ಅ ಮುದುಕ - ಒಂದು ಸಣ್ಣ ಕಥೆ
ಅದೊಂದು ಪಾರ್ಕು. ಅದರಲ್ಲಿನ ಕಲ್ಲು ಬೆಂಚೊಂದರಲ್ಲಿ ಅ ಮುದುಕ ಕುಳಿತಿದ್ದಾನೆ ಎಷ್ಟೋ ವರ್ಷಗಳಿಂದ ಅಲ್ಲಿ ಕುಳಿತಿದ್ದಾನೆ ಅಂತ ಕಾಣುತ್ತೆ. ಅವನು ಕುಳಿತಿರುವ ಕಲ್ಲು ಬೆಂಚಿನ ಸುತ್ತ ಮುತ್ತ ಹಿಂದೆ ಏನಿತ್ತೋ ಈಗ ಗಗನಚುಂಬಿ ಕಟ್ಟಡಗಳಿವೆ. ಶೇರು ಬಜಾರುಗಳು, ಮಲ್ಟಿಪ್ಲೆಕ್ಸ್ ಗಳು, ಡಾನ್ಸ್ ಬಾರ್, ರೆಸ್ಟೋರೆಂಟುಗಳಿವೆ. ರಸ್ತೆಯ ಮೇಲೆ ಎರ್ರಾಬಿರ್ರಿ ಓಡಾಡುವ ವಾಹನಗಳು, ಹೊಸ ಹೊಸದ್ದು. ಈ ಎಲ್ಲ ಬದಲಾವಣೆಗಳಿಗೆ ಪ್ರತ್ಯಕ್ಷ ಸಾಕ್ಷಿ ಅವನಾಗಿದ್ದರೂ ಅವನ ಮುಖದಲ್ಲಿ ನಿರ್ಭಾವ. ಕಣ್ಣುಗಳಲ್ಲಿ ಏನೋ ತರ್ಕ. ಹಾಡು ಹೋಗುವ ಜನರಿಗೆ ಇಲ್ಲೊಬ್ಬ ಮುದುಕನಿದ್ದಾನೆಂದು ಗೊತ್ತಿಲ್ಲ. ಕಲ್ಲು ಬೆಂಚಿನೊಂದಿಗಿನ ಕಲ್ಲಿನ ತರಹ. ಆದರೆ ಕಳೆದ ಸುಮಾರು ತಿಂಗಳಿನಿಂದ ಅವನ ಎದುರಿಗೆ ಹಾಡು ಹೋಗುವ ಇಬ್ಬರು ಕಾಲ್ ಸೆಂಟರಿನ ಹುಡುಗಿಯರ ಕೊಲೆಯ ಬಗ್ಗೆ ಮಾತನಾಡುತ್ತಿದ್ದರು. ಬಾಂಬ್ ವಿಸ್ಫೋಟಗಳು ಅವನ ಕಿವಿಗಳಿಗೆ ಕೇಳುತ್ತಿದ್ದವು. ಪ್ರಜಾಪ್ರಭುತ್ವದ ಹೆಸರಲ್ಲಿ ನಡೆಯುವ ಕೊಳ್ಳುಬಾಕ ಸಂಸ್ಕೃತಿ ಕಂಡಿತು. ಅದರೂ ಅವನ ಕಣ್ಣುಗಳಲ್ಲಿ ಏನೋ ನಿರೀಕ್ಷೆ.
ಅವತ್ತು ಮಾತ್ರ ಅವಸರದಿಂದ ಬಂದ ಒಬ್ಬ ವ್ಯಕ್ತಿಯನ್ನು ಅವನೊಂದಿಗೆ ಓಡಿ ಬರುತ್ತಿದ್ದ ಮಗು, ಮುದುಕನನ್ನು ನೋಡಿ, 'ಅಪ್ಪ ಅಪ್ಪ ಅಲ್ಲಿ ನೋಡು' ಎಂದಿತು. ಅದಕ್ಕೆ ಓಗೊಡದ ವ್ಯಕ್ತಿ ಮಗುವಿನ ಕೈ ಹಿಡಿದು ಎಳೆದ. ಅ ಹೊತ್ತಿಗೆ ಅ ಮುದುಕ ಎದ್ದ. ಮೆಲ್ಲನೆ ಪಶ್ಚಿಮದತ್ತ ನಡೆಯತೊಡಗಿದ. ಮಗುವಿನ ಧ್ವನಿ ಮತ್ತೆ ಕೇಳಿತು, 'ಪಪ್ಪಾ ಅಲ್ನೋಡು ಹೋಗ್ತಾ ಇದ್ದಾನೆ ... ಗಾಂಧಿ'. ಅ ಮುದುಕನ ಮುಖದಲ್ಲಿ ಕಿರುನಗು ಮಿಂಚಿಮರೆಯಾಯಿತು.