವನ್ನ ಬದಲಿಸತೊಡಗಿತು. ಆದರಲ್ಲಿನ ಶಾಂತತೆ ಸ್ವಲ್ಪ ಸ್ವಲ್ಪವಾಗಿ ಮರೆಯಾಗಿ ತೀವ್ರತೆ ಆವರಿಸತೊಡಗಿತು. ನಾಯಿಗಳು ಊಳಿಡಲು ಮೊದಲಿಟ್ಟವು. ಇನ್ನೇನೋ ಅಚಾತುರ್ಯ ಘಟಿಸೀತೇನೋ ಎನ್ನುವಷ್ಟರಲ್ಲಿ ಮತ್ತೆ ಗಾಳಿ ಶಾಂತವಾಯಿತು. ಆ ಸಮಯಕ್ಕೆ ಸರಿಯಾಗೆ ಸಂಪಿಗೆಪುರದಲ್ಲಿನ ಸ್ಮಶಾನವೊಂದರಲ್ಲಿ ಗುರು ವೀರಭದ್ರ ಸಾದನೆಗೆ ತೊಡಗಿದ್ದ. ಸ್ವಲ್ಪ ಹೊತ್ತಿಗೆ ಮುಂಚೆ ಘಟಿಸಿದ ಪ್ರಕೃತಿಯ ಬದಲಾವಣೆಗಳಿಗೆ ಗುರು ವೀರಭದ್ರನ ಸಾಧನೆಯೇ ಕಾರಣವೆಂಬುದು ಯಾರಿಗೂ ತಿಳಿಯಲಿಲ್ಲ. ಸಂಪಿಗೆಪುರಕ್ಕೆ ಮುಂದೊದಗುವ ಭೀಕರ ಅಪಾಯವೊಂದಕ್ಕೆ ಅಡಿಪಾಯ ಅದಾಗಲೇ ಸಿದ್ಧವಾಗಿತ್ತು. ಸ್ಮಶಾನದಿಂದ ಹೊರಬಂದ ಗುರು ವೀರಭದ್ರನ ಮುಖದಲ್ಲಿ ಏನನ್ನೋ ಸಾಧಿಸಿದ ಹೆಮ್ಮೆ ಎದ್ದು ಕಾಣುತ್ತಿತ್ತು. ಮೈತುಂಬ ವಿಭೂತಿ ಬಳಿದುಕೊಂಡಿದ್ದ ವೀರಭದ್ರ ನೇರವಾಗಿ ಪಕ್ಕದಲ್ಲೇ ಇದ್ದ ಕೆರೆಯಲ್ಲಿ ಮುಳುಗಿದ. ಮೈ ಹೆಪ್ಪುಗಟ್ಟಿಸುವ ಚಳಿಯಲ್ಲೂ ಆ ತಣ್ಣೀರಿನಲ್ಲಿ ಮುಳುಗೆದ್ದ. ಅವನ ಮುಖದಲ್ಲಿನ ಮಂದಹಾಸ ಅಮವಾಸ್ಯೆಯ ಕತ್ತಲಲ್ಲೂ ಪ್ರಖರವಾಗಿ ಕಾಣಿಸುತ್ತಿತ್ತು. ತಾನು ಹಿಡಿದುತಂದಿದ್ದ ಕಂದೀಲನ್ನು ಹೊತ್ತಿಸಿ ಏನೂ ಆಗೇ ಇಲ್ಲ ಎಂಬಂತೆ ಮನೆಯಕಡೆ ನಡೆದ. ಮನೆಗೆ ಬಂದವನೇ ಒಂದಿಷ್ಟು ನೀರುಕುಡಿದು ಮೊದಲೇ ತೆಗೆದಿಟ್ಟಿದ್ದ ಎಳನೀರನ್ನು ಕುಡಿದು ಮಲಗಿದ. ಇನ್ನು ಕೆಲವೇ ದಿನಗಳಲ್ಲಿ ಸಂಪಿಗೆಪುರ ಅಲ್ಲೋಲಕಲ್ಲೋಲ ಗೊಳ್ಳಲಿದೆ. ಅಂದೊಂದು ದಿನ ನನ್ನನ್ನು ಹೊಡೆದು ಬಡಿದು ಊರಿಂದ ಹೊರಗಟ್ಟಿದ್ದ ಜನ ಇನ್ನೇನು ಕೆಲವೇ ದಿನಗಳಲ್ಲಿ ನನ್ನನ್ನು ಹುಡುಕಿಕೊಂದು ಬರಲಿದ್ದಾರೆ ಎಂಬ ಯೋಚನೆ ಅವನ ಮನಸ್ಸಿನಲ್ಲಿ ಸುಳಿದಿದ್ದೇ ತಡ ಮುಖದ ಮಂದಹಾಸ ಅಟ್ಟಹಾಸದ ನಗುವಾಗಿ ಮಾರ್ಪಟ್ಟಿತು.

------

ಅದೇ ಸಮಯಕ್ಕೆ ಸರಿಯಾಗೆ ಸಂಪಿಗೆಪುರದ ಸಾಹುಕಾರರ ಮನೆಯ ಆಳು ಗೋಪಾಲನ ಮನೆಯ ಬಾಗಿಲು ಕಟ ಕಟ ಸದ್ದು ಮಾಡಿತು. ಎಚ್ಚರಗೊಂದ ಗೋಪಾಲ, "ಈ ಅಪರಾತ್ರಿಯಲ್ಲಿ ಯಾರಿರಬಹುದಪ್ಪಾ?" ಎಂದುಕೊಂಡು ಬಾಗಿಲು ತೆರೆದ. ಎದುರಿಗೆ ನಿಂತಿದ್ದವನನ್ನು ನೋಡಿ ಅಚ್ಚರಿಗೊಂಡ. "ಆನಂದ, ನೀನು ? ಈ ಹೊತ್ತಲ್ಲಿ ?" ಎಂದ ಗೋಪಾಲ. ಆನಂದನ ಕಣ್ಣಲ್ಲಿ ನೀರು ಹನಿಯೊಡೆದಿತ್ತು. "ಮಾವ, ನನ್ನ ಅಮ್ಮ ನಿನ್ನೆ ಕಾಯಿಲೆಯಿಂದ ತೀರಿಕೊಂಡಳು. ನನಗೆ ಊರಲ್ಲಿ ಬೇರೆ ಯಾರೂ ದಿಕ್ಕಿರಲಿಲ್ಲ ಅದಕ್ಕೆ ನಿನ್ನ ಮನೆಗೆ ಬಂದೆ" ಎಂದ. ಗೋಪಾಲನಿಗೆ ಆನಂದ ಇಲ್ಲಿಗೆ ಬಂದದ್ದು ಸಂತಸ ತಂದರೂ ಅವನ ತಾಯಿ ಮಡಿದ ಸುದ್ದಿ ಸಂತಸಕ್ಕೆ ಬೆನ್ನೀರೆರೆಯಿತು. ಆದರೆ ಯಾರಿಗೆ ಗೊತ್ತಿತ್ತು, ಈ ಆನಂದನೇ ಮುಂದೆ ಸಂಪಿಗೆಪುರದ ರಕ್ಷಕನಾಗಲಿದ್ದಾನೆಂದು.

____

ಗುರು ವೀರಭದ್ರ ಸಂತಸದಿಂದ ನಿದ್ರಾದೇವಿಯ ವಶವಾದ. ಆತನಿಗೆ ಆನಂದನ ಬಗ್ಗೆ ಸುಳಿವೂ ಇರಲಿಲ್ಲ. ಇದ್ದಿದ್ದರೆ ಇಷ್ಟು ಸಮಾಧಾನದಿಂದ ನಿದ್ರಿಸಲು ಹೇಗೆ ತಾನೇ ಸಾಧ್ಯ ? ಮಲಗಿದ್ದವನು ಇದ್ದಕ್ಕಿದ್ದಂತೆ ಏನೋ ದು:ಸ್ವಪ್ನ ಕಂಡವರಂತೆ ಎದ್ದು ಕುಳಿತ. ಆತನ ಮೈ ಬೆವತಿತ್ತು. ಅವನ ಮುಖದಲ್ಲಿ ಈಗ ಸ್ವಲ್ಪ ಸಮಯ ಮೊದಲಿದ್ದ ಅಟ್ಟಹಾಸದ ನಗುವಿನ ಬದಲಾಗಿ ಭಯ ಮನೆಮಾಡಿತ್ತು. ಅಂತಹ ಅಘೋರ ಗುರುವನ್ನೂ ಭಯಗೊಳಿಸಿದ ಆ ದು:ಸ್ವಪ್ನವಾದರೂ ಯಾವುದು ? ಎದ್ದು ಕುಳಿತವನೆ ಗಟಗಟನೆ ನೀರುಕುಡಿದ. ಎನೋ ಮಂತ್ರ ಉಸುರಿದ. ಆದರೂ ಏನೂ ಪ್ರಯೋಜನವಾಗಲಿಲ್ಲ. ಮೈ ಇನ್ನೂ ಕಂಪಿಸುತ್ತಿತ್ತು, ತಲೆ ಭಾರವಾಗಿತ್ತು, ಹೃದಯ ಬಡಿತ ಜೋರಾಗಿತ್ತು. ಏನಾಗುತ್ತಿದೆ ಎಂದು ತಿಳಿಯುವುದರೊಳಗೆ ಹಿಂದಿನಿಂದ ತಲೆಯಮೇಲೆ ಬಲವಾದ ಏಟೊಂದು ಬಿತ್ತು. ಸ್ಮೃತಿತಪ್ಪಿ ನೆಲಕ್ಕುರುಳಿದ. ಕಂದೀಲಿನ ಬೆಳಕಲ್ಲಿ ಪುರುಷಾಕೃತಿಯೊಂದು ಹೊರ ಹೋದದ್ದು ಕಾಣಿಸಿತು. ಯಾರೂ ಗುರುತಿಸ ಬಹುದಾದ ಜನಪ್ರಿಯ ವ್ಯಕ್ತಿ ಆತ. ಆದರೆ ಆತ ಇಲ್ಲೇನು ಮಾಡುತ್ತಿದ್ದ ? ಆತನಿಗೂ ಗುರುವಿಗೂ ಇರುವ ನಂಟಾದರೂ ಏನು ?

------

ಸಾಹುಕಾರರ ಮೆನೆಯ ಬಾಲ್ಕನಿಯಲ್ಲಿ ಸ್ತ್ರೀಯೊಬ್ಬಳು ನಿಂತಿದ್ದಳು ಇಷ್ಟು ಹೊತ್ತಾದರೂ ಆಕೆಗೆ ನಿದ್ರೆ ಹತ್ತಿರಲಿಲ್ಲ. ಆಕೆಯ ಕಣ್ಣ ಮುಂದೆ ಮತ್ತೆ ಮತ್ತೆ ಅದೇ ಚಿತ್ರ ಗೋಚರಿಸುತ್ತಿತ್ತು. ತನ್ನ ತಾಯಿಯ ಚಿತ್ರ. ಹುಟ್ಟಿದ ದಿನದಿಂದ ಇಂದಿನ ತನಕ ಅವಳು ತಾಯಿಯನ್ನು ನೋದಿದ್ದು ಚಿತ್ರದಲ್ಲಿ ಮಾತ್ರ. ಅವಳಿಗೆ ಎಂದೂ ತಾಯಿಯ ಪ್ರೀತಿ, ಮಮತೆ ಸಿಕ್ಕಿರಲಿಲ್ಲ. ಅವಳು ಹುಟ್ಟಿ ೨ ವರ್ಷದಲ್ಲೇ ತಾಯಿ ಯಾವುದೋ ಭೀಕರ ಕಾಯಿಲೆಯಿಂದ ಮರಣಿಸಿದ್ದಳು. ಇವಳಿಗೆ ಮರಣ ಎಂದರೆ ಏನು ಎಂದೂ ತಿಳಿಯದ ವಯಸ್ಸು. ಸಾಹುಕಾರರು ಅಂಜಲಿಯನ್ನು ತಾನೇ ತಂದೆ, ತಾಯಿ ಎಲ್ಲಾ ಆಗಿ ಸಾಕಿ ಬೆಳೆಸಿದ್ದರು. ಅವರು ಅವಳಿಗೆ ಎಂದೂ ನೋವಾಗದಂತೆ, ಆದರೆ ಅವಳು ಎಂದೂ ತಪ್ಪು ಹಾದಿ ಹಿಡಿಯದಂತೆ ಸದ್ಗುಣ ಸಂಪನ್ನಳಾಗಿ ಬೆಳೆಸಿದ್ದರು. ಅವರಿಗೆ ಮಗಳೆಂದರೆ ಎಲ್ಲಿಲ್ಲದ ಹೆಮ್ಮೆ. ಅಂಜಲಿಗೂ ಅಷ್ಟೆ, ತಂದೆಯೇ ಸರ್ವಸ್ವ. ಅಂಜಲಿಯಾದರೋ ಯಾರನ್ನೂ ಮೋಹಗೊಳಿಸುವ ಮೈಮಾಟ, ಉದ್ದ ಜೆಡೆ, ಕೋಗಿಲೆಯಂತಹ ಕಂಠ. ಅಂಜಲಿ ಮನೆಯವರೆಲ್ಲರ ಅಚ್ಚುಮೆಚ್ಚಿನ ಹುಡುಗಿ. ಎಲ್ಲರೊಂದಿಗೆ ಸಲಿಗೆ. ಉನ್ನತ ವ್ಯಾಸಂಗವನ್ನು ಮುಂದುವರಿಸುವ ಆಸಕ್ತಿಯಿದ್ದರೂ ತಂದೆಯನ್ನು ಅಗಲಿರಲು ಮನಸ್ಸಾಗದೇ ಮನೆಯಲ್ಲೇ ಕುಳಿತು ನಲ್ಕಾರುಜನರಿಗೆ ಒಳ್ಳೆಯದಾಗಲಿ ಎಂದು ಪಾಠ ಹೇಳಿಕೊಡುತ್ತಿದ್ದಳು. ವಿಧಿ ಮುಂದೆ ಅಂಜಲಿ ಮತ್ತು ಆನಂದನನ್ನು ವಿಚಿತ್ರ ಸನ್ನೀವೇಷವೊಂದರಲ್ಲಿ ಒಂದುಮಾಡಲು ಕಾಯುತ್ತಿತ್ತು. ಎಷ್ಟೇ ಕಷ್ಟಪಟ್ಟರೂ ಆವತ್ತು ಅಂಜಲಿಗೆ ನಿದ್ದೆ ಹತ್ತಲಿಲ್ಲ. ಹಾಗೇ ಮಲಗಿ ಛಾವಣಿಯ ಕಡೆ ದಿಟ್ಟಿಸುತ್ತ ರಾತ್ರಿ ಕಳೆದಳು. ಬೆಳಕು ಹರಿಯುತ್ತಿದ್ದಂತೆ ಎದ್ದು ಶುಚಿಯಾಗಿ ಮನೆಯಮುಂದೆ ರಂಗೋಲಿಯಿಟ್ಟು ತಂದೆಗೆ ಕಾಫಿಕೊಟ್ಟು ಪೇಪರ್ ಒದುತ್ತ ವರಾಂಡದಲ್ಲಿ ಕುಳಿತಳು. ಗೋಪಾಲ ಸಮಯಕ್ಕೆ ಸರಿಯಾಗಿ ಬಂದು ತನ್ನ ದೈನಿಂದನ ಕೆಲಸಗಳನ್ನು ಆರಂಭಿಸಿದ್ದ. ಅತ್ತ ಎಚ್ಚೆತ್ತ ಗುರು ವೀರಭದ್ರನ ಕಣ್ಣಲ್ಲಿ ಆಕ್ರೋಷ ಎದ್ದು ಕಾಣುತ್ತಿತ್ತು, ಆ ಕಣ್ಣು ಹಿಂದಿನ ರಾತ್ರಿ ತನ್ನ ತಲೆಗೆ ಹೊಡೆದವರನ್ನು ಹುಡುಕುತ್ತಿತ್ತು. ಇತ್ತ ನಿದ್ದೆಯಿಂದ ತಡವಾಗಿ ಎಚ್ಚೆತ್ತ ಆನಂದ ತನ್ನ ದೈನಂದಿನ ಕಾರ್ಯಗಳನ್ನು ಮುಗಿಸಿ ಸಾಹುಕಾರರ ಮನೆಯತ್ತ ತನ್ನ ಮಾವ ಗೋಪಲನನ್ನು ಹುಡುಕುತ್ತ ನಡೆದ. ಅಂಜಲಿ ಎಂದಿನಂತೆ ಮಕ್ಕಳಿಗೆ ಪಾಠ ಹೇಳಿಕೊಡಲೆಂದು ಮನೆಯ ಹಿಂದಿನ ಅಂಗಳದ ಕಡೆ ಹೆಜ್ಜೆ ಹಾಕಿದಳು.

Rating
No votes yet

Comments