ಅಗ್ನಿ ನಕ್ಷತ್ರ ೨ : ರಹಸ್ಯ

ಅಗ್ನಿ ನಕ್ಷತ್ರ ೨ : ರಹಸ್ಯ

ಗುರು ವೀರಭದ್ರನ ಸ್ಮೃತಿಪಟಲದಿಂದ ಹಿಂದಿನ ರಾತ್ರಿಯ ಕನಸು ಇನ್ನೂ ಮರೆಯಾಗಿರಲಿಲ್ಲ. ಅಷ್ಟು ಘೋರವಾಗಿತ್ತು ಆ ಕನಸು. ಗುರು ಕನಸಿನಲ್ಲಿ ತನ್ನ ಅತಿ ಭಯಂಕರ ಮರಣವನ್ನು ಕಂಡಿದ್ದ. ಆ ಮರಣಕ್ಕೆ ಕಾರಣವಾದ ವ್ಯಕ್ತಿಯನ್ನು ಕಂಡಿದ್ದನಾದರೂ ಹಿಂದೆಂದೂ ನೋಡಿದ ನೆನಪು ಬರುತ್ತಿಲ್ಲ. ಇನ್ನು ತಡಮಾಡಬಾರದು ಆ ವ್ಯಕ್ತಿಯನ್ನು ಆದಷ್ಟು ಬೇಗ ಹುಡುಕಿ ಅವನಿಗೆ ಒಂದು ಗತಿ ಕಾಣಿಸಬೇಕು, ಹಾಗೇ ನಿನ್ನೆ ರಾತ್ರಿ ನನ್ನ ತಲೆಗೆ ಬಲವಾಗಿ ಏಟು ಕೊಟ್ಟವರನ್ನೂ ಸುಮ್ಮನೆ ಬಿಡದಾರದು ಎಂದುಕೊಂಡು ತನ್ನ ದೈನಂದಿನ ಕಾರ್ಯಗಳಲ್ಲಿ ತೊದಗಲು ಪ್ರಯತ್ನಿಸಿದ. ಆದರೆ ಅವನ ಮನಸ್ಸು ದೇಹ ಸಹಕರಿಸಲಿಲ್ಲ. ಮತ್ತೆ ಅಲ್ಲೇ ನೆಲದಮೇಲೊರಗಿದ. ತಲೆಯಲ್ಲಿ ಒಂದೇ ಒಂದು ಯೋಚನೆ. ತಾನು ನಿನ್ನೆ ಕನಸಿನಲ್ಲಿ ಕಂಡ ವ್ಯಕ್ತಿಯಾದರೂ ಯಾರು ? ಅವನು ನನ್ನನ್ನು ಕೊಲ್ಲಲು ಕಾರಣವಾದರೂ ಏನು ?
ಇತ್ತ ಆನಂದ ಸಾಹುಕಾರರ ಮನೆಗೆ ಬಂದಾಗ ಅದಾಗಲೇ ಅವನ ಮಾವ ಗೋಪಾಲ ಬಹಳಷ್ಟು ಕೆಲಸಗಳನ್ನು ಮುಗಿಸಿ ಬಿಟ್ಟಿದ್ದ. ಇನ್ನು ತಡ ಮಾಡದೆ ಮಾವನಿಗೆ ಒಂದು ಹೆಗಲು ನೀಡೀದ. ದೂರದಿಂದಲೇ ಹೊಸ ವ್ಯಕ್ತಿಯೊಬ್ಬ ತಮ್ಮ ತೋಟದಲ್ಲಿ ಗೋಪಾಲನೊಂದಿಗೆ ಕೆಲಸಮಾಡುತ್ತಿರುವುದನ್ನು ಕಂಡ ಅಂಜಲಿ ಅದು ಯಾರೆಂದು ತಿಳಿದು ಕೊಳ್ಳೋಣ ಎನ್ನುವಷ್ಟರಲ್ಲಿ ಮಕ್ಕಳು ಬಂದಿದ್ದರಿಂದ ಆಮೇಲೆ ವಿಚಾರಿಸಿದರಾಯಿತು ಎಂದು ಮಕ್ಕಳಕಡೆ ಗಮನ ಹರಿಸಿದಳು.
--------
ಬಹಳ ಹೊತ್ತಿನ ನಂತರ ಎದ್ದು ಕುಳಿತ ಗುರು ತನ್ನ ದೈನಂದಿನ ಕೆಲಸಗಳನ್ನು ಮುಗಿಸಿ ಮತ್ತೆ ಸ್ಮಶಾನದ ಕಡೆ ತಿರುಗಿದ. ಅವನು ಮಾಡಬೇಕಾದ ಕೆಲಸಗಳು ಇನ್ನೂ ಬಹಳಿದ್ದುವು. ಅವನು ಇನ್ನೂ ಕೆಲವು ಭೀಕರ ವಿನಾಶಕಾರಿ ಶಕ್ತಿಗಳನ್ನು ವಶಪಡಿಸಿಕೊಳ್ಳಬೇಕಿತ್ತು. ಅದಕ್ಕಾಗಿ ಅವನು ತುಂಬಾ ಕಠಿಣ ಪ್ರಯತ್ನ ಮಾಡಬೇಕಿತ್ತು. ರಕ್ತೇಶ್ವರಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದಮಾತಾಗಿರಲಿಲ್ಲ. ಸ್ಮಶಾನಕ್ಕೆ ಬಂದವನೇ ಬೆರೆ ಸ್ಥಳವೊಂದನ್ನು ಆಯ್ದುಕೊಂಡು ಮಂಡಲ ಬರೆದು ಅದರ ಸುತ್ತ ಮೂಳೆಗಳನ್ನಿಟ್ಟು ಅವಕ್ಕೆ ಕುಂಕಮವನ್ನು ಬಳಿದ. ಕೆಂಬಣ್ಣ ಕಂಗೊಳಿಸತೊಡಗಿತು. ತಾನು ಬಹುದಿನಗಳಿಂದ ಕಾಪಾಡಿಕೊಂಡು ಬಂದಿದ್ದ ಹಳೆಯ ಪುಸ್ತಕವೊಂದನ್ನು ಹೊರತೆಗೆದ, ಅದು ಆತನಿಗೆ ವಂಶಪಾರಂಪರಾಗತವಾಗಿ ಬಂದದ್ದು. ಆ ಪುಸ್ತಕ ದುಷ್ಟಾರಾಧನೆಯ ಕುರಿತಾದ ಅತ್ಯಂತ ಹಳೆಯಪುಸ್ತಕಗಳಲ್ಲೊಂದು. ಆ ಪುಸ್ತಕದಲ್ಲಿ ಇಲ್ಲದ ದುಷ್ಟಶಕ್ತಿಗಳನ್ನು ವಶಪಡಿಸಿಕೊಳ್ಳುವ ತಂತ್ರವೇ ಇರಲಿಲ್ಲ. ದುಷ್ಟ ಶಕ್ತಿಗಳನ್ನು ವಶಪಡಿಸಿಕೊಂಡು ಪ್ರಯೋಗಿಸುವುದು ಬಹು ತ್ರಾಸದ ಕೆಲಸ. ಆರಾಧನ ಮಂತ್ರಗಳಲ್ಲಿ ಒಂದು ಸಣ್ಣ ತಪ್ಪಾದರೂ ಸಾಕು, ಕೈಂಕರ್ಯಗಳಲ್ಲಿನ ಒಂದು ಸಣ್ಣ ತಪ್ಪು ಕೂಡಾ ಮಂತ್ರವಾದಿಯನ್ನೇ ಬಲಿ ತೆಗೆದು ಕೊಳ್ಳುವ ಸಾಧ್ಯತೆಗಳಿತ್ತು. ಕೇವಲ ಸಾಧನೆಯೊಂದೇ ಸಾಕಾಗುತ್ತಿರಲಿಲ್ಲ. ಏಕಾಗ್ರತೆಯೂ ಅಷ್ಟೇ ಮುಖ್ಯವಾಗಿರುತ್ತಿತ್ತು.
ಗುರು ವೀರಭದ್ರ ತನ್ನ ಸಣ್ಣ ವಯಸ್ಸಿನಿಂದಲೂ ಮಾಟ ಮಂತ್ರಗಳ ಸುತ್ತಲೇ ಬೆಳೆದವನು. ಅವನಲ್ಲಿ ಸಾಧಿಸ ಬೇಕೆಂಬ ಛಲ, ಅದಕ್ಕೆ ಬೇಕಾದ ಧೈರ್ಯ, ಏಕಾಗ್ರತೆ ಎಲ್ಲವೂ ಇದ್ದುವು. ಆದರೆ ಇವತ್ತು ಮಾತ್ರ ನಿನ್ನೆ ರಾತ್ರಿಯ ಕನಸಿನ ಕಾರಣವೋ ಏನೋ ಅವನಮನಸ್ಸಿನಲ್ಲಿ ಹಲವಾರು ವಿಚಾರಗಳ ಅಲೆಯೆದ್ದಿತ್ತು. ಆದರೂ ಧೃಢ ಮನಸ್ಸು ಮಾಡಿ ಸಾಧನೆಗೆ ಮೊದಲು ಮಾಡಿದ. ಪುಸ್ತಕವನ್ನು ತೆರೆದು ರಕ್ತೇಶ್ವರಿಯನ್ನು ಆರಾಧಿಸಿದ. "ಸ್ಥಂಭಿನೀ"ಮಂತ್ರ ಪ್ರಯೋಗವನ್ನು ಸಿದ್ಧಿಸಿಕೊಳ್ಳಲು ಆರಂಭಿಸಿದ. ಇದೊಂದು ಅತಿ ವಿನಾಶಕಾರೀ ಮಂತ್ರ. ಯಾರಮೇಲೆ ಪ್ರಯೋಗಿಸಲ್ಪಡುತ್ತದೆಯೋ ಅವನು ಎಲ್ಲೇ ಇರಲಿ ಇದರ ಪರಿಣಾಮ ಆ ವ್ಯಕ್ತಿಯಮೇಲೆ ಉಂಟಾಗಿ ರಕ್ತ ಕಾರಿ, ಕೈ ಕಾಲು ಸ್ಥಿಮಿತ ಕಳೆದುಕೊಂಡು ಮೃತನಾಗುತ್ತಿದ್ದ. ತಾನು ಈ ಶಕ್ತಿಯ ಪ್ರಯೋಗವನ್ನು ಯಾವುದೇ ತಪ್ಪಿಲ್ಲದೇ ಮಾಡಬಲ್ಲೆ ಎಂದು ಮನಸ್ಸಿಗೆ ಅನ್ನಿಸಿದಮೇಲೆ ಮುಂದಿನ ಪ್ರಯೋಗಕ್ಕೆ ಅಡಿಯಿತ್ತ. ಅದು "ಶಕ್ತಿ ರಕ್ತ", ಈ ಮಂತ್ರದ ಪ್ರಯೋಗವಾಗುತ್ತಿದ್ದಂತೇ ಆಕಾಶದಲ್ಲಿ ಕರಿ ಮೋಡಗಳು ಸೂರ್ಯ ರಶ್ಮಿಯನ್ನೇ ಮರೆಮಾಡಲುತೊಡಗಿದುವು. ಸ್ಮಶಾನದಲ್ಲಿದ್ದ ಪಕ್ಷಿಗಳೆಲ್ಲ ದಿಕ್ಕಾಪಾಲಾಗಿ ಹಾರಿಹೋದುವು. ಕ್ಷಣ ಕ್ಷಣಕ್ಕೂ ಸ್ಮಶಾನದಲ್ಲಿ ಭೀಕರತೆ ಹೆಚ್ಚತೊಡಗಿತು. ಮಂತ್ರೋಛ್ಚಾರಣೆ ಮುಗಿಯುತ್ತಿದ್ದಂತೆ ಗುರು ಕುಳಿತಿದ್ದ ಸ್ಥಳದ ಎದುರು ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿ ಕೊಂಡಿತು. ಕೆಲವೇ ಕ್ಷಣಗಳಲ್ಲಿ ಆ ಬೆಂಕಿ ಅಗ್ನಿಗೋಳವೊಂದಾಗಿ ಮಾರ್ಪಟ್ಟಿತ್ತು. ತನ್ನ ಆಹ್ವಾನಕನ ಅಣತಿಗೆ ಕಾಯುತ್ತಿತ್ತು. ಗುರುವಿನ ಮುಖದಲ್ಲಿ ಮತ್ತೆ ಅದೇ ಮಂದಹಾಸ ಮೂಡಿತು. ಆ ಮಾಯಾ ಅಗ್ನಿ ಗೋಳವನ್ನು ಉಪಸಂಹರಿಸಿ ತನ್ನ ಇಂದಿನ ಕೆಲಸ ಮುಗಿಸಿದ ಸಮಾಧಾನದಿಂದ ಮನೆಯಕಡೆ ಹೆಜ್ಜೆ ಹಾಕಿದ.
--------
ಅಂಜಲಿ ಮಕ್ಕಳಿಗೆ ಪಾಠ ಹೇಳಿಕೊಟ್ಟು ಹಿಂತಿರುಗುವುದರೊಳಗಾಗಿ ಆನಂದ ಮತ್ತು ಗೋಪಾಲ ತಮ್ಮ ಕೆಲಸ ಮುಗಿಸಿ ಹಿಂತಿರುಗಿ ಆಗಿತ್ತು. ಅಂಜಲಿ ಮನೆಗೆ ಬಂದವಳೆ ಮುಖ ತೊಳೆದುಕೊಂಡು ಆಳು ಮಾಡಿಟ್ಟಿದ್ದ ಅಡುಗೆಯನ್ನೆಲ್ಲ ಹೊಂದಿಸಿಟ್ಟು ತಂದೆಯನ್ನು ಊಟಕ್ಕೆ ಕರೆದು ತನಗೂ ಒಂದು ಬಟ್ಟಲನ್ನು ಇಟ್ಟು ಕುಳಿತಳು. ಎಂದಿನಂತೆ ಅವರ ಊಟ ನಗು ನಗುತ್ತಾ ಸಾಗಿತು. ಊಟವಾದ ಮೇಲೆ ತಂದೆ "ಮಗಳೇ ನಾನು ನಿನ್ನಲ್ಲಿ ಸ್ವಲ್ಪ ಮಾತನಾಡಬೇಕಿದೆ. ನಿನ್ನ ಕೆಲಸ ಮುಗಿಸಿ ಹೊರಾಂಗಣಕ್ಕೆ ಬಾ, ಕಾದಿರುತ್ತೇನೆ" ಎಂದು ಎದ್ದು ಕೈ ತೊಳೆದುಕೊಂಡ. ಅಂಜಲಿ ಬೇಗ ಬೇಗ ತನ್ನ ಕೆಲಸ ಮುಗಿಸಿ ಹೊರಕ್ಕೆ ಬರುವಷ್ಟರಲ್ಲಿ ಅವಳಿಗೆ ಭೀಕರ ಆಘಾತವೊಂದು ಕಾದಿತ್ತು. ಸಾಹುಕಾರ ಸತ್ತು ಬಿದ್ದಿದ್ದ. ಅವನ ತಲೆಯ ಹಿಂದೆ ಬಲವಾದ ಏಟು ಬಿದ್ದಿತ್ತು. ರಕ್ತ ಭೀಕರವಾಗಿ ಹರಿದಿತ್ತು. ಆ ರಕ್ತದ ಕೋಡಿಯನ್ನು ನೋಡಿದವಳೇ ಮೂರ್ಛೆ ತಪ್ಪಿ ಬಿದ್ದಳು ಅಂಜಲಿ. ಅದೇ ಸಮಯಕ್ಕೆ ಸರಿಯಾಗಿ ಗೋಪಾಲ ಕೈಯಲ್ಲಿ ಕಬ್ಬಿಣದ ಸಲಾಕೆಯೊಂದನ್ನು ಹಿಡಿದು ಹೊರಹೋದುದನ್ನು ಯಾರೂ ಗಮನಿಸಲಿಲ್ಲ.
ಬಹಳ ಹೊತ್ತಿನ ನಂತರ ಸಾಹುಕಾರನನ್ನು ಹುಡುಕಿಕೊಂಡು ಬಂದ ಆಳುಗಳು ಭಯದಿಂದ ಕೂಗಿಕೊಂಡಾಗಲೇ ತಿಳಿದದ್ದು ಸಾಹುಕಾರ ಸತ್ತಿರುವ ವಿಷಯ. ಸಾಹುಕಾರನ ಸಾವಿನ ವಿಷಯ ಕಾಳ್ಗಿಚ್ಚಿನಂತೆ ಊರೆಲ್ಲ ಹಬ್ಬಿತು. ಮನೆಯ ಮುಂದೆ ಜನಸಂದಣಿಯನ್ನು ಅಂಪಾಯಿಸುವುದೇ ಅಸಾಧ್ಯವಾಗತೊಡಗಿತು. ಇತ್ತ ಅಂಜಲಿ ಆಘಾತದಿಂದ ಚೇತರಿಸಿ ಕೊಳ್ಳಲಾಗದೇ ಒದ್ದಾಡುತ್ತಿದ್ದಳು. ಅವಳ ಜೀವನದಲ್ಲಿ ತನ್ನವರು ಎಂದು ಕೊಳ್ಳಲು ಇದ್ದ ಕೊನೇಯ ವ್ಯಕ್ತಿಯೂ ಇಲ್ಲವಾಗಿದ್ದುದು ಅವಳಿಗೆ ಇಂಗಿಸಿಕೊಳ್ಳಲಾಗದ ಕಹಿ ಸತ್ಯವಾಗಿ ಪರಿಣಮಿಸಿತು. ಇಷ್ಟೆಲ್ಲ ನಡೆಯುವಾಗ ಗೋಪಾಲನೂ ಎಲ್ಲರ ನಡುವೆ ನಿಂತಿದ್ದ ಅವನ ಮುಖದಲ್ಲಿ ಯಾವುದೇ ಭಾವವಿರಲಿಲ್ಲ. ನಿರ್ಲಿಪ್ತತೆ ತಾಂಡವವಾಡುತ್ತಿತ್ತು. ಆನಂದ ಗರ ಬಡಿದವವಂತೆ ನಿಂತಿದ್ದ. ಅವನ ಕಣ್ಣ ಮುಂದೆ ಕೆಲ ದಿನಗಳಿಂದ ಬರೀ ಕೆಟ್ಟ ಘಟನೆಗಳೇ ಜರುಗುತ್ತಿತ್ತು. ಇದು ಅವನು ೩ ದಿನದಲ್ಲಿ ನೋಡಿದ ೨ನೇ ಸಾವು.
--------
ಸಾಹುಕಾರ ಸತ್ತಿದ್ದನ್ನು ತಿಳಿದ ಗುರು ವೀರಭದ್ರನ ಮುಖದಲ್ಲಿ ಸಂತಸ, ಸಮಾಧಾನ ತಾಂಡವವಾಡುತ್ತಿತ್ತು. ಇನ್ನು ಅಂಜಲಿಗೆ ತಿಳಿಯಬೇಕಾದ ರಹಸ್ಯವೊಂದು ಅನಂತದಲ್ಲಿ ಸಮಾಧಿಯಾಗುವುದರಲ್ಲಿತ್ತು. ಆ ರಹಸ್ಯ ಅಂಜಲಿಗೆ ತಿಳಿದಿದ್ದಲ್ಲಿ ಮುಂದಾಗುವ ಘಟನೆಗಳನ್ನು ಯಾರೂ ಊಹಿಸಲೂ ಸಾಧ್ಯವಿರಲಿಲ್ಲ. ಅಂತಹ ರಹಸ್ಯವೊಂದು ಗುರು ವೀರಭದ್ರನನ್ನು ಬಿಟ್ಟರೆ ತಿಳಿದಿದ್ದವನು ಸಾಹುಕಾರ ಮಾತ್ರ. ಆದರೆ ಈಗ ಸಾಹುಕಾರನ ಮರಣದೊಂದಿಗೆ ಆ ರಹಸ್ಯವನ್ನು ಅಂಜಲಿಗೆ ತಿಳಿಸಲು ಯಾರೂ ಇರಲಿಲ್ಲ. ಆದರೆ ಸಾಹುಕಾರ ಆ ರಹಸ್ಯವನ್ನು ಅಂಜಲಿಗೆ ತಿಳಿಸಲು ವ್ಯವಸ್ಥೆಯೊಂದನ್ನು ಮಾಡಿದ್ದು ಯಾರಿಗೂ ತಿಳಿದಿರಲಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಆ ರಹಸ್ಯ ಬಯಲಾಗಲಿದೆ. ಮುಂದೆ ಯಾರೂ ಊಹಿಸದ ಘಟನೆಗಳಿಗೆ ಅದು ಕಾರಣವಾಗಲಿದ

Rating
No votes yet

Comments