ನಗುವೊಂದು ರಸಪಾಕ

ನಗುವೊಂದು ರಸಪಾಕ

ಬರಹ

          ಹಿಂದೆ ಚೀನಾ ದೇಶದಲ್ಲಿ ನಗುವ ಸಂತ(laughing monks)ರೆಂದೇ ಪ್ರಸಿದ್ಧರಾದ ಮೂವರು ಪರಿವ್ರಾಜಕರಿದ್ದರು. ಮೂವರು ಒಟ್ಟಿಗೆ ನಗುತ್ತ ನಗಿಸುತ್ತ ತಮ್ಮ ಜೀವಮಾನವನ್ನೇ ಕಳೆದರು. ಸಂತೆ, ಮಾರುಕಟ್ಟೆ ಮುಂತಾದ ಜನನಿಬಿಡ ಪ್ರದೇಶದಲ್ಲಿ ಎತ್ತರದ ಜಾಗವನ್ನು ಏರಿ ಮೂವರು ಅವರ ಪಾಡಿಗೆ ಅವರು ನಗುತ್ತಿದ್ದರು. ನಗು ಸಾಂಕ್ರಾಮಿಕ ಅನ್ನುತ್ತಾರಲ್ಲ, ಇವರನ್ನು ನೋಡಿ ಜನ ನಗುತ್ತಿದ್ದರು. ಕ್ರಮೇಣ ಅವರ ಪ್ರಸಿದ್ಧಿ ಬೆಳೆಯಿತು. ಅವರು ಹೋದಲ್ಲೆಲ್ಲ ನಗೆಯ ಅಲೆಗಳು ಏಳತೊಡಗಿದವು. ಈ ನಡುವೆ ಮೂವರಲ್ಲಿ ಓರ್ವ ಸಂತ ಮರಣಹೊಂದಿದ. ಸಾಯುವ ಮೊದಲು ’ನಾನು ಜೀವಮಾನದಲ್ಲಿ ಒಮ್ಮೆಯೂ ಸ್ನಾನ ಮಾಡಿಲ್ಲ, ಆದ್ದರಿಂದ ಚಿತೆಯಲ್ಲಿ ಸುಡುವ ಮೊದಲು ನನ್ನ ದೇಹಕ್ಕೆ ಸ್ನಾನ ಮಾಡಿಸಬಾರದು, ನಾನು ಉಟ್ಟ ಬಟ್ಟೆಯನ್ನು ಬಿಚ್ಚಬಾರದು’ ಎಂದು ಆತ ಉಳಿದಿಬ್ಬರಿಗೆ ಸೂಚನೆ ಕೊಟ್ಟಿದ್ದ. ಸರಿ, ಆತನ ಇಚ್ಛೆಯಂತೇ ಸಾಗಿದ ಅಂತಿಮಕ್ರಿಯೆಯಲ್ಲಿ ಬಾರಿ ಜನಸ್ತೋಮ ನೆರೆದಿತ್ತು. ಚಿತೆಗೆ ಅಗ್ನಿಸ್ಪರ್ಶ ಮಾಡಿದೊಡನೆಯೆ ಚಿತೆಯಿಂದ ಡಂ ಡಂ ಎಂಬ ಸಿಡಿಮದ್ದುಗಳ ಸ್ಫೋಟದ ಶಬ್ದ ಹೊರಡಲಾರಂಬಿಸಿತು. ಜನ ಗಾಬರಿಯಾಗಿ ಅತ್ತಿತ್ತ ಓಡಿ ಅವಿತುಕೊಂಡು ನೋಡತೊಡಗಿದರು. ಆ ಸಂತ ತನ್ನ ಬಟ್ಟೆಯಲ್ಲಿ ಪಟಾಕಿಗಳನ್ನು ಬಚ್ಚಿಟ್ಟುಕೊಂಡಿದ್ದ. ನೋಡನೋಡುತ್ತಲೆ ಸಿಡಿಮದ್ದು ಸುಡುಬಾಣಗಳು ಸ್ಫೋಟಗೊಂಡು ಸದ್ದು ಮಾಡುತ್ತ, ಆಕಾಶದಲ್ಲಿ ಬೆಳಕಿನ ವಿವಿಧ ಚಿತ್ತಾರಗಳನ್ನು ಮೂಡಿಸುತ್ತ ಹಬ್ಬದ ವಾತಾವರಣವನ್ನು ಮೂಡಿಸಿಬಿಟ್ಟವು. ಜನ ಮತ್ತೆ ನಗತೊಡಗಿದರು. ಸಂತ ಸಾವಿನಲ್ಲೂ ನಗಿಸಿದ್ದ.

          "ನಗುವೊಂದು ರಸಪಾಕ......ನಗುವಾತ್ಮ ಪರಿಮಳವ ಪಸರಿಸುವ ಕುಸುಮ" ಎನ್ನುತ್ತಾರೆ ತಿಮ್ಮಗುರು ಡಿವಿಜಿ. ನಗುವುದು ನಗಿಸುವುದು ಸಜೀವ ಜೀವನದ ಲಕ್ಷಣ. ಮನುಷ್ಯನನ್ನು ಹೊರತು ಸೃಷ್ಟಿಯ ಉಳಿದ ಯಾವ ಜೀವಿಯೂ ನಗುವ ಭಾಗ್ಯವನ್ನು ಪಡೆದು ಹುಟ್ಟಿಲ್ಲ. ಸದಾ ಮುಖ ಗಂಟಿಕ್ಕಿಕೊಡಿರುವ ಸಿಟ್ಟು ಸಿಡುಕಿನ, ಕಟ್ಟುನಿಟ್ಟಿನ ವ್ಯಕ್ತಿಯೂ ಒಂದಲ್ಲ ಒಂದು ಸಾರಿ ನಕ್ಕಿರುತ್ತಾನೆ. ಒಂದು ಸಣ್ಣ ಘಟನೆ, ಮಾತು, ಜೋಕು, ಚಿತ್ರ, ಸನ್ನಿವೇಶ, ದೃಶ್ಯ ನಗುವನ್ನು ಚಿಮ್ಮಿಸಬಲ್ಲದು. ಆದರೂ ಕೆಲವೊಮ್ಮೆ ನಗುವುದು ಅಷ್ಟೊಂದು ಕಷ್ಟವೇ ಅನ್ನಿಸಿಬಿಡುತ್ತದೆ, ಉದಾಹರಣೆಗೆ ನಗರಗಳಲ್ಲಿನ ನಗೆಯೋಗ ಕೂಟಗಳಲ್ಲಿ ಮುದುಕರನ್ನು ನೋಡಿದಾಗ. ಚಪ್ಪಾಳೆ ಹಾಕುತ್ತ rythemic ಆಗಿ ನಗಲು ಪ್ರಯತ್ನಿಸಿದರೂ ನಗು ಮಾತ್ರ ಅವರಿಂದ ದೂರ ದೂರ ಸಾಗುತ್ತಿರುತ್ತದೆ, ಅವರನ್ನು ನೋಡುತ್ತಿರುವವರ ಬಳಿಗೆ. ಒಮ್ಮೊಮ್ಮೆ ನಾನೇಕೆ ಒಂದೆರಡು ಜೋಕುಗಳನ್ನು ಹೇಳಿ ಸ್ವಲ್ಪ ನಗಿಸಲು ಪ್ರಯತ್ನಿಸಬಾರದು ಅಂದುಕೊಳ್ಳುತ್ತೇನೆ. ಮುದುಕರ ಸಹವಾಸ ಅಂದುಕೊಂಡು ಸುಮ್ಮನಾಗುತ್ತೇನೆ (ಸೀನಿಯರ್ ಸಿಟಿಜೆನ್‍ಗಳು ಬೇಜಾರು ಮಾಡಿಕೊಳ್ಳಬೇಡಿ, ಸುಮ್ಮನೆ ಕಿಚಾಯಿಸುವುದಕ್ಕೆ ಹೇಳಿದ್ದು)

          ಎಲ್ಲ ಸರಿ, ನಾವೇಕೆ ನಗುತ್ತೇವೆ?

          ಯಾಕೆ ಅಂದರೆ? ನಗು ಬರುತ್ತದೆ, ನಗ್ತೀವಪ್ಪ.

          ಅದೇ ನಗು ಯಾಕೆ ಬರುವುದು ಅಂತ?

          ತಾರ್ಕಿಕ(logical)ವಾಗಿ ಗ್ರಹಿಸುತ್ತಿರುವ ಬುದ್ದಿಗೆ ಒಮ್ಮೆಲೆ ಅತಾರ್ಕಿಕವಾದ ತಿರುವೊಂದು ಎದುರಾದಾಗ ನಗು ಹುಟ್ಟುತ್ತದೆ. ಉದಾಹರಣೆಗೆ ನಗೆಹನಿಯನ್ನು ತೆಗೆದುಕೊಳ್ಳೋಣ. ಯಾವುದೇ ಕಥೆಯಾಗಲೀ, ಜೋಕಾಗಲೀ ಅದರ ಬಹುಮುಖ್ಯ ಅಂಶ ಮುಂದೇನಾಗುತ್ತದೆ ಎಂಬ ಕುತೂಹಲ, element of curiosity. ಕುತೂಹಲದಿಂದಾಗಿ ನಮ್ಮ ಬುದ್ಧಿ ಯಾವುದೇ ಒಂದು ವಿಷಯವನ್ನು ತಾರ್ಕಿಕವಾಗಿ ಹಿಂಬಾಲಿಸುತ್ತ ಗ್ರಹಿಸುತ್ತ ಅದರೊಟ್ಟಿಗೆ ಸಾಗುತ್ತಿರುತ್ತದೆ, ’ಮುಂದೆ ಇದಾಗಬಹುದು’ ಎಂದು expect ಮಾಡುತ್ತ, logical ಆಗಿ ಊಹಿಸುತ್ತ ಇರುತ್ತದೆ. ಈ expectation, suspenseನಿಂದಾಗಿ ಒಂದು ರೀತಿಯ ಸಣ್ಣ tension, ಒತ್ತಡದ ನಿರ್ಮಾಣವಾಗುತ್ತದೆ. ವಿಷಯ ತಾರ್ಕಿಕವಾಗಿ ಕೊನೆಗೊಂಡರೆ ಒತ್ತಡ ನಿಧಾನವಾಗಿ ಇಳಿದು ಬಿಡುತ್ತದೆ. ಆವಾಗ ಜೋಕು "ಜೋಕ್" ಅನ್ನಿಸಿಕೊಳ್ಳುವುದಿಲ್ಲ. ಆದರೆ ಒಮ್ಮೆಲೆ ವಿಷಯ ಅತಾರ್ಕಿಕ ತಿರುವು ಪಡೆದರೆ, illogical, irrational turn ತೆಗೆದುಕೊಂಡರೆ, ತಾರ್ಕಿಕ ಬುದ್ದಿ ಊಹಿಸಲಾರದ್ದು, ಗ್ರಹಿಸಲಾರದ್ದು ನಡೆದರೆ, ಒಮ್ಮೆಲೆ ಒತ್ತಡ ಸ್ಫೋಟಗೊಡುಬಿಡುತ್ತದೆ, accumulated tension ಒಮ್ಮೆಲೆ  ಸಡಿಲ(relax)ಗೊಂಡುಬಿಡುತ್ತದೆ. relaxation ನಗೆಯಾಗಿ ಚಿಮ್ಮುತ್ತದೆ.

          ಇಷ್ಟೆಲ್ಲ ಕತೆ ಹೇಳಿ ಒಂಚೂರೂ ನಗೆಯಿಲ್ಲದಿದ್ದರೆ ಹೇಗೆ!

          ಅಲ್ಲಿಲ್ಲಿಂದ ಎತ್ತಿದ ಒಂದೆರಡು ನಗೆಮಾತ್ರೆಗಳ ಸ್ಯಾಂಪಲ್‍ಗಳು, ನಿಮಗಾಗಿ, ನಕ್ಕುಬಿಡಿ ಕೊಂಚ !!

 

೧.       ವಿವಾಹಾಕಾಂಕ್ಷಿ ತರುಣಿಯೊಬ್ಬಳು ನಿತ್ಯ ದೇವಸ್ಥಾನಕ್ಕೆ ಹೋಗುತ್ತಿದ್ದಳು, ದೇವರನ್ನು ಭಕ್ತಿಯಿಂದ ಪ್ರಾರ್ಥಿಸುತ್ತಿದ್ದಳು. ಒಂದು ದಿನ ದೇವರಿಗೆ ಕರುಣೆ ಬಂತು, ಪ್ರತ್ಯಕ್ಷನಾದ, ’ನಿನ್ನ ಭಕ್ತಿಗೆ ಮೆಚ್ಚಿದ್ದೇನೆ ಮಗಳೇ, ನಿನಗೇನು ವರ ಬೇಕು, ಕೇಳು’ ಎಂದ.

          ’ಓ ದೇವರೆ, ಒಬ್ಬ ಒಳ್ಳೆ ತಿಳುವಳಿಕೆ ಉಳ್ಳ ಹುಡುಗ ನನ್ನ ಗಂಡನಾಗುವಂತೆ ಹರಸು’ ಎಂದು ಬೇಡಿದಳು ತರುಣಿ

          ’ಅದೊಂದನ್ನು ಬಿಟ್ಟು ಬೇರೆ ವರವನ್ನು ಕೇಳು ಮಗಳೆ’ ಎಂದ ದೇವರು

          ತರುಣಿ ಹಠ ಮಾಡಿದಳು ವರವನ್ನು ಕೊಡಲಾಗದುದಕ್ಕೆ ಕಾರಣ ಕೇಳಿದಳು

          ದೇವರೆಂದ ’ಯಾಕೆಂದರೆ, "ತಿಳುವಳಿಕೆ" ಉಳ್ಳವರು ಯಾರೂ ಮದುವೆಯಾಗುವುದಿಲ್ಲ ಮಗಳೆ’

 

೨       ಬೀchiಯವರ ಒಂದಿಷ್ಟು ಸಾಲುಗಳು

          "ಬೇರೆ ಅಂಗಡಿಗೆ ಹೋಗಿ ಮೋಸಹೋಗಬೇಡಿ, ನಮ್ಮ ಅಂಗಡಿಗೇ ಬನ್ನಿ" ಒಂದು ಅಂಗಡಿಯ ಮುಂದಿನ ಬೋರ್ಡು

          ವಿದ್ಯಾರ್ಥಿಯಾದ ತಿಂಮ ಮಾಸ್ತರರಿಂದ ವಾರದ ಆರುದಿನವು ಪೆಟ್ಟುತಿನ್ನುತ್ತಿದ್ದ. ಇದಕ್ಕೆ ಕಾರಣ ತಿಮ್ಮನ ದಡ್ಡತನವೋ ಮಾಸ್ತರರ ಅಭ್ಯಾಸಬಲವೋ!

          ಅನೇಕರು ಅನೇಕ ಬಗೆಯ ಜೀವನೋಪಾಯಗಳನ್ನು ಹುಡುಕಿಕೊಳ್ಳುತ್ತಾರೆ. ಕೆಲವರು ಮದುವೆಯಾಗಿಬಿಡುತ್ತಾರೆ. ಶ್ರೀಮಂತ ಮಾವ ದೊರೆತರೆ.

          ಬೆಳೆದು ನಿಂತಿದ್ದ ಮಗಳನ್ನು ತಿಂಮ ಕೇಳಿದ, ’ಅಮ್ಮ ನಿನಗೆ ಎಂಥ ಗಂಡ ಬೇಕಮ್ಮ, ನೀನು ಯಾರನ್ನು ಮದುವೆಯಾಗಿತ್ತೀಯ?’

          ’ಒಬ್ಬ ’ಪ್ರಾಮಣಿಕ’ ’ವಕೀಲ’ನನ್ನಾದರೆ ಮದುವೆಯಾಗುತ್ತೇನಪ್ಪ’ ಎಂದಳು ಮಗಳು.

          ತಿಂಮ ಗಾಬರಿಯಾಗಿ ಹೇಳಿದ ’ಅಯ್ಯೋ, ಇಬ್ಬಿಬ್ಬರನ್ನು ಹೇಗೆ ಮದುವೆಯಾಗಕ್ಕಾಗುತ್ತೇ?’

          ವಕೀಲರ ಬಗ್ಗೆ ಒಂದು ಮಾತಿದೆ "ತೊಂಭತ್ತೊಂಭತ್ತು ಪ್ರತಿಶತ ವಕೀಲರು ಮಿಕ್ಕುಳಿದವರಿಗೆ ಕೆಟ್ಟ ಹೆಸರು ತರುತ್ತಾರೆ"  (99% lawyers bring bad name to the remaining)

೩       ಓಶೋ ಜೋಕು ಹೇಳುವುದರಲ್ಲಿ ನಿಸ್ಸೀಮರು, ಒಂದು ಸ್ಯಾಂಪಲ್ ಇಲ್ಲಿದೆ

          ಒಬ್ಬ ಹುಡುಗ ಒಂದು ಆಕಳನ್ನು ಹೊಡೆದುಕೊಂಡು ಹೊರಟಿದ್ದ. ದಾರಿಯಲ್ಲಿ ಅವನ ಶಾಲೆಯ ಮಾಸ್ತರರು ಎದುರಾದರು. ದನಕಾಯುತ್ತಿರುವ ತಮ್ಮ ವಿದ್ಯಾರ್ಥಿಯನ್ನು ಕಂಡು ಕೇಳಿದರು. ’ಆಕಳನ್ನು ಹೊಡಕೊಂಡು ಎಲ್ಲಿಗೆ ಹೊರಟಿದ್ದಿ?’

          ’ಆಕಳಿಗೆ ನೆಸೆ ಬಂದಿದೆ, ಎತ್ತಿನ ಹತ್ತಿರಕ್ಕೆ ಕರಕೊಂಡ್ ಹೊಂಟಿದೀನಿ’ ಹುಡುಗ ಉತ್ತರಿಸಿದ

          ’ಯಾಕೆ? ನಿಮ್ಮಪ್ಪ ಆ ಕೆಲಸ ಮಾಡಕಾಗಲ್ವಾ?’ ಎಂದು ಮಾಸ್ತರರು ಸ್ವಲ್ಪ ಕೋಪದಲ್ಲೇ ಕೇಳಿದರು.

          ಹುಡುಗ ಸ್ವಲ್ಪ ವಿಚಾರ ಮಾಡಿ ಉತ್ತರ ಹೇಳಿದ

          ’ಆಗಲ್ಲ, ಎತ್ತೇ ಬೇಕು’